ಮಲೆನಾಡಿನ ಮೂಲೆ ಹಳ್ಳಿಯೊಂದರಲ್ಲಿ ನಿಂತು ನಮಗೆ ನಮ್ಮ ಪಾಲಿನ ಸ್ವರ್ಗ ಸದೃಶ ಊರಿನಂತಹ ಸಕಲ ಐಭೋಗದ ಇಂದ್ರಪ್ರಸ್ಥದಂತಹ ಊರು…. ಬೆಂಗಳೂರನ್ನು ನಮ್ಮ ಹಳ್ಳಿಗೆ ಹೋಲಿಸಿದರೆ…
ಮಲೆನಾಡಿನ ಮುಖ್ಯ ರಸ್ತೆಯಿಂದ ನಮ್ಮೂರಿನ ನಮ್ಮ ಮನೆಗೆ ಸುಮಾರು ಹನ್ನೆರಡು ಕಿಮೀ ದೂರ.ಇದೆ. ನಮ್ಮ ಹಳ್ಳಿಯ ಜನಸಂಖ್ಯೆಯ ಲೆಕ್ಕಾಚಾರದಲ್ಲಿ ಖಾಸಗಿ ಬಸ್ ನವರಿಗೆ ನಮ್ಮೂರಿಗೆ ಬಸ್ ಓಡಿಸಿದರೆ ನಷ್ಟ…! ಸರ್ಕಾರದ ಬಸ್ ನಾಲ್ಕು ದಿನದ ಒಂದು ಹೊತ್ತು ಬಂದು ಹೋಗುತ್ತದೆ … ಕೆಲವೊಮ್ಮೆ ಆ ಬಸ್ಸೂ ನಿಂತು ಹೋಗುತ್ತದೆ..! ದುಡ್ಡಿದ್ದು ಹುಡುಗಾಟಿಕೆ ಇರುವವರ ಬಳಿ ಬೈಕು ಕಾರಿದೆ. ಆದರೆ ನಮ್ಮಂಥ ಬಡವರಿಗೆ ಕಾಲೇ ಕಾರು ಬೈಕು….!. ಕಾಡ ನಡುವಿನ ಹಾದಿ ಮಳೆಗಾಲದಲ್ಲಿ ಆಗಾಗ್ಗೆ ಕುಸಿದು ದಾರಿಯೇ ಬಂದ್ ಆಗುತ್ತದೆ…!. ಕಾಡ ಮದ್ಯದ ಕರೆಂಟು ಲೈನು ಮಳೆಗಾಲದಲ್ಲಿ ಬಟ್ಟೆ ಒಣಗಿಸುವ ತಂತಿ ಇದ್ದಂತೆ..!! ಮಳೆಗಾಲದ ನಾಲ್ಕು ತಿಂಗಳು ಕರೆಂಟೇ ಇಲ್ಲ…!. ನಲವತ್ತು ಪರ್ಸೆಂಟ್ ಕಾಮಗಾರಿ ಯಲ್ಲಿ ನಿರ್ಮಾಣವಾಗುವ ನಮ್ಮೂರ ರಸ್ತೆ ಗಳು ಮಳೆಗಾಲ ಮುಗಿಯುವ ಹೊತ್ತಿಗೆ ಡಾಂಬಾರು ರಹಿತವಾಗಿ ಬರೀ ಜಲ್ಲಿ ಕಲ್ಲು ಎದ್ದ ರಸ್ತೆ ಯಾಗಿರುತ್ತದೆ… !. ನಮ್ಮೂರ ಮುಖ್ಯ ರಸ್ತೆಯಿಂದ ನಮ್ಮ ಪುಟ್ಟ ಹಳ್ಳಿಗೆ ಮಳೆಗಾಲದಲ್ಲಿ ತುಂಬಿ ಹರಿವ ಎರಡು ಹಳ್ಳದ ಮೇಲಿನ ಮರದ ಸಾರದಲ್ಲಿ ಜೀವ ಕೈಲಿ ಹಿಡಿದು ಹೋಗಬೇಕು…!
ನಾವು ದೊಡ್ಡವರು ಅನುಭವ ಇರುವವರು ಹೇಗೋ ಆಗುತ್ತದೆ. ಆದರೆ ಶಾಲೆಗೆ ಹೋಗುವ ಮಕ್ಕಳು ಹೆಂಗಸರು ವೃದ್ದರು ಈ ಸಾರ (ಮರದ ದಿಮ್ಮಿಯ ಕಿರು ಸೇತುವೆ) ದಾಟುವಾಗ ಜೀವ ಕೈಲಿ ಹಿಡಿದಿಟ್ಟುಕೊಂಡು ಹೋಗಬೇಕು. ನಮ್ಮ ಹಳ್ಳಿ ಊರಿನಲ್ಲಿ ಯಾರಿಗಾದರೂ ರಾತ್ರಿ ತೀವ್ರ ಆರೋಗ್ಯ ತಪ್ಪಿದರೆ ನಮ್ಮ ಹಳ್ಳಿಯಿಂದ ಸುಮಾರು ಎಪ್ಪತ್ತೈದು ಎಂಬತ್ತು ಕಿಲೋಮೀಟರ್ ದೂರದ ಜಿಲ್ಲಾ ಆಸ್ಪತ್ರೆಗೋ ಮಣಿಪಾಲ್ ಗೋ ಹೋಗಿ ಚಿಕಿತ್ಸೆ ಪಡಿಬೇಕು. ಇಪ್ಪತ್ತು ಕಿಲೋಮೀಟರ್ ನ ಅಂತರದಲ್ಲಿ ಎಲ್ಲೂ ಎಲ್ಲಾ ಸೌಲಭ್ಯಗಳಿರುವ ಆಸ್ಪತ್ರೆ ಗಳಿಲ್ಲ..!. ಮಳೆಗಾಲದಲ್ಲಿ ಯಾರಾದ್ದಾದರೂ ಆರೋಗ್ಯ ವ್ಯತ್ಯಾಸವಾದರೆ ಹತ್ತು ಕಿಲೋಮೀಟರ್ ದೂರದ ತನಕ ಕಂಬಳಿ ಜೋಲಿ ಮಾಡಿಕೊಂಡು ಹೊತ್ತೊಯ್ದು ನಂತರ ವಾಹನದಲ್ಲಿ ಆಸ್ಪತ್ರೆ ಗೆ ಒಯ್ದು ಚಿಕಿತ್ಸೆ ಕೊಡಿಸಬೇಕು…
ಶಿಕ್ಷಣ ವ್ಯವಸ್ಥೆಯೂ ಅಷ್ಟಕಷ್ಟೆ ಇದ್ದರೆ ಮೇಷ್ಟ್ರು ಇಲ್ಲ… ಪಟ್ಟಣ ದ ಶಾಲೆಗೆ ಕಳಿಸುವಷ್ಟು ಶಕ್ತಿ ಇಲ್ಲದ ನಮ್ಮಂಥವರ ಎಷ್ಟೋ ಮಕ್ಕಳು ಸರಿಯಾದ ಶಿಕ್ಷಣ ಸಿಗದೇ ಪರಿತಪಿಸುತ್ತಾರೆ… ಮಳೆಗಾಲದಲ್ಲಿ ನೀರೋ ನೀರೋ..ಆದರೆ ಬೇಸಿಗೆಯಲ್ಲಿ ಕಡು ಬಿಸಿಲು ನೀರಿಗೆ ಬರ…ದುರಂತ ನೋಡಿ ನಮಗೆ ಮಳೆಗಾಲದಲ್ಲೂ ಕರೆಂಟು ಇಲ್ಲ…! ಬೇಸಿಗೆಯಲ್ಲಿ ನಿಮ್ಮಂಥ ನಗರೀಕರಿಗೆ 24 ಗಂಟೆ ಕರೆಂಟು ಕೊಡಲು ಲೋಡ್ ಷೆಡ್ಡಿಂಗ್….!. ನಮಗೆ ದಿನದಲ್ಲಿ ಕೇವಲ ಹನ್ನೆರಡು ಗಂಟೆ ಮಾತ್ರ ಕರೆಂಟು…! ಅದೂ ಗುಣಮಟ್ಟದ ವಿದ್ಯುತ್ ಅಲ್ಲ…! ಇತ್ತೀಚಿನ ವರ್ಷಗಳಲ್ಲಿ ನಮ್ಮ ಜೀವನಾಧಾರದ ಮೂಲವಾಗಿದ್ದ ಅಡಿಕೆ ಬೆಳೆಗೆ ಎಲೆಚುಕ್ಕಿ ರೋಗ. ಈ ರೋಗ ವಿಪರೀತ ಮಳೆ ಹವಮಾನ ವೈಪರೀತ್ಯಗಳಿಂದ ಬಂದದ್ದು.
ಈ ಹವಾಮಾನ ವೈಪರೀತ್ಯ ಯಾಕಾಗಿದೆ ಎಂದರೆ ಮತ್ತೆ ನಿಮ್ಮ ಬುಡಕ್ಕೇ ಬರುತ್ತದೆ.ಬೆಂಗಳೂರಿನಂತಹ ಮಹಾ ನಗರ ಗಳಿಗೆ 2್ಠ4 7 ವಿದ್ಯುತ್ ನೀಡಲು ನಮ್ಮ ಪಶ್ಚಿಮ ಘಟ್ಟಗಳ ಅಮೂಲ್ಯ ಅರಣ್ಯ ನಾಶ ಮಾಡಿ ಆಣೆಕಟ್ಟು ಕಟ್ಟಿದ ದುಷ್ಪರಿಣಾಮ ಅರಣ್ಯ ನಾಶದ ಕಾರಣ ಈ ಹವಾಮಾನ ವೈಪರೀತ್ಯ …! ಅಂತರ್ಜಲ ಕುಸಿಯಲು ನಿಮ್ಮಂಥ ಮಹಾ ನಗರದ ಕಟ್ಟಡ ನಿರ್ಮಾಣ ಕ್ಕೆ ನಮ್ಮ ನದಿಗಳಿಂದ ಅಳತೆ ಮೀರಿ ಮಣ್ಣು ಗೆಬರಿ ಮರಳು ಕೊಂಡೊಯ್ದದ್ದು ಮುಖ್ಯ ಕಾರಣ…
ಇಷ್ಟೆಲ್ಲಾ ಅರಣ್ಯ ನಾಶ ಪ್ರಕೃತಿ ದೌರ್ಜನ್ಯ ಮಾಡಿ ಅದರ ಮುಕ್ಕಾಲು ಪಾಲು ಸಾರ ನಿಮ್ಮ ಮಹಾ ನಗರಗಳಿಗೆ ಸುರಿದ ಮೇಲೆ ಸರ್ಕಾರ ಮತ್ತು ಪಟ್ಟಣ ಪರಿಸರವಾದಿಗಳಿಗೆ ನಮ್ಮ ಹಳ್ಳಿಯ ಅರಣ್ಯ ವನ್ನು ಮರು ಸಾಂಸ್ಥಿಕರಣ ಮಾಡುವ ಉಮೇದು…
ಕಾಡು ಮೂಲೆಯಲ್ಲಿ ಒಂದು ಎರಡೋ ಮೂರೋ ಎಕರೆ ಅರಣ್ಯ ಒತ್ತುವರಿ ಮಾಡಿಕೊಂಡು ಕಾನ ಸರಕಲಿನಲ್ಲಿ ಒಂದು ಎರಡೋ ಎಕರೆ ಅಡಿಕೆ ತೋಟ ಮಾಡಿ ಕೊಂಡ ನಮಗೆ ಈಗ ಕಸ್ತೂರಿ ರಂಗನ್ ವರದಿ ಜಾರಿಯ ಬೀಸು ಕತ್ತಿ….!!
ಯಾವುದೇ ಕ್ಷಣದಲ್ಲೂ “ಅರಣ್ಯ ಒತ್ತುವರಿ” ಕಾರಣಕ್ಕಾಗಿ ನಮ್ಮ ಈ ಕಾಡಿ ನಿಂದ ಮೂಲೋತ್ಪಾಟನೆ ಮಾಡುವ ಭಯ ನಮ್ಮ ಸದಾ ಕಾಡುತ್ತಿದೆ….!!
ಈ ಕಾಲದ ಫೋನು ಮೊಬೈಲ್ ಗಳೂ ನಮ್ಮಂಥ ಹಳ್ಳಿ ಮೂಲೆಯ ನಾಗರೀಕರಿಗೆ ಅಲಭ್ಯವಾಗಿದೆ.ಕರೆಂಟ್ ಇದ್ದರೆ ನಮ್ಮ ಸಮೀಪದ ಮೊಬೈಲ್ ಟವರ್ ಗಳು ಕ್ಷೀಣ ವಾಗಿ ಕಾರ್ಯ ನಿರ್ವಹಿಸುತ್ತದೆ…!! .ನಮ್ಮ ಹಳ್ಳಿಯಲ್ಲಿ ಏನಿದೆ..?
ಹೆಚ್ಚಿನ ವಿಧ್ಯಾಭ್ಯಾಸ ಇಲ್ಲದ ನಮ್ಮಂತಹ ಲಕ್ಷಾಂತರ ಜನರು ಬದುಕಿನ ಎಲ್ಲಾ ಬವಣೆಯನ್ನ ಪ್ರತಿರೋಧ (ಯಾರಿಗೆ ಮಾಡುವುದು…?) ಮಾಡದೇ ಈ ನಿಸರ್ಗ ಸಮಾಜದೊಂದಿಗೆ ಹೊಂದಾಣಿಕೆ ಮಾಡಿಕೊಂಡು ಬಾಳಲೇಬೇಕಾದ ಅನಿವಾರ್ಯ …. !
ಇಷ್ಟೆಲ್ಲಾ ಕುಂದು ಕೊರತೆಯ ನಡುವೆ. ಭಯ ಅಭದ್ರತೆಯ ನಡುವೆ ನಾವು ಈ ದೇಶದ ಜವಾಬ್ದಾರಿಯುತ ಪ್ರಜೆಗಳಾಗಿ
ಎಪ್ಪತ್ತೈದು ಎಂಬತ್ತು ಪ್ರತಿಶತ ಮತದಾನ ಮಾಡುತ್ತೇವೆ….!!.
ಆದರೆ ಬೆಂಗಳೂರಿನ ಮಹಾ ಜನತೆಗಳೇ, ನಿಮಗೇನಾಗಿದೆ… !?. 50 % ಕ್ಕಿಂತ ಕಡಿಮೆ ಮತದಾನ ಮಾಡಿದ್ದೀರಲ್ಲ ಯಾಕೆ ಈ ಬೇಜವಾಬ್ದಾರಿ….? ಒಂದು ಹತ್ತು ಪ್ರತಿಶತ ಜನರನ್ನು ವಿವಿಧ ಅನಿವಾರ್ಯ ಕಾರಣಕ್ಕಾಗಿ ಬಿಡೋಣ. ಸುಮಾರು ನಲವತ್ತು ಪ್ರತಿಶತ ಈ ಭಾಗದ ಜನರು ಮತದಾನದ ಬಗ್ಗೆ ಅಸಡ್ಡೆಯ ಕಾರಣಕ್ಕೇ ಮತದಾನದಿಂದ ದೂರ ಉಳಿ ದಿರುವುದು ಅತ್ಯಂತ ಖಂಡನಾರ್ಹ. ಪ್ರಜಾಪ್ರಭುತ್ವ ಗೆಲ್ಲಬೇಕಾದರೆ ಪರಿಪೂರ್ಣ ಮತದಾನ ಮಾಡಲೇ ಬೇಕು.
ಬೆಂಗಳೂರಿನ ಮಹಾ ಜನಗಳೇ.., ನೀವು ನಲವತ್ತು ಪರ್ಸೆಂಟ್ ಗಿಂತ ಹೆಚ್ಚು ಜನ ಮತದಾನದಿಂದ ದೂರ ಉಳಿದ ಕಾರಣವೇನು…? ನೀವುಗಳು ನೂರಕ್ಕೆ ನೂರರಷ್ಟು ಶಿಕ್ಷಿತರು. ನಿಮಗೇ ಮತದಾನದದ ಬದ್ದತೆ ಮೌಲ್ಯ ದ ಬಗ್ಗೆ ಉಪಕನ್ಯಾಸ ನೀಡಬೇಕೇ..? ಯಾವುದೇ ರಾಜ್ಯ ಕೇಂದ್ರ ಸರ್ಕಾರಗಳು ನಗರ ಪ್ರದೇಶದ ಜನರಿಗೆ ಇನ್ನಿಲ್ಲದ ಆದ್ಯತೆ ನೀಡುತ್ತದೆ. ನಗರ ಪ್ರದೇಶದ ರಸ್ತೆ ಗಳು, ಕುಡಿಯುವ ನೀರು, ವಿದ್ಯುತ್ ಮೆಟ್ರೋ … ಸೇರಿದಂತೆ ಎಲ್ಲಾ ಅನುಕೂಲ ವೂ ಸಿಕ್ಕಿ ನಗರ ಪ್ರದೇಶದ ಜನ ಅತ್ಯಂತ ಸಂತುಷ್ಟ ರಾಗಿರುವಂತೆ ನೋಡಿ ಕೊಳ್ಳುತ್ತದೆ. ನಿಮ್ಮ ಐಟಿ ಬಿಟಿ ಸೇರಿದಂತೆ ಅನೇಕ ಉದ್ಯಮ ಗಳು ಕೇಂದ್ರ ಸರ್ಕಾರ ಸದೃಡ ಯೋಗ್ಯವಾಗಿದ್ದು ಅಂತರಾಷ್ಟ್ರೀಯ ವ್ಯಾಪಾರ ವಹಿವಾಟು ಸಂಬಂಧಗಳ ಉತ್ತಮ ನಿರ್ವಹಣೆ ಮಾಡಿದ್ದಲ್ಲಿ ಮಾತ್ರ ಸುರಕ್ಷಿತ….
ಒಂದು ವೇಳೆ ಈ ಸರ್ಕಾರ ಹೋಗಿ ಅಂತಂತ್ರ ಸರ್ಕಾರ ಆಡಳಿತಕ್ಕೆ ಬಂದರೆ ಒಂದು ಸಲ ಎಲ್ಲವೂ ಅಯೋಮಯ ವಾಗುತ್ತದೆ.
ನಮ್ಮ ಮತ ನಮ್ಮ ಜವಾಬ್ದಾರಿ…. ಈ ದೇಶದಲ್ಲಿ ವಾಸಿಸುವ ನಮಗೆ ಇದೊಂದು ದೊಡ್ಡ ಹಕ್ಕು…
ಮಹಾ ಜನಗಳೆ ನಾವು ತೆರಿಗೆದಾರರು… ನಮ್ಮ ಬಳಿ ಹಣ ಇದೆ. ಈ ಸರ್ಕಾರದಿಂದ ಅಥವಾ ಈ ಸರ್ಕಾರದ ಆಯ್ಕೆ ಪ್ರಕ್ರಿಯೆ ಯ ಮತದಾನ ದಿಂದ ನಮಗೆ ಯಾವ ಪ್ರಯೋಜನವೂ ಇಲ್ಲ … !! ಎಂಬುದು ನಿಮ್ಮ ಕಡು ಮೂರ್ಖತನ. ಒಮ್ಮೆ ರಷ್ಯಾ ಉಕ್ರೇನ್ , ಇಸ್ರೇಲ್ ಪ್ಯಾಲಿಸ್ಟೈನ್ ಯುದ್ಧ ವನ್ನು ಜ್ಞಾಪಿಸಿಕೊಳ್ಳಿ. ನಮ್ಮ ಸುತ್ತಮುತ್ತಲಿನ ಶತೃ ದೇಶಗಳು ನಮ್ಮ ದೇಶದಲ್ಲಿ ದುರ್ಬಲ ಸರ್ಕಾರ ವೊಂದು ಆಳ್ವಿಕೆಗೆ ಬರಲೆಂದು ಕಾಯ್ತಿರುತ್ತವೆ. ಅಕಸ್ಮಾತ್ತಾಗಿ ಅತಂತ್ತ ಕಿಚಡಿ ಸರ್ಕಾರ ಬಂದರೆ ಖಂಡಿತವಾಗಿಯೂ ನಮ್ಮ ಶತೃ ದೇಶಗಳು ನಮ್ಮ ಮೇಲೆ ದಾಳಿ ಮಾಡಿ ನಮ್ಮ ಸರ್ವ ನಾಶ ಮಾಡುತ್ತವೆ…!! ಒಂದು ಯುದ್ದ, ಒಂದು ಬಾಂಬ್ ವಿಸ್ಪೋಟ ದಂತಹ ದುರ್ಘಟನೆ ಗಳು ಈ ದೇಶದಲ್ಲಿ ಉಂಟಾದರೆ ದೇಶದ ಆರ್ಥಿಕ ನೆಮ್ಮದಿ ಹದಗೆಡುತ್ತದೆ…
ಶುಕ್ರವಾರ ಮತದಾನ ರಜೆ.. ಶನಿವಾರ ಭಾನುವಾರ ವೀಕೆಂಡು .. ಶುಕ್ರವಾರ ಮತದಾನ ಮಾಡಿ ರೆಸಾರ್ಟೋ ಟೂರೋ ಇನ್ನೆಲ್ಲೋ ಹೋಗ ಬಹುದಿತ್ತು. ಇಲ್ಲಿ ಚುನಾವಣಾ ಆಯೋಗ ವೀಕೆಂಡ್ ಒತ್ತಿನಲ್ಲಿ ಚುನಾವಣಾ ದಿನಾಂಕ ಇಟ್ಟು ಈ ಮತದಾನ ಕಡಿಮೆ ಯಾಗಲು ಮರ ಹತ್ತುವ ಮಂಗನಿಗೆ ಏಣಿ ಹಾಕಿಕೊಟ್ಟಂತೆ ಮಾಡಿದೆ. ಚುನಾವಣಾ ಆಯೋಗ ಮಂಗಳ ವಾರವೋ ಬುದವಾರವೋ ಚುನಾವಣೆ ಇಟ್ಟಿದ್ದರೆ ಇದಕ್ಕಿಂತ ಇನ್ನೊಂದು ಹತ್ತು ಪ್ರತಿಶತ ಮತದಾನವಾಗುತ್ತಿತ್ತು….! ಇದರಲ್ಲಿ ಚುನಾವಣಾ ಆಯೋಗದ್ದೂ ತಪ್ಪಿದೆ. ಆದರೆ ಅತ್ಯಂತ ವಿದ್ಯಾವಂತರಾಗಿ ಮತದಾನ ದಿಂದ ದೂರ ಇರುವುದು ದೇಶದ ನಾಗರೀಕರಾಗಿ ದೊಡ್ಡ ಹೊಣೆಗೇಡಿತನ.
ಎಷ್ಟೇ ಶಿಕ್ಷಣ ಪಡೆದರೂ ಹೃದಯಕ್ಕೆ ಬದ್ದತೆ ದೇಶ ಪ್ರೇಮ ಹೊಗ್ಗದಿದ್ದರೆ ಅದು ವ್ಯರ್ಥ.ಬೆಂಗಳೂರಿನ ಸೌತು ಸೆಂಟ್ರಲ್ ನ ಮತದಾನ ಮಾಡದ ನಲವತ್ತು ಪ್ರತಿಶತ ಜನರು ತಮ್ಮ ಮತದಾನ ಮಾಡದ ಕಾರಣಕ್ಕೆ ಏನು ಅನಾಹುತ ಆಗುತ್ತದೆ ಎಂಬ ಅರಿವಿಲ್ಲದಿರುವುದು ಅತ್ಯಂತ ಕಳವಳಕಾರಿ. ಮುಂದೆ 2029 ರ ಚುನಾವಣೆ ಯ ಹೊತ್ತಿ ಗಾದರೂ ನೀವು ರಾಜಕೀಯ ಸಾಕ್ಷರರಾಗಿ ಎಂದು ಕೋರುತ್ತಿದ್ದೇನೆ.
ದೆಹಲಿಯಲ್ಲಿ ಆಯೋಜಿಸಿದ್ದ 58ನೇ ಜ್ಞಾನಪೀಠ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ, ರಾಷ್ಟ್ರಪತಿ ದ್ರೌಪದಿ ಮುರ್ಮು…
ಮುಂದಿನ 5 ದಿನಗಳ ಕಾಲ ಕೇರಳದಲ್ಲಿಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ…
ಅಡಿಕೆಗೆ ಸಂಬಂಧಿಸಿ ಸುಮಾರು 7 ಸಮಿತಿಗಳು-ವರದಿಗಳು ಆಗಿವೆ. ಎಲ್ಲಾ ಸಂದರ್ಭದಲ್ಲೂ ಅಡಿಕೆಯ ಪರ್ಯಾಯ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
ಕೆಲ ದೇವಾಲಯಗಳು ತಮ್ಮ ಶಿಲ್ಪಕಲೆ, ಇತಿಹಾಸ, ಸೌಂದರ್ಯಕ್ಕೆ ಹೆಸರಾದರೆ ಮತ್ತೆ ಕೆಲವು ಭಕ್ತರ…