ಅಡಿಕೆ ಎಲೆಚುಕ್ಕಿ ರೋಗ ವ್ಯಾಪಕವಾಗಿದೆ. ಮಲೆನಾಡು ತಪ್ಪಲು ಭಾಗಗಳಲ್ಲಿ ಅಡಿಕೆ ಎಲೆಚುಕ್ಕಿ ರೋಗ ತೀವ್ರತೆ ಹೆಚ್ಚಿದೆ. ಉಳಿದ ಕಡೆಗಳಲ್ಲಿ ಸದ್ಯ ಅಷ್ಟೊಂದು ಗಂಭೀರತೆ ಇಲ್ಲ ಎನ್ನಬಹುದು. ಈಗ ಇಷ್ಟೊಂದು ಪ್ರಮಾಣದಲ್ಲಿ ಮಲೆನಾಡು ಭಾಗದಲ್ಲಿ ಎಲೆಚುಕ್ಕಿ ಹರಡುವಾಗ ವಿಜ್ಞಾನಿಗಳು ಏನು ಮಾಡುತ್ತಿದ್ದಾರೆ..? ವಿಜ್ಞಾನ ಏಕೆ ಕೆಲಸ ಮಾಡುವುದಿಲ್ಲ..? ಈ ಬಗ್ಗೆ ಅನೇಕರು ಪ್ರಶ್ನೆ ಮಾಡುತ್ತಾರೆ. ಇದರ ಜೊತೆಗೇ ಅನೇಕ ಔಷಧಿಗಳು ಮಾರುಕಟ್ಟೆಗೆ ಬರುತ್ತಿವೆ. ಅಡಿಕೆ ಬೆಳೆಗಾರರು ಸಿಕ್ಕ ಸಿಕ್ಕ ಔಷಧಿ ಸಿಂಪಡಣೆ ಮಾಡಲೇಬೇಕಾದ ಅನಿವಾರ್ಯತೆ ಬಂದೊದಗಿದೆ. ನಿಜವಾಗೂ ನಮ್ಮ ವಿಜ್ಞಾನಿಗಳು ಕೆಲಸ ಮಾಡುತ್ತಿಲ್ಲವೇ..?
ಅಡಿಕೆ ಎಲೆಚುಕ್ಕಿ ರೋಗಕ್ಕೆ ಕಾರಣ ಏನು? ಈ ಬಗ್ಗೆ ವಿಜ್ಞಾನಿಗಳು ಈ ಹಿಂದೆಯೇ ಅಧ್ಯಯನ ಮಾಡಿದ್ದಾರೆ. ಮುಖ್ಯವಾಗಿ ಶಿಲೀಂದ್ರವು ಈ ರೋಗಕ್ಕೆ ಕಾರಣ . ಎಲೆಚುಕ್ಕಿಗೆ ಕಾರಣವಾದ ಶಿಲೀಂದ್ರ ಕೊಲ್ಲೆಟೋಟ್ರಿಕಂ. ಈ ಬಗ್ಗೆ ಹಿಂದೆಯೇ ಅಧ್ಯಯನವಾಗಿದೆ. ಇದಕ್ಕೆ ಬೇಕಾದ ಶಿಲೀಂದ್ರ ನಾಶಕಗಳ ಬಗ್ಗೆಯೂ ವಿಜ್ಞಾನಿಗಳು ಹೇಳಿದ್ದಾರೆ. ಸಿಂಪಡಣೆಯ ಶಿಫಾರಸುಗಳನ್ನೂ ತಿಳಿಸಿದ್ದಾರೆ. ಆದರೆ, ಈಚೆಗೆ ಮೂರು ವರ್ಷಗಳಿಂದ ಒಮ್ಮೆಲೇ ಈ ಎಲೆಚುಕ್ಕಿ ರೋಗ ವ್ಯಾಪಕವಾಗಿ ಹರಡುತ್ತಿದೆ. ಎಕರೆವಾರು ಗಮನಿಸಿದರೆ ವರ್ಷದಿಂದ ವರ್ಷಕ್ಕೆ ದ್ವಿಗುಣವಾಗುತ್ತಿದೆ. ಕೆಲವು ಕಡೆ ಗಂಭೀರವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಇದಕ್ಕೆ ಇದರ ನಿಯಂತ್ರಣಕ್ಕೆ ಸದ್ಯ ಶಿಲೀಂದ್ರನಾಶಕವೇ ಪರಿಹಾರ. ಶೀಘ್ರದಲ್ಲಿ ವಿಸ್ತರಣೆಗೆ ಏನು ಕಾರಣ ಎಂಬ ಅಧ್ಯಯನಕ್ಕೆ ಕನಿಷ್ಟ ಮೂರು ವರ್ಷಗಳನ್ನು ಅಧಿಕೃತ ಸಂಸ್ಥೆಗಳು ತೆಗೆದುಕೊಳ್ಳುತ್ತಾರೆ. ಈಗ ಇರುವ ಶಿಲೀಂದ್ರದ ಜೊತೆಗೆ ಬೇರೆಯೇ ಇನ್ನೊಂದು ಶಿಲೀಂದ್ರವೂ ಸೇರಿಕೊಂಡಿದೆಯೇ ಎನ್ನುವುದು ಕೂಡಾ ಸಂದೇಹ ಇದೆ. ಅಂತಹ ಅಧ್ಯಯನಗಳು ಮಾತ್ರವೇ ಶಾಶ್ವತ ಪರಿಹಾರವೂ ಆಗಬಲ್ಲದು. ಆದರೆ ಈಗ ಶಿಲೀಂದ್ರನಾಶಕಗಳು ಏಕೆ ಕೆಲಸ ಮಾಡುತ್ತಿಲ್ಲ? ಈ ಬಗ್ಗೆ ಯಾವುದೇ ಚರ್ಚೆಗಳು ನಡೆಯುತ್ತಿಲ್ಲ. ಇಷ್ಟೇ ಅಲ್ಲ, ಈಗ ಅಡಿಕೆ ಬರುವ ಎಲ್ಲಾ ರೋಗಗಳಲ್ಲೂ ಎಲೆಚುಕ್ಕಿ ರೋಗ ಲಿಂಕ್ ಮಾಡಲಾಗುತ್ತಿದೆ. ಈಗ ಮೈಟ್ ಹಾವಳಿ ಇದ್ದರೂ ಅದು ಎಲೆಚುಕ್ಕಿ ರೋಗ ಎಂದೇ ಭಾವಿಸಲಾಗುತ್ತಿದೆ. ಕೀಟನಾಶಕ ಅಗತ್ಯ ಇರುವ ಕಡೆ ಕ್ರಿಮಿನಾಶಕ ಸಿಂಪಡಣೆ ನಡೆಯುತ್ತದೆ. ಯಾವುದೇ ಶಿಫಾರಸುಗಳನ್ನು ಪಡೆಯದೆ, ಔಷಧಿ ಸಿಂಪಡಣೆ ಮಾಡಿಯೂ ಸಮಸ್ಯೆಯ ಮೂಲ ಬಗೆಹರಿಯುವುದಿಲ್ಲ..!. ಒಟ್ಟಾಗಿ ಎಲೆಚುಕ್ಕಿ ರೋಗ ಎಂದು ಸಿಕ್ಕ ಸಿಕ್ಕ ಔಷಧಿ ಸಿಂಪಡಣೆಯ ಆತಂಕ, ಭಯ ಮಲೆನಾಡು ಅಡಿಕೆ ಬೆಳೆಗಾರರಿಗೆ ಇದೆ. ಅಡಿಕೆಯೇ ಇಲ್ಲಿನ ಬದುಕಾದ್ದರಿಂದ ಕೃಷಿಕರಿಗೂ ಸಂಕಷ್ಟ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ
ಭಾರತದಲ್ಲಿ ಕೃಷಿ ಉತ್ಪಾದನೆ ಹೆಚ್ಚಿಸಲು ಕೀಟನಾಶಕ ಹಾಗೂ ಕ್ರಿಮಿನಾಶಕಗಳ ಬಳಕೆ ಸಾಮಾನ್ಯವಾಗಿದೆ. ಆದರೆ ಇವುಗಳನ್ನು ಬೆಳೆಗೆ ಸಿಂಪಡಿಸಿದ ಬಳಿಕ ಅವು ಎಷ್ಟು ಕಾಲ ಬೆಳೆಯಲ್ಲಿ ಉಳಿಯುತ್ತವೆ ಹಾಗೂ ಗ್ರಾಹಕರ ಆರೋಗ್ಯವನ್ನು ರಕ್ಷಿಸಲು ಸರ್ಕಾರ ಯಾವ ನಿಯಮಗಳನ್ನು ಜಾರಿಗೆ ತಂದಿದೆ ಎಂಬುದು ಅತ್ಯಂತ ಮಹತ್ವದ ವಿಷಯವಾಗಿದೆ. ಹೀಗಾಗಿ ಯಾವುದೇ ಕೀಟನಾಶಕ ಅಥವಾ ಕ್ರಿಮಿನಾಶಕಗಳು ಕೆಲಸ ಮಾಡುವ ಅವಧಿಯೂ ಕಡಿಮೆ ಇರುತ್ತದೆ. ಸಾಮಾನ್ಯವಾಗಿ 20-30 ದಿನಗಳು ಮಾತ್ರವೇ ಇರುತ್ತವೆ. ಅಡಿಕೆ ಬೆಳೆಗೆ ಎಂದು ಪ್ರತ್ಯೇಕವಾಗಿ ಯಾವುದೇ ಔಷಧಿಯನ್ನು ಸದ್ಯ ತಯಾರು ಮಾಡಲಾಗಿಲ್ಲ.
ಕೀಟನಾಶಕ ಅಥವಾ ಕ್ರಿಮಿನಾಶಕಗಳು ಬೆಳೆಯಲ್ಲಿ ಉಳಿಯುವ ಅವಧಿಯನ್ನು Pre-Harvest Interval (PHI) ಎಂದು ಕರೆಯಲಾಗುತ್ತದೆ. ಅಂದರೆ, ಸಿಂಪಡಣೆ ಮಾಡಿದ ದಿನದಿಂದ ಬೆಳೆ ಕಟಾವು ಮಾಡುವವರೆಗಿನ ಕನಿಷ್ಠ ಸುರಕ್ಷಿತ ಅವಧಿ. ಈ ಅವಧಿಯು ಕೆಲವು ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ. ಬಳಸಿದ ಕೀಟನಾಶಕ, ಬೆಳೆಯ ಪ್ರಭೇದ (ತರಕಾರಿ, ಹಣ್ಣು, ಧಾನ್ಯ), ಹವಾಮಾನ (ಬಿಸಿಲು, ಮಳೆ, ತಾಪಮಾನ),ಸಿಂಪಡಣೆಯ ಪ್ರಮಾಣ ಮತ್ತು ಎಷ್ಟು ಬಾರಿ ?. ಸಾಮಾನ್ಯವಾಗಿ ತರಕಾರಿ ಬೆಳೆಗಳಲ್ಲಿ 3 ರಿಂದ 15 ದಿನ, ಹಣ್ಣು ಬೆಳೆಗಳಲ್ಲಿ 7 ರಿಂದ 21 ದಿನ, ಧಾನ್ಯ ಬೆಳೆಗಳಲ್ಲಿ 20 ರಿಂದ 45 ದಿನ ಕೆಲವು ರಾಸಾಯನಿಕ ಕೀಟನಾಶಕ, ಕ್ರಿಮಿನಾಶಕ ಕಡಿಮೆ ಅವಧಿಯಲ್ಲಿ ಕರಗಿಹೋಗುತ್ತವೆ, ಆದರೆ ಕೆಲವು ದೀರ್ಘಕಾಲ ಅವಶೇಷ ರೂಪದಲ್ಲಿ ಉಳಿಯುವ ಸಾಧ್ಯತೆ ಇರುತ್ತದೆ.
ಈ ರಾಸಾಯನಿಕಗಳು ಕೆಲಸದ ಅವಧಿಯನ್ನು ಕಡಿಮೆ ಮಾಡಲು ಕಾರಣಗಳು ಇರುತ್ತವೆ. ರಾಸಾಯನಿಕ ಸಿಂಪಡಣೆ ಮಾಡಿದ ಬಳಿಕ ನಿಯಮಿತ ಅವಧಿಗೆ ಮುಂಚಿತವಾಗಿ ಕಟಾವು ಮಾಡಿದರೆ, ಆಹಾರದಲ್ಲಿ ವಿಷಕಾರಿ ಅವಶೇಷಗಳು ಉಳಿಯಬಹುದು, ಮಾನವ ಆರೋಗ್ಯಕ್ಕೆ ಅಪಾಯ (ಕ್ಯಾನ್ಸರ್, ಹಾರ್ಮೋನ್ ಸಮಸ್ಯೆ, ನರ ಸಂಬಂಧಿ ರೋಗಗಳು), ರಫ್ತು ಬೆಳೆಗಳ ತಿರಸ್ಕಾರ, ಪರಿಸರ ಮಾಲಿನ್ಯಕ್ಕೆ ಕಾರಣವಾಗಬಹುದು ಎಂದು ಯಾವುದೇ ಕೀಟನಾಶಕ, ಕ್ರಿಮಿನಾಶಕಗಳ ಅವಧಿ ಕಡಿಮೆ ಇರುತ್ತದೆ. ಇದಕ್ಕಾಗಿ ಅಡಿಕೆಗೂ ಎಲೆಚುಕ್ಕಿಗೆ 20-25 ದಿನಗಳ ಒಳಗಾಗಿ ಇನ್ನೊಂದು ಸಿಂಪಡಣೆ ಶಿಫಾರಸು ಮಾಡಲಾಗುತ್ತದೆ. …… ಮುಂದೆ ಓದಿ……
ಭಾರತದಲ್ಲಿ ಕೀಟನಾಶಕ, ಕ್ರಿಮಿನಾಶಕ ಬಳಕೆಯನ್ನು ನಿಯಂತ್ರಿಸಲು ಹಲವು ಕಾನೂನು ಮತ್ತು ನಿಯಂತ್ರಣ ಸಂಸ್ಥೆಗಳಿವೆ. ಕೀಟನಾಶಕ ಕಾಯ್ದೆ – 1968 ಈ ಕಾಯ್ದೆಯಡಿ ನೋಂದಾಯಿತ ಕೀಟನಾಶಕಗಳನ್ನು ಮಾತ್ರ ಬಳಕೆ ಮಾಡಲು ಅನುಮತಿ, ಪ್ರತಿಯೊಂದು ಕೀಟನಾಶಕಕ್ಕೂ ನಿರ್ದಿಷ್ಟ PHI ನಿಗದಿ, ಲೇಬಲ್ ಮೇಲೆ ಬಳಕೆಯ ವಿಧಾನ ಮತ್ತು ಸುರಕ್ಷತಾ ಸೂಚನೆ ಕಡ್ಡಾಯ ಇರಬೇಕು. ಇದಕ್ಕಾಗಿ Central Insecticides Board & Registration Committee (CIBRC) ಹಾಗೂ FSSAI (Food Safety and Standards Authority of India) ಕೂಡಾ ಕೆಲಸ ಮಾಡುತ್ತದೆ.ಇವುಗಳೆಲ್ಲಾ ಯಾವ ಕೀಟನಾಶಕ ಯಾವ ಬೆಳೆಗೆ ಬಳಸಬೇಕು ಎಂಬುದನ್ನು ನಿರ್ಧರಿಸುತ್ತದೆ, PHI ಮತ್ತು ಪ್ರಮಾಣವನ್ನು ಅನುಮೋದಿಸುತ್ತದೆ,ಅಪಾಯಕಾರಿ ಕೀಟನಾಶಕಗಳ ಮೇಲೆ ನಿರ್ಬಂಧ ಅಥವಾ ನಿಷೇಧ, ಆಹಾರದಲ್ಲಿನ Maximum Residue Limit (MRL) ನಿಗದಿಪಡಿಸುತ್ತದೆ, ಮಾರುಕಟ್ಟೆ, ರಫ್ತು ಮತ್ತು ಆಹಾರ ಸಂಸ್ಕರಣಾ ಘಟಕಗಳಲ್ಲಿ ಪರೀಕ್ಷೆ, ಮಿತಿಗಿಂತ ಹೆಚ್ಚು ಅವಶೇಷ ಕಂಡುಬಂದರೆ ಕ್ರಮವನ್ನೂ ಕೈಗೊಳ್ಳುತ್ತದೆ. ಇದಕ್ಕಾಗಿ ಈಗ ಸರ್ಕಾರಗಳು ಜೈವಿಕ ಕೀಟನಾಶಕ, ನೀಮ್ ಆಧಾರಿತ ಉತ್ಪನ್ನಗಳ ಬಳಕೆಗೆ ಪ್ರೋತ್ಸಾಹ ನೀಡುತ್ತಾರೆ. ಹೀಗಾಗಿ ರೈತರು ಸಿಕ್ಕಸಿಕ್ಕ ಔಷಧಿಗಳನ್ನು ವಿಜ್ಞಾನಿಗಳು ಶಿಫಾರಸು ಮಾಡುವುದಿಲ್ಲ. ರೈತರು ಕೂಡಾ ಇಂತಹ ಶಿಫಾರಸುಗಳನ್ನು ಪಾಲನೆ ಮಾಡದೇ ಇದ್ದರೆ ಬೆಳೆಗಳ ಭವಿಷ್ಯದ ಮೇಲೂ ಪರಿಣಾಮ ಬೀರುತ್ತದೆ.
ಈಗ ಅಡಿಕೆ ಎಲೆಚುಕ್ಕಿ ರೋಗ ನಿಯಂತ್ರಣಕ್ಕೂ ಸಂಕಷ್ಟವಾಗಿರುವುದು ಇದೇ ಕಾರಣದಿಂದ. ಅಡಿಕೆ ದೀರ್ಘಾವಧಿ ಬೆಳೆ. ಶಿಲೀಂದ್ರನಾಶಕ ಅಥವಾ ಕೀಟನಾಶಕಗಳು ಸಿಂಪಡಣೆಯ ನಂತರ ಕೆಲಸ ಮಾಡುವ ಅವಧಿ 20-25 ದಿನ. ಇದಕ್ಕಾಗಿ ಪ್ರತೀ 20-25 ದಿನಗಳಿಗೊಮ್ಮೆ ಸಿಂಪಡಣೆಗೆ ಶಿಫಾರಸು ನಡೆಯುತ್ತದೆ. ಈಗ ವಿಜ್ಞಾನಿಗಳ ಅಧ್ಯಯನ ಶಿಲೀಂದ್ರಗಳು ಬಹುಬೇಗನೆ ವಿಸ್ತರಣೆಗೆ ಕಾರಣವೇನು..? ಈ ಬಗ್ಗೆ ನಡೆಯುತ್ತಿದೆ. ಆದರೆ ಈ ಅಧ್ಯಯನಕ್ಕೆ ಕನಿಷ್ಟ 3 ವರ್ಷಗಳ ಕಾಯಬೇಕು. ಅಷ್ಟರವರೆಗೆ ಏನು ಕ್ರಮ? ಶಿಲೀಂದ್ರ ನಾಶಕಗಳನ್ನು ನಿಗದಿತ ದಿನದವರೆಗೆ ಸಿಂಪಡಣೆಯೇ ಪರಿಹಾರ. ಆದರೆ ಈಗ ವಿಜ್ಞಾನಿಗಳು ಕೆಲಸ ಮಾಡುತ್ತಿಲ್ಲ ಎನ್ನುತ್ತಾ, ವಿವಿಧ ಬಗೆಯ ಉತ್ಪನ್ನಗಳನ್ನು ಮಾರಾಟ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಇದರಿಂದ ಮತ್ತೆ ರೈತರು ಮೋಸ ಹೋಗುವುದೇ ಹೆಚ್ಚಾಗುತ್ತಿದೆ.
ಈಗ ಸದ್ಯದ ಮಟ್ಟಿಗೆ ಎಲೆಚುಕ್ಕಿ ರೋಗ ವೇಗವಾಗಿ ಹರಡಲು ಹವಾಮಾನ ಪರಿಸ್ಥಿತಿ ಹಾಗೂ ಮಣ್ಣಿನ ಗುಣಮಟ್ಟ ಕುಸಿತವಾಗಿರುವುದೇ ಪ್ರಮುಖ ಕಾರಣವಾಗಿ ಕಾಣುತ್ತಿದೆ. ದೀರ್ಘಾವಧಿಯಿಂದ ಏಕ ಬೆಳೆಯಾಗಿ ಅಡಿಕೆ ಇದೆ. ರಾಸಾಯನಿಕಗಳ ಬಳಕೆಯಿಂದ ಮಣ್ಣಿನ ಆರೋಗ್ಯ ಹದಗೆಟ್ಟಿದೆ, ಮರಗಳ, ಗಿಡಗಳ ಆರೋಗ್ಯ, ರೋಗನಿರೋಧಕ ಶಕ್ತಿ ಕುಂದಿದೆ, ರೋಗಗಳು ಬೇಗನೆ ವ್ಯಾಪಿಸುತ್ತಿದೆ. ನಿರಂತರ ಮಳೆ, ಹೆಚ್ಚು ತೇವಾಂಶ, ಕಡಿಮೆ ಬೆಳಕು, ಮಳೆಗಾಲದಲ್ಲಿ ಎಲೆಗಳು ಒಣಗದೇ ಇರುವುದು ಶಿಲೀಂಧ್ರ ವೇಗವಾಗಿ ವೃದ್ಧಿಸುತ್ತದೆ. ಶಿಲೀಂದ್ರಗಳು ಸಂಪೂರ್ಣವಾಗಿ ನಿವಾರಣೆಯಾಗದೇ ಇದ್ದರೆ ಔಷಧಿಗಳಿಗೆ ಪ್ರತಿರೋಧ ಶಕ್ತಿಯನ್ನು ಶಿಲೀಂದ್ರ ಹೊಂದುತ್ತದೆ. ಇದಕ್ಕಾಗಿ ಒಂದೇ ತರಹದ ಫಂಗಿಸೈಡ್‌ಗಳನ್ನು ಪುನಃಪುನಃ ಬಳಕೆ ಮಾಡಬಾರದು ಎಂಬ ಸಲಹೆ ನೀಡಲಾಗುತ್ತಿದೆ. ಸಿಂಪಡಣೆ ವೇಳೆ ಎಲೆಯ ಕೆಳಭಾಗಕ್ಕೆ ಔಷಧಿ ತಲುಪದಿರುವುದು, ಸರಿಯಾದ ಪ್ರಮಾಣ, ಸರಿಯಾದ ನೀರಿನ ಪ್ರಮಾಣ ಪಾಲಿಸದಿರುವುದು ಕೂಡಾ ರೋಗ ನಿಯಂತ್ರಣ ಬಾರದೇ ಇರಲು ಕಾರಣವಾಗುತ್ತದೆ. ಶಿಲೀಂದ್ರ ಸೋಂಕಿತ ಎಲೆಗಳನ್ನು ಸಂಪೂರ್ಣವಾಗಿ ಸುಡುವ ಮೂಲಕ ಶಿಲೀಂದ್ರದ ಜೀವನ ಚಕ್ರವನ್ನು ತುಂಡರಿಸಬೇಕಾಗಿದೆ ಕೂಡಾ.
ಇವುಗಳ ಜೊತೆಗೆ ಅತೀ ಅಗತ್ಯವಾಗಿ ಅಡಿಕೆ ಮರಗಳಿಗೆ ಈಗ ಸೂಕ್ತವಾದ ಪೋಷಕಾಂಶಗಳನ್ನು ನೀಡುವುದು ಕೂಡಾ ಅಗತ್ಯವಾಗಿದೆ. ಪೊಟಾಷಿಯಂ, ಮೆಗ್ನೀಷಿಯಂ, ಬೋರಾನ್ ಕೊರತೆಯಿಂದ ದುರ್ಬಲ ಗಿಡಗಳಿಗೆ ರೋಗ ಬೇಗ ತಗಲುತ್ತದೆ. ಇದರ ಜೊತೆಗೆ ಈಗ ಜೈವಿಕ ನಿಯಂತ್ರಣದ ಭಾಗವಾಗಿ ಟ್ರೈಕೋಡರ್ಮಾ, ಸುಡೊಮೊನಸ್ ಇತ್ಯಾದಿಗಳ ಬಳಕೆಯೂ ಶಿಲೀಂದ್ರಗಳನ್ನು ತಡೆಯುತ್ತವೆ, ಗಿಡದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ ಎಂದು ಹೇಳಲಾಗುತ್ತಿದೆ.
ಇಂತಹ ಪರಿಸ್ಥಿತಿಯಲ್ಲಿ ಸರ್ಕಾರಗಳು ಅಡಿಕೆ ಬೆಳೆಗಾರರಿಗೆ ಸದ್ಯ ಪರಿಹಾರದ ನೆಲೆಯಲ್ಲಿ ಮಿಶ್ರ ಬೆಳೆಗೆ ಬೆಂಬಲ, ಸಾಲಗಳ ಅವಧಿ ವಿಸ್ತರಣೆ ಮೊದಲಾದ ನೆರವು ನೀಡಬಹುದು. ಮುಂದೆ ಅತಿಶೀಘ್ರದಲ್ಲಿ ವಿಜ್ಞಾನದ ಮೂಲಕವೂ ಇದಕ್ಕೊಂದು ಪರಿಹಾರವನ್ನು ನೀಡುವಂತೆ ವಿಜ್ಞಾನಿಗಳ ಅಧ್ಯಯನದ ಫಾಲೋಅಪ್ ಹಾಗೂ ವೇಗವಾಗಿ ಫಲಿತಾಂಶ ಬರುವಂತೆ ಅಧ್ಯಯನಕ್ಕೆ ಬೇಕಾದ ನೆರವು ಹಾಗೂ ಪ್ರಯೋಗಾಲಯಗಳನ್ನೂ ಒದಗಿಸುವುದು ಸೂಕ್ತ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ
ಕೃಷಿ ಭೂಮಿಯ ಲಭ್ಯತೆ ಕಡಿಮೆಯಾಗಿ ಸಂಕಷ್ಟದಲ್ಲಿರುವ ರೈತರಿಗಾಗಿ ಸರ್ಕಾರವು ಅರಣ್ಯ ಭೂಮಿಯನ್ನು ಕೃಷಿ…
ಯಾವುದೇ ಕಾಯಿಲೆಗಳಿಲ್ಲದೆ ಆರೋಗ್ಯವಂತರಾಗಿರಲು ಎಲ್ಲರೂ ಇಷ್ಟಪಡುತ್ತಾರೆ. ಒಂದು ವೇಳೆ ಆರೋಗ್ಯ ಕೆಟ್ಟರೆ ಜೀವನವೇ…
ಹೊಸ ರೇಷನ್ ಕಾರ್ಡ್ ಅನುಮೋದನೆ ಪ್ರಾರಂಭವಾಗಿದ್ದು 2026 ಮಾರ್ಚ್ ವರೆಗೆ ಅವಕಾಶ ಕರ್ನಾಟಕ…
ಟ್ಯಾಕ್ಸಿ, ಆಟೋ ಟ್ಯಾಕ್ಟರ್, ಗೂಡ್ಸ್ ವಾಹನದ ಡ್ರೈವರ್ ಆಗಿದ್ದರೂ ಸ್ವಂತ ವಾಹನವಿಲ್ಲ ಎಂಬ…
ಮಧ್ಯಪ್ರದೇಶ ಸರ್ಕಾರದಿಂದ ಅನುದಾನಿತ ಸಂಶೋಧನಾ ಉಪಕ್ರಮವು, ಸಾಂಪ್ರದಾಯಿಕ ಹಸು ಆಧಾರಿತ ಸಿದ್ಧತೆಗಳನ್ನು ಬಳಸಿಕೊಂಡು…
ಉಪಗ್ರಹ ದತ್ತಾಂಶ ಆಧಾರಿತ CREA ವಿಶ್ಲೇಷಣೆಯ ಪ್ರಕಾರ, ಭಾರತದ 4,041 ನಗರಗಳಲ್ಲಿ 1,787…