ಈ ದೇಶದ ಬದಲಾವಣೆ ಎಲ್ಲಿಂದ ಆರಂಭ..?

April 18, 2025
10:32 AM
ಯಾವುದೇ ಬದಲಾವಣೆ ಆಗಬೇಕಾದರೆ ವ್ಯಕ್ತಿಯ ಒಳಗೆ ಬದಲಾವಣೆ ಆರಂಭವಾಗಬೇಕು. ಮನಸ್ಸಿನಲ್ಲಿ ಪಾಸಿಟಿವ್ ಬದಲಾವಣೆಯ ತಿರುವು ಬಾರದೇ ಇದ್ದರೆ ಈ ದೇಶ ಇನ್ನೂ ಹೀಗೇ...

ತುಂಬಾ ಸಲ ಕೇಳುತ್ತೇವೆ. “ದೇಶದ ಬದಲಾವಣೆ.. ದೇಶದ ಬದಲಾವಣೆ..”ಯ ಬಗ್ಗೆ. ಆದರೆ ಎಲ್ಲಿಂದ ಹಾಗೂ ಯಾರಿಂದ ಎನ್ನುವುದು ಬಹುಮುಖ್ಯವಾದ ಪ್ರಶ್ನೆ. ತುಂಬಾ ಗೌರವಾನ್ವಿತ ಅಥವಾ ಸ್ಟ್ಯಾಂಡರ್ಡ್‌ ಜನರು ಇರುವಲ್ಲಿಂದಲೇ, ತೀರಾ ಗ್ರಾಮೀಣ ಭಾಗದಿಂದಲೇ, ತೀರಾ ಬಡವರಿಂದಲೇ, ಮಧ್ಯಮ ವರ್ಗದ ಜನರಿಂದಲೇ..? ಹೀಗೊಂದು ಪ್ರಶ್ನೆಯೂ ಇದೆ. ಆದರೆ ಬದಲಾವಣೆ ಆಗಬೇಕಾದ್ದು ಹೇಗೆ..? ಯಾಕಾಗಿ..? ಎಲ್ಲಿಂದ ಎನ್ನುವ ಪ್ರಶ್ನೆ ಯಾವತ್ತೂ ಪ್ರಶ್ನೆಯಾಗಿಯೇ ಉಳಿಯುತ್ತದೆ. ಭಾಷಣಗಳು, ಬರಹಗಳು ಇಲ್ಲಿ ಚೆನ್ನಾಗಿ ಮಾತನಾಡುತ್ತದೆ. ಬದಲಾವಣೆ ಆರಂಭವಾಗಬೇಕಾದ್ದು ನನ್ನಿಂದಲೇ ಎನ್ನುವ ಪ್ರಜ್ಞೆ ನಮ್ಮೊಳಗೆ ಇಲ್ಲ..!.…..ಮುಂದೆ ಓದಿ….

Advertisement

ಬದಲಾವಣೆ ಎಂದರೇನು ? ಎನ್ನುವುದೇ ಈಗ ಮೂಲಭೂತವಾದ ಪ್ರಶ್ನೆ. ಎಲ್ಲಿಂದ ಬದಲಾವಣೆ, ಯಾಕಾಗಿ ಬದಲಾವಣೆ, ಯಾರಿಂದ ಬದಲಾವಣೆ..? ಅಷ್ಟೇ ಅಲ್ಲ ಬದಲಾವಣೆ ಎಂತಹದ್ದು ಮತ್ತು ಯಾಕಾಗಿ ? ಇಷ್ಟೊಂದು ಪ್ರಶ್ನೆಯನ್ನು ಮುಂದಿಟ್ಟುಕೊಂಡು ಚರ್ಚೆಗೆ ಇಳಿಯಬೇಕು. ಈಗಿನ ದಿನದಲ್ಲಿ ಈ ಬದಲಾವಣೆಯನ್ನು ಅಪ್ಡೇಟ್‌ ಎಂದು ಕರೆಯಬಹುದೇನೋ. ಅಂದರೆ ಈ ಕಾಲದ ಕೆಲವು ಅನಿವಾರ್ಯತೆ ಹಾಗೂ ಅಗತ್ಯಗಳ ಬಗ್ಗೆ ಜಾಗೃತಿಯಾಗಬೇಕು. ಹಿಂದೆಲ್ಲಾ ಕಾಯಿನ್‌ಬೂತ್‌ ಇರುವುದು ಈಗ ಪ್ರತಿಯೊಬ್ಬರ ಬಳಿಯಲ್ಲೂ ಮೊಬೈಲ್‌ ಬರುವ ಹಾಗಾಗಿದೆ. ಈ ಮೊಬೈಲ್‌ ಕೈಗೆ ಬರುವುದರ ಜೊತೆಗೇ ಹೆಚ್ಚುವರಿಯಾಗಿ “ಬ್ಯುಸಿ” ಸೇರಿಕೊಂಡಿದೆ. ಹಾಗೆಂದು ಈ ಬದಲಾವಣೆಯನ್ನು ಸ್ವೀಕರಿಸಬೇಕು ಮತ್ತು ಅನಿವಾರ್ಯವಾಗಿ ಬಳಕೆ ಮಾಡಬೇಕು.  ಈಗಲೂ ಕಾಯಿನ್‌ ಬೂತ್‌ ಹುಡುಕಿದರೆ ಕೆಲಸವೇ ಆಗದು. ಹೀಗೇ ಈ ಬದಲಾವಣೆಗಳಿಗೆ ಅಪ್ಡೇಟ್‌ ಎನ್ನಬಹುದು.

ಇಂತಹ ಬದಲಾವಣೆಗಳಿಗಿಂತಲೂ ನಮ್ಮೊಳಗಡೆ ಬದಲಾಗಬೇಕಾದ ಹಲವಾರು ಸಂಗತಿಗಳು ಇವೆ. ವಿದೇಶದ ನೀತಿ-ವ್ಯವಸ್ಥೆಗಳನ್ನು ಮಾತನಾಡುವ ಮಂದಿ ಈ ದೇಶದಲ್ಲಿ ಕುಳಿತು ಅವ್ಯವಸ್ಥೆಯನ್ನು ಮಾಡುತ್ತಾರೆ. ಭ್ರಷ್ಟಾಚಾರದ ವಿರುದ್ಧ ಮಾತನಾಡುವ ಜನ ತಾವೇ ಹಣ ಕೊಟ್ಟು ತಮ್ಮ ಕೆಲಸ ಬೇಗನೆ ಮಾಡಿಸಿಕೊಳ್ಳುತ್ತಾರೆ. ತಾವೂ ಒಂದಷ್ಟು ಭ್ರಷ್ಟಾಚಾರ ಮಾಡುತ್ತಾರೆ. ಗ್ರಾಮೀಣ ಅಭಿವೃದ್ಧಿ ಎನ್ನುತ್ತಾ ತನ್ನ ಮನೆಗೆ ವ್ಯವಸ್ಥೆಯನ್ನು ಮಾಡಿಕೊಳ್ಳುತ್ತಾರೆ. ಸ್ವಚ್ಛತೆಯ ಬಗ್ಗೆ ಭಾರೀ ಮಾತನಾಡುತ್ತಾ ತಾವೇ ಎಲ್ಲೆಂದರಲ್ಲಿ ಕಸ ಎಸೆದು ತ್ಯಾಜ್ಯದ ಬಗ್ಗೆ ಮಾತನಾಡುತ್ತಾರೆ… ಹೀಗೇ ಹಲವಾರು ಸಂಗತಿಗಳ ಬದಲಾವಣೆಗೆ ತಾವೇ ಕಾರಣವಾಗಬೇಕು, ತನ್ನಿಂದಲೇ ಬದಲಾವಣೆ ಆರಂಭವಾಗಬೇಕು ಎನ್ನುವ ಜ್ಞಾನ ಬುದ್ದಿವಂತ ಜನರಿಗೆ ಇಲ್ಲ..!.

ಒಂದು ದೇವಸ್ಥಾನದಲ್ಲಿ ಉತ್ಸವ ನಡೆಯುತ್ತದೆ. ಸಾವಿರಾರು ಜನರು ಬರುತ್ತಾರೆ, ದೇವರ ಉತ್ಸವದ ವೇಳೆ ದೇವರು ರಥಬೀದಿಯಲ್ಲಿ ಸಾಗುತ್ತಾರೆ. ಬಂದಿರುವ ಅಷ್ಟೂ ಜನರ ಶ್ರದ್ಧೆಯ, ನಂಬಿಕೆಯ, ಪ್ರೀತಿಯ ದೇವರು. ಅವನ ಅಂಗಳದಲ್ಲಿ ಕಸ ಎಸೆಯಬಾರದು, ತ್ಯಾಜ್ಯ ಸುರಿಯಬಾರದು ಎನ್ನುವ ಸಾಮಾನ್ಯ ಜ್ಞಾನವೂ ಇಲ್ಲ. ಇಂತಹ ಜನರೇ ಅನಾಗರಿಕರು.

ಅತ್ಯಂತ ದೊಡ್ಡವರು ಅಂದರೆ, ಹಣದಲ್ಲೂ-ಜ್ಞಾನದಲ್ಲೂ ಎರಡರಲ್ಲೂ ಶ್ರೀಮಂತ ಜನರು ಇರುವ ಕಾರ್ಯಕ್ರಮದಲ್ಲೇ ಗಮನಿಸಿ. ಎಲ್ಲೆಂದರಲ್ಲಿ ಕಸ, ಊಟವನ್ನು ತ್ಯಾಜ್ಯದಂತೆ ಎಸೆದಿರುತ್ತಾರೆ. ಈ ಬಗ್ಗೆ ಸಣ್ಣ ಧ್ವನಿ ಎತ್ತಿದರೆ ಕಾನೂನುವರೆಗೂ ಮಾತನಾಡುವಷ್ಟು ಶಕ್ತಿ-ಸಾಮರ್ಥ್ಯ ಅವರಲ್ಲಿದೆ. ಇದಕ್ಕಾಗಿ ಹೆಚ್ಚಿನ ಜನರು ಮೌನವಾಗುತ್ತಾರೆ. ಅದೇ ಜನರು ಆ ಕಡೆಯಿಂದ ಅನಾಗರಿಕರು ಎಂದು ರಸ್ತೆ ಬದಿಯ ಬಡವರನ್ನೋ, ಸ್ಲಂ ಪ್ರದೇಶದ ಜನರನ್ನು ಕರೆಯುತ್ತಾರೆ..!. ತಾನೇ ಈ ಊರಿನ, ಈ ನಾಡಿನ  ಸ್ವಚ್ಛತೆಯ, ಸಾಮಾನ್ಯ ಮಾನವೀಯತೆಯ, ಸಾಮಾನ್ಯ ಸುಧಾರಣೆಯ ಹರಿಕಾರ ಎಂದು ಅನಿಸುವುದೇ ಇಲ್ಲ..!.

ಇಲ್ಲಿ ಕೊರತೆಗಳನ್ನು ಹುಡುಕುವುದಾದರೆ ಸಾಕಷ್ಟು ಇದೆ. ಅದೇ ಕೊರತೆಗಳಲ್ಲಿ ಬದಲಾವಣೆಯನ್ನು ಮಾಡಬಹುದಾದರೆ, ಕಾಣಬಹುದಾದರೆ ? ಈಚೆಗೆ ಒಂದು ನಗರದಲ್ಲಿರುವ ಗೋಶಾಲೆಯಲ್ಲಿನ ಗೋವುಗಳ ಬಗ್ಗೆ ತೀರಾ ಅಪಹಾಸ್ಯದಿಂದ, ಆ ಸಾಕುವವರ ಕಾಳಜಿಯ ಬಗ್ಗೆ ವ್ಯಂಗ್ಯ ಮಾಡುವುದು ಕೇಳುತ್ತಿತ್ತು. ಅದಕ್ಕೊಂದಿಷ್ಟು ಜನರು ಸ್ಟ್ಯಾಂಡರ್ಡ್‌ ಜನರು ಚಪ್ಪಳೆ ತಟ್ಟುತ್ತಿದ್ದರು. ಒಬ್ಬ ಸಾಮಾನ್ಯ ವ್ಯಕ್ತಿ ಬಂದವನೇ ಗೋಶಾಲೆಯನ್ನು ಸುತ್ತಾಡಿ,”ಇಷ್ಟಾದರೂ ಮಾಡ್ತಾರಲ್ಲ ಪಾಪ” ಎನ್ನುತ್ತಾ ಮೇವಿನ ಬಗ್ಗೆ ದೇಣಿಗೆ ನೀಡಿದೆ. ಯಾರು ಅಪಹಾಸ್ಯ ಮಾಡುತ್ತಿದ್ದರೂ ಅವರಿಂದ ಯಾವ ಕೊಡುಗೆಯೂ ಆಗಲಿಲ್ಲ.  ಹೀಗಾದರೆ ಬದಲಾವಣೆ ಆರಂಭವಾಗಬೇಕಾದ್ದು ವ್ಯಕ್ತಿಯಿಂದ. ಒಬ್ಬ ವ್ಯಕ್ತಿಯಿಂದ ಇನ್ನೊಬ್ಬ ವ್ಯಕ್ತಿಗೆ ಈ ಬದಲಾವಣೆ ವರ್ಗಾವಣೆಯಾಗಬಹುದು ಅದು ವ್ಯಾಪಕವಾಗಬೇಕು. ಹಾಗಾದರೆ ಅದು ಶಾಶ್ವತವಾದ ಉತ್ತಮ ಬದಲಾವಣೆ.

ಯಾವುದೇ, ಯಾರೇ ಆಡಳಿತ ಮಾಡಲಿ. ಈ ದೇಶದಲ್ಲಿ ಬದಲಾವಣೆ ಕಾಣಲು ಬರೀ ಪಾಲಿಸಿಯೊಂದೇ ಸಾಕಾಗುವುದಿಲ್ಲ. ಅದೇ ಮಾದರಿಯ ಜನರೂ, ಜನರ ಮನಸ್ಥಿತಿಯೂ ಮುಖ್ಯ. ಯಾವುದೇ ಸಕಾರಾತ್ಮಕ ಬದಲಾವಣೆ ವ್ಯಕ್ತಿಯೊಬ್ಬನೇ ಸಾಲದು,  ಯಾವುದೇ ಬದಲಾವಣೆಗೆ ಮೊದಲು ಬದಲಾಗಬೇಕಾದ್ದು ವ್ಯಕ್ತಿಯ ಮನಸ್ಸು, ನಂತರ ಆ ವಠಾರವಾಗಿ ದೇಶದವರೆಗೆ ಬದಲಾವಣೆ ಆರಂಭವಾಗವೇಕು. ಇದಕ್ಕಾಗಿಯೇ ಜನರ ಮನಸ್ಸಿನೊಳಗೆ ಬದಲಾವಣೆ ಆರಂಭವಾದರೆ ಈ ದೇಶದಲ್ಲೂ ಹಲವು ಬದಲಾವಣೆ, ಸರಿಯಾದ ಗುರಿ ತಲುಪಲೂ ಸಾಧ್ಯವಿದೆ. ಹೀಗಾಗಿ ದೇಶ ಬದಲಾವಣೆಯ ಮೊದಲ ಆರಂಭ ಮನಸ್ಸಿನಲ್ಲಿ ಬದಲಾವಣೆ.

ಈ ಸರ್ಕಾರಗಳು ಅನೇಕ ಕಾನೂನುಗಳನ್ನು ಮಾಡುತ್ತವೆ. ಅದರಲ್ಲಿ ಹೆಚ್ಚಿನವು ಜನರಿಗೆ ಅನುಕೂಲವಾಗಲಿ ಎಂದು. ಆದರೆ ಈ ಕಾನೂನುಗಳ ಬಳಕೆ ಯಾರಿಗೆ ? ಎಲ್ಲಿ ?. ಯಾರೋ ಒಬ್ಬ ಹೆಲ್ಮೆಟ್‌ ಧರಿಸದೇ, ಸೀಟ್‌ ಬೆಲ್ಟ್‌ ಧರಿಸದೇ , ವಾಹನದ ಹೊಗೆ ತಪಾಸಣೆ ಮಾಡದೇ ವಾಹನ ಚಲಾಯಿಸುತ್ತಿದ್ದಾನೆ ಎಂದುಕೊಳ್ಳಿ. ಪೊಲೀಸರ ಡ್ಯೂಟಿ ಕಾನೂನು ಅನುಷ್ಟಾನ. ಹೀಗಾಗಿ ಕಾನೂನು ಬಾಹಿರವಾದ್ದನ್ನು ಪತ್ತೆ ಹಚ್ಚಿ ಕ್ರಮಕೈಗೊಳ್ಳುವ ಕೆಲಸ. ಹೀಗೇ ಕಾನೂನು ಪಾಲನೆಗೆ ಪೊಲೀಸರು ಮುಂದಾದರು ಅಂದುಕೊಳ್ಳಿ, ತಪ್ಪು ಮಾಡಿರುವ ವ್ಯಕ್ತಿ ಪ್ರಭಾವಿಯಾದರೆ ಆತನ ಪರವಾಗಿ ಆಡಳಿತ ಮಾಡುವ ಅಂದರೆ ಕಾನೂನು ರಚನೆ ಮಾಡಿದವರಿಂದಲೇ ಕರೆ ಬರುತ್ತದೆ,” ಅವರನ್ನೊಂದು ಬಿಟ್ಟು ಬಿಡಿ”.  ಇನ್ನೂ ಸ್ವಲ್ಪ ಹಣವಂತನಾದರೆ, “ಸರ್‌ ಸರ್‌” ಅಂತ ಹೇಳುತ್ತಾ ಪಾಕೆಟ್‌ಗೆ ಕೈ ಹೋಗುತ್ತದೆ. ಎರಡು ದೊಡ್ಡ ನೋಟು ಹೊರಬರುತ್ತದೆ. ಅಲ್ಲಿಗೆ ಮುಗಿಯಿತು.   ಇನ್ನೂ ಒಂಚೂರು ಗರಂ ವ್ಯಕ್ತಿಯಾದರೆ ದಬಾಯಿಸುತ್ತಾನೆ. ಇನ್ನೊಬ್ಬನ ತಪ್ಪನ್ನು ಹೇಳುತ್ತಾನೆ, ಅವನಿಗೆ ಏಕೆ ಕ್ರಮ ಕೈಗೊಂಡಿಲ್ಲ ಎಂದು ವಾದಿಸುತ್ತಾನೆ. ಹೊಸಹೊಸ ತಾಂತ್ರಿಕ ವಿಧಾನಗಳ ಬಗ್ಗೆ ಮಾತನಾಡುತ್ತಾನೆ. ಟ್ವೀಟ್‌, ಪೇಸ್‌ಬುಕ್‌ , ವಾಟ್ಸಪ್‌ , ವೈರಲ್‌ ಇತ್ಯಾದಿ ಹೇಳುತ್ತಾರೆ. ಅಲ್ಲಿಗೆ ಇವರ ಸಹವಾಸ ಬೇಡ ಎಂದು ತಪ್ಪುಗಳೂ ಮರೆಯಾಗುತ್ತವೆ.

ಸಾಮಾನ್ಯ ವ್ಯಕ್ತಿಯೊಬ್ಬ, ಕಾನೂನು-ದೇಶ ಅಂತೆಲ್ಲಾ ಸಿದ್ದಾಂತಗಳನ್ನು ಮಾತನಾಡುವವನು ಸುಮ್ಮನೆ ದಂಡ ಕಟ್ಟಿ, ಹೌದು ಕಾನೂನು ಎನ್ನುತ್ತಾ ಮುಂದೆ ಸಾಗುತ್ತಾನೆ. ಹೀಗಿರುವ ಪರಿಸ್ಥಿತಿ ಎಲ್ಲೆಡೆಯೂ ಇದೆ. ಕಾನೂನು ಪಾಲನೆ, ದೇಶ-ಬದಲಾವಣೆ, ಸ್ವಚ್ಛತೆ ಇತ್ಯಾದಿಗಳ ಬಗ್ಗೆ ಅರಿವು ಇರುವ ನಿಜವಾದ ಕಾಳಜಿ ಇರುವ ಮಂದಿಯ ಸಂಖ್ಯೆ ಕಡಿಮೆ ಇದೆ. ಇದಕ್ಕಾಗಿಯೇ ಇಲ್ಲಿ ಬದಲಾವಣೆಯೇ ನಿಧಾನ. ದಂಡವೂ ಉಪಯೋಗವಿಲ್ಲ. ಅದಕ್ಕಾಗಿ ಮನಸ್ಸಿನಲ್ಲಿ‌ ಪಾಸಿಟವ್ ಬದಲಾವಣೆಯ ತಿರುವು ಬಾರದೇ ಇದ್ದರೆ ಈ ದೇಶ ಇನ್ನೂ ಹೀಗೇ…

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

ಇದನ್ನೂ ಓದಿ

ಯುದ್ಧ ಆದರೆ ಕೃಷಿ ಉತ್ಪನ್ನಗಳ ಧಾರಣೆ ಏನಾಗಬಹುದು?
May 6, 2025
7:44 AM
by: ಡಾ|ವಿಘ್ನೇಶ್ವರ ಭಟ್‌ ವರ್ಮುಡಿ
ಬದುಕು ಪುರಾಣ | ಹೊಸೆದ ಬಿರುದುಗಳು ನಾಚುತ್ತಿವೆ!
May 4, 2025
7:24 AM
by: ನಾ.ಕಾರಂತ ಪೆರಾಜೆ
ಹೊಸರುಚಿ | ಹಲಸಿನ ಕಾಯಿ ಪಕೋಡ
May 3, 2025
8:00 AM
by: ದಿವ್ಯ ಮಹೇಶ್
ಅಪ್ಪ ಅಮ್ಮ ಇಲ್ಲದ ಪರೀಕ್ಷಾ ನಿಯಮಗಳು
May 1, 2025
10:52 AM
by: ಡಾ.ಚಂದ್ರಶೇಖರ ದಾಮ್ಲೆ

You cannot copy content of this page - Copyright -The Rural Mirror

Join Our Group