ಕಳೆದ ಕೆಲವು ದಿನಗಳಿಂದ ಉತ್ತರ ಭಾರತದಲ್ಲಿ ಭಾರಿ ಮಳೆಯಾಗಿದೆ. ಈಗಲೂ ಅಲ್ಲಲ್ಲಿ ಮಳೆಯಾಗುತ್ತಿದೆ. ಪಂಜಾಬ್, ಹರಿಯಾಣ, ಹಿಮಾಚಲ ಮತ್ತು ಜಮ್ಮುವಿನ ನದಿಗಳು ಅಪಾಯದ ಮಟ್ಟ ಮೀರಿ ಹರಿದವು. ಪೂರ್ವ ಪಾಕಿಸ್ತಾನದಲ್ಲಿ ವಾಯುಭಾರ ಕುಸಿತದಿಂದಾಗಿ ಹಿಮಾಚಲ ಪ್ರದೇಶ, ಉತ್ತರಾಖಂಡ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಈ ತಿಂಗಳಿನಲ್ಲಿ ಅತಿ ಹೆಚ್ಚು ಮಳೆಯಾಗಿದೆ ಎಂದು ಐಎಂಡಿ ತಿಳಿಸಿತ್ತು. ಅದಾದ ಬಳಿಕ ಮತ್ತೊಂದು ವಾಯುಭಾರ ಕುಸಿತದಿಂದ ಮಳೆ ಮುಂದುವರಿದಿದೆ. ಈ ಬಾರಿ ಇಲಾಖೆಯ ಮಾಹಿತಿ ಪ್ರಕಾರ ಒಂದೇ ದಿನದಲ್ಲಿ ಕೆಲವು ಕಡೆ ಸುರಿದ ಮಳೆ ಭೀಕರವಾಗಿದೆ. ಶೇ.1000 ಕ್ಕಿಂತಲೂ ಅಧಿಕ ಪ್ರಮಾಣದಲ್ಲಿ ಮಳೆ ಸುರಿದಿತ್ತು. ಕಾರಣ ಏನು..?
ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ತಾಪಮಾನವು ವಾಯುವ್ಯ ಭಾರತದಲ್ಲಿ ಮಳೆಯನ್ನು ಹೆಚ್ಚುಗೊಳಿಸುತ್ತಿದೆ. ಇದರ ಪರಿಣಾಮದಿಂದ ಭಾರತದ ಹಲವು ಕಡೆ ಮಳೆ ಈಚೆಗೆ ಹೆಚ್ಚಾಗುತ್ತಿದೆ. ಜಾಗತಿಕ ಸರಾಸರಿಗಿಂತ ವೇಗವಾಗಿ ಪಶ್ಚಿಮ ಏಷ್ಯಾದಲ್ಲಿ ಭೂ ತಾಪಮಾನ ಏರಿಕೆಯಾಗುತ್ತಿದ್ದು, ಭೂಮಿ ಮತ್ತು ಅರೇಬಿಯನ್ ಸಮುದ್ರದ ನಡುವೆ ಒತ್ತಡ ಸೃಷ್ಟಿಯಾಗುತ್ತಿದ್ದು, ಇದು ತೇವಾಂಶ ತುಂಬಿದ ನೈಋತ್ಯ ಗಾಳಿಯನ್ನು ಹಿಮಾಲಯದ ತಪ್ಪಲಿನಲ್ಲಿ, ಪಶ್ಚಿಮ ಭಾರತ ಮತ್ತು ಪಾಕಿಸ್ತಾನದ ಕಡೆಗೆ ಎಳೆಯುತ್ತಿದೆ. ಇದರ ಪರಿಣಾಮವಾಗಿ ತೀವ್ರ ಮಳೆ ಮತ್ತು ಪ್ರವಾಹ ಉಂಟಾಗುತ್ತದೆ ಎಂದು ಅಧ್ಯಯನ ವರದಿಗಳು ತಿಳಿಸಿವೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಮಹಾರಾಷ್ಟ್ರದಲ್ಲಿ, ವಿಶೇಷವಾಗಿ ಮುಂಬೈನಲ್ಲಿ, ಅರೇಬಿಯನ್ ಸಮುದ್ರದ ಸರಾಸರಿಗಿಂತ ವೇಗವಾಗಿ ತಾಪಮಾನ ಏರಿಕೆಯಾಗುವುದರಿಂದ ತೀವ್ರ ಮಳೆ ಸಂಭವಿಸುತ್ತಿದೆ, ಇದು ಭೂಮಿಯ ಕಡೆಗೆ ತೇವಾಂಶದ ಉಲ್ಬಣಕ್ಕೆ ಕಾರಣವಾಗುತ್ತಿದೆ, ಇದರ ಪರಿಣಾಮವಾಗಿ ತೀವ್ರ ಮಳೆಯು ಮೂರು ಪಟ್ಟು ಹೆಚ್ಚಳವಾಗಿದೆ ಎಂದು ಅಧ್ಯಯನಗಳನ್ನು ಉಲ್ಲೇಖಿಸಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಇದೇ ವೇಳೆ ಈಶಾನ್ಯ ಭಾರತದಿಂದ ಮಾನ್ಸೂನ್ ಮಾದರಿಗಳು ಪಶ್ಚಿಮಕ್ಕೆ ಸ್ಥಳಾಂತರಗೊಳ್ಳುತ್ತಿವೆ ಎಂದು ಹೇಳುವ ಅಧ್ಯಯನಗಳು ಇವೆ, ಪಶ್ಚಿಮ ಮತ್ತು ವಾಯುವ್ಯ ಭಾರತದಲ್ಲಿ ಸರಾಸರಿ ಮಳೆಯಲ್ಲಿ ಶೇ. 10 ರಷ್ಟು ಇಳಿಕೆಯಾಗಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ
ವಿಶ್ವದಲ್ಲಿ ತಾಪಮಾನ ಏರಿಕೆಗೆ ವಿವಿಧ ಕಾರಣಗಳು ಇವೆ. ಈಚೆಗೆ ಕಾಡ್ಗಿಚ್ಚು ಕೂಡಾ ಹೆಚ್ಚುತ್ತಿದೆ. ಸ್ಪೇನ್‌ನಲ್ಲಿ 400,000 ಹೆಕ್ಟೇರ್‌ಗಳಿಗೂ ಹೆಚ್ಚು ಪ್ರದೇಶ ಕಾಡ್ಗಿಚ್ಚಿಗೆ ಸುಟ್ಟುಹೋಗಿದೆ. ಯುರೋಪಿಯನ್ ಒಕ್ಕೂಟವು ದಾಖಲೆಯ ಭೀಕರ ಕಾಡ್ಗಿಚ್ಚಿ ಈ ಋತುವಿನಲ್ಲಿ ಅನುಭವಿಸುತ್ತಿದೆ, 1 ಮಿಲಿಯನ್ ಹೆಕ್ಟೇರ್‌ಗಳನ್ನು ಮೀರಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಬೆಲ್ಜಿಯಂನ ಮೂರನೇ ಒಂದು ಭಾಗದಷ್ಟು 1,016,000 ಹೆಕ್ಟೇರ್ ಪ್ರದೇಶವನ್ನು ಬೆಂಕಿ ಸುಟ್ಟುಹಾಕಿದೆ ಎಂದು ಯುರೋಪಿಯನ್ ಫಾರೆಸ್ಟ್ ಫೈರ್ ಇನ್ಫರ್ಮೇಷನ್ ಸಿಸ್ಟಮ್‌ನ ಮಾಹಿತಿ ಹೇಳಿಕೊಂಡಿದೆ. ಪೋರ್ಚುಗಲ್‌ನಲ್ಲಿ, ಬೆಂಕಿಯು 270,000 ಹೆಕ್ಟೇರ್‌ಗಳನ್ನು ಸುಟ್ಟುಹಾಕಿದೆ. 1960 ರ ದಶಕದಷ್ಟು ಹಿಂದಿನ ದಾಖಲೆಗಳನ್ನು ಹೊಂದಿರುವ ಸ್ಪೇನ್‌ನಲ್ಲಿ, ಸರ್ಕಾರಿ ಅಂಕಿಅಂಶಗಳ ಪ್ರಕಾರ, ಈ ವರ್ಷ 1994 ರ ನಂತರದ ಅತ್ಯಂತ ಕೆಟ್ಟ ಋತುವಾಗಿದೆ. ಕಾಡ್ಗಿಚ್ಚು ಕೂಡಾ ಹವಾಮಾನ ಬದಲಾವಣೆಯ ಅಪಾಯವನ್ನು ಒಡ್ಡುತ್ತಿದೆ. ಆಗಾಗ್ಗೆ ಮತ್ತು ತೀವ್ರವಾದ ಶಾಖದ ಅಲೆಗಳು ಮತ್ತು ಬರಗಾಲಗಳನ್ನು ತರಲು ಕಾರಣವಾಗುತ್ತಿದೆ ಎಂದು ವರದಿಗಳು ಹೇಳಿವೆ. ತಾಪಮಾನ ಹೆಚ್ಚಾದಂತೆ ತೇವಾಂಶ ಕಡಿಮೆಯಾಗುತ್ತದೆ. ಇಂದು ಅರಣ್ಯದಲ್ಲೂ ತೇವಾಂಶ ಕೊರತೆ ಕಾಡುತ್ತಿದೆ. ಈ ಎಲ್ಲಾ ಕಾರಣಗಳಿಂದ ಮಳೆಯಲ್ಲೂ ಏರುಪೇರಾಗುತ್ತಿದೆ. ತಾಪಮಾನದಲ್ಲೂ ಏರಿಕೆ ಕಾಡುತ್ತಿದೆ. ಇದು ಕೃಷಿ ಸಹಿತ ಎಲ್ಲಾ ಕ್ಷೇತ್ರದಲ್ಲೂ ಗಂಭೀರವಾದ ಪರಿಣಾಮ ಉಂಟು ಮಾಡುತ್ತಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ
(ವಿವಿಧ ಅಧ್ಯಯನ ವರದಿಗಳ ಸಂಗ್ರಹ)


