‘ಬದುಕು ‘ಅಕ್ಷಯ ಪಾತ್ರೆ’ಯಾಗಬೇನ್ನುವ ಕನಸು ತಪ್ಪಲ್ಲ’.
ಅದು ಆರೋಗ್ಯ, ಸಂಪತ್ತು.. ಹೀಗೆ ಯಾವುದೇ ರೂಪದಲ್ಲಿರಬಹುದು. ಮೊಗೆದಷ್ಟು ಸಿಗಬೇಕೆನ್ನುವ ಕಾಮಿತ ಸಹಜ. ಆದರೆ ಶ್ರಮ ಪಡದೆ ‘ಕುಳಿತು ಉಣ್ಣುವ’ ನಿರೀಕ್ಷೆ ಸಲ್ಲದು. ಅದನ್ನು ಕೋವಿಡ್ ಲಾಕ್‍ಡೌನಿನಲ್ಲಿ ಅನುಭವಿಸಿದ್ದೇವೆ! ಈಗ ಅವೆಲ್ಲಾ ಮರೆವಿನ ಲೋಕಕ್ಕೆ ಜಾರಿವೆ.
ಹಿರಿಯ ಮಾತೆಯರು ಮನೆಯೊಳಗಿರುವುದು ‘ಅಕ್ಷಯ ಪಾತ್ರೆ’ಗೆ ಸರಿಸಮ. ಮನೆಗೆ ಯಾರು ಎಷ್ಟು ಹೊತ್ತಿಗೆ ಬರಲಿ, ಗೊಣಗಾಟವಿಲ್ಲದೆ ಅಡುಗೆ ಸಿದ್ಧಪಡಿಸಿ ಉಣಬಡಿಸುತ್ತಾರೆ. ಇಂತಹವರ ಅಡುಗೆ ಮನೆಯನ್ನು ಅಕ್ಷಯ ಪಾತ್ರೆಗೆ ಹೋಲಿಸುತ್ತಾರೆ. ಮತ್ತೇನಿಲ್ಲ, ಆಪತ್ತಿಗಿರಲಿ ಎಂದು ಕೂಡಿಟ್ಟ ಧನ, ವಸ್ತುಗಳು ಆ ಮನೆಯ ‘ಅಕ್ಷಯ ಪಾತ್ರೆ’.
‘ಎಲ್ಲಿ ಲಕ್ಷ್ಮಿಯ ಆರಾಧನೆ ನಡೆಯುತ್ತದೋ ಆ ಮನೆಯು ಅಕ್ಷಯ ಪಾತ್ರೆಯಾಗುತ್ತದೆ’ – ತಾಳಮದ್ದಳೆಯೊಂದರಲ್ಲಿ ಕೇಳಿಸಿಕೊಂಡ ಮಾತಿದು. ಲಕ್ಷ್ಮಿದೇವಿಯ ಚಿತ್ರಕ್ಕೆ ಹೂ ಹಾರ ಹಾಕಿ, ಊದುಬತ್ತಿ ಹಚ್ಚಿ, ಆರತಿ ಮಾಡಿದರೆ ಆಯಿತು ಎಂದರ್ಥವಲ್ಲ. ಸಂಪತ್ತನ್ನು ಯಾ ಹಣವನ್ನು ಗೌರವ ಭಾವದಿಂದ ಕಾಣಬೇಕು. ಆಗ ಹನಿಗೂಡಿ ಹಳ್ಳವಾಗುತ್ತದೆ. ವ್ಯಾವಹಾರಿಕ ಲೋಕದಲ್ಲಿ ‘ಹಣ ನೀಡುವುದು’ ಎನ್ನುವ ಪದ ಬಳಕೆಯಲ್ಲಿತ್ತು. ಈಗ ‘ಹಣ ಬಿಸಾಡಿದರಾಯಿತು. ಎಲ್ಲಾ ಕೆಲಸ ಆಗುತ್ತದೆ.” ಎನ್ನುವ ಭಾವ ಹೊಸೆದುಕೊಂಡಿದೆ. ಇದು ಸಂಪತ್ತಿಗೆ ಮಾಡುವ ಅವಮಾನ. ಕೆಲವು ದೊಡ್ಡ ಹೋಟೇಲುಗಳ ಕ್ಯಾಶ್ ಕೌಂಟರಿನಲ್ಲಿ ಅನುಭವಕ್ಕೆ ಬರುತ್ತದೆ!
ನನ್ನ ಪ್ರಾಥಮಿಕ ಶಾಲೆಯ ಅಧ್ಯಾಪಕರು ನೆನಪಾಗುತ್ತಾರೆ, “ವಾರಕ್ಕೆ ಒಂದು ರೂಪಾಯಿಯನ್ನು ತೆಗೆದಿಡಿ. ಅದು ತಿಂಗಳಿಗೆ ನಾಲ್ಕು ರೂಪಾಯಿ. ವರುಷಕ್ಕೆ ಐವತ್ತೆರಡು ರೂಪಾಯಿ. ಅದನ್ನು ವೆಚ್ಚ ಮಾಡಬೇಡಿ. ಕೂಡಿಡುತ್ತಾ ಬನ್ನಿ. ಹತ್ತು ವರುಷವಾಗುವಾಗ ದೊಡ್ಡ ಮೊತ್ತ ನಿಮ್ಮದಾಗುತ್ತದೆ. ಆಗ ಅದು ನಿಮ್ಮ ಪಾಲಿನ ಅಕ್ಷಯ ಪಾತ್ರೆ.” ಕೂಡಿಡುವ ಮನೋಭಾವವು ಬದುಕಿಗೆ ಹಾದಿಯಾಗುತ್ತದೆ. ಬ್ಯಾಂಕ್‍ಗಳು ಬದುಕಿನಲ್ಲಿ ಮಿಳಿತಗೊಳ್ಳದ ಕಾಲಘಟ್ಟದ ಅಧ್ಯಾಪಕರ ಸಲಹೆಗಳಿಗೆ ಬೆಲೆ ಕಟ್ಟಲಾಗದು.
ಜೂಜಿನಲ್ಲಿ (ದ್ಯೂತ) ಸೋತ ಪಾಂಡವರು (ಧರ್ಮರಾಯ) ಎಲ್ಲವನ್ನೂ ಒತ್ತೆಯಿಟ್ಟ ಬಳಿಕ ಮಡದಿ ‘ಪಾಂಚಾಲಿ’ಯನ್ನು ಒತ್ತೆಯಿಟ್ಟು ಸೋಲುತ್ತಾರೆ. ರಾಜಸಭೆಗೆ ದುಶ್ಶಾಸನನು ದ್ರೌಪದಿಯನ್ನು ಎಳೆದುಕೊಂಡು ಬರುತ್ತಾನೆ. ಅವಳ ಧರ್ಮದ ಮಾತುಗಳೆಲ್ಲಾ ಗಾಳಿಯಲ್ಲಿ ತೇಲಾಡಿದುವು. ಧರ್ಮಿಷ್ಟರ ಮಾತು ಮೌನವಾಯಿತು. ಕೊನೆಗೆ ಭಗವಂತನಿಗೆ ಮೊರೆಯಿಟ್ಟುಳು. ಶ್ರೀಕೃಷ್ಣ ಅಕ್ಷಯಾಂಬರವನ್ನು ಕರುಣಿಸಿದ. ಸೀರೆ ಅಕ್ಷಯವಾಗಿ ಬಂದು ದ್ರೌಪದಿಯ ಮಾನ ಉಳಿಸಿತು. ಇದು ಮಹಾಭಾರತದ ಸನ್ನಿವೇಶ.
ಪ್ರಾಧ್ಯಾಪಕ ಎಂ.ಎನ್.ಯೋಗೀಶ್ ಅವರು ಪ್ರವೀಣ್ ಗೋಡ್ಖಿಂಡಿಯವರ ಸಾಧನೆಯನ್ನು ಹೇಳುತ್ತಾರೆ, “ಇವರ ಕೊಳಲು ವಾದನ ಕೇಳದವರಿಲ್ಲ. ಬಿದಿರಿನ ರಂಧ್ರದೊಳಗಿಂದ ತೂರಿ ಬರುವ ಗೋಡ್ಖಿಂಡಿಯವರ ಉಸಿರು ಕೇಳುವಾಗ ಎದೆಯೊಳಗೆ ನಾದಾನಂದ ಸೃಷ್ಟಿಯಾಗುತ್ತದೆ. ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತವೆಂಬ ಅಕ್ಷಯ ಪಾತ್ರೆಯೊಳಗಿಂದ ಪಡಿಮೂಡುವ ಸ್ವರಗಳ ಸವಿಯೂಟ ವೈವಿಧ್ಯಮಯ. ಪರಿಮಳ ಕಂಪಿನೊಂದಿಗೆ ಕೇಳುವಾಗ ಮನಮುಟ್ಟಿದೆ. ಕಛೇರಿ, ಕೃತಿ, ಕೀರ್ತನೆಗಳಿಗಷ್ಟೇ ಸೀಮಿತವಾಗದ ಅವರು ಯೋಗ, ಪ್ರಯೋಗಗಳ ಮೂಲಕ ‘ಕೊಳಲಿನ ದೇವರು’ ಅನ್ನಿಸಿಕೊಂಡಿದ್ದಾರೆ.” ಇಲ್ಲಿ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತವನ್ನು ಅಕ್ಷಯಪಾತ್ರೆಗೆ ಹೋಲಿಸಿದ್ದಾರೆ.
ಬೆಂಗಳೂರಿನ ಇಸ್ಕಾನ್ ಸಂಸ್ಥೆಯು ಬಡ ವಿದ್ಯಾರ್ಥಿಗಳ ಹಸಿವನ್ನು ತೀರಿಸಲು ‘ಅಕ್ಷಯ ಪಾತ್ರೆ’ ಯೋಜನೆ ರೂಪಿಸಿದೆ. ಇಲ್ಲಿ ವಿದ್ಯಾರ್ಥಿಗಳ ಪಾಲಿಗೆ ಇಸ್ಕಾನ್ ಒಂದು ಅಕ್ಷಯ ಪಾತ್ರೆ. ಕೆಲವೊಂದು ದೇವಸ್ಥಾನಗಲ್ಲಿ ಅನ್ನ ದಾಸೋಹಕ್ಕೆ ಭಕ್ತರ ಕೊಡುಗೆಯೂ ಇರಲಿ ಎನ್ನುವ ಉದ್ದೇಶದಿಂದ ‘ಅಕ್ಷಯ ಪಾತ್ರೆ’ ಎನ್ನುವ ಯೋಜನೆಯನ್ನು ರೂಪೀಕರಿಸುತ್ತಾರೆ.
ಬಾಲ್ಯದ ದಿನಮಾನಗಳು. ಹುಣಸೆ ಹಣ್ಣಿನ ಬೀಜವನ್ನು ಹುರಿದು ‘ಕಟುಕುಟುಂ’ ಎಂದು ಅಗಿಯುವುದೊಂದು ಮೋಜು. ಮಕ್ಕಳಿಂದ ತೊಡಗಿ ಹಿರಿಯ ತನಕ ಅದೊಂದು ಟೈಮ್‍ಪಾಸ್ ಕುರುಕುರೆ! ನನ್ನದೇ ಹೆಸರಿನ ಸಹಪಾಠಿಯೊಬ್ಬನ ಜೇಬಿನಲ್ಲಿ, ಚೀಲದಲ್ಲಿ ಹುಣಸೆಬೀಜದ ಸ್ಟಾಕ್ ಇರುತ್ತಿತ್ತು. ಶಾಲೆಯಲ್ಲಿ ಆತನಿಗೆ ನಿಶ್ಚಿತ ಗ್ರಾಹಕರಿದ್ದರು! ಆತನಿಂದ ಕಾಡಿ, ಬೇಡಿ ಪಡೆದು ಕಟುಕುಟುಂ ಸದ್ದು ಮಾಡುತ್ತಿದ್ದೆವು. ಅಧ್ಯಾಪಕರು ಪಾಠ ಮಾಡುವಾಗಲಂತೂ ಹಲವರ ಬಾಯಿ ನರ್ತಿಸುತ್ತಿತ್ತು. “ಎಂತ ಮಾರಾಯ.. ನಿನ್ನ ಚೀಲ ಅಕ್ಷಯ ಪಾತ್ರೆಯಾ? ಒಂದು ದಿನವೂ ಹುಣಸೆ ಬೀಜ ಇಲ್ಲ ತಪ್ಪುವುದಿಲ್ಲ” ಎಂದು ಅಧ್ಯಾಪಕರು ಗೊಣಗಾಡುತ್ತಿದ್ದರು. ಅಕ್ಷಯಪಾತ್ರೆಯ ಆಶಯಕ್ಕೆ ಈ ಉದಾಹರಣೆ ಪೂರಕವಲ್ಲ. ಆದರೆ ನಮ್ಮ ಪುರಾಣ ಪದಗಳು ಬದುಕಿನ ಎಲ್ಲೆಡೆ ಪ್ರವೇಶಿಸಿದೆ ಎನ್ನುವುದಕ್ಕೆ ಇದೊಂದು ಉಲ್ಲೇಖವಷ್ಟೇ.
ಕರ್ನಾಟಕ ಸರಕಾರವು ‘ಗ್ಯಾರಂಟಿ’ ಯೋಜನೆಗಳಿಂದ ಚುನಾವಣೆ ಗೆದ್ದು ಅಧಿಕಾರ ಹಿಡಿಯಿತು. ಈ ಹಿನ್ನೆಲೆಯಲ್ಲಿ ಉಪಮುಖ್ಯಮಂತ್ರಿಗಳ ಮಾತೊಂದು ಮುದ್ರಣ ಮಾಧ್ಯಮದಲ್ಲಿ ತೇಲಿಬಂತು! “ನಮ್ಮ ಸರಕಾರದ ಗ್ಯಾರಂಟಿ ಯೋಜನೆಗಳು ಬಡವರ ಪಾಲಿನ ಅಕ್ಷಯಪಾತ್ರೆ’.
ಶ್ರೀಮಂತಿಕೆಯ ಗುಣವೇ ‘ಅಕ್ಷಯ’. ಅದಕ್ಕೆ ಕ್ಷಯವಿಲ್ಲ. ಅದು ಅವನವನ ಕರ್ಮಫಲಕ್ಕನುಸಾರವಾಗಿ ದೇವರು ಕೊಟ್ಟ ವರ. ಅದು ಪ್ರದರ್ಶನಕ್ಕಿರುವುದಲ್ಲ. ಹತ್ತಾರು ಜನ ನೋಡಿ ಕರುಬಲಿ ಎಂಬ ಉದ್ದೇಶಕ್ಕಲ್ಲ. ಕೈಗೆ, ಬೆರಳಿಗೆ, ಕತ್ತಿಗೆ ಆಭರಣವನ್ನು ಧರಿಸಿದ ಮಾತ್ರಕ್ಕೆ ‘ಆತ ಶ್ರೀಮಂತ’ ಎನ್ನಲಾಗದು. ಅದು ‘ಶ್ರೀಮಂತಿಕೆ’ಯ ಅಮಲು! ಯಾವಾಗ ಈ ಅಮಲು ವ್ಯಕ್ತಿಯೊಳಗೆ ಗೊತ್ತಿದ್ದೋ, ಗೊತ್ತಿಲ್ಲದೆಯೋ ನುಸುಳಿದರೆ ಅಲ್ಲಿಗೆ ಮುಗಿಯಿತು, ಮತ್ತೆ ‘ಕ್ಷಯ’ಕ್ಕೆ ಕ್ಷಣಗಣನೆ. ಬಹುಶಃ “ಕಾಲ ಪ್ರಭಾವದಿಂದ ಶ್ರೀಮಂತನೂ ಬಡವನಾದಾನು, ಬಡವನೂ ಶ್ರೀಮಂತನಾದಾನು” ಎನ್ನುವ ಮುತ್ತಿನಂತಹ ಮಾತು ಹುಟ್ಟಿಕೊಂಡಿರಬಹುದು.
ಯಕ್ಷಗಾನ ಭೀಷ್ಮ ಡಾ.ಶೇಣಿ ಗೋಪಾಲಕೃಷ್ಣ ಭಟ್ಟರು ‘ದುರ್ವಾಸ’ನಾಗಿ ಮಾತನಾಡಿದ್ದರು. “ದೇವರು ಏನಾದರೂ ಕೊಡಬೇಕಾದರೆ ನಾವು ಕೊಟ್ಟು ಅದನ್ನು ಅಕ್ಷಯ ಮಾಡಿಕೊಳ್ಳಬೇಕು. ಇದಕ್ಕೆ ‘ಪ್ರಸಾದ’ ಎಂದು ಹೆಸರು. “ಇದರೊಳಗೆ ಏನೂ ಇಲ್ಲ” ಎಂದು ದ್ರೌಪದಿಯು ಪಾತ್ರೆಯನ್ನು ಕೊಟ್ಟಳು. ಅಲ್ಲಿಯೇನೋ ಇತ್ತು, ಪತ್ರವೋ, ಪತ್ರದ ಚೂರೋ! ಅಂತೂ ಯಾವುದನ್ನು ಅವಳು ಕೊಟ್ಟಳೋ, ಅದನ್ನು ಕೃಷ್ಣ ಅಕ್ಷಯ ಮಾಡಿ ಕೊಟ್ಟ. ಅಂದರೆ ಅಕ್ಷಯ ಪಾತ್ರೆಯೆಂದರೆ ಪರಬ್ರಹ್ಮ. ಆ ಪರಬ್ರಹ್ಮನಲ್ಲಿ ನಾವು ಏನನ್ನು ಅರ್ಪಿಸುತ್ತೇವೆ ಅದು ಅಕ್ಷಯಫಲವಾಗಿ ನಮಗೆ ಸಿಗುತ್ತದೆ. ನೀವು ಕೊಟ್ಟದ್ದನ್ನು ಅಕ್ಷಯವಾಗಿಸಿ ನಿಮಗೆ ಕೊಡುತ್ತೇನೆ ಎನ್ನುವುದು ದೇವತ್ವ.
ಏನು? ಅಕ್ಷಯ ಪಾತ್ರೆ : ದ್ಯೂತದಲ್ಲಿ ಸೋತ ಪಾಂಡವರು ವನವಾಸಿಯಾದರು. ಅನೇಕ ಸಜ್ಜನರು, ಧೌಮ್ಯರಂತಹ ಮುನಿಗಳು ಜತೆಯಾದರು. ಧರ್ಮರಾಯನು “ಇಷ್ಟು ಮಂದಿಗೆ ನಿತ್ಯವೂ ಭೋಜನಕ್ಕಾಗಿ ಏನು ವ್ಯವಸ್ಥೆ ಮಾಡಲಿ?” ಮರುಗಿದ. ಧೌಮ್ಯರಿಗೆ ಅಂತರಂಗ ತಿಳಿಯಿತು. ಸೂರ್ಯನಾರಾಯಣನನ್ನು ಪ್ರಸನ್ನೀಕರಿಸುವಂತೆ ಉಪದೇಶ ಮಾಡಿದರು.
ಧರ್ಮರಾಯನ ತಪಸ್ಸಿಗೆ ಪ್ರತ್ಯಕ್ಷನಾದ ಸೂರ್ಯನು ‘ಕಾಂಚನ ತಳಿಗೆ’ (ಚರುಕ, ಅಕ್ಷಯ ಪಾತ್ರೆ) ಯನ್ನು ಅನುಗ್ರಹಿಸಿದ. “ಅಡುಗೆ ಮನೆಯಲ್ಲಿಟ್ಟು ಇದನ್ನು ಪೂಜಿಸಿದರೆ ಪ್ರತಿದಿನ ಹೊತ್ತುಹೊತ್ತಿಗೆ ಎಷ್ಟು ಮಂದಿಗೆ ಬೇಕಾದರೂ ತೆಗೆತೆಗೆದು ಬಡಿಸಬಹುದು. ಎಲ್ಲರ ಭೋಜನವಾದ ಬಳಿಕ ದ್ರೌಪದಿಯೂ ಉಂಡು ತೃಪ್ತಳಾದರೆಂದರೆ ಅಂದು ಮತ್ತೆ ಅಕ್ಷಯ ಪಾತ್ರೆಯು ಅನುಗ್ರಹಿಸಲಾರದು. ವನವಾಸದ ಅವಧಿಯು ಮುಗಿಯುವ ವರೆಗೆ ನಿಮಗೆ ಅಕ್ಷಯ ಫಲವನ್ನು ನೀಡಿಲಿ’ ಎಂದು ಹರಿಸಿದ. ಪ್ರತಿನಿತ್ಯ ದ್ರೌಪದಿಯು ಅಕ್ಷಯ ಪಾತ್ರೆಯ ಮೂಲಕ ಬ್ರಾಹ್ಮಣರಿಗೆ, ಗಂಡಂದಿರಿಗೆ, ಅತಿಥಿಗಳಿಗೆ ಸುಗ್ರಾಸ ಭೋಜನವನ್ನು ಪೂರೈಸುತ್ತಿದ್ದಳು.
ಇತ್ತ ಅರ್ಜುನನು ತಪಸ್ಸನ್ನಾಚರಿಸಿ ಪರಶಿವನಿಂದ ‘ಪಾಶುಪತ’ ಮತ್ತು ಪಾರ್ವತಿ ದೇವಿಯಿಂದ ‘ಅಂಜನ’ ಅಸ್ತ್ರವನ್ನು ಪಡೆದ ವಿಚಾರವು ಹಸ್ತಿನಾವತಿಯನ್ನು ತಲಪಿತು. ದೃತರಾಷ್ಟ್ರ (ಆಂಧರಾಜ)ನಿಗೆ ಚಿಂತೆಯಾಯಿತು. ದುರ್ಯೋದನನ ಚಿತ್ತ ಚಂಚಲವಾಯಿತು. ಆ ಸಮಯಕ್ಕೆ ಮಹರ್ಷಿಗಳಾದ ದೂರ್ವಾಸರ ಆಗಮನ. ಅವರಿಗೆ ರಾಜೋಚಿತವಾದ ಆತಿಥ್ಯ ಮಾಡಿದರು. ಸಂತೋಷಗೊಂಡ ಮುನಿಗಳು, ‘ಏನು ಬೇಕೋ ಅದನ್ನು ಒದಗಿಸುವೆ’ ಎಂದರು. “ನೀವು ನಿಮ್ಮ ಪರಿವಾರದೊಂದಿಗೆ ಪಾಂಡವರ ಬಳಿಗೆ, ಅದರಲ್ಲೂ ದ್ರೌಪದಿ ಉಂಡಾದ ಮೇಲೆ ಹೋಗಿ ತಾವು ಉಂಡು ತೃಪ್ತರಾಗಬೇಕು.” ಎಂದು ಪ್ರಾರ್ಥಿಸಿದ. ದುರ್ಯೋದನನು ದೂರ್ವಾಸರಿಂದ ಪಾಂಡವರಿಗೆ ಶಾಪವನ್ನು ನೀಡುವ ಪರೋಕ್ಷ ತಂತ್ರವಿದು.
ಅರಣ್ಯದಲ್ಲಿ ಸತ್ಸಂಗದಲ್ಲಿರುವ ಪಾಂಡವರು ಮತ್ತು ಅವರೊಂದಿಗಿದ್ದ ಸಜ್ಜನರೆಲ್ಲಾ ಉಂಡಾದ ಬಳಿಕ, ದ್ರೌಪದಿಯೂ ಊಟ ಮಾಡಿದ್ದಳು. ಆ ಸಮಯಕ್ಕೆ ದೂರ್ವಾಸರ ಆಗಮನವಾಯಿತು. ಧರ್ಮರಾಯನಿಂದ ಸತ್ಕಾರ. ‘ಅಪರಾಹ್ಣ ತಿರುಗಿತು. ಹಸಿವಾಗ್ತಿದೆ.’ ಎಂದಾಗ ಅಭ್ಯಾಸಬಲದಿಂದ ಧರ್ಮರಾಯನು ‘ಅನುಗ್ರಹವಾಗಲಿ’ ಎನ್ನಬೇಕೇ. ದೂರ್ವಾಸರು ಪರಿವಾರದೊಂದಿಗೆ ಸ್ನಾನಕ್ಕೆ ತೆರಳಿದರು.
ದ್ರೌಪದಿಯ ಬೋಜನವಾದ ಬಳಿಕ ಕನಕ ಪಾತ್ರೆಯು ಬರಿದಾಗಿದೆ. ದೂರ್ವಾಸರ ಸಿಟ್ಟನ್ನು ನೆನಸಿಕೊಳ್ಳುತ್ತಾ ಎಲ್ಲರಲ್ಲೂ ಭಯ ಆವರಿಸಿತು. ‘ಮುನಿಗಳು ಶಾಪ ಕೊಟ್ಟರೆ’ ಎಂಬ ಆತಂಕ ಉಂಟಾಯಿತು. ಧೌಮ್ಯರು ದ್ರೌಪದಿಯನ್ನು ಕರೆದು ‘ಶ್ರೀಕೃಷ್ಣನನ್ನು ಪ್ರಾರ್ಥಿಸು’ ಎಂದರು. ಪಾಂಚಾಲೆಯ ಪ್ರಾರ್ಥನೆಗೆ ಗೋವಿಂದ ಮೈದೋರಿದ. ತಂಗಿಯ ಕಣ್ಣೀರನ್ನು ಒರೆಸಿದ. ‘ನನಗೂ ಹಸಿವಾಗಿದೆ. ನೋಡೋಣ.. ಕಾಂಚನ ತಳಿಗೆಯಲ್ಲಿ ಏನಾದರೂ ಉಳಿದಿದೆಯೋ’ ಎಂದು ಅದರೊಳಗೆ ಕೈಯಿಕ್ಕಿದಾಗ ಪಾಕಶೇಷವು ದೊರಕಿತು. ‘ಇಷ್ಟು ಸಾಕು’ಎನ್ನುತ್ತಾ ಕೃಷ್ಣನು ತಿಂದು ತೇಗಿದ. ಅತ್ತ ಸ್ನಾನಕ್ಕೆ ತೆರಳಿದ ದೂರ್ವಾಸ ಸಮೂಹಕ್ಕೂ ಹೊಟ್ಟೆತುಂಬಿ ತೇಗಿದರು! ಇದು ಕೃಷ್ಣನ ಮಹಿಮೆ.
‘ಕೃಷ್ಣ… ಪಾಂಡವರೇ.. ಹಸ್ತಿನಾವತಿಗೆ ಹೋಗಿದ್ದೆ. ಅಧರ್ಮದ ಊಟವನ್ನು ಉಂಡು ಕಣ್ಣು ಮಂಜಾಗಿತ್ತು. ಈಗ ದೃಷ್ಟಿ ಸ್ಪಷ್ಟವಾಯಿತು. ದೈವಾನುಗ್ರಹ ಇದ್ದಲ್ಲಿ ಎಲ್ಲವೂ ಇದೆ. ಎಲ್ಲರಿಗೂ ಸುಖವಾಗಲಿ’ ಎಂದು ಹರಸಿ ಮಹರ್ಷಿಗಳು ತೆರಳಿದರು.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel