ಜಿಎಸ್ ಟಿ ಜಾರಿಯಾದ 8 ವರ್ಷಗಳಲ್ಲಿ ಅತಿ ದೊಡ್ಡ ಪ್ರಮಾಣದ ಪರಿಷ್ಕರಣೆ ಹಾಗೂ ಸುಧಾರಣಾ ಕ್ರಮಗಳನ್ನು ಪ್ರಕಟಿಸುವ ಮೂಲಕ ಕೇಂದ್ರ ಸರ್ಕಾರ ಜನಸಾಮಾನ್ಯರು, ಉದ್ಯಮ ವಲಯ, ಶಿಕ್ಷಣ, ಕೃಷಿ, ಆರೋಗ್ಯ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಕಾರಾತ್ಮಕ ಬೆಳವಣಿಗೆಗೆ ನಾಂದಿಯಾಗಲಿದೆ ಎನ್ನುವ ನಿರೀಕ್ಷೆ ಇದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಅಧ್ಯಕ್ಷತೆಯಲ್ಲಿ ನಡೆದಿದ್ದ 56ನೇ ಜಿಎಸ್ ಟಿ ಕೌನ್ಸಲಿಂಗ್ ಸಭೆಯಲ್ಲಿ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿತ್ತು. ಪ್ರಸ್ತುತ ಜಿಎಸ್ ಟಿಯಲ್ಲಿ ಶೇಕಡ 5, 12, 18 ಮತ್ತು 28ರಂತೆ ನಾಲ್ಕು ಸ್ಲ್ಯಾಬ್ ಗಳಿದ್ದವು. ಅವುಗಳನ್ನು ಶೇಕಡ 5 ಮತ್ತು 18ರ ದರಕ್ಕೆ ಸರಳೀಕರಿಸಿ 2 ಸ್ಲ್ಯಾಬ್ ಗಳಿಗೆ ಮಿತಿಗೊಳಿಸಲಾಗಿದೆ. ಹೊಸದಾಗಿ ಶೇಕಡ 40 ರ ಸ್ಲ್ಯಾಬ್ ಪರಿಚಯಿಸಲಾಗಿದೆ. ಪರಿಷ್ಕೃತ ಸುಧಾರಣಾ ಕ್ರಮಗಳು ಸೆಪ್ಟೆಂಬರ್ 22ರಂದು ನವರಾತ್ರಿಯ ಮೊದಲ ದಿನದಿಂದ ಜಾರಿಗೆ ಬರಲಿದೆ.
ಜಿಎಸ್‌ಟಿ ದರ ಇಳಿಕೆಯಾಗಿರುವ ವಸ್ತುಗಳ ವಿವರ ಇಂತಿದೆ: ಹಲ್ಲಿನ ಪುಡಿ, ಫೀಡಿಂಗ್ ಬಾಟಲಿಗಳು, ಅಡುಗೆ ಪಾತ್ರೆಗಳು, ಕೊಡೆಗಳು, ಪಾತ್ರೆಗಳು, ಸೈಕಲ್‌ಗಳು, ಬಿದಿರಿನ ಪೀಠೋಪಕರಣಗಳು ಮತ್ತು ಬಾಚಣಿಗೆಗಳಂತಹ ಗ್ರಾಹಕ ವಸ್ತುಗಳ ದರವನ್ನು ಇಳಿಸಲಾಗುತ್ತದೆ. ಶಾಂಪೂ, ಟಾಲ್ಕಮ್ ಪೌಡರ್, ಟೂತ್‌ಪೇಸ್ಟ್, ಟೂತ್ ಬ್ರಷ್‌ಗಳು, ಫೇಸ್ ಪೌಡರ್, ಸೋಪ್ ಮತ್ತು ಹೇರ್ ಆಯಿಲ್ ಮೇಲಿನ ದರಗಳನ್ನು ಶೇಕಡಾ 18ರಿಂದ ಶೇಕಡಾ 5ಕ್ಕೆ ಇಳಿಸಲಾಗಿದೆ. ಎಲ್ಲ ವೈಯಕ್ತಿಕ ಜೀವ ಮತ್ತು ಆರೋಗ್ಯ ವಿಮಾ ಪಾಲಿಸಿಗಳಿಗೆ ಇನ್ನು ಮುಂದೆ ಶೂನ್ಯ ತೆರಿಗೆ, ತೆರಿಗೆ ದರ ಶೇ 28ರಿಂದ ಶೇ 18ಕ್ಕೆ ಇಳಿಯುವುದರಿಂದ ಸಿಮೆಂಟ್ ಬೆಲೆ ಕಡಿಮೆಯಾಗುತ್ತದೆ.
1,200 ಸಿಸಿಗಿಂತ ಕಡಿಮೆ ಮತ್ತು 4,000 ಎಂಎಂಗಿಂತ ಹೆಚ್ಚು ಇಲ್ಲದ ಪೆಟ್ರೋಲ್, ಎಲ್‌ಪಿಜಿ ಮತ್ತು ಸಿಎನ್‌ಜಿ ವಾಹನಗಳು ಹಾಗೂ 1,500 ಸಿಸಿ ಮತ್ತು 4,000 ಎಂಎಂ ಉದ್ದದ ಡೀಸೆಲ್ ವಾಹನಗಳ ಜಿಎಸ್ ಟಿ ಕೂಡಾ ಶೇ.28ರಿಂದ ಶೇಕಡಾ 18ಕ್ಕೆ ಇಳಿಯಲಿದೆ. 350 ಸಿಸಿ ವರೆಗಿನ ಮೋಟಾರ್ ಸೈಕಲ್‌ಗಳು, ಹವಾನಿಯಂತ್ರಣ ಯಂತ್ರಗಳು, ಡಿಶ್‌ವಾಶರ್‌ಗಳು ಮತ್ತು ಟಿವಿಗಳಂತಹ ಗ್ರಾಹಕ ಎಲೆಕ್ಟ್ರಾನಿಕ್ಸ್‌ಗಳಿಗೆ ಸದ್ಯ ಶೇ 28ರಷ್ಟು ತೆರಿಗೆ ವಿಧಿಸಲಾಗುತ್ತಿದ್ದು, ಶೇ 18ರಷ್ಟು ಕಡಿಮೆ ಜಿಎಸ್‌ಟಿ ವಿಧಿಸಲಾಗುತ್ತದೆ. ಎಲೆಕ್ಟ್ರಿಕ್ ವಾಹನಗಳಿಗೆ ಶೇ 5ರಷ್ಟು ಜಿಎಸ್‌ಟಿ ಮುಂದುವರಿಯಲಿದೆ.
ಬೆಣ್ಣೆ ಮತ್ತು ತುಪ್ಪದಿಂದ ಹಿಡಿದು ಒಣ ಬೀಜಗಳು, ಮಂದಗೊಳಿಸಿದ ಹಾಲು, ಸಾಸೇಜ್‌ಗಳು ಮತ್ತು ಮಾಂಸ, ಸಕ್ಕರೆ ಬೇಯಿಸಿದ ಮಿಠಾಯಿ, ಜಾಮ್ ಮತ್ತು ಹಣ್ಣಿನ ಜೆಲ್ಲಿಗಳು, ಎಳನೀರು, ನಮ್ಕೀನ್, 20 ಲೀಟರ್ ಬಾಟಲಿಗಳಲ್ಲಿ ಪ್ಯಾಕ್ ಮಾಡಿದ ಕುಡಿಯುವ ನೀರು, ಹಣ್ಣಿನ ತಿರುಳು ಅಥವಾ ಹಣ್ಣಿನ ರಸ, ಹಾಲು, ಐಸ್ ಕ್ರೀಮ್, ಪೇಸ್ಟ್ರಿ ಮತ್ತು ಬಿಸ್ಕತ್ತುಗಳು, ಪಾನೀಯಗಳು, ಕಾರ್ನ್ ಫ್ಲೇಕ್ಸ್ ಮತ್ತು ಧಾನ್ಯಗಳು ಹಾಗೂ ಸಕ್ಕರೆ ಮಿಠಾಯಿಗಳ ತೆರಿಗೆ ದರವನ್ನು ಪ್ರಸ್ತುತ ಶೇ.18ರಿಂದ ಶೇಕಡಾ 5ಕ್ಕೆ ಇಳಿಸಲಾಗುತ್ತಿದೆ.
ಎಲ್ಲ ರೀತಿಯ ಚಪಾತಿ ಮತ್ತು ಪರಾಠಾಗಳಿಗೆ ಪ್ರಸ್ತುತ ಇರುವ ಶೇ.5 ರ ದರದಿಂದ ಶೂನ್ಯ ತೆರಿಗೆ ಇರಲಿದೆ. ಶೇಕಡ 40ರ ಹೊಸ ಸ್ಲ್ಯಾಬ್ ನಲ್ಲಿ ದುಬಾರಿ ಕಾರುಗಳು, ತಂಬಾಕು ಮತ್ತು ಸಿಗರೇಟ್ , 1,200 ಸಿಸಿಗಿಂತ ಹೆಚ್ಚಿನ ಮತ್ತು 4,000 ಎಂಎಂಗಿಂತ ಹೆಚ್ಚಿನ ಉದ್ದದ ಎಲ್ಲ ಆಟೋಮೊಬೈಲ್‌ಗಳು ಹಾಗೂ 350 ಸಿಸಿಗಿಂತ ಹೆಚ್ಚಿನ ಮೋಟಾರ್ ಸೈಕಲ್‌ಗಳು, ವೈಯಕ್ತಿಕ ಬಳಕೆಗಾಗಿ ವಿಹಾರ ನೌಕೆಗಳು ಮತ್ತು ವಿಮಾನಗಳು ಹಾಗೂ ರೇಸಿಂಗ್ ಕಾರುಗಳಿಗೆ ಅನ್ವಯವಾಗಲಿದೆ. ಒಟ್ಟಾರೆ ದೇಶದ ಈ ತೆರಿಗೆ ವ್ಯವಸ್ಥೆಯ ಸರಳೀಕರಣವನ್ನು ಪ್ರಮುಖ ಘಟ್ಟವೆಂದು ಪರಿಗಣಿಸಲಾಗಿದೆ. ಜನರು ಶೀಘ್ರದಲ್ಲೇ ಈ ಸುಧಾರಣೆಯ ಲಾಭವನ್ನು ಪಡೆದುಕೊಳ್ಳಲಿದ್ದಾರೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ


