ಭಾರತವು ವಿಶ್ವಗುರುವಾಗಲು ಶಿಕ್ಷಣ ಹೇಗಿರಬೇಕು?

December 4, 2025
7:38 PM
ಆರ್ಥಿಕತೆಯಲ್ಲಿ ಭಾರತದ ಎತ್ತರ ಜಿಗಿತವು ಪ್ರಶಂಸನೀಯವಾಗಿದೆಯೆಂದು ನಾವು ಅಂಕಿ ಸಂಖ್ಯೆಗಳ ಆಧಾರದಿಂದ ತಿಳಿಯಬಹುದು. ಪ್ರಧಾನಿ ಮೋದಿಯವರು ದೇಶವನ್ನು ಮುನ್ನಡೆಸಿದ ಬಗೆ ವಿಶ್ವಕ್ಕೇ ಅಚ್ಚರಿ ಮೂಡಿಸಿರುವಂತಹುದು. ಯಾವುದೇ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಇಂದು ಭಾರತಕ್ಕೆ ಒಂದು ಗಣನೀಯ ಆಸನವನ್ನು ನೀಡುವಲ್ಲಿ ಪ್ರಬಲಗೊಳ್ಳುತ್ತಿರುವ ಇಲ್ಲಿಯ ಆರ್ಥಿಕತೆಯ ಪ್ರಭಾವ ಇದ್ದೇ ಇದೆ. ಆದರೆ ನಾವು ಈ ಬಲವನ್ನು ನಂಬಿ ಭಾರತವು ವಿಶ್ವಗುರುವಾಗಲಿರುವ ಕನಸನ್ನು ಕಾಣಬಹುದೇ? ಅದು ಅಷ್ಟೊಂದು ಸರಳ ಸಮೀಕರಣವೇ?
ನನ್ನ ಈ ಪ್ರಶ್ನೆಗೆ ಒಂದು ಕಾರಣವಿದೆ. ಇಂದು ವಿಶ್ವದಲ್ಲಿ ಆರ್ಥಿಕವಾಗಿ ಗರಿಷ್ಟ ಮಟ್ಟದಲ್ಲಿರುವ ರಾಷ್ಟ್ರಗಳಲ್ಲಿರುವ ಶಿಕ್ಷಣ ಮತ್ತು ಸಾಮಾಜಿಕ ನ್ಯಾಯದ ವ್ಯವಸ್ಥೆಗಳನ್ನು ನಾವು ಗಮನಿಸಿದರೆ ಸದ್ಯ ಉಚ್ಛಸ್ತರದಲ್ಲಿರುವ ಜರ್ಮನಿ, ನಾರ್ವೆ ಮತ್ತು ಸ್ವೀಡನ್ ದೇಶಗಳಲ್ಲಿ ಮೂಲಭೂತ ಸಾರ್ವತ್ರಿಕ ಶಿಕ್ಷಣವು ಉಚಿತವಾಗಿ ಲಭ್ಯವಿದೆ. ಉದಾಹರಣೆಗೆ ಜರ್ಮನಿಯಲ್ಲಿ ಅಲ್ಲಿಯ ಪ್ರಾಥಮಿಕದಿಂದ  ವಿಶ್ವವಿದ್ಯಾಲಯಗಳವರೆಗೂ ಶಿಕ್ಷಣವನ್ನು ಉಚಿತವಾಗಿ ನೀಡಲಾಗುತ್ತದೆ. ನಾರ್ವೆಯಲ್ಲಿ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಿಗೂ ಉಚಿತ ಶಿಕ್ಷಣ ಲಭ್ಯವಿದೆ. ಸ್ವೀಡನ್ ಕೂಡಾ ಸ್ವದೇಶೀಯರಿಗಷ್ಟೇ ಅಲ್ಲದೆ ಯುರೋಪಿಯನ್ ಯೂನಿಯನ್ ರಾಷ್ಟ್ರಗಳ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುತ್ತಿದೆ. ಇನ್ನು ಶ್ರೀಮಂತರ ಸ್ತರದಲ್ಲಿರುವ ಕೆನಡಾ, ಫಿನ್‍ಲ್ಯಾಂಡ್, ಮತ್ತು ನೆದರ್‍ಲೇಂಡ್‍ಗಳಲ್ಲಿಯೂ ಉಚಿತವಾಗಿ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡಲಾಗುತ್ತದೆ. ಇದೀಗ ಭಾರತವೂ ಆರ್ಥಿಕವಾಗಿ ಪ್ರಬಲವಾಗುತ್ತಿರುವ ಸಂದರ್ಭದಲ್ಲಿ ಸಮಾನ ಶಿಕ್ಷಣದ ಕುರಿತಾದ ಜಿಜ್ಞಾಸೆ ಅಗತ್ಯವಾಗಿದೆ. ಏಕೆಂದರೆ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿರುವ ಸರ್ವರಿಗೂ ಉಚಿತ ಶಿಕ್ಷಣವೆಂಬ ಪರಿಕಲ್ಪನೆಯಿಂದ ನಾವು ಬಹಳ ದೂರ ಇದ್ದೇವೆ.
ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿ ಸಮಾನತೆಯನ್ನು ತರಲು ಸಾಧ್ಯವೇ? “ಇದು ಸಾಧ್ಯವೇ ಇಲ್ಲ ಎನ್ನುವಷ್ಟು ಕಷ್ಟವಿದೆ” ಎಂಬ ಉತ್ತರವೇ ಬಂದೀತು.  ಏಕೆಂದರೆ ಅಷ್ಟೊಂದು ವ್ಯಾಪಕವಾಗಿ ಶಿಕ್ಷಣದಲ್ಲಿ ಗೋಜಲುಗಳ ಜಾಲ ಸಿಕ್ಕುಗಟ್ಟಿದೆ. ಎಲ್ಲಿಂದ ಬಿಡಿಸಲು ಹೋದರೂ ಅಲ್ಲೊಂದಷ್ಟು ಹೆಚ್ಚು ಗಂಟುಗಳು ಬೀಳುತ್ತವೆ. ಭಾರತದಲ್ಲಿ ಸರಕಾರದ ಪ್ರಾಯೋಜಕತ್ವದಲ್ಲೇ ಅನೇಕ ಬಗೆಯ ಶಾಲೆಗಳಿವೆ. ಕೇಂದ್ರ ಸರಕಾರದ ಶಾಲೆಗಳು, ರಾಜ್ಯ ಸರಕಾರದ ಶಾಲೆಗಳು, ಲೋಕಲ್ ಆಡಳಿತದ ಶಾಲೆಗಳು, ಪಿ.ಎಂ.ಶ್ರೀ. ಶಾಲೆಗಳು, ಹಿರಿಯ ಪ್ರಾಥಮಿಕ ಮತ್ತು ಕಿರಿಯ ಪ್ರಾಥಮಿಕ ಶಾಲೆಗಳು, ಜವಾಹರ್ ನವೋದಯ ವಿದ್ಯಾಲಯಗಳು, ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು, ಕೇಂದ್ರೀಯ ವಿದ್ಯಾಲಯಗಳು, ಮಿಲಿಟರಿ ಶಾಲೆಗಳು, ರೈಲ್ವೇ ಶಾಲೆಗಳು, ಸೈನಿಕ ಶಾಲೆಗಳು, ಖಾಸಗಿ ಅನುದಾನಿತ ಶಾಲೆಗಳು, ಖಾಸಗಿ ಅನುದಾನ ರಹಿತ ಶಾಲೆಗಳು, ಇಂಗ್ಲಿಷ್ ಮಿಡಿಯಂ ಶಾಲೆಗಳು, ಸಿ.ಬಿ.ಎಸ್.ಸಿ. ಪಠ್ಯಗಳ ಶಾಲೆಗಳು, ಐ.ಸಿ.ಎಸ್.ಇ. ಪಠ್ಯದ ಶಾಲೆಗಳು, ಕೆಂಬ್ರೀಜ್ ಮುಂತಾದ ವಿದೇಶೀ ಪಠ್ಯಗಳ ಶಾಲೆಗಳು, ರಾಜ್ಯ ಸರಕಾರದ ಕೆ.ಪಿ.ಎಸ್. ಶಾಲೆಗಳು, ಎನ್.ಐ.ಓ.ಎಸ್. ನ ಹೋಂ ಸ್ಕೂಲಿಂಗ್ ಮುಂತಾಗಿ  ಬಹು ವಿಧದ ಶಾಲೆಗಳಿವೆ. ಇವುಗಳಿಗೆ ಇರುವ ಅನುದಾನದ ಮೊತ್ತದಲ್ಲಿ ಹಾಗೂ ಶಾಲೆಗಳಿಗೆ ಒದಗಿಸಲಾಗುವ ಸೌಕರ್ಯಗಳ ವೆಚ್ಚಗಳಲ್ಲಿ ಭಾರೀ ಅಜಗಜಾಂತರ ಎಂದರೆ ಗಮನೀಯ ಅಸಮಾನತೆ ಇದೆ. ಇನ್ನು ಅನುದಾನರಹಿತ ಖಾಸಗಿ ಸಂಸ್ಥೆಗಳೆಲ್ಲವೂ ಬಹುತೇಕ ಇಂಗ್ಲಿಷ್ ಮಿಡಿಯಂ  ಶಾಲೆಗಳಾಗಿರುವುದರಿಂದ ಹಾಗೂ  ಅವುಗಳು ವ್ಯಾಣಜ್ಯೋದ್ಯಮದ ಉದ್ದೇಶ ಹೊಂದಿರುವುದರಿಂದ ಅವುಗಳಲ್ಲೇ ಬಹು ವಿಧಗಳಿವೆ. ನಿತ್ಯ ಬಂದು ಹೋಗುವ ಮಕ್ಕಳ ಶಾಲೆಗಳು, ಗಣ್ಯ ಪೋಷಕರ ಮಕ್ಕಳಿಗೆ ಅನುಕೂಲಗಳನ್ನು ಒದಗಿಸಿರುವ ಶಾಲೆಗಳು, ಎ.ಸಿ. ತರಗತಿ ಕೊಠಡಿಗಳು, ಈಜುಕೊಳ, ಕುದುರೆ ಸವಾರಿ, ವಿಶಿಷ್ಟ ಕ್ರೀಡೆಗಳು ಹಾಗೂ ಸ್ಪರ್ಧೆಗಳಿರುವ ಶಾಲೆಗಳು ವಿಭಿನ್ನ ರೀತಿಯಲ್ಲಿ ಅವತರಿಸಿವೆ. ಅವುಗಳ ಶುಲ್ಕದಲ್ಲಿಯೂ ಅಪಾರ ವ್ಯತ್ಯಾಸವಿದೆ.
ಸರಕಾರದ ಶಾಲೆಗಳಿಗೆ ವಿವಿಧ ಮಟ್ಟದ ಅನುದಾನಗಳೂ ಪ್ರತಿಷ್ಟೆಗಳೂ ಇವೆ. ಉದಾಹರಣೆಗೆ, ಜವಾಹರ್ ನವೋದಯ ವಿದ್ಯಾಲಯಗಳ ಎಲ್ಲಾ ವೆಚ್ಚಗಳಿಗೂ ಅನುದಾನ ಬರುತ್ತಿದ್ದು ಅಲ್ಲಿ ಸೇರಲು ಪರೀಕ್ಷೆಗಳಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವು ಉಚಿತವಾಗಿ ಸಿಗುತ್ತದೆ. ಅವರಿಗೆ ಜೀವನಪೂರ್ತಿ ಶಿಕ್ಷಣದ ವ್ಯವಸ್ಥೆ ಇದೆ. ಆದರೆ ಅದಕ್ಕಾಗಿ ಆರನೇ ತರಗತಿಯಲ್ಲೇ ಪರೀಕ್ಷೆ ಬರೆದು ತೇರ್ಗಡೆಯಾಗಬೇಕು. ಇದು ಉತ್ತಮವಾಗಿ ಪ್ರಾಥಮಿಕ ಶಿಕ್ಷಣ ಪಡೆದ ವಿದ್ಯಾರ್ಥಿಗಳಿಗೆ ಮಾತ್ರ ಸಾಧ್ಯ ಅಥವಾ ಅದಕ್ಕಾಗಿ ಟ್ಯೂಶನ್ ಪಡೆದ ವಿದ್ಯಾರ್ಥಿಗಳಿಗೆ ಆಗಬಹುದು. ಹಾಗಿದ್ದರೆ ಸಾಮಾನ್ಯ ಹಳ್ಳಿಗಾಡಿನ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ವಂಚಿತರಾಗುತ್ತಾರಲ್ಲವೆ? ಹೀಗಾದಾಗ ಶಿಕ್ಷಣದಲ್ಲಿ ಸಮಾನತೆ ಎಂಬ ಕಲ್ಪನೆಗೆ ಅರ್ಥವೆಲ್ಲಿದೆ? ಅದು ಬರಬೇಕಿದ್ದರೆ ಪ್ರಾಥಮಿಕ ತಳಹದಿಯ ಶಿಕ್ಷಣದ ಸಬಲೀಕರಣ ಸಾಧ್ಯವಾಗಬೇಕು. ಭಾರತದಲ್ಲಿ ಕೇಂದ್ರ ಅಥವಾ ರಾಜ್ಯ ಸರಕಾರಗಳಿಗೆ ಈ ಚಿಂತನೆ ಇದೆಯೇ? ಅದನ್ನು ಶಿಕ್ಷಣ ನೀತಿಯಲ್ಲಿ ಬರೆದರೆ ಸಾಕಾಗುವುದಿಲ್ಲ. ಅದನ್ನು ಜಾರಿಗೆ ತರಬೇಕು. ಆದರೆ ಸದ್ಯ ಸರಕಾರದ ಕೆ.ಪಿ.ಎಸ್. ಶಾಲೆಗಳೇ ಸರಕಾರದ ಗ್ರಾಮೀಣ ಕಿರಿಯ ಪ್ರಾಥಮಿಕ ಶಾಲೆಗಳನ್ನು ಮುಚ್ಚುವಂತೆ ಮಾಡುವ ಪ್ರಕ್ರಿಯೆಯನ್ನು ನೋಡಿದರೆ ಶಿಕ್ಷಣದಲ್ಲಿ ಅಸಮಾನತೆಯು ಢಾಳಾಗಿ ಗೋಚರಿಸುತ್ತದೆ.
ಶಾಲೆಗಳಲ್ಲಿ ಶಿಕ್ಷಕರ ನೇಮಕಾತಿ ಮಾಡುವುದಾಗಿ ಪೆÇಳ್ಳು ಭರವಸೆ ನೀಡುತ್ತ ಆಂಶಿಕವಾಗಿ ನೇಮಕಾತಿ ಮಾಡಿದರೂ ಅಸಂಪೂರ್ಣತೆಯನ್ನು ಉಳಿಸುವ ಸರಕಾರದ ಆಮೆನಡಿಗೆಯ ಪ್ರವೃತ್ತಿಯು ಅಸಮಾನತೆಯನ್ನು ಇನ್ನೂ ಹೆಚ್ಚಿಸುತ್ತದೆ. ಪರಿಪೂರ್ಣ ವ್ಯಕ್ತಿತ್ವ ವಿಕಸನದ ಮಾತುಗಳನ್ನು ಹೇಳುತ್ತ ಆರಂಭಿಸಲಾದ ಪಿ.ಎಂ.ಶ್ರೀ. ಶಾಲೆಗಳ ಉದ್ದೇಶವು ಶೈಕ್ಷಣಿಕ ಪ್ರಗತಿಯೇ ಆದರೂ ಅದು ಉಚಿತ ಸಾರ್ವತ್ರಿಕ ಶಿಕ್ಷಣದ ವಿಸ್ತರಣೆಯ ಯೋಜನೆಯನ್ನು ಹೊಂದಿಲ್ಲ. ರಾಜಕೀಯ ಪ್ರಭಾವವನ್ನು ಬೀರಿ ಯಾವ ಶಾಲಾಭಿವೃದ್ಧಿ ಸಮಿತಿಗಳು ಅನುಮೋದನೆ ಪಡೆಯಬಲ್ಲರೋ ಅವರಿಗೆ ಪಿ.ಎಂ.ಶ್ರೀ. ಶಾಲೆ ದಕ್ಕುತ್ತದೆ. ಕೋಟಿಗಟ್ಟಲೆಯಲ್ಲಿ ಹರಿದು ಬರುವ ಅನುದಾನದಿಂದ ಸಮೀಪದ ಶಾಲೆಗಳ ಮಕ್ಕಳನ್ನು ಆಕರ್ಷಿಸಲು ಅಲ್ಲಿ ಅಳವಡಿಸಲಾಗುವ ಇಂಗ್ಲಿಷ್ ಮಾಧ್ಯಮವೂ ಕಾರಣವಾಗುತ್ತದೆ. ಪ್ರಧಾನಿ ಮೋದಿಯವರ ದೃಷ್ಠಿಯು ಪ್ರಾಥಮಿಕ ಹಂತದಲ್ಲಿ ಪ್ರಾದೇಶಿಕ ಭಾಷೆಯ ಮಾಧ್ಯಮ ಇರಲೇಬೇಕು ಎಂತ ಇದೆಯಾದರೂ ವಾಸ್ತವದಲ್ಲಿ ಪಿ.ಎಂ.ಶ್ರೀ. ಶಾಲೆಗಳಲ್ಲಿಯೂ ಇಂಗ್ಲಿಷ್ ಮಾಧ್ಯಮವನ್ನು ಅಳವಡಿಸಿ ಗ್ರಾಮೀಣ ಮಟ್ಟದಲ್ಲೂ ಶೈಕ್ಷಣಿಕ ಅಸಮಾನತೆಯನ್ನು ಹೆಚ್ಚಿಸುವಲ್ಲಿ ಅವು ಕೊಡುಗೆ ನೀಡುತ್ತವೆ.
ಇದನ್ನು ಮತ್ತೆ ಹಳಿಗೆ ತರಲು ಸಾಧ್ಯವಿದೆಯೆ? ಶಿಕ್ಷಣದ ಭಾಗಾಳುಗಳಾದ ವಿದ್ಯಾರ್ಥಿಗಳನ್ನು ಮತ್ತಷ್ಟು ವಿಭಜಿಸಿದರೆ ದೇಶದಲ್ಲಿ ಏಕತೆ ಹೇಗೆ ಸಾಧ್ಯ? ಅಂದರೆ ಭಾವೀ ನಾಗರಿಕರಾದ ಮಕ್ಕಳನ್ನು ವಿಭಜಿಸಿ ಬೆಳೆಸುವ ಪ್ರಕ್ರಿಯೆ ಅನೂಚಾನವಾಗಿ ನಡೆಯುತ್ತಿದೆ. ಜ್ಞಾನ ವಿತರಣೆಯಲ್ಲಿ ಮತ್ತು ಸಾಮರ್ಥ್ಯ ವೃದ್ಧಿಯಲ್ಲಿ ಅಜಗಜಾಂತರ ವ್ಯತ್ಯಾಸ ಇರುವ ಶಾಲೆಗಳ ವಿದ್ಯಾರ್ಥಿಗಳು ಹತ್ತನೇ ತರಗತಿ ಹಾಗೂ ಪಿಯುಸಿ ಯಲ್ಲಿ ಒಂದೇ ಮಾನದಂಡದ ಪಬ್ಲಿಕ್  ಪರೀಕ್ಷೆಗೆ ಹಾಜರಾಗುತ್ತಾರೆ. ಅದರಲ್ಲಿ ತೇರ್ಗಡೆಯಾಗಿ ಉನ್ನತ ಶಿಕ್ಷಣದ ಅವಕಾಶಗಳಿಗೆ ಅರ್ಹತೆ ಪಡೆಯುವಾಗ ಸಹಜವಾಗಿ ದುರ್ಬಲ ಪ್ರಾಥಮಿಕ ಶಿಕ್ಷಣ ಪಡೆದವರು ಹಿಂದುಳಿಯುತ್ತಾರೆ. ಇದು ಹೀಗಾಗದೆ  ಎಲ್ಲ ಮಕ್ಕಳು ಸಮಾನತೆಯ ನೆಲೆಯಲ್ಲಿ  ಸ್ಪರ್ಧಿಸುವಂತಾಗಲು ಸಮಾನ ಸ್ತರದ ಶಾಲೆಗಳನ್ನು ಒದಗಿಸಬೇಕಾದ್ದು ಸರಕಾರದ ಕರ್ತವ್ಯವಲ್ಲವೆ? ಇದನ್ನು ಭಾರತದ ಎಲ್ಲಾ ಸರಕಾರಗಳು ಮರೆತು ಏನೂ ತಪ್ಪಾಗದಂತೆ ಶಿಕ್ಷಣದಲ್ಲಿ ಮತ್ತಷ್ಟು “ದುರ್ಬಲ ಘಾತಕ” ಮಾದರಿಗಳನ್ನು ಹುಟ್ಟು ಹಾಕುತ್ತಿರುವುದರ ವಿರುದ್ಧ ಸರಕಾರವು ಕಾರ್ಯ ಪ್ರವೃತ್ತವಾಗುವ ಸಾಧ್ಯತೆ ಇದೆಯೆ? 2020 ರ ಶಿಕ್ಷಣ ನೀತಿಯ ಅನುಷ್ಟಾನ ನಿಜವಾಗುವುದಾದರೆ ಈ ಸಾಧ್ಯತೆಯ ಬಗ್ಗೆ ಸನ್ಮಾನ್ಯ ಮೋದಿಯವರು ಗಮನ ಹರಿಸಬೇಕಾಗಿದೆ.
ಶ್ರೀಮತಿ ಇಂದಿರಾ ಗಾಂಧಿಯವರು ರಾತ್ರಿ ಬೆಳಗಾಗುವರೊಳಗೆ ಬೇಂಕ್‍ಗಳ ರಾಷ್ಟ್ರೀಕರಣ ಮಾಡಿದಂತೆ ಹಾಗೂ ಮೋದಿಯವರು ನೋಟುಗಳ  ಅಪಮೌಲ್ಯೀಕರಣ ಮಾಡಿದಂತಹ ಧೈರ್ಯದ ಹೆಜ್ಜೆಗಳನ್ನು ಇಡದ ಹೊರತು ಭಾರತದಲ್ಲಿ ಸಮಾನ ಸ್ತರದ ಸಂಪೂರ್ಣ ಉಚಿತ ಶಿಕ್ಷಣವನ್ನು ನೀಡಲು ಸಾಧ್ಯವಿಲ್ಲ. ಏಕೆಂದರೆ ಶಿಕ್ಷಣದ ಗುಣಮಟ್ಟದಲ್ಲಿ ಅಪಾರ ವ್ಯತ್ಯಾಸಗಳಿವೆ.  ಈ ವ್ಯತ್ಯಾಸವು ಖಾಸಗಿ ವಲಯದಲ್ಲಿಯೂ ಢಾಳಾಗಿ ಕಂಡುಬರುತ್ತದೆ. ತಮ್ಮ ಆಯ್ಕೆಯ ಪಠ್ಯಗಳನ್ನು ಒದಗಿಸುತ್ತಿರುವುದರಿಂದ ಮಹಾನಗರಗಳ ಮಹಾ ಧನಿಕರ ಮಕ್ಕಳು ಹಾಜರಾಗುವ ಎ.ಸಿ. ಕ್ಲಾಸ್ ರೂಂ ಗಳಲ್ಲಿ ಪಾಠಗಳಿಗೆ ಕಿವಿಯಾಗುವ ಮಕ್ಕಳ ಕಲಿಕೆಯ ಗುಣಮಟ್ಟವು ಬೇರೆಯೇ ಇರುತ್ತದೆ. ಅದೇ ಹೊತ್ತಿನಲ್ಲಿ ಕಡಿಮೆ ಶುಲ್ಕದೊಂದಿಗೆ ಇಂಗ್ಲಿಷ್ ಸರಿಯಾಗಿ  ಕಲಿಯದ ಶಿಕ್ಷಕರಿರುವ ಇಂಗ್ಲಿಷ್ ಮಿಡಿಯಂ ಶಾಲೆಗಳ ವಿದ್ಯಾರ್ಥಿಗಳ ಕಲಿಕಾ ಮಟ್ಟವು ಕಡಿಮೆ ಇರುತ್ತದೆ. ಹೀಗೆ ಶಿಕ್ಷಣದ ಗುಣಮಟ್ಟದ ವಿಷಯದಲ್ಲಿ ರಾಜಿ ಮಾಡಿಕೊಳ್ಳುವ ಭಾರತೀಯ ಪೋಷಕರ ಸೌಹಾರ್ದದ ದೃಷ್ಠಿಯು “ಅವರವರ ಭಾಗ್ಯ” ದ ನೆಲೆಗೆ ಒತ್ತಲ್ಪಟ್ಟಿರುವುದು ದುರದುಷ್ಟಕರ. ಈ ಸಮಸ್ಯೆಯನ್ನು  ನಿವಾರಿಸದ ಹೊರತು ದೇಶದ ಆರ್ಥಿಕ ಪ್ರಾಬಲ್ಯಕ್ಕೆ ಸ್ಥಿರತೆಯನ್ನು ಕೊಡುವುದು ಕಷ್ಟವಾಗಲಿದೆ. ನಿಷ್ಠೆಯಿಂದ ಮತ್ತು ಪ್ರಯತ್ನದ ಮೂಲಕ ಕಲಿಯುವ ಹಾಗೂ ಮಾಹಿತಿಗಳ ವಿಶ್ಲೇಷಣೆ ಮತ್ತು ಸಂಶೋಧನೆಯ ಅವಕಾಶಗಳ ಮೂಲ ಶಿಕ್ಷಣವು ಎಲ್ಲಾ ಆಸಕ್ತ ಮಕ್ಕಳಿಗೆ ಲಭ್ಯವಾಗಬೇಕು. “ನೋಡಿ ಕಲಿ, ಮಾಡಿ ತಿಳಿ” ಘೋಷಣೆಯು ಶಬ್ದಗಳಿಗಷ್ಟೇ ಸೀಮಿತವಾಗದೆ ಕ್ರಿಯಾತ್ಮಕವಾಗಿಯೂ ಶಿಕ್ಷಣದ ಭಾಗವಾಗಬೇಕು. ಈ ಪ್ರಯತ್ನದಲ್ಲಿ ಚೆನ್ನಾಗಿ ಕಲಿತು ಉನ್ನತ ಶಿಕ್ಷಣಕ್ಕೆ ಅರ್ಹತೆ ಸಾಧಿಸುವವರಿಗೆ ಉಚಿತವಾಗಿ ತಾಂತ್ರಿಕ ಹಾಗೂ ವೈದ್ಯಕೀಯ ಶಿಕ್ಷಣವೂ ಸಿಗಬೇಕು. ಆಗ ನಮ್ಮ ದೇಶದಲ್ಲೂ ನಿಜವಾದ ಅಭಿವೃದ್ಧಿಯ ಪಥಿಕರು ಸಿಗಬಹುದು. ಅಲ್ಲದೆ ನಮ್ಮ ಭೌತಿಕ ಹಾಗೂ ಬೌದ್ಧಿಕ ಸಂಪತ್ತಿನ ಅರ್ಹ ಉಸ್ತುವಾರಿಗಳನ್ನು ರೂಪಿಸಬಹುದು. ವಸ್ತುಶಃ ಶೈಕ್ಷಣಿಕ ಅಸಮಾನತೆಯನ್ನು ನಿವಾರಿಸುವ ಮಾರ್ಗೋಪಾಯಗಳನ್ನು ರೂಪಿಸುವ ಸವಾಲು ಕ್ಲಿಷ್ಟಕರವಾಗಿದ್ದರೂ ಅನಿವಾರ್ಯವಾದುದಾಗಿದೆ.
Advertisement
Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಡಾ.ಚಂದ್ರಶೇಖರ ದಾಮ್ಲೆ

ಡಾ. ಚಂದ್ರಶೇಖರ ದಾಮ್ಲೆಯವರು ಸುಳ್ಯದ ನೆಹರು ಮೆಮೋರಿಯಲ್ ಕಾಲೇಜ್ ನಲ್ಲಿ ಸಮಾಜಶಾಸ್ತ್ರ ಪ್ರಾಧ್ಯಾಪಕರಾಗಿ 35 ವರ್ಷಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರು. ವೃತ್ತಿಯಲ್ಲಿರುವಾಗಲೇ ರಾಷ್ಟ್ರೀಯ ಸೇವಾ ಯೋಜನಾಧಿಕಾರಿಯಾಗಿ ಸಮಾಜಸೇವೆಯಲ್ಲಿ ತೊಡಗಿಕೊಂಡವರು. ಸಾಂಸ್ಕೃತಿಕ ಸಂಘದ ಮೂಲಕ ಮಕ್ಕಳಿಗೆ ಯಕ್ಷಗಾನ ನಿರ್ದೇಶಕನ, ಸುಳ್ಯದಲ್ಲಿ ಯಕ್ಷಗಾನ ಹಿತರಕ್ಷಣಾ ವೇದಿಕೆಯ ಸ್ಥಾಪನೆ, ಸಂಪೂರ್ಣ ಸಾಕ್ಷರತಾ ಆಂದೋಲನದಲ್ಲಿ ಸಂಪನ್ಮೂಲ ವ್ಯಕ್ತಿ, ಕನ್ನಡಮಾಧ್ಯಮದಲ್ಲಿ ಸ್ನೇಹ ಶಿಕ್ಷಣ ಸಂಸ್ಥೆಯ ಸ್ಥಾಪನೆ ಮುಂತಾದ ಸಮಾಜಮುಖಿ ಕಾರ್ಯಗಳಲ್ಲಿ ಸೇವೆ ನೀಡಿದವರು. ಶಿಕ್ಷಣದಲ್ಲಿ ಸೃಜನಶೀಲತೆಗೆ ಒತ್ತು ನೀಡುವ ದಾಮ್ಲೆಯವರು ಸಂಶೋಧಕರಾಗಿದ್ದು ಕನ್ನಡ ಇಂಗ್ಲಿಷ್ ಭಾಷೆಗಳಲ್ಲಿ ಕೃತಿ ರಚನೆ ಮಾಡಿದವರು. 'ನೆಲದನಂಟು' ಮತ್ತು "ಶಾಲೆ ಎಲ್ಲಿದೆ?" ಇವು ಇವರ ಪ್ರಸಿದ್ಧ ಕಾದಂಬರಿಗಳು. ಅನೇಕ ಪ್ರಶಸ್ತಿ ಸಮ್ಮಾನಗಳಿಂದ ಗೌರವಿಸಲ್ಪಟ್ಟ ದಾಮ್ಲೆಯವರಿಗೆ ಅಸಾಮಾನ್ಯ ಕನ್ನಡಿಗ ಪ್ರಶಸ್ತಿ, ಯಕ್ಷಮಂಗಳ ಪ್ರಶಸ್ತಿ, ಅರಣ್ಯಮಿತ್ರ ಮತ್ತು ಜಲಮಿತ್ರ ಪ್ರಶಸ್ತಿ, Nation Builder ಪ್ರಶಸ್ತಿ ಮುಂತಾದುವು ಲಭಿಸಿವೆ. ಹೊಸದಿಗಂತ ಪತ್ರಿಕೆಯಲ್ಲಿ "ಇದ್ಯಾಕೆ ಹೀಗೆ " ಅಂಕಣವನ್ನು ಬರೆಯುತ್ತಿದ್ದರು.

ಇದನ್ನೂ ಓದಿ

ಚಿಕಿತ್ಸೆ ಮುಗಿದರೂ ಕ್ಯಾನ್ಸರ್ ಅಪಾಯ ಏಕೆ ಮುಗಿಯುವುದಿಲ್ಲ?
January 7, 2026
11:10 PM
by: ದ ರೂರಲ್ ಮಿರರ್.ಕಾಂ
‌ ಭೂಮಿಗೆ ಬಿದ್ದ ಪ್ಲಾಸ್ಟಿಕ್ ಕರಗುವಂತೆ ಮಾಡಬಹುದು…!, ಇದು ಪ್ಲಾಸ್ಟಿಕ್ ಮಾಲಿನ್ಯಕ್ಕೆ ಪರಿಹಾರವೇ?
January 7, 2026
10:43 PM
by: ದ ರೂರಲ್ ಮಿರರ್.ಕಾಂ
2026 ರಲ್ಲಿ ಕೃಷಿ ಕ್ಷೇತ್ರ ಸ್ಥಿರತೆ , ಆದರೆ ಅಸಮಾನತೆ ಮುಂದುವರಿಕೆ
January 7, 2026
10:14 PM
by: ದ ರೂರಲ್ ಮಿರರ್.ಕಾಂ
ಶಾಖದ ಅಲೆಗಳ ಮುನ್ಸೂಚನೆಗೆ ವಿಜ್ಞಾನಿಗಳಿಂದ ಹೊಸ ಅಧ್ಯಯನ
January 7, 2026
10:04 PM
by: ರೂರಲ್‌ ಮಿರರ್ ಸುದ್ದಿಜಾಲ

You cannot copy content of this page - Copyright -The Rural Mirror