ನಮ್ಮದೊಂದು ಚಿಕ್ಕ ಮಟ್ಟದ ಗೊಬ್ಬರದ ಉದ್ಯಮವಿದೆ. ನಮ್ಮ ತಯಾರಿಕೆಯ ಗೊಬ್ಬರ ಮಾರುಕಟ್ಟೆ ಸಂಬಂಧಿಸಿದಂತೆ ನಾನು ಆಗಾಗ ಹೊರಗಡೆ ಓಡಾಟ ಮಾಡ್ತಿರ್ತೇನೆ. ಹೀಗೆ ಮೊನ್ನೆ ಕೊಪ್ಪ ಸಮೀಪ ಒಂದೂರಿಗೆ ಹೋಗುವ ಮಾರ್ಗ ಮಧ್ಯೆ ಕರಿಗೆರಸಿ ಎಂಬ ಊರಿನ ಸಮೀಪದ ರಸ್ತೆ ಪಕ್ಕದ ದಟ್ಟ ಕಾಡಿನಲ್ಲಿ ಅರಣ್ಯ ಇಲಾಖೆಯವರು ಹೊಸದಾಗಿ ಕಾಡು ಗಿಡ ನೆಟ್ಟು ಶೇಡ್ ನೆಟ್ ಹೊದಿಸಿ ಸನ್ಮಾನ ಮಾಡಿದ್ದು ನೋಡಿದೆ.
“ದಟ್ಟ ಕಾಡ ಮದ್ಯೆ ಗಿಡ ನೆಡುವ ಕಾರಣ ವೇನು…??” , ಈ ಗಿಡ ಸತ್ತು ಹೋದರೂ ಕಾಡು ಇದ್ದೇ ಇರುತ್ತದೆ… !!
ಇಂತಹ ಅರಣ್ಯೀಕರಣದ ಉದ್ದೇಶ ಏನೆಂಬುದನ್ನು ಅರ್ಥ ಮಾಡಿಕೊಳ್ಳಲು ಕಷ್ಟ ಏನಿಲ್ಲ ಅಲ್ವಾ…?
ಎರಡು ತಿಂಗಳ ಹಿಂದೆ ಚಿಕ್ಕಮಗಳೂರು ಜಿಲ್ಲೆಯ ಒಂದು ಊರಿನ ಸಮಾರಂಭದಲ್ಲಿ ನಾನು ಭಾಗವಹಿಸಿದ್ದೆ. ನನ್ನ ಎದುರು ಕೂತಿದ್ದ ಜಿಲ್ಲೆಯ ರೈತರಿಬ್ಬರು ಕಾಡುಕೋಣ (ಕಾಟಿ) ಯ ಹಾವಳಿಯ ಬಗ್ಗೆ ಮಾತನಾಡುತ್ತಿದ್ದರು. ಆ ಸಮಯದಲ್ಲಷ್ಟೇ ಕಾಡುಕೋಣ ದಾಳಿ ಯಿಂದ ರೈತರೊಬ್ಬರು ತೀರಿಕೊಂಡಿದ್ದರು.
ಆ ಬಗ್ಗೆ ಆ ರೈತರು ಚೆರ್ಚೆ ಮಾಡ್ತಿದ್ದರು. ಅವರ ಕಡೆ ಕಾಡುಕೋಣಗಳು ಬಂದರೆ ಗುಂಡು ಹೊಡೆದು ಸಾಯಿಸಿ ಜೆಸಿಬಿ ಯಲ್ಲಿ ಮುಚ್ಚಿ ಎಂದು ಇಲಾಖೆಯವರು ಹೇಳಿದ್ದಾರಂತೆ. ಯಾವುದೇ ಕಾರಣಕ್ಕೂ ನಮ್ಮ ಗಮನಕ್ಕೆ (ಇಲಾಖೆ) ಕಾಡುಕೋಣ ಸಾಯಿಸಿದ ಬಗ್ಗೆ ಮಾಹಿತಿ ಬರದಂತೆ ಕೊಂದು ದಫನ್ ಮಾಡಿ ಎಂದು ಸ್ವತಃ ಇಲಾಖೆಯ ಅಧಿಕಾರಿಗಳೇ ಆಫ್ ದ ರೆಕಾರ್ಡ್ ಹೇಳಿದ್ದಾರಂತೆ…! ಇದು ಸದ್ಯದ ನಮ್ಮ ಭಾಗದ ಅರಣ್ಯ ಇಲಾಖೆಯ ಸ್ಟೇಟಸ್…. ಅಥವಾ ಪರಿಸ್ಥಿತಿ.
ಆನೆ, ಕಾಡುಕೋಣ, ಜಿಂಕೆ, ಕಡವೆ, ಕಾನು ಕುರಿಗಳು ಇತ್ತೀಚಿನ ವರ್ಷಗಳಲ್ಲಿ ರೈತರ ಜಮೀನಿನ ಮೇಲೆ ಇನ್ನಿಲ್ಲದಂತೆ ದಾಳಿ ಮಾಡುತ್ತಿದೆ ಏಕೆ…?. ಕಳೆದ ಎಪ್ಪತ್ತು ವರ್ಷಗಳಿಂದ ಮಲೆನಾಡು ಯಾನೆ ಪಶ್ಚಿಮ ಘಟ್ಟಗಳ ನದಿಗಳಿಗೆ ವಿದ್ಯುತ್ ಮತ್ತು ನೀರಾವರಿ ಕಾರಣಕ್ಕೆ ಆಣೆಕಟ್ಟು ಹಾಕಿ ಅಪಾರ ವಿಸ್ತೀರ್ಣದ ಅರಣ್ಯ ಮತ್ತು ಕಂದಾಯ ಭೂಮಿಯನ್ನು ಮುಳುಗಿಸಿದ್ದಾರೆ . ಆ ಆಣೆಕಟ್ಟಿನ ಒಳ ಭೂಮಿಯಲ್ಲಿ ವಾಸ ಮಾಡುತ್ತಿದ್ದ ಮನುಷ್ಯ ಹೇಗೋ ಬದುಕಿಕೊಂಡ ಆದರೆ ಅಲ್ಲಿದ್ದ ಕಾಡು ಪ್ರಾಣಿಗಳಿಗೆ ಯಾರು ಪರಿಹಾರ ನೀಡಿದರು…?
ಈ ಅಣೆಕಟ್ಟು ನಿರ್ಮಾಣದಿಂದ ಒಂದಷ್ಟು ಸಂತ್ರಸ್ತ ಜನರು ಸೃಷ್ಟಿ ಆದರು ಮತ್ತು ಜನಸಂಖ್ಯೆ ವೃದ್ದಿಯಾಯಿತು. ಸರ್ಕಾರ ಹೆಚ್ಚಾದ ಜನಸಂಖ್ಯೆ ಗೆ ಬಿಟ್ಟಿಯಾಗಿ ನೀಡಿದ್ದು ಸರ್ಕಾರಿ ಕಂದಾಯ ಮತ್ತು ಅರಣ್ಯ ಭೂಮಿಯನ್ನು. ಜನರಿಗೆ ಭೂಮಿ ಸಿಗ್ತು… ಆದರೆ ಕಾಡು ಪ್ರಾಣಿಗಳು ಮತ್ತು ದೇಸಿ ಜಾನುವಾರುಗಳಿಗೆ ಸ್ವಾಭಾವಿಕ ಮೇವಿನ ತಾಣವಿಲ್ಲದಾಯಿತು…!
ನೀವು ಮಲೆನಾಡಿನ ಯಾವುದಾದರು ಊರಿನಲ್ಲಿ ಖಾಲಿ ಇರುವ ಸರ್ಕಾರಿ ಅರಣ್ಯ ಕಂದಾಯ ಭೂಮಿ ಇದೆಯಾ ಒಂದು ಸಮೀಕ್ಷೆ ಮಾಡಿಸಿ…?. ಯಾವುದೇ ಊರಿನಲ್ಲಿ ಊರಿನ ಕ್ರೀಡಾಂಗಣವೊಂದು ಖಾಲಿ ಬಯಲು ಸಿಗುತ್ತದೆ. ಇದರ ವಿನಃ ಎಲ್ಲೂ ಒಂದು ಎಕರೆ ಖಾಲಿ ಸರ್ಕಾರದ ಜಾಗ ಇಲ್ಲ…!
ಈ ಮೂವತ್ತು ವರ್ಷಗಳಲ್ಲಿ ಮಲೆನಾಡಿನಲ್ಲಿ ನಿರ್ಮಾಣವಾದ ಆಣೆಕಟ್ಟು, ಜನಸಂಖ್ಯೆ ಹೆಚ್ಚಳ ಸರ್ಕಾರದ ಅಭಿವೃದ್ಧಿ ಯೋಜನೆ ಸೇರಿದಂತೆ ಎಲ್ಲದರ ದುಷ್ಪರಿಣಾಮ ಈಗ ಕಾಣಿಸುತ್ತಿದೆ. ರೈತರು ಮನೆಯಲ್ಲಿ ಸಾಕಿದ ಗುಡ್ಡ ಬೆಟ್ಟ ಬಯಲಿನಲ್ಲಿ ಸ್ವಾವಲಂಬಿಯಾಗಿ ಮೇಯ್ದು ಬರುತ್ತಿದ್ದ ಮಲೆನಾಡು ಗಿಡ್ಡ ತಳಿಯ ಗೋವುಗಳಿಗೇ ಗೋಪಾಲಕರು ಈಗ ಕೃತಕವಾಗಿ ಹಣ ಕೊಟ್ಟು ಮೇವು ತಂದು ಸಾಕುವ ಪರಿಸ್ಥಿತಿಯುಂಟಾಗಿದೆ. ಕಡಿಮೆ ಹಾಲಿನ ಇಳುವರಿಯ ಕಾರಣಕ್ಕೆ ಅಷ್ಟಾಗಿ ಲಾಭದಾಯಕವಲ್ಲದ ಈ ಮಣ್ಣಿನ ದೇಸಿ ತಳಿ ಮಲೆನಾಡು ಗಿಡ್ಡ ಕಸಾಯಖಾನೆ ಸೇರುತ್ತಿವೆ….!
ಇದೇ ಸಮಯದಲ್ಲಿ ಅರಣ್ಯ ಇಲಾಖೆಯು ಹುಲ್ಲು ಗಾವಲಿನಲ್ಲಿ “ಖಾಲಿ ಜಾಗ”. ಎಂದು ತಪ್ಪಾಗಿ ಪರಿಭಾವಿಸಿ ಅಲ್ಲಿ ಅಕೇಶಿಯ ಇತರೆ ಮಲೆನಾಡಿನಲ್ಲದ ಸಸ್ಯದ ನೆಡು ತೋಪು ನಿರ್ಮಾಣ ಮಾಡಿ ಕಾಡು ಪ್ರಾಣಿ ಸಸ್ತಿನಿಗಳಿಗೆ ರೈತರ ಕೃಷಿ ಭೂಮಿ ಹೊರತುಪಡಿಸಿ ಮೇಯಲು ಬೇರೆ ಜಾಗವೇ ಇಲ್ಲ ಎನ್ನುವ ದುಸ್ಥಿತಿಗೆ ಬಂದಿದೆ. ಈಗ ಕಾಡು ಪ್ರಾಣಿಗಳಿಗೂ , ಊರ ಸಾಕು ಸಸ್ತಿನಿ ಪ್ರಾಣಿಗಳಿಗೂ ಮೇವಿಲ್ಲ…!
ನೀವು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಗುಡ್ಡೇಕೇರಿ ಎಂಬ ಊರನ್ನು ತೀರ್ಥಹಳ್ಳಿ ವಯ ಆಗುಂಬೆ ಹೋಗುವಾಗ ನೋಡಿರಬಹುದು. ಈಗ್ಗೆ ಹತ್ತು ವರ್ಷಗಳ ಹಿಂದಿನ ತನಕವೂ ಈ ಊರಿನ ರಸ್ತೆ ಪಕ್ಕದಲ್ಲಿ ಹಸಿರು ಹುಲ್ಲಿನ ವಿಶಾಲ ಬಯಲು ಕಾಣಿಸುತ್ತಿತ್ತು. ಈಗ ಈ ಹುಲ್ಲು ಬಯಲನ್ನು ಅರಣ್ಯ ಇಲಾಖೆ ಅಕೇಶಿಯ ನೆಡೆತೋಪಾಗಿ ಪರಿವರ್ತನೆ ಮಾಡಿದೆ. ಅರಣ್ಯ ಇಲಾಖೆ ತನ್ನ ಜಮೀನು ಒತ್ತುವರಿಯಿಂದ ಉಳಿಸಿಕೊಳ್ಳಲು ತನ್ನ ಖಾಲಿ ಜಾಗ ಅಥವಾ ಹುಲ್ಲುಗಾವಲಿನ ಪ್ರದೇಶದಲ್ಲಿ ಅಕೇಶೀಕರಣ ಮಾಡಿದೆ. ಸಸ್ತಿನಿ ಕಾಡುಪ್ರಾಣಿಗಳಲ್ಲಿ ಆನೆಯೊಂದನ್ನ ಹೊರತುಪಡಿಸಿ ಬೇರೆ ಯಾವುದೇ ಪ್ರಾಣಿ ಯೂ ಮರ ಬಗ್ಗಿಸಿ ಮರದ ಸೊಪ್ಪು ತಿನ್ನೋಲ್ಲ. ಕಡವೆ , ಜಿಂಕೆ, ಕಾನು ಕುರಿ, ಕಾಡುಕೋಣ ಗಳಿಗೆ ಈಗ ಕಾಡಲ್ಲಿ ಮೇವಿಲ್ಲ.
ಅಳಿದುಳಿದ ಮಲೆನಾಡು ಗಿಡ್ಡ ತಳಿ ಹಸು ಗಳು ಸುಮ್ಮನೆ ಕಾಡಿಗೆ ಹೋಗಿ ಕಾಲಾಡಿಕೊಂಡು ಮರಳಿ ಮನೆಗೆ ಬಂದು ಸಾಕಿದವರು ಹಾಕಿದ ಮುಷ್ಟಿ ಹುಲ್ಲು ತಿಂದು ಹೊಟ್ಟೆ ತುಂಬಿಸಿಕೊಳ್ಳಬೇಕು…?. ಕಾಡಿಗೆ ಹೋಗಿ ಮೇಯ್ದುಕೊಂಡು ಬರಲು ಕಾಡೂ ಇಲ್ಲ… ಕಾಡಿನಲ್ಲಿ ಮೇವೂ ಇಲ್ಲ…!. ಈ ಕಾರಣಕ್ಕೆ ಈಗ
ಮಲೆನಾಡಿನ ರೈತರ ಬಳಿ ಕಾಡಿನಲ್ಲಿ ಮೇಯ್ದು ಕೊಂಡು ಬರುವಷ್ಟು “ದೇಸಿ ಹಸುಗಳೂ ಇಲ್ಲ”. ಇದೇ ವಾಸ್ತವ…!!!
ಮೈಸೂರಿನ ಅರಣ್ಯ ವಲಯದಲ್ಲಿ ಐದು ಹುಲಿಗಳಿಗೆ ಗೋಪಾಲಕರು ವಿಷವುಣಿಸಿ ಕೊಂದ ದುರ್ಘಟನೆಯ ನಂತರ ಅರಣ್ಯ ಸಚಿವರು ಈ ಆಜ್ಞೆ ಮಾಡಿದ್ದಾರೆ. ಆದರೆ ಅಲ್ಲಿ ಮೇಯಲು ಬಂದ ಅಥವಾ ಮೇಯಿಸಲು ತಂದ ತಮಿಳುನಾಡಿನ ಸಾವಿರಾರು ಹಸುಗಳ ವಿಚಾರದಲ್ಲಿ ಈ ಆಜ್ಞೆ ಸರಿಯಿರಬಹುದು. ಆದರೆ ಇದೇ ಆಜ್ಞೆಯನ್ನು ಕಡ್ಡಾಯಾಗಿ ಎಲ್ಲಾ ಕಡೆಯಲ್ಲೂ ಜಾರಿಗೆ ತಂದರೆ ಹಳ್ಳಿ ಹಳ್ಳಿಯಲ್ಲಿ ಬೆರಳೆಣಿಕೆಯಷ್ಟು ಸಂಖ್ಯೆಯಲ್ಲಿ ಉಳಿದಿರುವ ಇದೇ ನಿಸರ್ಗದ ಸಹಜೀವಿ ಯಾದ ಮಲೆನಾಡು ಗಿಡ್ಡ ಸಂಪೂರ್ಣ ನಾಶವಾಗುತ್ತದೆ.
ಮಾನ್ಯ ಅರಣ್ಯ ಸಚಿವರು ಮತ್ತು ನಗರ ಪರಿಸರವಾದಿಗಳಲ್ಲಿ ಮಲೆನಾಡಿಗರ ಸವಿನಯ ವಿನಂತಿ, ಅರಣ್ಯ ಅಥವಾ ಕಾಡು ಎಂದರೆ ದಟ್ಟವಾದ ಮರಗಳ ಸಮೂಹ ಮಾತ್ರವಲ್ಲ, ಅರಣ್ಯ ಎಂದರೆ ಕುರುಚಲು ಕಾಡು, ಹುಲ್ಲುಗಾವಲು, ಕೆರೆ , ನದಿ , ಹಳ್ಳ, ಬಂಡೆ ಕಲ್ಲುಗಳ ಸಮೂಹ, ಮರಳು ಎಲ್ಲವೂ ಸೇರಿದ್ದಾಗಿದೆ. ಅರಣ್ಯ ವಾಸಿಗಳೆಂದರೆ, ಕಾಡುಕೋಣ, ಹುಲಿ , ಆನೆ , ಜಿಂಕೆ ಮಾತ್ರವಲ್ಲ, ದೇಸಿ ತಳಿ ಮಲೆನಾಡು ಗಿಡ್ಡ ತಳಿ ಹಸು ಕೂಡ ಅರಣ್ಯವಾಸಿಯೇ.
ಮಲೆನಾಡು ಗಿಡ್ಡ especially ಮಲೆನಾಡಿನ ಕಾಡು ಗುಡ್ಡ ಕಣಿವೆಯದ್ದೇ. ಸಾವಿರಾರು ವರ್ಷಗಳ ಹಿಂದೆ ಇಲ್ಲಿ ಕೃಷಿ ಮಾಡಿದ ರೈತಾಪಿಗಳು ಈ ಹಸುಗಳನ್ನು ತಿದ್ದಿ ತೀಡಿ ಸಾಕುಪ್ರಾಣಿಗಳನ್ನಾಗಿಸಿ ಕೊಂಡಿದ್ದಾರೆ…!. ಮಲೆನಾಡು ಗಿಡ್ಡ ಹಸು ಹಂದಿ ಜೀನಿನಲ್ಲಿ ಮನುಷ್ಯ ಕೃತಕವಾಗಿ ಸೃಷ್ಟಿಸಲ್ಪಟ್ಟ ಪ್ರಾಣಿ ಯಲ್ಲ…!.
ಮಲೆನಾಡು ಗಿಡ್ಡ ತಳಿ ಹಸುಗಳಿಗೆ ಇಲ್ಲಿನ ಕಾಡು ಪ್ರಾಣಿಗಳಿಗೆ ಕಾಡಿನ ಮೇಲೆ ಎಷ್ಟು ಹಕ್ಕಿದೆಯೋ ಅಷ್ಟೇ ಹಕ್ಕು ಮಲೆನಾಡು ಗಿಡ್ಡ ತಳಿಗಳಿವೆ. ಹಸುಗಳು ಕಾಡಿಗೆ ಹೋಗುತ್ತದೆ, ಕಾಡಿನ ಸಸ್ಯ ತಿಂದು ಕಾಡು ನಾಶ ಮಾಡುತ್ತದೆ ಎಂಬುದು ಒಂದು ತಪ್ಪು ವಿಶ್ಲೇಷಣೆ. ನಿಸರ್ಗವನ್ನು ತನ್ನಷ್ಟಕ್ಕೆ ಬಿಟ್ಟರೆ ನಿಸರ್ಗ ತನಗೆ ಬೇಕಾದದ್ದನ್ನ ತಾನೇ ಸೃಷ್ಟಿಸಿಕೊಳ್ತದೆ. ಮನುಷ್ಯ ಕಾಡು ಸೃಷ್ಟಿ ಸುತ್ತಾನೆ ಎಂಬುದು ದಾರ್ಷ್ಯ ಆಗುತ್ತದೆ. ಅರಣ್ಯವನ್ನು ಅದರಷ್ಟಕ್ಕೆ ಬಿಡಿ… ಅರಣ್ಯ ದಲ್ಲಿ ಮನುಷ್ಯ ನ ಹಸ್ತಕ್ಷೇಪ ಬೇಡ. ಆದ್ದರಿಂದ… ಮಾನ್ಯ ಅರಣ್ಯ ಸಚಿವರು ಈ ಆಜ್ಞೆಯನ್ನು ಮಲೆನಾಡು ಮಟ್ಟಿಗೆ ಹಿಂತೆಗದು ಕೊಳ್ಳಲೇಬೇಕು.
ಅರಣ್ಯದೊಳಗೆ ಅರಣ್ಯ ಇಲಾಖೆಯು ಸೃಷ್ಟಿಸಿದ ಅವೈಜ್ಞಾನಿಕ ಅಕೇಶಿಕರಣವನ್ನು ಕಿತ್ತೊಗೆದು ಕಾಡು ಪ್ರಾಣಿಗಳಿಗೆ ಮೇವು ಸೃಷ್ಟಿಯಾಗುವಂತೆ, ಆ ಮೂಲಕ ಕಾಡುಪ್ರಾಣಿಗಳು ನಾಡಿಗೆ ಬರದಂತೆ ತಡೆದು ಮನುಷ್ಯ ಮತ್ತು ಕಾಡು ಪ್ರಾಣಿಗಳ ಸಂಘರ್ಷ ಉಂಟಾಗದಂತೆ ತಡೆಯಬೇಕು. ದಯವಿಟ್ಟು ಅತ್ಯಂತ ವೇಗವಾಗಿ ನಾಶ ವಾಗುತ್ತಿರುವ ಮಲೆನಾಡು ಗಿಡ್ಡ ಹಸುಗಳನ್ನ ಇಂತಹ ಆಜ್ಞೆ ತೆರವು ಮಾಡಿ ರಕ್ಷಣೆ ಮಾಡಿ. ಕಾಡಿಗೆ ಕಾಡುಕೋಣ ಜಿಂಕೆ ಕಡವೆ ಆನೆ ಗಳು ಹೇಗೆ ಮುಖ್ಯವೋ , ಈ ಮಲೆನಾಡಿಗೆ , ಮಲೆನಾಡಿನ ಕಾಡಿಗೆ ದೇಸಿ ತಳಿ ಮಲೆನಾಡು ಗಿಡ್ಡ ಹಸುಗಳ ಒಡನಾಟ ಅತ್ಯಂತ ಮುಖ್ಯ. ಮಲೆನಾಡು ಗಿಡ್ಡ ಉಳಿಸಿ…


