ಈ ಬಾರಿಯ ಮಳೆ ಅಡಿಕೆ ಬೆಳೆಗಾರರನ್ನು ಅದರಲ್ಲೂ ಕರಾವಳಿ ಹಾಗೂ ಮಲೆನಾಡು ಭಾಗದ ಅಡಿಕೆ ಬೆಳೆಗಾರರನ್ನು ಕಂಗೆಡಿಸಿದೆ. ಹಾಗೆಂದು ಕಳೆದ ವರ್ಷಕ್ಕಿಂತ ಹೆಚ್ಚಿನ ಮಳೆಯಾಗಿಲ್ಲ. ಆದರೆ ನಿರಂತರವಾಗಿ ಮಳೆ ಸುರಿಯಿತು. ಈ ಬಾರಿ ಜೂನ್ ತಿಂಗಳಲ್ಲಿ ಸುಮಾರು 1090 ಮಿಮೀ ಮಳೆಯಾದರೆ, ಜುಲೈ ತಿಂಗಳಲ್ಲಿ 1650 ಮಿಮೀ ಮಳೆಯಾಗಿದೆ. ಅದೇ ಕಳೆದ ವರ್ಷ ಜೂನ್ ತಿಂಗಳಲ್ಲಿ 965 ಮಿಮೀ ಮಳೆ ಹಾಗೂ ಜುಲೈ ತಿಂಗಳಲ್ಲಿ 1770 ಮಿಮೀ ಮಳೆಯಾಗಿತ್ತು. ವಾರ್ಷಿಕವಾಗಿಯೂ ಕಳೆದ ವರ್ಷ 5770 ಮಿಮೀ ಹಾಗೂ ಈ ವರ್ಷ ಇದುವರೆಗೆ 5068 ಮಿಮೀ ಮಳೆಯಾಗಿದೆ. ಈ ಅಂಕಿ ಅಂಶ ಸುಳ್ಯದ ಗುತ್ತಿಗಾರಿನದ್ದು, ಕೆಲವು ಕಡೆ 100 ಮಿಮೀ ಹೆಚ್ಚು ಕಡಿಮೆ ಇರಬಹುದು. ಅಂದರೆ ಒಟ್ಟಾರೆಯಾಗಿ ಈ ವರ್ಷ ಮಳೆ ಭಾರೀ ಸುರಿದಿಲ್ಲ, ಆದರೆ ನಿರಂತರವಾಗಿ ಸುರಿದ ಮಳೆಯಿಂದ ಔಷಧಿ ಸಿಂಪಡಣೆ ಸಾಧ್ಯವಾಗಿಲ್ಲ. ಹೀಗಾಗಿ ಕೊಳೆರೋಗ ವ್ಯಾಪಕವಾಗಿ ಹರಡಿದೆ.
ಅಡಿಕೆ ಕೊಳೆರೋಗ ನಿಯಂತ್ರಣಕ್ಕೂ ಮೊದಲು ಕೊಳೆ ರೋಗ ಮುಂಜಾಗ್ರತಾ ಕ್ರಮವಾಗಿ ಮಳೆಗಾಲದ ಆರಂಭದಲ್ಲಿ ಔಷಧಿ ಸಿಂಪಡಣೆಯನ್ನು ಬಹುತೇಕ ಕೃಷಿಕರು ಮಾಡುತ್ತಾರೆ. ಬಹುತೇಕ ಮಂದಿ ಕೃಷಿಕರು ಬೋರ್ಡೋ ಸಿಂಪಡಣೆಯನ್ನು ಮಾಡುತ್ತಾರೆ. ಈ ಬಾರಿಯೂ ಶೇ.85 ರಷ್ಟು ಕೃಷಿಕರು ಮೊದಲ ಸಿಂಪಡಣೆಗೆ ಬೋರ್ಡೋ ಸಿಂಪಡಣೆ ಮಾಡಿದ್ದಾರೆ. ಶೇ.5 ರಷ್ಟು ಕೃಷಿಕರು ಮೆಟಲಾಕ್ಸಿಲ್ ಹಾಗೂ ಮ್ಯಾಂಕೋಜೆಬ್ ಸಿಂಪಡಣೆ ಮಾಡಿದ್ದರೆ, ಶೇ.2.4 ಕೃಷಿಕರು ಪೊಟಾಸಿಯಂ ಪಾಸ್ಫೋನೇಟ್ ಸಿಂಪಡಣೆ ಮಾಡಿದ್ದಾರೆ. ಶೇ.7.4 ರಷ್ಟು ಕೃಷಿಕರು ಬೇರೆ ಔಷಧಿ ಸಿಂಪಡಣೆ ಮಾಡಿದ್ದಾರೆ. ಅಂದರೆ ಕ್ಯುಪ್ರೋಫಿಕ್ಸ್, ಕಾಪರ್ ಆಕ್ಸಿ ಕ್ಲೋರೈಡ್,ಬ್ಲೈಟೆಕ್ಸ್.. ಹೀಗೇ ಬೇರೆ ಬೇರೆ ಔಷಧಿಗಳನ್ನು ಸಿಂಪಡಣೆ ಮಾಡಿದ್ದಾರೆ. ಸಿಪಿಸಿಆರ್‌ಐ ಮಾಡುವ ಶಿಫಾರಸು ಅಡಿಕೆ ಕೊಳೆರೋಗಕ್ಕೆ ಬೋರ್ಡೋ ದ್ರಾವಣ. 1:1 ಅನುಪಾತದಲ್ಲಿ ಸುಣ್ಣ ಹಾಗೂ ಕಾಪರ್‌ಸಲ್ಪೇಟ್ ಬಳಕೆಗೆ ಹೇಳುತ್ತದೆ. ಅದರ ಜೊತೆಗೆ ಇತರ ಯಾವುದೇ ಔಷಧಿಗಳು ಅಗತ್ಯವಿಲ್ಲ ಎಂದು ಹೇಳುತ್ತದೆ. ಒಂದು ವೇಳೆ ಬೇರೆ ಸಿಂಪಡಣೆ ಇದ್ದರೆ ಅದನ್ನು ಪ್ರತ್ಯೇಕವಾಗಿಯೇ ಸಿಂಪಡಿಸಬೇಕು ಎಂದು ಬೆಳೆಗಾರರಿಗೆ ಸಲಹೆ ನೀಡುತ್ತದೆ. ಆದರೂ ಅಡಿಕೆ ಬೆಳೆಗಾರರು ತಮಗೆ ಅನುಕೂಲ ಹಾಗೂ ಫಲಿತಾಂಶ ಲಭಿಸಿದ ಮಾರ್ಗದಲ್ಲಿಯೇ ಕೃಷಿ ಕ್ರಮ ಹಾಗೂ ಔಷಧಿ ಸಿಂಪಡಣೆ ಮಾಡುತ್ತಿರುವುದು ಕಂಡುಬಂದಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ..
ಬೋರ್ಡೋ ತಯಾರಿಕೆಯಲ್ಲಿ ಬಹಳಷ್ಟು ವ್ಯತ್ಯಾಸಗಳು ಇವೆ. ಕೆಲವು ಕೃಷಿಕರು 1:1 ಮಾದರಿಯಲ್ಲಿ ತಯಾರಿ ಮಾಡಿದರೆ ಇನ್ನೂ ಕೆಲವರು ಸುಣ್ಣ ಹೆಚ್ಚು ಬಳಕೆ ಮಾಡಿದ್ದಾರೆ. ಅಚ್ಚರಿ ಎಂದರೆ, 1 ಕೆಜಿ ಸುಣ್ಣ ಹಾಗೂ ಒಂದು ಕೆಜಿ ಮೈಲುತುತ್ತವನ್ನು 200 ಲೀಟರ್ ಗೆ ಹಾಕಿ ಸಿಂಪಡಣೆ ಮಾಡುವ ವಿಧಾನವೂ ಇದೆ. ಹೀಗೇ ವಿವಿಧ ಪ್ರಯತ್ನಗಳು ಕೃಷಿಕರಲ್ಲಿರುವುದು ಕಂಡುಬಂದಿದೆ.
ಹೀಗೇ ಒಂದನೇ ಸಿಂಪಡಣೆ ಬಳಿಕ ಕೊಳೆರೋಗ ಯಾರಲ್ಲಿ ಇದೆ ಎನ್ನುವ ಪ್ರಶ್ನೆಗೆ ಶೇ.95.6 ಕೃಷಿಕರಲ್ಲಿ ಅಡಿಕೆಗೆ ಕೊಳೆರೋಗ ಬಾಧಿಸಿದೆ ಎಂದು ಉತ್ತರಿಸಿದ್ದರು. ಶೇ.4.4 ಕೃಷಿಕರು ಆರಂಭದಲ್ಲಿ ಕೊಳೆರೋಗ ಇಲ್ಲ ಎಂದು ಹೇಳಿದ್ದರು. ಆದರೆ ಆಗಸ್ಟ್ ತಿಂಗಳ ಅಂತ್ಯದ ವೇಳೆಗೆ ಅವರಲ್ಲಿ ಶೇ.2 ರಷ್ಟು ಕೃಷಿಕರು ನಮ್ಮಲ್ಲೂ ಕೊಳೆರೋಗ ಕಂಡುಬಂದಿದೆ ಎಂದು ಹೇಳಿದ್ದಾರೆ. ಹೀಗಾಗಿ ಕೊಳೆರೋಗದ ತೀವ್ರತೆ ಶೇ.98 ರಷ್ಟು ಕಂಡುಬಂದಿದೆ…… ( ನಾಳೆ ಮುಂದುವರಿಯುತ್ತದೆ…..) ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ..
ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯ ಕೇಂದ್ರದ ಸಮಗ್ರ ಕೀಟ ನಿರ್ವಹಣಾ ಕೇಂದ್ರಗಳು…
ಮನಸ್ಸಿದ್ದರೆ ಮಾರ್ಗ ಎಂಬ ಗಾದೆ ಮಾತು ನಾವು ಕೇಳಿದ್ದೇವೆ. ಆದರೆ, ಕೆಲವು ಜನರ…
ಕೆಲವು ಕಡೆಗಳಲ್ಲಿ ರೈತರು ತಮ್ಮ ಜಮೀನಿಗೆ ಹೋಗಲು ಸರಿಯಾದ ದಾರಿಯಿಲ್ಲದೆ ಪರದಾಟ ನಡೆಸಬೇಕಾಗುತ್ತದೆ.…
ಕೃಷಿ ಇಲಾಖೆಯು ರೈತರಿಗೆಂದು ವಿವಿಧ ಸಬ್ಸಿಡಿ ಯೋಜನೆಗಳನ್ನು ಜಾರಿಗೆ ತಂದಿದೆ. ಇದಕ್ಕೆ ಯಾವ…
ಮಹಿಳೆಯರ ಏಳಿಗೆಗೆ ಸರ್ಕಾರವೂ ಹಲವಾರು ರೀತಿಯ ಯೋಜನೆಯನ್ನು ಜಾರಿಗೊಳಿಸಿದೆ. ಇದೀಗ ಗ್ರಾಮೀಣ ಮಹಿಳೆಯರಿಗೆ…
17.12.2025 ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ…