Advertisement
ಅನುಕ್ರಮ

ಮಾಯಾಮೃಗ ಮಾಯಾಮೃಗ….

Share

ಕೆಲವರ ಪಾಲಿಗೆ ಅವರು ಅದೆಷ್ಟೇ ತಿಪ್ಪರಲಾಗ ಹಾಕಿದರೂ ಯಶಸ್ಸು ಮಾಯಾಜಿಂಕೆ ಎಂಬ “ಮಾಯಾ ಮೃಗ” ಸಿಕ್ಕಿದಂತೆನ್ನಿಸಿ ದೂರ ಓಡುತ್ತದೆ….

Advertisement
Advertisement

ನನ್ನ ಹಿರಿಯ ಮಿತ್ರರೊಬ್ಬರು ನನ್ನ ಬಂಧು-ಪರಿಚಿತ ಕುಟುಂಬದ ವ್ಯಕ್ತಿಯೊಬ್ಬರ ದಶಾವತಾರ ಮತ್ತು ಅವರ ಎಲ್ಲಾ ಅವತಾರದಲ್ಲೂ ಸೋಲು ಹಿಂದೆ ಹಿಂದೆ ಬಂದರೂ ಅವರ ಮತ್ತೆ ಮತ್ತೆ ಹೊಸ ಸಾಹಸದ ಕಡೆ ಮುಖ ಮಾಡುವುದನ್ನು ವಿಶೇಷವಾಗಿ ವಿಶ್ಲೇಷಣೆ ಮಾಡಿದ್ದರು.

“ಅವರು” ಬಹುಶಃ ಸಾಮಾನ್ಯರು ಕನಸೂ ಕಾಣಲಾರದಂತಹ ಸಾಹಸ ಮಾಡಿ ಸೋಲನ್ನ ಉಂಡಿದ್ದರು. ಇವರ ಬಗೆಯ ಚಿತ್ರ-ವಿಚಿತ್ರ ಸಾಹಸಗಳಿಗೆ ಇವರ ಹೆಂಡತಿ ಬೆಚ್ಚಿಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದರು. ಈಗ ಒಬ್ಬ ಮಗನನ್ನು ಹೊರತುಪಡಿಸಿ ಇವರಿಗೆ ಬೇರೆ ಯಾರೂ ಇಲ್ಲ. ಹಿಂದಿನ ಸಾಹಸದ ಅಪಘಾತದ ಸಾಲದ ನಷ್ಟ ಭರಿಸಲು ಈಗ ಹೊಸದೊಂದು ಸಾಹಸಕ್ಕೆ ಮುಂದಡಿಯಿಟ್ಟಿದ್ದಾರೆ.

ನನಗೆ ಅಚ್ಚರಿಯಾಗೋದು ಅವರ ಛಲ ಬಿಡದ ಸಾಹಸ. ಕೆಲವರು ಚಿಕ್ಕ ಪುಟ್ಟ ಸೋಲಿಗೆ “ಇದರ ಸಹವಾಸವೇ ಬೇಡ” ಎಂದು ಮೂಲೆಲಿ ತಣ್ಣಗೆ ಕೂತು ಬಿಡುತ್ತಾರೆ. ಆದರೆ ಇವರು ಒಂದು ಸೋಲಿನ ನಂತರ ಮತ್ತೊಂದು ಪ್ರಯತ್ನದತ್ತ ಮುಂದಾಗುತ್ತಾರೆ. ಹಿಂದಿನ ಎಲ್ಲಾ ಸೋಲಿಗೆ ಮುಲಾಮಾಗುವಂತಹ ಯಶಸ್ಸಿಗಾಗಿ ಮತ್ತೆ ಮತ್ತೆ ಪ್ರಯತ್ನಿಸುತ್ತಾರೆ.

ಆದರೆ ವಿಶೇಷವಾಗಿ ಈ ವ್ಯಕ್ತಿ ನನಗೆ ಗೊತ್ತು. ಇವರ ಕುಟುಂಬದ ಹಿನ್ನೆಲೆ ನನಗೆ ಗೊತ್ತು….

ಊರು ಬೇಡ, ಹೆಸರು ಬೇಡ….

ಇದೆಲ್ಲ ಘಟನೆಗಳ ಹಿನ್ನೆಲೆ ಹುಡುಕಿಕೊಂಡು ಹೋದಾಗ ಸುಮಾರು ನೂರು ವರ್ಷಗಳ ಹಿಂದಿನ ಘಟನಾವಳಿಗಳು ಮುನ್ನೆಲೆಗೆ ಬರುತ್ತವೆ. ಆಗಿನ್ನೂ ಸ್ವಾತಂತ್ರ್ಯ ಬಂದಿರದ ಕಾಲ. ನಾನು ಪ್ರಸ್ತುತಪಡಿಸಿದವರ ಹಿರಿಯರು ಬ್ರಿಟಿಷ್ ಸರ್ಕಾರದ ಕಂದಾಯ ಆಡಳಿತವರ “ತೈನಾತಿ”ಯಾಗಿದ್ದರು.

ಆ ಕಾಲದಲ್ಲಿ ಅಧಿಕಾರಿಗಳಿಗೆ “ಬೇಕಾದವರು” ಅವರ ಪ್ರಭಾವ ಬಳಸಿ ಏನು ಮಾಡಿಕೊಳ್ಳಲೂ ಸಾಧ್ಯವಿತ್ತು. ಆ ಹಿರಿಯರು ಅದೇನು ಮಾಡಿದರೋ, ಅದ್ಯಾರ ಜಮೀನು-ಮನೆ ಕಿತ್ತುಕೊಂಡರೋ, ಇವರ ಮನೆ ಹಾಳಾಗಲಿ, ಇವರ ಕೊಟ್ಟಿಗೆ ಹಾಳಾಗಲಿ, ಇವರ ಕುಲ ನಾಶವಾಗಲಿ ಎಂದು ಶಾಪ ಪಡೆದರೋ ಗೊತ್ತಿಲ್ಲ…!!

ಆ ಮನೆ ಹಂತ ಹಂತವಾಗಿ ದರಿದ್ರ ಮೆತ್ತಿಕೊಂಡು ಅವಸಾನ ಹೊಂದುತ್ತಿತ್ತು.

ಆ ಪಾಪಿಷ್ಟರು, ಅವರು ಮತ್ತು ಅವರ ಹಿಂದಿನವರು “ಅನುಷ್ಠಾನ ಫಲ”ಕ್ಕೆ ಮಾಡಿದ “ಪಾಪದ ಫಲ” ಅನುಭವಿಸಲಿಲ್ಲ…!! ಆದರೆ ಆ ಪಾಪದ ಫಲವನ್ನು ಅವರ ಮುಂದಿನ ಪೀಳಿಗೆ ಅನುಭವಿಸುತ್ತಿದೆ…

ಆ ಹಿರಿಯರು ಆ ಕಾಲದಲ್ಲಿ ಎತ್ತಿನ ಗಾಡಿಯಲ್ಲಿ ಗ್ರಾಮ್‌ಫೋನ್ ರೆಕಾರ್ಡ್ ಸಂಗೀತ ಹಾಕಿಕೊಂಡು ಹೋಗುತ್ತಿದ್ದವರು…!! ಅಷ್ಟು ಐಷಾರಾಮಿ ಮತ್ತು ಶೋಮ್ಯಾನ್‌ ಆಗಿದ್ದವರು.

ವಿಪರ್ಯಾಸವೆಂದರೆ, ಅವರ ಕಾಲದ ನಂತರ ಇಡೀ ಊರಿಗೆ ಕರೆಂಟ್ ಸಂಪರ್ಕ ಬಂದರೂ ಅವರೊಬ್ಬರ ಮನೆಗೆ ಮಾತ್ರ ಕರೆಂಟ್ ಸಂಪರ್ಕ ಇರಲಿಲ್ಲ…!!!

ಬಹುಶಃ ಬೇಕಂತಲೇ ಪಡೆದಿರಲಿಲ್ಲ.

ಇವರ ಅಜ್ಜಿಯ ಪಾರುಪತ್ಯದ ಕಾಲದಲ್ಲಿ ಯಾರೋ ಕರೆಂಟ್ ಹಾಕಿಸಿಕೊಳ್ಳಿ ಎಂದು ಮನೆ ಬಾಗಿಲಿಗೆ ಬಂದಾಗ ಆ ಅಜ್ಜಿ, “ನನ್ನ ಕಬ್ಬಿಣದ ಪೆಟ್ಟಿಗೆಯಲ್ಲಿ ಎಷ್ಟು ದುಡ್ಡು ಇದೆ ಎಂದು ನನಗೆ ಗೊತ್ತು” ಎಂದು ಕಟುವಾಗಿ ತಿರಸ್ಕಾರ ಮಾಡಿದ್ದರಂತೆ…!!

ಇವರ ಅಜ್ಜಿ ಪರಮ ರಾಠಾಳಿ. ಸೊಸೆ ದಿಕ್ಕಳ ಬೇಸಿ ಉರಿಸಿ ತಿಂದುಕೊಂಡವರು.

“ಇವರ” ಅಮ್ಮ ಅಲ್ಲಿ ಇರಲಾರದೆಯೇ ಆ ಅತ್ತೆಯ ಜೊತೆ ಏಗಲಾಗದೇ ಗಂಡನನ್ನು ಕಟ್ಟಿಕೊಂಡು ತವರಿಗೆ ಬಂದಿದ್ದರು. ಅವರ ತಂದೆಗೆ “ಇವರಮ್ಮ” ಒಬ್ಬರೇ ಮಗಳಾಗಿದ್ದರಿಂದ ಈ ಊರಿನಲ್ಲಿ ವಾಸ್ತವ್ಯ ಹೂಡುವಂತಾಯಿತು.

ಆದರೆ ಅಜ್ಜನ ಪಾಪದ ಫಲ ಮೊಮ್ಮಗನ ತನಕ ಯಾವ ಊರಿಗೆ ಹೋದರೂ ಬೆಂಬಿಡದೇ ಬಂದು ಕಾಡುತ್ತಿದೆ…

ಊರಲ್ಲಿನ “ಇವರ” ಚಿಕ್ಕಪ್ಪರ ಮಕ್ಕಳಲ್ಲಿ ಒಬ್ಬನಿಗೆ ಮದುವೆ ಇಲ್ಲ. ಚಿಕ್ಕಪ್ಪನ ಮಗಳಿಗೆ ಎರಡು ಮದುವೆ ಆಯಿತು. ಆ ಚಿಕ್ಕಪ್ಪ-ಚಿಕ್ಕಮ್ಮವೂ ಬಹಳ ವರ್ಷ ಬದುಕದೇ ಅರೆ ಆಯಸ್ಸಿನಲ್ಲೇ ತೀರಿಕೊಂಡರು.

ಇನ್ನೊಬ್ಬ ಚಿಕ್ಕಪ್ಪ ಅರೆ ಆಯಸ್ಸಿನಲ್ಲಿ ತೀರಿಕೊಂಡರು. ಚಿಕ್ಕಮ್ಮನಿಗೂ ಕ್ಯಾನ್ಸರ್ ಆಗಿ ನರಳಿ ನರಳಿ ಸತ್ತರು. ಆ ಚಿಕ್ಕಪ್ಪನಿಗೆ ಒಬ್ಬ ಬುದ್ಧಿ ಬೆಳೆಯದ ಮಗ ಇದ್ದ. ಅವನು ಒಂದು ದಿನ ಇದ್ದಕ್ಕಿದ್ದಂತೆ ಸತ್ತು ಹೋದ.

ಇನ್ನೊಬ್ಬ ಮಗ “ಇವರಿಗೆ” ಬಿಟ್ಟು ಕೊಡಲಾರದಷ್ಟು ಬುದ್ಧಿವಂತ. ಆದರೆ ನತದೃಷ್ಟವಂತ. ಇನ್ನೇನು ದುರಭ್ಯಾಸಗಳು ಅವನನ್ನು ತಿಂದೇ ಹಾಕಿತೆನ್ನುವಷ್ಟರಲ್ಲಿ ಅದು ಹೇಗೋ ಬಚಾವಾದ. ಈಗ ದುಡಿದು ಇದ್ದುದರಲ್ಲಿ ಚೆನ್ನಾಗಿದ್ದಾನೆ.

“ಇವರ” ಸೋದರತ್ತೆ ಮಕ್ಕಳಲ್ಲಿ ಒಬ್ಬರು “ಇವರಂತೆ” ಸಾಹಸಿ… ಅವರೂ ಅರೆ ಆಯಸ್ಸಲ್ಲಿ ತೀರಿಕೊಂಡರು.

ಒಂದು ವಿಶೇಷ ಏನೆಂದರೆ ಇವರ “ಮೂಲ ಮನೆ” ಒಂದು ಬಗೆಯಲ್ಲಿ ಜಾತಿ-ಮತ ಭೇದವಿಲ್ಲದೆ ಅನ್ನದಾನ, ಆಸರೆ ನೀಡಿದ ಮನೆ. ಆ ಮನೆಯಲ್ಲಿ ಅದೆಷ್ಟು ಜನ ಉಂಡಿದ್ದಾರೋ ಗೊತ್ತಿಲ್ಲ…!!

ಇವತ್ತಿಗೂ ಈ ಕುಟುಂಬದ ಎಲ್ಲಾ ದುರಿತಗಳ ನಡುವೆ ಕೈ ಹಿಡಿದಿದ್ದು ಇವರ ಹಿರಿಯರು ಮಾಡಿದ “ಅನ್ನದಾನ”…!!

ಯಾಕೋ ಗೊತ್ತಿಲ್ಲ… “ಇವರ” ಕುಟುಂಬಕ್ಕೆ ಯಾವುದೋ ಕಾಲದಲ್ಲಿ ಹಿರಿಯರು ಮಾಡಿದ ತಪ್ಪಿನ, ಅಥವಾ ಆ ತಪ್ಪಿಗೆ ಅಂಟಿಕೊಂಡು ಬಂದ “ಶಾಪ” ಇವರೆಲ್ಲರನ್ನು ಕಾಡಿದೆಯಾ…??

ಒಂದು ಇಡೀ ಕುಟುಂಬದಲ್ಲಿ ಬಹುತೇಕರಿಗೆ “ಸಹಜವಲ್ಲದ ಹೊಡೆತ” ಬಿದ್ದಿದೆ…

ಶೃಂಗೇರಿ ಹಿಂದಿನ ಶ್ರೀಗಳು ಒಂದು ಕಡೆ “ಕರ್ಮ ಫಲ”ದ ಬಗ್ಗೆ ಹೇಳಿದ್ದಾರೆ.

ಅದನ್ನು ಅನುಭವಿಸಿಯೇ ತೀರಬೇಕು ಅಂತ….

ಮತ್ತೆ ಮತ್ತೆ ಸಾಂಸಾರಿಕ, ಸಾಮಾಜಿಕ, ಆರ್ಥಿಕ ಸೋಲು-ಅವಮಾನ ಎಲ್ಲವನ್ನೂ ಹೃದಯ ತುಂಬಿ ಅನುಭವಿಸಿ “ಕರ್ಮ ಫಲ”ವನ್ನು ಕಳೆದುಕೊಳ್ಳಬೇಕು. “ನಂಗಲ್ಲ, ನಂದಲ್ಲ” ಎಂದು ಕರ್ಮ ಫಲವನ್ನು ಅಸಡ್ಡೆ ಮಾಡಿದರೆ ಮತ್ತೆ ಮತ್ತೆ ಅದು ಹುಡುಕಿಕೊಂಡು ಬರುತ್ತದೆ.

ಇದು “ಇವರು” ಅಂತಲ್ಲ… ನಮ್ಮೆಲ್ಲರಿಗೂ ಅನ್ವಯಿಸುತ್ತದೆ.

ನಮ್ಮ ಸಮಾಜದಲ್ಲಿ ಯಾರಿಗಾದರೂ ಬಹಳ ಏಳಿಗೆಯಾದರೆ ಆ ಕುಟುಂಬದ “ಹಿರಿಯರ ಪುಣ್ಯ”ದ ಫಲ ಅಂತೀವಿ. ಹಾಗೆಯೇ ಇಂತಹ ಹಿನ್ನಡೆಯಾದರೆ “ಹಿರಿಯರು ಮಾಡಿದ ಅನ್ಯಾಯದ ಫಲ” ಅಂತಾನೂ ಹೇಳ್ತೀವಿ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

ಇಲ್ಲಿ ಗಮನಾರ್ಹ ವಿಶೇಷತೆ ಎಂದರೆ…

ಒಂದು ಕುಟುಂಬದ ಕೆಲವು ಸದಸ್ಯರ ನಡುವೆ ಒಬ್ಬರೋ ಇಬ್ಬರೋ ಗ್ರಹಚಾರ ಕೆಟ್ಟವರಿಗೆ ಕುಟುಂಬದ ಹಿರಿಯರ ಕೆಟ್ಟ ಋಣದ ದುಷ್ಫಲ ವರ್ಗಾವಣೆ ಆಗುತ್ತದೆ…!! ಇದು ನಾನು ಗಮನಿಸಿದ ಅನೇಕ ಕುಟುಂಬಗಳಲ್ಲಿ ಆಗಿದೆ.

ಇದರ ತರ್ಕ ಏನೆಂದರೆ…

ಇಲ್ಲಿ ಮನುಷ್ಯ ಸೋಲಲು “ಅಸಾಧಾರಣ ಕೆಲಸ ಮಾಡಬೇಕು” ಎಂದಿಲ್ಲ. ಸಾಮಾನ್ಯ ಉದ್ಯೋಗ ಮಾಡಿದರೂ ಅದ್ಯಾವುದೋ ರೂಪದಲ್ಲಿ ನತದೃಷ್ಟತನ ಇವರ ಹುಡುಕಿಕೊಂಡು ಬರುತ್ತದೆ.

ಇವರು ಎಲ್ಲರ ಹಾಗೆ ತೋಟ-ತುಡಿಕೆ, ಅಡಿಕೆ ವ್ಯಾಪಾರ, ಇನ್ನೇನೋ ಬಿಸಿನೆಸ್ ಎಲ್ಲರಂತೆ ಸಹಜವಾಗಿ ಶ್ರಮಪಟ್ಟೇ ಮಾಡಿದ್ದಾರೆ. ಆದರೆ “ವಿಧಿ” ಹೇಗೋ ಇವರ ಕಾಲೆಳೆದು ನೆಲಕ್ಕೆ ಕೆಡಗಿರುತ್ತದೆ…!!!

ಬಹಳಷ್ಟು ಸರ್ತಿ ಡೇಲ್ ಕಾರ್ನೆಗಿ ಅವರ ವ್ಯಕ್ತಿತ್ವ ವಿಕಸನದ ಪುಸ್ತಕ ಓದಿ ಗುರಿಯತ್ತ ಪಯಣ, ನಿರಂತರ ಪ್ರಯತ್ನ, ಏಕಾಗ್ರತೆ… ಹೀಗೆ ಜೀವನದಲ್ಲಿ ಅಳವಡಿಸಿಕೊಂಡರೂ ಕೆಲವರು ಸೋಲುತ್ತಾರೆ.

ಆದರೆ ಅವರ ಪೂರ್ವಾರ್ಜಿತ, ವರ್ತಮಾನದ ಮತ್ತು ಹಿರಿಯರ ಪಾಪದ ದುಷ್ಫಲ ಪರಿಣಾಮ ಬೀರಿದರೆ ಮುಗೀತು.

ಇದನ್ನು ಕೆಲವರು ದುರಾದೃಷ್ಟ ಅಂತಾರೆ.

ಮನುಷ್ಯನಿಗೆ ಬಹುತೇಕ ಸರ್ತಿ ಆ ಬಗ್ಗೆ ಪ್ರಯತ್ನ ಪಡುವಾಗ ಸೋಲಿನ ವಾಸನೆ ಮೂಗಿಗೆ ಅಡರಿರುತ್ತದೆ… ಆದರೂ ತನ್ನ ಮನಸ್ಸಿನ ಅಭಿಪ್ರಾಯವನ್ನು ಕೇಳದೇ ಮುಂದಡಿ ಇಟ್ಟಿರುತ್ತಾನೆ.

ಹಾಗೆ ಮುನ್ನುಗ್ಗಿಸಿ ನಷ್ಟದ ಬಾವಿಗೆ ನೂಕುವುದು ಇದೇ ವರ್ತಮಾನದ, ಪೂರ್ವಜನ್ಮದ ಮತ್ತು ಹಿರಿಯರ ಪಾಪ ಕರ್ಮಗಳು.

ಇದು ಸನಾತನ ನಂಬಿಕೆ.

ಏಕೆ ಹೀಗೆ ವಿಶ್ಲೇಷಣೆ ಮಾಡಿದ್ದೇನೆಂದರೆ…

ಗುರಿ, ಏಕಾಗ್ರತೆ, ಪ್ರಯತ್ನ, ಪರಿಶ್ರಮ ಎಲ್ಲವೂ ಮಾಡಿದರೂ ಮನುಷ್ಯ ಸೋಲುತ್ತಾನೆ.

ಮನುಷ್ಯ ಪ್ರಯತ್ನ ಮಾಡದೇ ಸೋತರೆ ಕಾರಣ ಸಿಗುತ್ತದೆ.

ಜೂಜು, ಇಸ್ಪೀಟು, ಲಾಟರಿ, ಕುಡಿತ ಮಾಡಿ ಕಳೆದುಕೊಂಡರೆ ಸೋಲಿಗೆ ಕಾರಣ ಸಿಗುತ್ತದೆ.

ಆದರೆ ಇದ್ಯಾವುದೂ ಇಲ್ಲದ ಪರಿಶ್ರಮಿ ಸೋತಾಗ ಪೂರ್ವ ಪಾಪ, ವರ್ತಮಾನ ಪಾಪ ಮತ್ತು ಹಿರಿಯರ ಪಾಪದ ಫಲ ಎಂದು ವಿಶ್ಲೇಷಣೆ ಮಾಡಬಹುದು.

ಅಷ್ಟೇ…

ಇದು ಎಲ್ಲರಿಗೂ ಅನ್ವಯಿಸುತ್ತದೆ….

ಬಹುಶಃ ಮನುಷ್ಯನ ಕರಾರುವಾಕ್ಕಾದ ಯೋಜನೆಗೆ ಮೀರಿ ಇನ್ನೇನೋ ಆಗುವುದರಿಂದ ಭೂಮಿಯಲ್ಲಿ ದೇವರ ನಂಬಿಕೆ ಉಳಿದಿದೆ….

ಮನುಷ್ಯ ಯೋಜಿಸಿದ್ದೆಲ್ಲಾ ಯೋಜಿಸಿದ ಹಾಗೆಯೇ ಆಗುವುದಿದ್ದರೆ ಮನುಷ್ಯ ಖಂಡಿತವಾಗಿಯೂ ದೇವರನ್ನು ನಂಬುತ್ತಿರಲಿಲ್ಲ.

ಇದು ಭೂಮಿಯ ಅತ್ಯಂತ ವಿಶೇಷ ಸತ್ಯ.

ಮನುಷ್ಯ ಪ್ರಯತ್ನಕ್ಕೆ ಮೀರಿದ್ದು ಇದೇ….

“ನತದೃಷ್ಟೊ ಪರಮೋ ಇತಿಃ”…

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಪ್ರಬಂಧ ಅಂಬುತೀರ್ಥ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಅಂಬುತೀರ್ಥದ ನಿವಾಸಿ ಪ್ರಬಂಧ. ಬಿ ಎ. ವಿಧ್ಯಾಭ್ಯಾಸ ಮುಗಿಸಿದ ಮೇಲೆ ಕೃಷಿ ಕೆಲಸ. ಕಥೆ , ಪರಿಸರ, ಕೃಷಿ , ವಿಜ್ಞಾನ , ಸಾಮಾಜಿಕ ಮತ್ತು ರಾಜಕೀಯ ವಿಚಾರಗಳ ಲೇಖನ ಬರೆಯುವ ಹವ್ಯಾಸ. ಮಲೆನಾಡು ಗಿಡ್ಡ ಗೋ ತಳಿ ಸಂವರ್ಧನೆ, ಜೀರಿಗೆ ಮೆಣಸಿನಕಾಯಿ ಬೆಳೆಯ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಣೆ. ಮಲೆನಾಡು ಗಿಡ್ಡ ತಳಿ ಹಸುಗಳ ಸೆಗಣಿಯನ್ನು ಮೌಲ್ಯ ವರ್ಧನೆ ಮಾಡಿ ಕೃಷಿ ಸ್ನೇಹಿ ಸೂಕ್ಷ್ಮಾಣು ಜೀವಿಯುಕ್ತ ಸಾವಯವ ಗೊಬ್ಬರ ತಯಾರಿಸಿ ಮಾರಾಟ ಮಾಡುವ ಕೆಲಸವನ್ನೂ ಮಾಡುತ್ತಿದ್ದಾರೆ.

Published by
ಪ್ರಬಂಧ ಅಂಬುತೀರ್ಥ

Recent Posts

AI, ಡ್ರೋನ್ ಮತ್ತು ಸ್ವಯಂಚಾಲಿತ ಯಂತ್ರಗಳು | ಕಾರ್ಮಿಕ ಕೊರತೆಯ ನಡುವೆ ಕೃಷಿಗೆ ರೋಬೋಟ್ ಪರಿಹಾರ

ಸಣ್ಣ ರೈತರ ಕೃಷಿಯಲ್ಲಿ ಕಾರ್ಮಿಕ ಕೊರತೆ, ವೆಚ್ಚ ಏರಿಕೆ ಸಮಸ್ಯೆ ನಿವಾರಣೆಗೆ ರೋಬೋಟಿಕ್ಸ್,…

42 minutes ago

“ಕ್ಯಾನ್ಸರ್ ಮ್ಯಾಪಿಂಗ್” – ರೋಗ ತಡೆಯುವ ಮೊದಲ ಹೆಜ್ಜೆ

ಕ್ಯಾನ್ಸರ್ ವಿರುದ್ಧ ಹೋರಾಟ ಎಂದರೆ ಕೇವಲ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡುವುದು ಮಾತ್ರವಲ್ಲ. ರೋಗ…

48 minutes ago

ರಾಜ್ಯದಲ್ಲಿ 3 ವರ್ಷದಲ್ಲಿ 432 ಮಂದಿ ಅಕ್ರಮ ವಿದೇಶಿ ವಲಸಿಗರು ಪತ್ತೆ | ಬೆಂಗಳೂರು ನಗರದಲ್ಲೇ 328 ಪ್ರಕರಣ

ರಾಜ್ಯದಲ್ಲಿ ಅಕ್ರಮ ವಲಸಿಗರು ಹಾಗೂ ಬಾಂಗ್ಲಾ ಅಕ್ರಮ ವಲಸಿಗರ ಬಗ್ಗೆ ಮಾಹಿತಿಯನ್ನು ವಿಧಾನಪರಿಷತ್‌…

56 minutes ago

ಬೇಸಿಗೆ ಕುಡಿಯುವ ನೀರು ಸಮಸ್ಯೆ ಎದುರಾಗದಂತೆ ಕ್ರಮಕ್ಕೆ ಜಿಲ್ಲಾಧಿಕಾರಿ ಸೂಚನೆ

ಮುಂಬರುವ ಬೇಸಿಗೆಯಲ್ಲಿ ಕುಡಿಯುವ ನೀರು ಪೂರೈಕೆಗೆ ಯಾವುದೇ ರೀತಿ ತೊಂದರೆಯಾಗದಂತೆ  ಅಗತ್ಯ ಕ್ರಮ…

1 hour ago

ಅಂಕಗಳಾಚೆಗೂ ಒಂದು ಲೋಕವಿದೆ : ಇದು ಮಕ್ಕಳಿಗೆ ಬದುಕನ್ನು ಕಲಿಸುವ ಶಿಕ್ಷಣ

ಶಾಲೆಯ ಹಂತದಲ್ಲಿ ಮಕ್ಕಳಿಗೆ ಕಲಿಸಬೇಕಾದ ಶಿಕ್ಷಣ ಏನು..?.  ಈ ಪ್ರಶ್ನೆಗೆ ಹಲವರದು ಹಲವು…

11 hours ago

ಸರ್ಕಾರಿ ಶಾಲೆ ಮಕ್ಕಳಿಗೆ ಚೆಸ್ ಪಾಠ | ದ.ಕ ದಲ್ಲಿ “ಚೆಸ್ ಇನ್ ಸ್ಕೂಲ್” ಆರಂಭ | ಗ್ರಾಮೀಣ ಮಕ್ಕಳಿಗೆ ಬೌದ್ಧಿಕ ಅವಕಾಶ

ದಕ್ಷಿಣ ಕನ್ನಡ ಜಿಲ್ಲೆಯ ಸರ್ಕಾರಿ ಶಾಲಾ ಮಕ್ಕಳಿಗೆ ಚೆಸ್ ಆಟವನ್ನು ಪರಿಚಯಿಸುವ “ಚೆಸ್…

19 hours ago