ಈಗ ಅರುವತ್ತು ವರ್ಷ ವಯಸ್ಸಾದವರು ತಮ್ಮ ಬಾಲ್ಯದಲ್ಲಿ ಪ್ರಾಥಮಿಕ ಶಾಲೆಗಳಿಗೆ ಹೋಗುತ್ತಿದ್ದರು. ಆ ಕಾಲದಲ್ಲಿದ್ದ ಶಾಲೆಗಳಿಗೆ ಹೋಲಿಸಿದರೆ ಇಂದಿನ ಶಾಲೆಗಳ ಸ್ವರೂಪ ಸಂಪೂರ್ಣ ಬದಲಾಗಿದೆ. ಆಗಿನ ಕಾಲದಲ್ಲಿ ಊರಿಗೊಂದೇ ಶಾಲೆ ಇರುತ್ತಿತ್ತು. ಅದು ಸರಕಾರಿ ಅಥವಾ ಅನುದಾನಿತ ಶಾಲೆಯಾಗಿರುತ್ತಿತ್ತು. ಶಾಲೆ ಇದ್ದ ಗ್ರಾಮದ ಅಲ್ಲದೆ ಹತ್ತಿರದ ನಾಲ್ಕೈದು ಗ್ರಾಮಗಳ ಮಕ್ಕಳೂ ಅಲ್ಲಿಗೇ ಬರುತ್ತಿದ್ದರು. ಅರ್ಥಾತ್ ಅಂದು ವಿದ್ಯಾರ್ಥಿಗಳಿಗೆ ನಾಲ್ಕೈದು ಗ್ರಾಮಗಳಲಿದ್ದವರು ಸಹಪಾಠಿಗಳಾಗಿ ದೊರಕುತ್ತಿದ್ದರು. ಈವತ್ತಿಗೂ ಭೇಟಿಯಾದಾಗ ಅಂದಿನ ಶಾಲೆಯ, ತರಗತಿಯ, ಗುರುಗಳ ಹಾಗೂ ತಮ್ಮ ಗೆಳೆಯ ಗೆಳತಿಯರ ನೆನಪು ಮಾಡಿಕೊಳ್ಳುತ್ತಾರೆ. ಯಾರ್ಯಾರು ಯಾವ್ಯಾನ ಶಿಕ್ಷಣ, ಉದ್ಯೋಗ ಮತ್ತು ಸಾಧನೆಗಳಲ್ಲಿ ಮುಂದೆ ಹೋಗಿದ್ದಾರೆ ಮತ್ತು ಯಾರೆಲ್ಲ ಮನೆಯಲ್ಲೇ ಉಳಿದು ಭೇಟಿಗೆ ಸಿಗುತ್ತಿದ್ದಾರೆಂಬ ವಿವರಗಳು ಚರ್ಚೆಯಾಗುತ್ತವೆ. ಭೇಟಿಯಾದಾಗಲೆಲ್ಲ ಮಾತಾಡಿದ್ದನ್ನೇ ಮಾತಾಡಿದರೂ ಅದು ಸವಿಯಾದ ಚಪ್ಪರಿಕೆಯೇ ಆಗಿರುತ್ತದೆ.
ಆನಂತರದ ಸುಮಾರು ನಲುವತ್ತು ವರ್ಷಗಳ ಹಿಂದಿನ ಪರಿಸ್ಥಿತಿಯೂ ಹೆಚ್ಚಿನ ಪರಿವರ್ತನೆ ಕಂಡಿರಲಿಲ್ಲ. ಆದರೆ ನಗರಗಳ ಹೈಸ್ಕೂಲುಗಳಿಗೆ ಸೇರುವ ಆಕಾಂಕ್ಷಿಗಳು ಹೆಚ್ಚಾಗ ತೊಡಗಿದರು. ಗ್ರಾಮಿಣ ಪ್ರಾಥಮಿಕ ಶಾಲೆಗಳಲ್ಲಿ ಪಡೆದ ಶಿಕ್ಷಣದ ಬಳಿಕ ಹೈಸ್ಕೂಲ್‍ಗಳು ಕೆಲವು ಹಳ್ಳಿಗಳಲ್ಲಿ ಸ್ಥಾಪನೆಯಾದುವು. ಅಂತಹ ಹೈಸ್ಕೂಲುಗಳಲ್ಲಿ ಕಲಿತ ಹೆಣ್ಮಕ್ಕುಳಲ್ಲಿ ಕೆಲವರಷ್ಟೇ ಕಾಲೇಜುಗಳಿಗೆ ಹೋಗುವ ಭಾಗ್ಯ ಪಡೆದರು. ಹೈಸ್ಕೂಲುಗಳ ತನಕದ ವಿದ್ಯಾಭ್ಯಾಸವು ಸರಕಾರಿ ಅಥವಾ ಅನುದಾನಿತ ಶಾಲೆಗಳಲ್ಲಿ ಕಡಿಮೆ ಶುಲ್ಕದಲ್ಲಿ ದೊರಕುತ್ತಿತ್ತು. ಆದರೆ ಕಾಲೇಜುಗಳು ಹೆಚ್ಚಾಗಿ ಖಾಸಗಿಯಾಗಿರುತ್ತಿದ್ದರಿಂದ ಉನ್ನತ ಶಿಕ್ಷಣವು ಉಳ್ಳವರ ತಟ್ಟೆಯ ತಿಂಡಿಯಾಗಿತ್ತು.
ಅಂದಿನ ದಿನಗಳಲ್ಲಿ ಯಾವುದೇ ವಿಷಯದ ಸೊತ್ತು, ಸೌಲಭ್ಯಗಳು ಹಾಗೂ ಉದ್ದೇಶಗಳು ಹೆಚ್ಚು ಕಡಿಮೆ. ಒಂದೇ ರೀತಿ ಇರುತ್ತಿದ್ದುವು. ಅಂದಿನ ಮನೆಗಳು, ಹಟ್ಟಿಗಳು, ಗುಡಿಸಲುಗಳು, ವಾಹನಗಳು, ರಸ್ತೆಗಳು, ಪೀಠೋಪಕರಣಗಳು, ಅಡುಗೆ ಮನೆಗಳು, ಬಚ್ಚಲುಗಳು ಹೆಚ್ಚು ಕಡಿಮೆ ಒಂದೇ ರೀತಿ ಇದ್ದುವು ಪಾಯಿಖಾನೆ ಎಂಬುದು ಇರಲೇ ಇಲ್ಲ. ಒಂದೇ ಸ್ವರೂಪದ ಬಸ್ಸುಗಳು, ಲಾರಿಗಳು, ಕಾರುಗಳು, ಸೈಕಲುಗಳು ಕೂಡಾ ಇದ್ದುವು. ಕೃಷಿಯೂ, ನೀರಾವರಿಯೂ, ಶಾಲೆಗಳೂ ಹೆಚ್ಚಿನ ಹಳ್ಳಿಗಳಲ್ಲಿ ಒಂದೇ ಸ್ವರೂಪ ಹೊಂದಿದ್ದುವು. ಆದರೆ ಉತ್ತಮ ಜೀವನಕ್ಕೆ ಮತ್ತು ಹೆಚ್ಚಿನ ಆದಾಯಕ್ಕೆ ಹೆದ್ದಾರಿಯಾಗಿ ಗೋಚರಿಸಿದ್ದು ಆಧುನಿಕ ಶಿಕ್ಷಣ ಮತ್ತು ನಗರಗಳಲ್ಲಿ ಉದ್ಯೋಗ.
ಇದೇ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಅಣ್ಣ ತಮ್ಮಂದಿರೊಳಗೆ ಪಾಲು ಮಾಡಿ ಹಂಚಿಕೊಳ್ಳಲು ಕೃಷಿ ಭೂಮಿಯ ವ್ಯಾಪ್ತಿಯೂ ಸಂಕುಚಿತಗೊಂಡಿತ್ತು. ಹಾಗಾಗಿ ಸಹೋದರರಲ್ಲಿ ಕೆಲವರು ವೇತನ ಪಡೆಯುವ ಉದ್ಯೋಗಗಳಿಗಾಗಿ ಶಿಕ್ಷಣ ಪಡೆಯುವುದು ಅನಿವಾರ್ಯವಾಗಿತ್ತು. ಅದೇ ಸಂದರ್ಭದಲ್ಲಿ ಮಠಗಳು ಹಾಗೂ ಜಾತಿ ಸಂಘಟನೆಗಳು ಬಡ ವಿದ್ಯಾರ್ಥಿಗಳಿಗಾಗಿ ನಗರ ಪಟ್ಟಣಗಳಲ್ಲಿ ಉಚಿತ ಅಥವಾ ಕಡಿಮೆ ಶುಲ್ಕದಲ್ಲಿ ಹಾಸ್ಟೇಲ್ ಗಳನ್ನು ನಡೆಸತೊಡಗಿದರು. ಉಜಿರೆಯಲ್ಲಿ ಪೂಜ್ಯ ಹೆಗಡೆಯವರ ಸಿದ್ಧ ವನವು ಅನೇಕಾನೇಕ ಗ್ರಾಮೀಣ ಬಡವಿದ್ಯಾರ್ಥಿಗಳಿಗೆ ಆಶ್ರಮವಿತ್ತದ್ದರಿಂದ ಇಂದು ಅಂತಹ ಭಾಗ್ಯಶಾಲಿಗಳು ಉನ್ನತ ಹುದ್ದೆಗಳಲ್ಲಿ ಮೆರೆಯುವಂತಾಗಿದೆ. ಹೀಗೆ ಶಿಕ್ಷಣ, ಉದ್ಯೋಗ ಮತ್ತು ಸಂಪಾದನೆಗೆ ಅಡಿಪಾಯ ಹಾಕಿದ ಕನ್ನಡ ಶಿಕ್ಷಣ ಇಂದು ಸರಕಾರಿ ಶಾಲೆಗಳಿಗಷ್ಟೇ ಸೀಮಿತವಾಗಿದೆ. ಅದು ಪಟ್ಟಣದಲ್ಲಾಗಲೀ ಹಳ್ಳಿಯಲ್ಲಾಗಲೀ ಸಬಲೀಕರಣಕ್ಕಾಗಿ ಕಾಯುತ್ತಿದೆ. ಅದೇ ಹೊತ್ತಿಗೆ ಇಂಗ್ಲಿಷ್ ಮಾಧ್ಯಮದ ಖಾಸಗಿ ಶಾಲೆಗಳು ಮೈದಾನದ ನಡುವಿನಲ್ಲಿ ಪತಾಕೆ ಹಾರಿಸುತ್ತಿವೆ. ಕನ್ನಡವನ್ನು ಅಂದರೆ ಸ್ಥಳೀಯ ಮಾಧ್ಯಮವನ್ನು ಬದಿಗೊತ್ತುವಲ್ಲಿ ಸರಕಾರದ ಉಭಯ ಮಾಧ್ಯಮದ ಶಿಕ್ಷಣ ನೀತಿಯು ಪರಿಣಾಮ ಬೀರಿದೆ. ಇಂಗ್ಲಿಷ್ ಮಾಧ್ಯಮದ ಹೆಸರಿನಲ್ಲಿ ಸರಕಾರ ಮಾಡುತ್ತಿರುವ ವಂಚನೆಯು ಮುಂದಿನ ಶಿಕ್ಷಣದ ನಡೆ ಏನು ಎಂಬ ಬಗ್ಗೆ ಪ್ರಶ್ನೆ ಹುಟ್ಟಿಸಿದೆ. ತಾಂತ್ರಿಕತೆಯ ವಿಕಸನವು ಉತ್ಪಾದನಾ ವಲಯದಲ್ಲಿ ಕ್ರಾಂತಿಯನ್ನೇಬ್ಬಿಸಿತು. ಹೊಸ ತಂತ್ರಜ್ಞಾನದ ಆವಿಷ್ಕಾರ ಮತ್ತು ಪ್ರಯೋಗಗಳು ಕೈಗಾರಿಕೋದ್ಯಮದ ಚಹರೆಯನ್ನೇ ಬದಲಾಯಿಸಿದುವು. ಜೀವನದ ಅನೇಕ ಸೌಲಭ್ಯಗಳು ಕೈಗೆಟಕುವ ದರಗಳಲ್ಲಿ ದೊರಕ ತೊಡಗಿದುವು. ಸುಲಭದ ಉದಾಹರಣೆಯೆಂದರೆ ಅಡುಗೆ ಮನೆ ತುಂಬಿದ ಕುಕ್ಕರ್, ಮಿಕ್ಸರ್ ಗ್ರೈಂಡರ್ ಮತ್ತು ಫ್ರಿಜ್. ವಿದ್ಯುತ್ ವಿತರಣೆಯು ವಿಸ್ತಾರಗೊಂದಷ್ಟು ಈ ಸೌಲಭ್ಯಗಳ ಬಳಕೆ ದೊಡ್ಡ ನಗರಗಳಿಂದ ಹರಿದು ಪಟ್ಟಣಗಳು ಮತ್ತು ಹಳ್ಳಿಗಳಿಗೂ ವಿಸ್ತರಿಸಿತು. ಸಾಮಾಜಿಕ ಬದುಕು ಕೂಡ ಸ್ಥಿರಗತಿಯಿಂದ ಚಲನ ಶೀಲತೆಯೆಡೆಗೆ ಜಾರಿತು. ಅದರೊಂದಿಗೆ ವಿದ್ಯೆಯೆಂಬುದು ವ್ಯಕ್ತಿತ್ವ ವಿಕಸನದ ಪ್ರಕ್ರಿಯೆಯಾಗಿ ಉಳಿಯದೆ ಉದ್ಯೋಗದ ಮಾರ್ಗವನ್ನು ನಿರೂಪಿಸುವ ಸಾಧನವಾಯಿತು. ಅಂದರೆ ವ್ಯಕ್ತಿಯು ಕುಟುಂಬದ ಭಾಗವಾಗಿ ಉಳಿಯದೆ ಸ್ವಂತ ಸಂಪಾದನೆಯ ದಾರಿಯನ್ನು ಹಿಡಿದು ಪ್ರತ್ಯೇಕವಾಗಿಯೇ ಬದುಕುವ ಅವಕಾಶವನ್ನು ಪಡೆಯುವಂತಾಯಿತು. ಇದು ಪರಂಪರಾಗತ ಬದುಕಿನ ಸರಳತೆಯನ್ನು ತಪ್ಪಿಸಿ ಹೊಸ ಮೌಲ್ಯಗಳ ಸಂಕೀರ್ಣತೆಯೊಂದಿಗೆ ಸಂಬಂಧಗಳ ಭಾವನಾತ್ಮಕ ನೆಲೆಯನ್ನು ತಪ್ಪಿಸಿತು. ಹೀಗಾಗಿ ಉದ್ಯೋಗಕ್ಕಾಗಿ ಶಿಕ್ಷಣ ಎಂಬ ಪ್ರಜ್ಞೆಯೇ ಪ್ರಾಧ್ಯಾನ್ಯ ತಡೆಯಿತು. ಇದು ಶಿಕ್ಷಣದ ವ್ಯಾಪಾರೀಕರಣಕ್ಕೆ ಕಾರಣವಾಯಿತು. ಏಕೆಂದರೆ ನಿರ್ದಿಷ್ಟ ಉದ್ಯೋಗಗಳಿಗೆ ನಿರ್ದಿಷ್ಟ ಕೌಸಲಗಳ ತರಬೇತಿ ಅಗತ್ಯವಾಯಿತು. ಅದಕ್ಕೆ ಇಂಗ್ಲಿಷ್ ಭಾಷೆಯ ಪ್ರಭುತ್ವವೇ ಅಗತ್ಯವೆಂಬ ಮನೋಭಾವ ಬೆಳೆಯಿತು. ಇಂಜಿನಿಯರಿಂಗ್ ತರಬೇತಿಯಿಂದ ದೊಡ್ಡ ನಗರಗಳಲ್ಲಿ ದೊಡ್ಡ ವೇತನದ ಹುದ್ದೆಗಳು ಲಭ್ಯವಾದುವು. ಕಡಿಮೆ ವರ್ಷಗಳ ತರಬೇತಿಯಲ್ಲಿ ಹೆಚ್ಚು ಸಂಪಾದನೆಗೆ ದಾರಿ ಮಾಡಿ ಕೊಡುವ ಇಂಜಿಯರಿಂಗ್ ವಿದ್ಯೆಯು ಡಾಕ್ಟರ್ ಕಲಿಕೆಗೆ ಪ್ರತಿಷ್ಠೆಯಲ್ಲಿ ಸ್ಪರ್ಧೆ ನೀಡಿತು. ಹೆಣ್ಮಕ್ಕಳಿಗೂ ವ್ಯಾಪಕ ಅವಕಾಶಗಳನ್ನು ನೀಡಿದ ಇಂಜಿನಿಯರಿಂಗ್ ಶಿಕ್ಷಣವು ಮದುವೆ, ಆದಾಯ ಉಳಿತಾಯ, ಕುಟುಂಬ ಸಂಘಟನೆ, ವ್ಯಕ್ತಿತ್ವದ ಮೌಲ್ಯಗಳು, ಮಕ್ಕಳ ಬೆಲವಣಿಗೆ ಭವಿಷ್ಯದ ಕನಸುಗಳ ಮೇಲೆ ಪ್ರಭಾವ ಬೀರಿದೆ. ಅಂದರೆ ವ್ಯಕ್ತಿತ್ವದ ಸಮಗ್ರ ವಿಕಸನಕ್ಕಿಂತ ಪಾರ್ಶ್ವ ವಿಕಸನವೇ ಸಾಕೆನ್ನಿಸುವ ಸುಲಭ ತೃಪ್ತಿಯ ವಿದ್ಯಮಾನಕ್ಕೆ ಶಿಕ್ಷಣದ ಗುರಿಗಳು ಹೊರಳಿವೆ.
ವಿದೇಶಗಳಲ್ಲಿ ನಾಲ್ಕು ದಶಕಗಳ ಹಿಂದೆಯೇ ಆಗಿರುವ ಈ ಬದಲಾವಣೆಗಳು ಭಾರತದಲ್ಲಿ ಕಳೆದ ಮೂರು ದಶಕಗಳಲ್ಲಿ ಸಂಭವಿಸಿದೆ. ಅದರ ಪರಿಣಾಮಗಳು ಇನ್ನಷ್ಟೇ ನಮ್ಮ ಅರಿವಿಗೆ ಬರತೊಡಗಿವೆ. ನಾವು ಹೊಸ ಸೌಲಭ್ಯಗಳಿಗೆ ಹೊಂದಿ ಕೊಂಡಿದ್ದೇವೆ. ಆದರೆ ಅವುಗಳ ತಾಂತ್ರಿಕತೆಯ ಒಳಗುಟ್ಟುಗಳು ನಮಗೆ ಗೊತ್ತಿಲ್ಲ. ಅಂದರೆ ಎಷ್ಟು ಉಪಕರಣಗಳ ಸರಳ ರಿಪೇರಿಗಳೂ ನಮಗೆ ಗೊತ್ತಿಲ್ಲ, ನಾನು 1981 ರಲ್ಲಿ ಅಮೇರಿಕಾಕ್ಕೆ ಭೇಟಿ ನೀಡಿದಾಗ ಭಾರತೀಯ ವೈದ್ಯರೊಬ್ಬರ ಅತಿಥಿಯಾಗಿದ್ದೆ. ಆಗಲೇ ಮನೆಗೆಲಸದವರನ್ನು ಕರೆಯುವುದು ಅವರಿಗೆ ದುಬಾರಿಯೆನಿಸಿತ್ತು. ಯಾವುದನ್ನಾದರೂ ರಿಪೇರಿ ಮಾಡಿಸುವುದಕ್ಕಿಂತ ಹೊಸತನ್ನೇ ಕೊಂಡುಕೊಳ್ಳುವುದೇ ಅಗ್ಗವೆಂಬ ಚಿಂತನೆ ಆಗಲೇ ಅಲ್ಲಿತ್ತು. ಇಲ್ಲಿ ಈಗ ಅಂತಹ ಆಲೋಚನೆಗಳು ಚಾಲ್ತಿಯಲ್ಲಿವೆ. ಟೈಲರ್ ಗೆ ಹೇಳಿ ಹೊಲಿಸುವುದಕ್ಕಿಂತ ಕಡಿಮೆಯಲ್ಲಿ ರೆಡಿಮೆಡ್ ಶರ್ಟ್, ಪ್ಯಾಂಟ್, ಟಾಪ್, ಕುರ್ತಾಗಳನ್ನು ಖರೀಸಿಸಬಹುದೆಂಬ ತೀರ್ಮಾನಗಳಿಗೆ ಯುವಜನರು ಬಂದಿದ್ದಾರೆ. ಆದರೆ ತಮಗಾಗಿ ತಾವೇ ಸರಳ ತಾಂತ್ರಿಕ ಸಲಕರಣೆಗಳನ್ನು ಜೋಡಿಸಿಕೊಳ್ಳುವುದು ಹಾಗೂ ಉಡುಗೆಗಳನ್ನು ಹೊಲಿದುಕೊಳ್ಳುವುದು, ಅಥವಾ ರಿಪೇರಿ ಮಾಡಿಕೊಳ್ಳುವುದು ಲಾಭದಾಯಕವೆಂಬುದು ಅನುಭವಕ್ಕೆ ಬಂದಾಗ ಅಂತಹ ಕೆಲಸಗಳ ಪರಿಣತಿ ಇರಬೇಕು. ಅದು ಬಾಲ್ಯದಲ್ಲೇ ಶಿಕ್ಷಣದಲ್ಲಿ ಅಭ್ಯಾಸಗತವಾದರೆ ಒಳ್ಳೆಯದು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ
ಮುಂದಿನ ಶಾಲೆಗಳು ಹೇಗಿರಬೇಕು? ಇಪ್ಪತ್ತು ವರ್ಷಗಳ ಹಿಂದೆ ಶಾಲೆಗಳಿದ್ದ ಹಾಗೆ ಈಗ ಇಲ್ಲ. ಈಗ ಎಲ್ಲವೂ ಇಂಗ್ಲಿಷ್ ಭಾಷಾ ಮಾಧ್ಯಮದ ಪ್ರತಿಷ್ಠೆಯಿಂದ ಮೌಲ್ಯ ಪಡೆಯುತ್ತಿವೆ. ಇನ್ನು ಮುಂದಿನ ಇಪ್ಪತ್ತು ವರ್ಷಗಳಲ್ಲಿ ಸಮಗ್ರ ಶಿಕ್ಷಣ ಬರಲಿದೆ. ಮಾಧ್ಯಮದ ಪ್ರಭುತ್ವವನ್ನು ಮೀರಿ ಅಂತರ್ ಭಾಷಾ ಮಾಧ್ಯಮ ಪದ್ಧತಿ ಪ್ರಚಲಿತವಾಗಲಿದೆ. ಅಂದರೆ ವಿಷಯಧಾರಿತವಾಗಿ ಮಾಧ್ಯಮದ ಬಳಕೆಯಾಗಲಿದೆ. ಇತಿಹಾಸ, ಸಂಸ್ಕೃತಿ ಮತ್ತು ಕಲೆಗಳ ಶಿಕ್ಷಣವು ಸ್ಥಳಿಯ ಭಾಷಾ ಮಾಧ್ಯಮದಲ್ಲಿಯೇ ಸ್ವೀಕೃತವಾಗುತ್ತದೆ. ಗಣಿತ, ವಿಜ್ಞಾನ ಹಾಗೂ ಅಂತಾರಾಷ್ಟ್ರೀಯ ಸಂಬಂಧಗಳ ಅಧ್ಯಯನಗಳು ಇಂಗ್ಲಿಷ್ ನಲ್ಲಿ ಬೋಧಿಸಲ್ಪಡುತ್ತವೆ. ಇವುಗಳೊಂದಿಗೆ ಶಾಲೆಗಳಲ್ಲಿ ಡಿಜಿಟಲ್ ಇಲೆಕ್ಟ್ರಾನಿಕ್, ಬಟ್ಟೆ ಹೊಲಿಯುವುದು, ಬೈಕ್, ಕಾರು ರಿಪೇರಿ, ಪ್ಲಂಬಿಂಗ್, ವಿದ್ಯುತ್ ರಿಪೇರಿ ಇತ್ಯಾದಿ ಕೌಶಲ ತರಬೇತಿಗಳ ಶಿಕ್ಷಣವನ್ನು ನೀಡುವ ವ್ಯವಸ್ಥೆ ಬರಲಿದೆ. ಹೀಗೆ ಶಾಲೆಗಳೆಂದರೆ ಏಕಕಾಲದಲ್ಲಿ ಜ್ಞಾನ ಸಂಪಾದನೆ ಹಾಗೂ ಕೌಶಲ ತರಬೇತಿ ಕೇಂದ್ರಗಳಾಗಲಿವೆ.
ಯಾವುದೇ ತಾಂತ್ರಿಕ ಸಲಕರಣೆಗಳ ರಿಪೇರಿಯನ್ನು ಪ್ರಯೋಗ ಶಾಲೆಯಲ್ಲಿ ಕಲಿಯಬಹುದು. ಆದರೆ ಭಾರತದಲ್ಲಿ ಆರ್ಥಿಕ ಮೂಲವಾದ ಕೃಷಿಯನ್ನು ಶಾಲೆಗಳಲ್ಲಿ ಪ್ರಾಯೋಗಿಕವಾಗಿ ಕಲಿಯಲು ಭೂಮಿ, ನೀರಾವರಿ, ಬೀಜಗಳು, ಸಸಿಗಳು, ಹಾರೆ, ಪಿಕ್ಕಾಸು, ಗುದ್ದಲ, ಅಂಗಳ, ದಾಸ್ತಾನು ಕೋಣೆ ಮುಂತಾದ ಸೌಲಭ್ಯಗಳು ಬೇಕು, ಅಂದರೆ ಕೃಷಿ ಕಲಿಕೆಯ ಪ್ರಯೋಗಾಲಯವು ವಿಸ್ತಾರವಾದ ಜಾಗೆ, ಕಟ್ಟಡ ಮತ್ತು ತಜ್ಞ ದುಡಿಮೆಗಾರರ ಇರುವಿಕೆಯನ್ನು ಹೊಂದಿರಬೇಕಾಗುತ್ತದೆ. ಇಂತಹ ಶಿಕ್ಷಣವನ್ನು ಎರಡು ಮೂರು ಅಂತಸ್ತುಗಳ ಕಟ್ಟಡದಲ್ಲಿ ನೀಡಲಾಗುವುದಿಲ್ಲ. ಹಾಗಾಗಿ ಶಿಕ್ಷಣದ ಸ್ವರೂಪವು ಹೊಸ ಸಂಯೋಜನೆಯನ್ನು ಹೊಂದುವ ಅನಿವಾರ್ಯತೆ ಇದೆ.


