ಇತ್ತೀಚಿಗೆ ಸ್ವರ್ಗಸ್ಥರಾದ ಹಸಿರು ಕ್ರಾಂತಿಯ ಜನಕ ಎಂದು ಹೆಸರುವಾಸಿಯಾದ ಡಾ. ಎಮ್ ಎಸ್ ಸ್ವಾಮಿನಾಥನ್ ಅವರ ಅಪಾರ ಕೊಡುಗೆಯನ್ನು ಸ್ಮರಿಸುವ ದಿನಗಳಿವು. ಭಾರತ ದೇಶ ಸ್ವಾತಂತ್ರ್ಯ ಪಡೆದ ನಂತರ ಯಾವುದೋ ರೂಪದಲ್ಲಾದರೂ ಸರಿ ಎಲ್ಲ ಜನರಿಗೆ ಆಹಾರ ಪೂರೈಕೆಯಾಗುವಂತೆ ಮಾಡುವುದು ಮೊದಲ ಆದ್ಯತೆಯಾಗಿತ್ತು. ಆ ಸಮಯದಲ್ಲಿ ರಾಸಾಯನಿlಗಳು ಹಾಗೂ ಹೈಬ್ರಿಡ್ ಬೀಜಗಳ ಬಳಕೆಯಿಂದ ಆಹಾರ ಉತ್ಪಾದನೆ ಹೆಚ್ಚಿಸುವ ಪ್ರಯತ್ನ ಮಾಡಲಾಯಿತು. ಇದರ ಸಫಲತೆಯೇ ಹಸಿರು ಕ್ರಾಂತಿಗೆ ನಾಂದಿಯಾಯಿತು.
ಅದು ಅಂದಿನ ಅವಶ್ಯಕತೆಯಾಗಿತ್ತು, ಆ ಅವಶ್ಯಕತೆಯನ್ನು ಅಂದಿನ ನಾಯಕರು ಹಾಗೂ ವಿಜ್ಞಾನಿಗಳು ಅರಿತು ತಮಗೆ ದೊರೆತ ತಂತ್ರಜ್ಞಾನವನ್ನು ಬಳಸಿಕೊಂಡು ಹಸಿರು ಕ್ರಾಂತಿಗೆ ನಾಂದಿ ಹಾಡಿದರು. ಈ ನಿಟ್ಟಿನಲ್ಲಿ ಪ್ರಯತ್ನ ಮಾಡಿದ ಎಲ್ಲರೂ ಅಭಿನಂದನೆಗೆ ಅರ್ಹರು. ಅದರೆ, ಅದೇ ಹಸಿರು ಕ್ರಾಂತಿಯ ದುಷ್ಪರಿಣಾಮದಿಂದ ಇಂದು ಮಣ್ಣು, ನೀರು, ಗಾಳಿ ಹಾಗೂ ಒಟ್ಟಾರೆಯಾಗೆ ವಾತಾವರಣವೇ ತೀವ್ರಗತಿಯಲ್ಲಿ ಕಲುಷಿತಗೊಳ್ಳುತ್ತಿದೆ. ಕಳೆದ 50 ವರ್ಷಗಳಲ್ಲಿ 68 ಪ್ರತಿಶತದಷ್ಟು ವನ್ಯ ಸಂಪತ್ತನ್ನು ಕಳೆದುಕೊಂಡಿದ್ದೇವೆ. ಎಷ್ಟು ಬೇಗನೇ ಭೂಮಿಯು ರಾಸಾಯನಿಕಗಳು ಹಾಗೂ ಹೈಬ್ರಿಡ್ ಬೀಜಗಳ ಬಳಕೆಯಿಂದ ಮುಕ್ತವಾಗವುದೋ ಅಷ್ಟು ಬೇಗನೆ ಸದಾ ಹಸಿರು ಕ್ರಾಂತಿಗೆ ಹೊಸ ವೇದಿಕೆ ನಿರ್ಮಾಣವಾಗುವುದು. ಇದು ಇಂದಿನ ನಾಯಕರು ಹಾಗೂ ವಿಜ್ಞಾನಿಗಳ ಮೇಲಿರುವ ಬಹು ದೊಡ್ಡ ಜವಾಬ್ದಾರಿಯಾಗಿದೆ.
ಹೊಸ ತಂತ್ರಜ್ಞಾನವನ್ನು ರೈತರಿಗೆ ಅಳವಡಿಸಿಕೊಳ್ಳಲು ತಿಳಿಸುವುದು ಸುಲಭ. ಆದರೆ, ಅಳವಡಿಸಿಕೊಂಡ ತಂತ್ರಜ್ಞಾನಗಳ ದುಷ್ಪರಿಣಾಮವನ್ನು ಮನವರಿಕೆ ಮಾಡಿ ಹೊಸ ಪದ್ಧತಿ ಅಳವಡಣೆ ಮಾಡಿಕೊಳ್ಳುವಂತೆ ಮಾಡುವುದು ಬಹಳ ಕಷ್ಟದ ಕೆಲಸ. ಇದರ ಜೊತೆಗೆ ರಾಸಾಯನಿಕಗಳು ಹಾಗೂ ಹೈಬ್ರಿಡ್ ಬೀಜಗಳ ಉತ್ಪಾದನಾ ಕಂಪನಿಗಳು ತಾವು ಹೂಡಿದ ಬಂಡವಾಳ ಹಿಂತೆಗೆದುಕೊಳ್ಳಲು ಶತಾಯುಗತಾಯ ಪ್ರಯತ್ನ ಮಾಡುತ್ತಿರುತ್ತವೆ. ಇಂತಹ ಕ್ಲಿಷ್ಟಕರ ಸಂಗತಿಯನ್ನು ನಿಭಾಯಿಸಿ ಆರೋಗ್ಯಯುತ ಅಹಾರ ಎಲ್ಲರಿಗೂ ದೊರೆಯುವಂತೆ ಮಾಡುವ ಯೋಗ್ಯ ನಾಯಕರ ಅವಶ್ಯಕತೆ ಬಂದೊದಗಿದೆ.
ಇಂದು ಹಸಿರು ಕ್ರಾಂತಿ ಎಂಬ ಕರಿ ನೆರಳಿನಿಂದ ಹೊರ ಬಂದು ಸದಾ ಹಸಿರು ಕ್ರಾಂತಿಯೆಡೆಗೆ ದಾಪುಗಾಲು ಇಡಬೇಕಾದರೆ ಸಾಯವಯ ಕೃಷಿಕರಿಗೆ, ಜಾನುವಾರು ಆಧಾರಿತ ಕೃಷಿ ಮಾಡುವವರಿಗೆ ಹಾಗೂ ನೈಸರ್ಗಿಕ ಕೃಷಿಕರಿಗೆ ದೊಡ್ಡ ಪ್ರಮಾಣದಲ್ಲಿ ಪ್ರೋತ್ಸಾಹ ನೀಡುವ ಅವಶ್ಯಕತೆಯಿದೆ. ಇದೇ ಉದ್ದೇಶದಿಂದ ಸದ್ಗುರು ಅವರು ಮಣ್ಣು ಉಳಿಸಿ ಎಂಬ ಅಭಿಯಾನವನ್ನು ಜಗತ್ತಿನಾದ್ಯಂತ ಪ್ರಾರಂಭಿಸಿದ್ದಾರೆ. ಹಾಗಾಗಿ, ಮಣ್ಣು ಉಳಿಸಿ ಆಭಿಯಾನದ ಮೂಲಕ ಸರ್ಕಾರಕ್ಕೆ ಸಲ್ಲಿಸಿದ “ಮಣ್ಣು ಪುನಶ್ಚೇತನ ಕಾನೂನ”ನ್ನು ಆದ್ಯತೆ ಮೇರೆಗೆ ಅನುಷ್ಠಾನಕ್ಕೆ ತರುವ ಅವಶ್ಯಕತೆಯಿದೆ.
ನಾವು ಸದಾ ಹಸಿರು ಕ್ರಾಂತಿಗೆ ಪೂರಕವಾದ ಯೋಜನೆಗಳನ್ನು ಜಾರಿಗೆ ತರದಿದ್ದರೆ ಇಂದು ನಾವು ಸೇವಿಸುತ್ತಿರುವ ಆಹಾರವೇ ವಿಷವಾಗಿ ಪರಿಣಮಿಸುವ ಕಾಲ ಬಹಳ ದೂರ ಉಳಿದಿಲ್ಲ. ಈಗಾಗಲೇ ಗ್ರಾಮಗಳಲ್ಲಿರುವ ಪ್ರತಿ ಮನೆಗಳಲ್ಲಿಯೂ ಕೂಡ ಯಾವುದಾದರೂ ಔಷಧಿಗಳನ್ನು ಕಾಣುತ್ತಿದ್ದೇವೆ. ಇದಕ್ಕೆ ಮೂಲ ಕಾರಣವೇ ಕಳಪೆ ಗುಣಮಟ್ಟದ ಆಹಾರ ಸೇವನೆಯಾಗಿದೆ. ಅಂದರೆ, ಇಂದು ರೋಗಗಳು ಇರದೇ ಇರುವ ಜನರನ್ನು ಹುಡುಕುವುದು ಬಹಳ ಕಠಿಣವಾಗುತ್ತಿದೆ. ಫಲವತ್ತಾದ ಮಣ್ಣಿನಿಂದ ಗುಣಮಟ್ಟದ ಆಹಾರ ಉತ್ಪಾದಿಸಲು ಸಾಧ್ಯ. ಗುಣಮಟ್ಟದ ಆಹಾರದಿಂದ ಮಾತ್ರ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಸಾಧ್ಯ. ಇಂದಿನ ಅವಶ್ಯಕತೆಗೆ ತಕ್ಕಂತೆ ನಮ್ಮ ಆಯ್ಕೆಗಳಲ್ಲಿ ಬದಲಾವಣೆ ಮಾಡಿಕೊಳ್ಳಲೇಬೇಕಾಗಿದೆ. ರೈತನ ಶ್ರಮದಿಂದ ಮಾತ್ರ ಗುಣಮಟ್ಟದ ಆಹಾರ ಉತ್ಪಾದಿಸಲು ಸಾಧ್ಯ, ಅವನ ಶ್ರಮಕ್ಕೆ ತಕ್ಕ ಬೆಲೆ ನೀಡುವ ಯೋಜನೆಗಳನ್ನು ಜಾರಿ ಮಾಡುವ ಅವಶ್ಯಕತೆ ಬಂದೊದಗಿದೆ.
ರೈತ ಸಮುದಾಯ ಒಗ್ಗೂಡಿ ಈ ಕೆಳಕಂಡ ಅಂಶಗಳು ಕಾನೂನು ಅಗಿ ಜಾರಿಯಾಗುವಂತೆ ಪಕ್ಷಾತೀತವಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿ ಸದಾ ಹಸಿರು ಕ್ರಾಂತಿಗೆ ಮುನ್ನುಡಿ ಬರೆಯಬಹುದಾಗಿದೆ.
1.ಕೃಷಿ ಕ್ಷೇತ್ರಕ್ಕೆ ಪ್ರತಿ ವರ್ಷ 25% ಬಡ್ಜೆಟ್ ನ್ನು ಮುಂದಿನ 15 ವರ್ಷಗಳ ವರೆಗೆ ಮೀಸಲಿಡುವ ಕಾನೂನು ಜಾರಿಗೊಳಿಸುವುದು.
2.ಮಣ್ಣು ಉಳಿಸಿ ಅಭಿಯಾನದ ಮೂಲಕ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ ರೈತರ ಅದಾಯ ಹೆಚ್ಚಿಸುವ “ಮಣ್ಣು ಪುನಶ್ಚೇತನ ಕಾನೂನು” ಜಾರಿಗೊಳಿಸಿ, ಸಾವಯವ ಇಂಗಾಲದ ಪ್ರಮಾಣಕ್ಕೆ ಅನುಗುಣವಾಗಿ ರೈತರಿಗೆ ಪ್ರೋತ್ಸಾಹ ಧನ ನೀಡುವುದು.
3. ಭಾರತ ದೇಶದಲ್ಲಿ 70 ಪ್ರತಿಶತ ಜನರು ಕೃಷಿಯನ್ನು ಅವಲಂಬಿಸಿದ ಕಾರಣ, ಶಾಲಾ ಪಠ್ಯಪುಸ್ತಕಗಳ 70 ಪ್ರತಿಶತ ವಿಷಯವು ಕೃಷಿಗೆ ಸಂಭಂದಿಸಿದ ವಿಷಯವಾಗುವಂತೆ ಕಾನೂನು ಜಾರಿಗೊಳಿಸುವುದು.
ಈ ಮೇಲಿನ ಮೂರು ಅಂಶಗಳ ಆಧಾರಿತ ಕಾನೂನುಗಳು ಅನುಷ್ಠಾನವಾದರೆ ಮಾತ್ರ ರೈತರಿಗೆ ದೀರ್ಘಕಾಲೀನ ಪರಿಹಾರ ದೊರೆತು ಅವರು ಒಳ್ಳೆಯ ಭವಿಷ್ಯ ಕಂಡುಕೊಳ್ಳುವ ಸಾಧ್ಯತೆಯಿದೆ. ಇದು ಸಾಂಘಿಕ ಪ್ರಯತ್ನದಿಂದ ಮಾತ್ರ ಸಾಧ್ಯತೆಯಿದೆ. ಈ ನಿಟ್ಟಿನಲ್ಲಿ ಯಾರೇ ಪ್ರಯತ್ನಿಸಿದರೂ ಸಹ ಅವರನ್ನು ಪ್ರೋತ್ಸಾಹಿಸುವುದು ಪ್ರಜ್ಞಾವಂತ ಜನರ ಲಕ್ಷಣವಾಗಿದೆ. ಇದೇ ಕಾರಣಕ್ಕಾಗಿ ರೈತರ ಆದಾಯ ಹೆಚ್ಚಿಸುವ ಕಾನೂನು ಜಾರಿಗಾಗಿ ಪ್ರಾರಂಭಿಸಿದ ಮಣ್ಣು ಉಳಿಸಿ ಅಭಿಯಾನಕ್ಕೆ ಜಗತ್ತಿನ ಹಲವು ಮಹಾನ್ ವ್ಯಕ್ತಿಗಳು ಬೆಂಬಲ ವ್ಯಕ್ತಪಡಿಸಿದ್ದಾರೆ. ಇನ್ನು ಮುಂದೆ, ರೈತ ಸಮುದಾಯ ಒಗ್ಗೂಡಿ ತಮ್ಮ ಪ್ರಯತ್ನವನ್ನು ಮುಂದುವರೆಸುವ ಅವಶ್ಯಕತೆ ಬಂದೊದಗಿದೆ.
ಬಸವರಾಜ ಬಿರಾದಾರ-9449303880, ಮಣ್ಣು ಉಳಿಸಿ ಅಭಿಯಾನದ ಸ್ವಯಂ ಸೇವಕ, ವಿಜಯಪುರ
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…
ಕ್ಯೂಆರ್ ಕೋಡ್ ಬಳಸಿಕೊಂಡು ಗೇರು ತಳಿಗಳ ಮಾಹಿತಿ ಪಡೆಯಲು ಪುತ್ತೂರಿನ ಗೇರು ಸಂಶೋಧನಾ…
ಅಡಿಕೆಗೆ ಹಳದಿ ಎಲೆರೋಗದಿಂದ ಅಡಿಕೆ ಮರಗಳು ನಾಶವಾಗುತ್ತಿವೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ…
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…
WHO ನಿಲುವನ್ನುಮರುಪರಿಶೀಲಿಸುವಂತೆ ಮಾಡಲು ICMR, ICAR, AIUMS, CSIR, CFTRI ಮೈಸೂರು ಅಥವಾ…