Advertisement
ಅನುಕ್ರಮ

ಪಾಪ ಪುಣ್ಯದ ಭಯ ಮರೆಯಾದಾಗ

Share
“ಕೊಂದ ಪಾಪ ತಿಂದು ಪರಿಹಾರ” ಎಂಬ ಮಾತು ಪ್ರಚಲಿತವಿದ್ದ ಕಾಲವಿತ್ತು. ಅದು ಪಾಪದ ಕೆಲಸ ಮಾಡುವ ವಿರುದ್ಧ ಭಯವಿದ್ದ ಕಾಲ. ಅಂದರೆ ಮೋಸ, ವಂಚನೆ, ಕಳ್ಳತನ, ಸುಲಿಗೆ, ಶೋಷಣೆ ಇತ್ಯಾದಿಗಳನ್ನು ಮಾಡಿದರೆ ತಮಗೂ ಅವೆಲ್ಲ ಸಂಭವಿಸುತ್ತವೆ. ಹಾಗಾಗಿ ಮೋಸ ಮಾಡಬಾರದು, ಕದಿಯಬಾರದು, ವಂಚನೆ ಮಾಡಬಾರದು ಎಂದು ಕಲಿಸಲಾಗುತ್ತಿತ್ತು. ಒಂದು ವೇಳೆ ನಾವು ಮಾಡಿದರೆ  ಆ ತಪ್ಪಿಗೆ ಅಂತಹುದೇ ಶಿಕ್ಷೆಗೆ ಒಳಗಾಗಬೇಕಾಗುತ್ತದೆಂಬ ಭಯವನ್ನು ನಮ್ಮೊಳಗೆ ಹುಟ್ಟಿಸಲಾಗಿತ್ತು. ಅರ್ಥಾತ್ ನಾವೇನಾದರೂ ಕದ್ದರೆ ನಮ್ಮದೂ ಕದ್ದು ಹೋಗುವುದೆಂಬ ಭಯವಿತ್ತು. ಇಂತಹ ಭಯಕ್ಕೆ ವಿರುದ್ಧವಾಗಿ ನಮ್ಮ ಒಳ್ಳೆಯ ನಡತೆಗಳು ನಮಗೆ ಉತ್ತಮ ಫಲಗಳನ್ನು ಕೊಡುತ್ತವೆ ಎಂಬ ನಂಬಿಕೆಯನ್ನು ಬೆಳೆಸಲಾಗಿತ್ತು. ಹಾಗಾಗಿ ನಮ್ಮದಲ್ಲದ ವಸ್ತುಗಳು ಸಿಕ್ಕಿದರೂ ಹೆಕ್ಕಿಕೊಳ್ಳಬಾರದು ಅಥವಾ ಹೆಕ್ಕಿದರೂ ಅವನ್ನು ಯಾರದೆಂದು ಗೊತ್ತಾದರೆ ಅವರಿಗೆ ತಲುಪಿಸಬೇಕು. ಶಾಲೆಯಲ್ಲಾದರೆ ಶಿಕ್ಷಕರಲ್ಲಿ ಕೊಟ್ಟು “ಕಳೆದುದು ಸಿಕ್ಕಿದೆ” ಎಂಬ ಫಲಕದಲ್ಲಿ ಪ್ರಕಟಿಸಿ ಕಳೆದುಕೊಂಡವರಿಗೆ ತಲುಪಿಸಿದ ಸಾರ್ಥಕತೆ ಸಿಗುತ್ತಿತ್ತು. ಅಂದರೆ ಕದಿಯುವುದು ಬದಿಗಿರಲಿ, ಸುಮ್ಮನೇ ಹೆಕ್ಕಲು ಸಿಕ್ಕಿದ ದುಡ್ಡನ್ನಾಗಲೀ, ವಸ್ತುವನ್ನಾಗಲ್ಲಿ ಉಪಯೋಗಕ್ಕೆ ಇಟ್ಟುಕೊಳ್ಳುವುದು ಪಾಪವೆಂಬ ಚಿಂತನೆ ವಿದ್ಯಾರ್ಥಿಗಳಲ್ಲಿ ನೆಲೆಗೊಂಡಿತ್ತು. ಅದು ಕರ್ಮ ಸಿದ್ಧಾಂತದ ತತ್ವಗಳನ್ನು ಬದುಕಿಗೆ ಅನ್ವಯಿಸಿಕೊಂಡ ಸಾಮಾಜಿಕ ಚಿಂತನೆಯಾಗಿತ್ತು. ಅರ್ಥಾತ್ ಪಾಪ ಕಾರ್ಯಗಳಿಂದ ದುಃಖವನ್ನು ಹಾಗೂ ಪುಣ್ಯ ಕಾರ್ಯಗಳಿಂದ ನೆಮ್ಮದಿಯನ್ನು ಪಡೆಯುವ ವಿಶ್ವಾಸವಿತ್ತು.
ಆಧುನಿಕ ಯುಗದಲ್ಲಿ “ಮಾಡಿದ್ದುಣ್ಣೋ ಮಹಾರಾಯಾ” ಎಂಬ ಕರ್ಮ ಸಿದ್ಧಾಂತದ ತರ್ಕದೊಳಗಿಂದ ನಮ್ಮ ಮನಸ್ಸು ಪೊರೆ ಕಳಚಿ ಹೊರಬಂದಿದೆ. “ಸಾಲ ಮಾಡಿಯಾದರೂ ತುಪ್ಪ ತಿನ್ನು” ಎಂಬ ಪ್ರಾಪಂಚಿಕ ದೃಷ್ಠಿಕೋನವು ವ್ಯಕ್ತಿಗಳ ಕೃತ್ಯಗಳನ್ನು ನಿರ್ದೇಶಿಸುತ್ತದೆ. ಹಾಗಾಗಿಯೇ ಆಸ್ತಿಗಾಗಿ ಅಣ್ಣನನ್ನು ಕೊಂದ ತಮ್ಮ, ಅಪ್ಪನನ್ನು ಕೊಂದ ಮಗ, ಗಂಡನನ್ನು ಕೊಂದ ಹೆಂಡತಿ, ಪ್ರಿಯಕರನನ್ನು ಬಲಿ ಪಡೆದ ಮೋಹಿನಿ, ಹೆಂಡತಿಯನ್ನು ಕೊಲ್ಲಲು ವಿದೇಶದಿಂದ ಸುಪಾರಿ, ಗಂಡನ ಮೇಲೆ ಮುನಿಸಿನಿಂದ ಮಕ್ಕಳ ಸಹಿತ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿದ ಮಹಿಳೆ, ಗಂಡನಿಗೆ ನಿಧಾನ ವಿಷವಿಕ್ಕಿ ರೋಗಿಷ್ಟನನ್ನಾಗಿ ಮಾಡಿ ಪ್ರಿಯಕರನೊಂದಿಗೆ ಚೆಲ್ಲಾಟವಾಡಿದ ಸುಂದರಿ, ಮದುವೆ ಇಷ್ಟವಿಲ್ಲದೆ ಮಂಟಪದಿಂದ ವಧು ನಾಪತ್ತೆ, ಅನ್ಯಜಾತಿಯ ಹುಡುಗನನ್ನು ಪ್ರೀತಿಸಿದ್ದಕ್ಕಾಗಿ ಮಗಳ ಹತ್ಯೆಗೈದ ತಂದೆ, ವರದಕ್ಷಿಣೆ ಸಾಲದೆಂದು ಹೆಂಡತಿಯನ್ನು ಪೀಡಿಸುವ ಗಂಡ, ವಧುವಿನ ಹತ್ಯೆ, ಮದುವೆಯಾಗುತ್ತೇನೆಂದು ನಂಬಿಸಿ ಗರ್ಭವತಿಯನ್ನಾಗಿ ಮಾಡಿ ಆಮೇಲೆ ಹೆತ್ತವರ ಆಕ್ಷೇಪದ ನೆಪದಲ್ಲಿ ಸಂಬಂಧವನ್ನು ನಿರಾಕರಿಸಿ ವಂಚನೆ ಮಾಡುವುದು, ಆಫೀಸಿನಲ್ಲಿ ವಿವಾಹೇತರ ಸಂಬಂಧ ಹಾಗೂ ಅನೈತಿಕ ಪ್ರಣಯ, ಕೆಲವು ಮಠಗಳಲ್ಲಿ ಸ್ವಾಮೀಜಿಯವರು ಹಾಗೂ ಶಾಲೆಗಳಲ್ಲಿ ಶಿಕ್ಷಕರು ವಿದ್ಯಾರ್ಥಿನಿಯರನ್ನು ಲೈಂಗಿಕವಾಗಿ ಬಳಸಿಕೊಂಡ ಪ್ರಕರಣಗಳು, ರಾಜಕಾರಣಿಗಳು ಹೆಣ್ಣಾಳುಗಳನ್ನು ಕಾಮಪಿಪಾಸೆಗಾಗಿ ಬಳಸಿಕೊಂಡು ವೀಡಿಯೊಗಳನ್ನಿಟ್ಟುಕೊಂಡು ಶೋಷಿಸುವ ಪ್ರಕರಣಗಳು, ಮುಂತಾಗಿ ಪಾಪಕೃತ್ಯಗಳ ಅನೇಕಾನೇಕ ವಾರ್ತೆಗಳು ದಿನನಿತ್ಯವೂ ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿವೆ. ಗಂಡನ ಹೆತ್ತವರನ್ನು ನಿರ್ಲಕ್ಷಿಸುವ ಹಾಗೂ ಅವರನ್ನು ಆಳುಗಳಂತೆ ನಡೆಸಿಕೊಳ್ಳುವ ದುರಾಸೆಯ ಮಗ-ಸೊಸೆಯರು ಹಿಂಸೆ ನೀಡುವ ಪ್ರಕರಣಗಳು, ಮಕ್ಕಳಿಗೆ ವಿದ್ಯಾಭ್ಯಾಸ ನೀಡಿ ಉದ್ಯೋಗ ಒದಗಿಸಿದ ತಂದೆತಾಯಿ ವೃದ್ಧಾಪ್ಯದಲ್ಲಿ ರಸ್ತೆ ಪಾಲಾಗಿ ಬೇಡುವ ಸ್ಥಿತಿಗೆ ತಲುಪಿದ ಘಟನೆಗಳು ಹೀಗೆ ಇಂದಿನ ದಿನಗಳಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಗಮನಿಸಿದರೆ ಪಾಪಪ್ರಜ್ಞೆ ಎಂಬುದು ಎಲ್ಲೋ ಕಳೆದು ಹೋಗಿದೆ ಎಂದೆನ್ನಿಸುತ್ತದೆ.
ಇತ್ತೀಚಿನ ಒಂದು ಘಟನೆ ಅಚ್ಚರಿಗೊಳಿಸುವಂಥದ್ದಾಗಿದೆ. ವಿವಾಹದ ಉದ್ದೇಶದಿಂದ ಹುಡುಗ-ಹುಡುಗಿ ನೋಡುವ ಕಾರ್ಯಕ್ರಮ ನಡೆದ ಬಳಿಕ  ಹುಡುಗನಿಗೆ ಹುಡುಗಿಯಿಂದ ಒಂದು  ಪ್ರಶ್ನಾವಳಿಗಳ ಈಮೇಲ್ ಬಂದಿತಂತೆ. ಅದರಲ್ಲಿ ಸುಮಾರು ಇಪ್ಪತ್ತು ಪ್ರಶ್ನೆಗಳಿದ್ದುವು. ಅವುಗಳಲ್ಲಿದ್ದ ಎರಡು ಪ್ರಶ್ನೆಗಳು ಗಮನೀಯವಾಗಿದ್ದುವು. ಒಂದು, ನಿಮ್ಮ ಅಪ್ಪನಿಗೆ ಹಳ್ಳಿಯಲ್ಲಿರುವ ಹತ್ತು ಎಕ್ರೆ ಆಸ್ತಿಯನ್ನು ನಿಮ್ಮ ಹೆಸರಿಗೆ ಯಾವಾಗ ಮಾಡುತ್ತಾರೆ? ಎರಡು, ಮದುವೆಯ ಬಳಿಕ ನಾವು ಪ್ರತ್ಯೇಕ ಮನೆ ಮಾಡುವುದಾ ಅಥವಾ ನಿಮ್ಮ ಅಪ್ಪ ಅಮ್ಮನೊಂದಿಗೆ ಇರಬೇಕಾಗುತ್ತದಾ? ಈ ಪ್ರಶ್ನಾವಳಿಯನ್ನು ಕಂಡು ಗಾಬರಿಯಾದ ಹುಡುಗ ಅದನ್ನು ಅಪ್ಪನಿಗೆ ಫಾರ್ವರ್ಡ್ ಮಾಡಿದ. ಅಪ್ಪನಿಗೂ ಗೊಂದಲವಾಗಿ ಅವರು ಹೆಂಡತಿಯಲ್ಲಿ ಅದನ್ನು ಕೊಟ್ಟರು. ಅವರು ಅದನ್ನು ಓದಿ ಹುಡುಗಿಯ ಅಪ್ಪನಿಗೆ ಫೋನ್ ಮಾಡಿ ಕೇಳಿದರು, “ನಿಮ್ಮ ಮಗಳಿಂದ ಒಂದು ಪ್ರಶ್ನಾವಳಿ ಬಂದಿದೆ. ನಿಮಗೆ ಅದು ಗೊತ್ತಿದೆಯಾ?” ಆ ಕಡೆಯಿಂದ ಹುಡುಗಿಯ ಅಪ್ಪ ಸಹಜವಾಗಿ “ಹೌದು, ಅದನ್ನು ನಾವಿಬ್ಬರೂ ಸೇರಿಯೇ ತಯಾರಿಸಿದ್ದು” ಎಂದರಂತೆ. ಅಲ್ಲಿಗೆ ಮಗಳ ಮನಸ್ಸನ್ನು ಹಾಳು ಮಾಡುವುದರಲ್ಲಿ  ಹಿರಿಯ ತಲೆಮಾರಿನವರೂ ಇದ್ದಾರೆಂದಾಯಿತು. ಮಗಳಿಗೆ ಇಂತಹ ಯೋಚನೆ ಬಂದಿದ್ದರೂ ಅದನ್ನು ತಿದ್ದಬೇಕಾಗಿದ್ದ ಹೆತ್ತವರು ಅಂತಹ ಯೋಜನೆಯಲ್ಲಿ ಸೇರಿಕೊಂಡಿರುವುದು ಸರಿಯಲ್ಲ. ತಮ್ಮ ಮಗನಿಗೆ ಅಂತಹ ಒಂದು ಒತ್ತಡ ಸೊಸೆಯಿಂದ ಬಂದರೆ ಆಗ ತನ್ನ ಪರಿಸ್ಥಿತಿಯೇನು ಎಂಬುದನ್ನು ಅವರು ಚಿಂತಿಸಿಲ್ಲ ಎಂಬುದು ಅಚ್ಚರಿ. ಅರ್ಥಾತ್ ಪರಿಣಾಮದಲ್ಲಿ ತನ್ನ ಸಂಬಂಧಿಕರಿಗೆ ನೋವುಂಟಾಗುವಂತೆ ಮಾಡುತ್ತಿದ್ದೇನೆಂಬ ವಿಮರ್ಶೆಯೂ ಇಲ್ಲದೆ ಹಿರಿಯರೇ ವರ್ತಿಸುತ್ತಿರುವುದು ಆಧುನಿಕತೆಯ ವಿಪರ್ಯಾಸವೆನ್ನಬಹುದು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್‌ ಮಾಡಿ.
ಕೆಲವೇ ದಶಕಗಳ ಹಿಂದೆ ತಮ್ಮದಲ್ಲದ ಬಗ್ಗೆ ವ್ಯಾಮೋಹ ಇಲ್ಲದಿದ್ದ ಮನೋಸ್ಥಿತಿಯು ಜಾಗೃತವಾಗಿರುತ್ತಿತ್ತು. ಈಗಲೂ ಅನೇಕ ಬಡ ಮಧ್ಯಮ ವರ್ಗದವರಲ್ಲಿ, ರಿಕ್ಷಾ ಡ್ರೈವರ್‍ಗಳಲ್ಲಿ, ಬಸ್ ಕಂಡಕ್ಟರ್‍ಗಳಲ್ಲಿ, ಕೇಶಿಯರ್‍ಗಳಲ್ಲಿ, ಪಿಗ್ಮಿಸಂಗ್ರಾಹಕರಲ್ಲಿ ಹೀಗೆ ತಮ್ಮದಲ್ಲದ ಹಣವು ಕೈಯಲ್ಲಿ ಓಡುವವರು ಅನೇಕರು ತಮ್ಮ ಕೈಗೆ ಹೆಚ್ಚು ಹಣವು ಬಂದಾಗ ಅದನ್ನು ಹಿಂದಿರುಗಿಸುವ ಪ್ರಾಮಾಣಿಕತೆಯನ್ನು ಮೆರೆದ ಘಟನೆಗಳು ಕೆಲವೊಮ್ಮೆ ವರದಿಯಾಗುತ್ತವೆ. ಅಂತಹ ಅವರ ಪ್ರಾಮಾಣಿಕತೆಯ ಹಿಂದೆ ಅಪರಿಗ್ರಹದ ಮೌಲ್ಯವು ಪ್ರಭಾವಿಸಿರುತ್ತದೆ. ಅರ್ಹತೆ ಮೀರಿ ಏನನ್ನು ಸೆಳೆದುಕೊಂಡರೂ ಅದನ್ನು ಅವರು ಕಳೆದುಕೊಳ್ಳುತ್ತಾರೆಂಬುದು ಪುಣ್ಯ ಚಿಂತನೆಯ ತರ್ಕ. ಈ ಕಳೆದುಕೊಳ್ಳುವಿಕೆಯು ವಿವಿಧ ರೂಪಗಳಲ್ಲಿ ಸಂಭವಿಸಬಹುದು. ನೇರವಾಗಿ ದರೋಡೆಯೇ ಆಗಿರಬಹುದು, ರೋಗಗಳು ಆವರಿಸಿ ನೋವು ಸಂಕಟಗಳು ಬಾಧಿಸಬಹುದು, ಸಮೀಪದವರ ಸಾವು ಸಂಭವಿಸಿ ಜೀವನಾಧಾರದ ವ್ಯಕ್ತಿಗಳು ಇಲ್ಲದಾಗಬಹುದು, ಅಪರಾಧ ಸಾಬೀತಾಗಿ ಸೆರೆಮನೆ ವಾಸಕ್ಕೆ ಈಡಾಗಬಹುದು. ಹೀಗೆ ಯಾವುದಾದರೂ ರೀತಿಯಲ್ಲಿ ಅನ್ಯಾಯ ಮಾಡಿದವರಿಗೆ ನಷ್ಟ ಆಗದಿರುವುದಿಲ್ಲವೆಂಬ ಪಾಪಪ್ರಜ್ಞೆಯು ಕೂಡಾ ಇಂದು ಎಚ್ಚರಿಸುವಷ್ಟು ಬಲಶಾಲಿಯಾಗಿಲ್ಲ. ಅತ್ತೆ ಮಾವನನ್ನು ಬೀದಿಗೆ ತಳ್ಳುವ ಸೊಸೆಯಂದಿರು ತಾವೂ ಒಂದು ದಿನ ಅತ್ತೆಯ ಸ್ಥಾನ ಪಡೆದು ಸೊಸೆಯ ತಾತ್ಸಾರಕ್ಕೆ ಈಡಾಗಬಹುದೆಂಬ ಎಚ್ಚರ ಹೊಂದಿರುವುದಿಲ್ಲ. ಸೊಸೆಗೆ ವಿವಿಧ ನೆಪಗಳಿಂದ ಹಿಂಸೆ ಕೊಡುವ ಅತ್ತೆಯಂದಿರು ತಮ್ಮ ಮಗಳೂ ಇಂತಹ ಹಿಂಸೆಗೆ ಒಳಗಾಗಬಹುದೆಂಬ ಯೋಚನೆಯನ್ನು ಮಾಡದಿರುವ ಉದಾಹರಗಳೆಷ್ಟೋ ಇವೆ. ಇನ್ನು ಆಹಾರದಲ್ಲಿ ಕಲಬೆರಕೆ, ವಿಷಕಾರಕ ಔಷಧಿಗಳ ಸಿಂಪಡಣೆ, ಕಳಪೆ ವಸ್ತುಗಳ ಮಾರಾಟ, ನಕಲಿ ವಸ್ತುಗಳ ಉತ್ಪಾದನೆ, ಹಣ ಮತ್ತು ನಶೆಯ ವಸ್ತುಗಳ ಆಮಿಶವೊಡ್ಡಿ ಅಕೃತ್ಯಗಳನ್ನು ಮಾಡಿಸುವುದು ಇತ್ಯಾದಿಗಳು ಹೆಚ್ಚು ಹೆಚ್ಚು ಸಂಭವಿಸುವುದು ಸಮಾಜದ ಬಲಹೀನತೆಗೆ ಸಾಕ್ಷಿಯಾಗುತ್ತದೆ.
ಆಧುನಿಕ ಮನಸ್ಸೆಂಬುದು ವರ್ತಮಾನದ ಬಗ್ಗೆ ಮಾತ್ರ ಚಿಂತಿಸಲು ಪ್ರೋತ್ಸಾಹಿಸುತ್ತದೆ. “Live in the present, forget the past and don’t worry about future” ಎಂಬುದು ವ್ಯಕ್ತಿತ್ವ ವಿಕಸನದ ಸುಲಭ ಮಾರ್ಗ ಎಂತ ಹೇಳಲಾಗುತ್ತದೆ. ಹೀಗಾಗಿ ಹಣ ಮಾಡುವುದು, ಸುಖ ಪಡುವುದು, ವ್ಯಭಿಚಾರ ಮಾಡುವುದು, ಅನೈತಿಕತೆಯ ಬಗ್ಗೆ ನಿಶ್ಚಿಂತೆಯಿಂದ ಇರುವುದು, ಕಳ್ಳತನ, ಸುಲಿಗೆ, ಕೊಲೆ, ಮೋಸ, ವಂಚನೆ ಇತ್ಯಾದಿಗಳನ್ನು ತಪ್ಪೆಂದು ತಿಳಿಯದ ವ್ಯಕ್ತಿಗಳ ಸಂಖ್ಯೆಯೇ ಹೆಚ್ಚಾಗಿದೆ. ಬಡಕಾರ್ಮಿಕರಿಗೆ ಅಧಿಕ ಬಡ್ಡಿಗೆ ಸಾಲ ನೀಡಿ ವಸೂಲು ಮಾಡುವಾಗ ದೌರ್ಜನ್ಯ ಎಸಗುವುದು ದುಷ್ಟತನವೆಂದು ತಿಳಿಯದ ಬಡ್ಡಿ ದಂಧೆಯವರ ಸಂಖ್ಯೆ ಹೆಚ್ಚುತ್ತಿದೆ. ಸರಕಾರದ ವತಿಯಿಂದ ದಲಿತರಿಗೆ, ಬಡ ಸಮುದಾಯದವರಿಗೆ, ಶಾಲಾ ಮಕ್ಕಳ ಸೌಕರ್ಯಕ್ಕಾಗಿ ನೀಡುವ ಅನುದಾನವನ್ನು ಸ್ವಂತ ಹೆಸರಿಗೆ ತಿರುಗಿಸಿ ದುಡ್ಡು ಮಾಡುವ ಅನೇಕ ಪ್ರಕರಣಗಳು ಬಯಲಾಗುತ್ತಿವೆ. ಅಂತಹ ನಿಗಮಗಳ ಅಧ್ಯಕ್ಷರು ಮತ್ತು ಅಧಿಕಾರಿಗಳು ಸಿಕ್ಕಿಬೀಳುವ ತನಕ ಸಾಚಾಗಳಂತೆ ಸಮಾಜದಲ್ಲಿ ಮರ್ಯಾದೆ ಪಡೆಯುತ್ತಾರೆ. ಆದರೆ ಸಿಕ್ಕಿಬಿದ್ದು  ರಾಜೀನಾಮೆ ಕೊಟ್ಟರೂ ಪಶ್ಚಾತ್ತಾಪ ಪಡದೆ ತಾನೇನೂ ತಪ್ಪು ಮಾಡಿಲ್ಲವೆಂಬಂತೆ ವರ್ತಿಸುವುದನ್ನು ನೋಡಿದರೆ ಪಾಪ ಪುಣ್ಯದ ಫಲಾಫಲಗಳ ಪ್ರಜ್ಞೆಯೇ ಇಲ್ಲವೇನೋ ಅನಿಸುತ್ತದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್‌ ಮಾಡಿ.
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಡಾ.ಚಂದ್ರಶೇಖರ ದಾಮ್ಲೆ

ಡಾ. ಚಂದ್ರಶೇಖರ ದಾಮ್ಲೆಯವರು ಸುಳ್ಯದ ನೆಹರು ಮೆಮೋರಿಯಲ್ ಕಾಲೇಜ್ ನಲ್ಲಿ ಸಮಾಜಶಾಸ್ತ್ರ ಪ್ರಾಧ್ಯಾಪಕರಾಗಿ 35 ವರ್ಷಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರು. ವೃತ್ತಿಯಲ್ಲಿರುವಾಗಲೇ ರಾಷ್ಟ್ರೀಯ ಸೇವಾ ಯೋಜನಾಧಿಕಾರಿಯಾಗಿ ಸಮಾಜಸೇವೆಯಲ್ಲಿ ತೊಡಗಿಕೊಂಡವರು. ಸಾಂಸ್ಕೃತಿಕ ಸಂಘದ ಮೂಲಕ ಮಕ್ಕಳಿಗೆ ಯಕ್ಷಗಾನ ನಿರ್ದೇಶಕನ, ಸುಳ್ಯದಲ್ಲಿ ಯಕ್ಷಗಾನ ಹಿತರಕ್ಷಣಾ ವೇದಿಕೆಯ ಸ್ಥಾಪನೆ, ಸಂಪೂರ್ಣ ಸಾಕ್ಷರತಾ ಆಂದೋಲನದಲ್ಲಿ ಸಂಪನ್ಮೂಲ ವ್ಯಕ್ತಿ, ಕನ್ನಡಮಾಧ್ಯಮದಲ್ಲಿ ಸ್ನೇಹ ಶಿಕ್ಷಣ ಸಂಸ್ಥೆಯ ಸ್ಥಾಪನೆ ಮುಂತಾದ ಸಮಾಜಮುಖಿ ಕಾರ್ಯಗಳಲ್ಲಿ ಸೇವೆ ನೀಡಿದವರು. ಶಿಕ್ಷಣದಲ್ಲಿ ಸೃಜನಶೀಲತೆಗೆ ಒತ್ತು ನೀಡುವ ದಾಮ್ಲೆಯವರು ಸಂಶೋಧಕರಾಗಿದ್ದು ಕನ್ನಡ ಇಂಗ್ಲಿಷ್ ಭಾಷೆಗಳಲ್ಲಿ ಕೃತಿ ರಚನೆ ಮಾಡಿದವರು. 'ನೆಲದನಂಟು' ಮತ್ತು "ಶಾಲೆ ಎಲ್ಲಿದೆ?" ಇವು ಇವರ ಪ್ರಸಿದ್ಧ ಕಾದಂಬರಿಗಳು. ಅನೇಕ ಪ್ರಶಸ್ತಿ ಸಮ್ಮಾನಗಳಿಂದ ಗೌರವಿಸಲ್ಪಟ್ಟ ದಾಮ್ಲೆಯವರಿಗೆ ಅಸಾಮಾನ್ಯ ಕನ್ನಡಿಗ ಪ್ರಶಸ್ತಿ, ಯಕ್ಷಮಂಗಳ ಪ್ರಶಸ್ತಿ, ಅರಣ್ಯಮಿತ್ರ ಮತ್ತು ಜಲಮಿತ್ರ ಪ್ರಶಸ್ತಿ, Nation Builder ಪ್ರಶಸ್ತಿ ಮುಂತಾದುವು ಲಭಿಸಿವೆ. ಹೊಸದಿಗಂತ ಪತ್ರಿಕೆಯಲ್ಲಿ "ಇದ್ಯಾಕೆ ಹೀಗೆ " ಅಂಕಣವನ್ನು ಬರೆಯುತ್ತಿದ್ದರು.

Published by
ಡಾ.ಚಂದ್ರಶೇಖರ ದಾಮ್ಲೆ

Recent Posts

ತೆಂಗಿನಕಾಯಿಯಿಂದ Gen-Z ಫೇವರಿಟ್ ಫುಡ್‌…! ವೆಗನ್ ಕುಲ್ಫಿ ಮತ್ತು ಚಾಕೊಲೇಟ್ ಬಿಡುಗಡೆ

ಕಾಸರಗೋಡು CPCRI ತನ್ನ 110ನೇ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಜನರೇಷನ್‌ Z ಗಾಗಿ…

1 hour ago

ತೆಂಗು ರೈತರಿಗೆ ಹೊಸ ದಾರಿ | ಮೌಲ್ಯವರ್ಧನೆ ಮತ್ತು ಬಹುಬೆಳೆ ಪದ್ಧತಿಗೆ ಉತ್ತೇಜನ

ಮಹಿಳಾ ಉದ್ಯಮಶೀಲತೆ, ತೆಂಗು ಮೌಲ್ಯವರ್ಧನೆ ಹಾಗೂ ರೈತರ ಆದಾಯ ವೃದ್ಧಿಯಲ್ಲಿ ತೆಂಗು ಅಭಿವೃದ್ಧಿ…

2 hours ago

ತೆಂಗಿನಕಾಯಿ ಬೆಲೆ ಏಕೆ ಇಳಿಯುತ್ತಿದೆ? ರೈತರಿಗೆ ಮುಂದೇನು?

ತೆಂಗಿನಕಾಯಿ ಬೆಲೆ ಇಳಿಕೆ ಆತಂಕ ಹೆಚ್ಚಾಗಿದೆ. ಉತ್ಪಾದನೆ ಏರಿಕೆ ನಡುವೆಯೇ ರಫ್ತು ಮತ್ತು…

2 hours ago

ಡಿಜಿಟಲ್ ಕೃಷಿ, ಹವಾಮಾನ ಸಹಿಷ್ಣು ಬೆಳೆಗಳಿಗೆ ಬೆಂಬಲ -ಕೃಷಿ ಸಚಿವರಿಂದ ಸಭೆ

ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ಶಿವರಾಜ್‌ ಸಿಂಗ್‌ ಚೌಹಾನ್‌ ಅವರು…

2 hours ago

ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಎಳ್ಳು ಸೇವನೆ ಉತ್ತಮ

ಚಳಿಗಾಲದಲ್ಲಿ ಆಹಾರ ಪದ್ಥತಿಯಲ್ಲೂ ಬದಲಾವಣೆ ಮಾಡಿಕೊಂಡರೆ ಉತ್ತಮ. ಅದರಲ್ಲಿ ಎಳ್ಳು ಸೇವನೆಯೂ ಒಂದು.…

3 hours ago

ನಗರ ಪ್ರದೇಶದ ಬಿ-ಖಾತಾ ಆಸ್ತಿಗಳಿಗೆ ಎ-ಖಾತಾ ವಿತರಣೆ ಸಚಿವ ಸಂಪುಟದಲ್ಲಿ ನಿರ್ಣಯ

ರಾಜ್ಯ ಸರ್ಕಾರ, ರಾಜಧಾನಿ ಬೆಂಗಳೂರಿನ ನಂತರ ಇದೀಗ ರಾಜ್ಯಾದ್ಯಂತ ಆಸ್ತಿ ಮಾಲೀಕರಿಗೆ ಸಿಹಿ…

3 hours ago