ಕರಿಮೆಣಸು(Pepper) – ಏಲಕ್ಕಿಯನ್ನು(Cardamom) ಜಿ.ಎಸ್.ಟಿ(GST) ವ್ಯಾಪ್ತಿಗೆ ತರುವ ಬಗ್ಗೆ ಕೊಡಗು(Kodagu)ಜಿಲ್ಲೆಯಲ್ಲಿ ಜಿ.ಎಸ್.ಟಿ. ಇಲಾಖಾ ಅಧಿಕಾರಿಗಳು ರೈತರು ಹಾಗೂ ಬೆಳೆಗಾರರನ್ನು ಒತ್ತಾಯಪಡಿಸುತ್ತಿದ್ದು, ಈ ವಿಚಾರಕ್ಕೆ ಕೊಡಗು ಪ್ಲಾಂಟರ್ಸ್ ಕ್ಲಬ್ ವಿರೋಧ ವ್ಯಕ್ತಪಡಿಸಿದೆ. ಈ ಬಗ್ಗೆ ಪ್ಲಾಂಟರ್ಸ್ ಕ್ಲಬ್ ಪದಾಧಿಕಾರಿಗಳ ನಿಯೋಗ ಕೊಡಗು ಮೈಸೂರು ಕ್ಷೇತ್ರದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಭೇಟಿ ಮಾಡಿ ಈ ವಿಷಯದಲ್ಲಿ ಮಧ್ಯಪ್ರವೇಶಿಸಿ ಇದನ್ನು ತಡೆಯುವಂತೆ ಮಾಡಲು ಕೋರಿ ಮನವಿ ಸಲ್ಲಿಸಿದ್ದಾರೆ.ಸಿಪಿಎ ಅಧ್ಯಕ್ಷ ನಂದಾ ಬೆಳ್ಯಪ್ಪ, ಉಪಾಧ್ಯಕ್ಷ ಎ.ಎ. ಚಂಗಪ್ಪ, ಸದಸ್ಯರುಗಳಾದ ಕೆ.ಕೆ. ವಿಶ್ವನಾಥ್, ಕೆ.ಕೆ. ಬೆಳ್ಯಪ್ಪ ಕಾರ್ಯಪ್ಪ, ಕಾರ್ಯದರ್ಶಿ ಸಿ.ಕೆ. ಬೆಳ್ಳಿಯಪ್ಪ ಅವರುಗಳು ಸಂಸದರಿಗೆ ಮನವಿ ಮಾಡಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ನಂದಾ ಬೆಳ್ಯಪ್ಪ ಅವರು ಜಿ.ಎಸ್.ಟಿ ಅಧಿಕಾರಿಗಳು ಜಿಲ್ಲೆಯ ರೈತರು ಮತ್ತು ಬೆಳೆಗಾರರಿಗೆ ಕರಿಮೆಣಸು ಜಿ.ಎಸ್.ಟಿ ವ್ಯಾಪ್ತಿಯಲ್ಲಿ ಬರುತ್ತದೆ. ಆದುದರಿಂದ ತಮ್ಮನ್ನು ಜಿ.ಎಸ್.ಟಿ ಅಡಿಯಲ್ಲಿ, ನೊಂದಾಯಿಸಿಕೊಳ್ಳುವಂತೆ ಒತ್ತಾಯಿಸಿ ನೋಟಿಸುಗಳನ್ನು ನೀಡುತ್ತಿದ್ದಾರೆ. ಹಸಿರು ಕಾಳು ಮೆಣಸು ಜಿ.ಎಸ್.ಟಿ, ವ್ಯಾಪ್ತಿಗೆ ಬರುವುದಿಲ್ಲ, ಆದರೆ ಅದನ್ನು ಒಣಗಿಸಿ ಕರಿಮೆಣಸಿಗೆ ಪರಿವರ್ತಿಸಿದರೆ ಅದು ಜಿ.ಎಸ್.ಟಿ. ವ್ಯಾಪ್ತಿಗೆ ಬರುತ್ತದೆ ಎಂಬುದು ಅವರ ವಾದವಾಗಿದೆ.
ವಾಸ್ತವವಾಗಿ ಕೃಷಿಕರು ಪಾಲಿಸುವ ಒಣಗಿಸುವ ಪ್ರಕ್ರಿಯೆಯು ಉತ್ಪನ್ನದ ಅಗತ್ಯ ಗುಣಲಕ್ಷಣಗಳನ್ನು ಬದಲಾಯಿಸುವುದಿಲ್ಲ ಮತ್ತು ಈ ಪ್ರಕ್ರಿಯೆಯು ಕರಿಮೆಣಸು ಮತ್ತು ಏಲಕ್ಕಿಯ ತೆರಿಗೆ ವಿನಾಯಿತಿ ಸ್ಥಿತಿಯ ಮೇಲೆ ಪರಿಣಾಮ ಬೀರಬಾರದು. ಈ ವಿಧಾನವು ಜಿ.ಎಸ್.ಟಿ. ಕಾಯಿದೆಯಿಂದ ಬೆಂಬಲಿತವಾಗಿದೆ, ಸಿ.ಜಿ.ಎಸ್.ಟಿ. ಕಾಯಿದೆ ೨೦೧೭ರ ಸೆಕ್ಷನ್ ೨(೭)ರ ಅಡಿಯಲ್ಲಿನ ವ್ಯಾಖ್ಯಾನವು ವ್ಯಕ್ತಿಗಳು ಅಥವಾ ಹಿಂದೂ ಅವಿಭಜಿತ ಕುಟುಂಬಗಳು ತಮ್ಮ ದುಡಿಮೆಯಿಂದ ಅಥವಾ ಕುಟುಂಬದ ಸದಸ್ಯರು ಅಥವಾ ಕೂಲಿ ಕಾರ್ಮಿಕರ ಸಹಾಯದಿಂದ ಭೂಮಿಯ ಸಾಗುವಳಿಯಲ್ಲಿ ತೊಡಗಿರುವವರಿಗೆ ಜಿ.ಎಸ್.ಟಿ.ಯಿಂದ ಸ್ಪಷ್ಟವಾಗಿ ವಿನಾಯಿತಿ ನೀಡುತ್ತದೆ.
ಭತ್ತ ಮತ್ತು ಕೆಂಪು ಮೆಣಸಿನಕಾಯಿಯಂತಹ ಬೆಳೆಗಳಿಗೆ ಜಿ.ಎಸ್.ಟಿ.ಯಿಂದ ವಿನಾಯಿತಿ ನೀಡಿ ಕರಿಮೆಣಸು ಮತ್ತು ಏಲಕ್ಕಿ ಬೆಳೆಗಳನ್ನು ಜಿ.ಎಸ್.ಟಿ, ಅಡಿಯಲ್ಲಿ ತಂದಿರುವುದು ಅಸಮಂಜಸವಾಗಿದೆ, ಏಕೆಂದರೆ ಈ ಎಲ್ಲಾ ಬೆಳೆಗಳೂ ಕುಯ್ದು ಮಾಡಿ ಒಣಗಿಸಿದ ನಂತರವೇ ಉಪಯೋಗಿಸಲು ಅಥವಾ ಮಾರುಕಟ್ಟೆ ಪ್ರವೇಶಿಸಲು ಯೋಗ್ಯವಾಗಿರುತ್ತವೆ ಎಂದಿದ್ದಾರೆ. ಕೇಂದ್ರ ಹಣಕಾಸು ಸಚಿವರು ಮತ್ತು ಹಣಕಾಸು ಕಾರ್ಯಾಲಯದ ಮುಖ್ಯ ಕಾರ್ಯದರ್ಶಿಗಳಿಗೂ ಮನವಿ ಪತ್ರವನ್ನು ಸಂಸದರ ಮೂಲಕ ಸಲ್ಲಿಸಲಾಯಿತು. ಸಂಸದರು ಕೇಂದ್ರ ಹಣಕಾಸು ಸಚಿವಾಲಯದೊಂದಿಗೆ ಈ ವಿಷಯವನ್ನು ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಒತ್ತಾಯಿಸುವುದಾಗಿ ಭರವಸೆ ನೀಡಿರುವುದಾಗಿ ಅವರು ತಿಳಿಸಿದ್ದಾರೆ.
- ಅಂತರ್ಜಾಲ ಮಾಹಿತಿ
ಹಸಿರು ಕಾಳು ಮೆಣಸಿಗೆ ಇಲ್ಲದ ತೆರಿಗೆ ಒಣಗಿದ ಕಾಳು ಮೆಣಸಿಗೆ ಯಾಕೆ..?: ರೈತರಿಂದ ತೀವ್ರ ವಿರೋಧ https://t.co/1cfau31YAp
— theruralmirror (@ruralmirror) August 22, 2024