Advertisement
ಅನುಕ್ರಮ

ಸಾಂಪ್ರದಾಯಿಕ ಶಿಕ್ಷಣ ಉಳಿಯುವುದೇ?

Share

ಇತ್ತೀಚೆಗೆ ಮಂಗಳೂರು ವಿಶ್ವವಿದ್ಯಾಲಯವು 22 ಖಾಸಗಿ ಕಾಲೇಜುಗಳನ್ನು ಮುಚ್ಚುವುದಾಗಿ ನಿರ್ಣಯಿಸಿತು. ವಾಸ್ತವಿಕವಾಗಿ ಈ ನಿರ್ಧಾರ ಪ್ರಕಟವಾಗುವ ಮೊದಲೇ ವಿದ್ಯಾರ್ಥಿಗಳ ಕೊರತೆಯಿಂದಾಗಿ ಆ ಕಾಲೇಜುಗಳು ಕಾರ್ಯ ನಿಲ್ಲಿಸಿದ್ದುವು. ಆದರೆ ಅದರ ವಿರುದ್ಧ ಪ್ರತಿಭಟನೆಯಾಗಲೀ ಸದನದಲ್ಲಿ ಚರ್ಚೆಯಾಗಲೀ ನಡೆಯಲಿಲ್ಲ. ಏಕೆಂದರೆ ಆ ಕಾಲೇಜುಗಳು ಹುಟ್ಟಿದ್ದೇ ಲಾಭಕ್ಕಾಗಿ. ಅದಿಲ್ಲದಿದ್ದ ಬಳಿಕ ಅಂತಹ ಕಾಲೇಜುಗಳನ್ನು ನಡೆಸುವುದಾದರೂ ಯಾರಿಗಾಗಿ? ಹಾಗಾಗಿ ಮುಚ್ಚಲ್ಪಡುವ ಕಾಲೇಜುಗಳನ್ನು ನಡೆಸಬೇಕೆಂದು ಬೀದಿಗಿಳಿಯುವವರು ಯಾರು? ಇನ್ನು ಆ ಕಾಲೇಜುಗಳ ಅಸ್ತಿತ್ವವು ಐತಿಹಾಸಿಕವಾಗಿ ಬಿಡುತ್ತದೆ. ಸ್ಥಳೀಯರಿಗೆ ಹಾಗೂ ಅಲ್ಲಿ ಕಲಿತ ವಿದ್ಯಾರ್ಥಿಗಳ ನೆನಪಿನಲ್ಲಿ ಕೆಲವು ಕಾಲ ಉಳಿಯಬಹುದು. ಆ ಕಾಲೇಜಿನ ಕೇಂಪಸ್ ಬೇರೆ ಯಾವುದಾದರೂ ಸಂಸ್ಥೆಯ ಬಳಕೆಗೆ ಸಿಕ್ಕಿದರೆ ಅದರ ಕೆಲವು ವರ್ಷಗಳ ಅಸ್ತಿತ್ವದ ಸ್ಮರಣೆಯು ಜನಮನದಲ್ಲಿ ಆಳವಾಗಿ ಉಳಿಯುವುದಿಲ್ಲ.

Advertisement
Advertisement

ಮಂಗಳೂರು ವಿಶ್ವವಿದ್ಯಾಲಯವು ನಮ್ಮೂರಿನದ್ದಾದುದರಿಂದ ಕಾಲೇಜುಗಳನ್ನು ಮುಚ್ಚಿದ ಮಾಹಿತಿ ನಮಗೆ ಸ್ಥಳೀಯ ಪತ್ರಿಕೆಗಳಲ್ಲಿ ಸಿಕ್ಕಿದೆ. ಆದರೆ ಹೀಗೆಯೇ ಬೇರೆ ವಿದ್ಯಾಲಯಗಳಲ್ಲಿಯೂ ಆಗಿರುವ ಸಾಧ್ಯತೆ ಇದೆ. ಏಕೆಂದರೆ ಒಂದು ಶೈಕ್ಷಣಿಕ ವಿಶ್ಲೇಷಣೆಯ ಪ್ರಕಾರ ಮುಂದಿನ ಹತ್ತು ವರ್ಷಗಳಲ್ಲಿ ಭಾರತದಲ್ಲಿ ಸುಮಾರು 80% ಕಾಲೇಜುಗಳು ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚಲ್ಪಡುತ್ತವೆ. ಇದು ಅಚ್ಚರಿಯ ಭವಿಷ್ಯವೆನ್ನಿಸಿದರೂ ಅಸಂಭವವಲ್ಲ ಎನ್ನುವುದಕ್ಕೆ ಅನೇಕ ಆಧಾರಗಳಿವೆ.

ಅವುಗಳಲ್ಲಿ ಹೆಚ್ಚಿನವು ಇತಿಹಾಸವೇ ಮುಂತಾದ ಸಮಾಜ ವಿಜ್ಞಾನಗಳ ಕಾಲೇಜುಗಳು ಎಂಬುದನ್ನು ಊಹಿಸಬಹುದಾಗಿದೆ. ಏಕೆಂದರೆ ಇತಿಹಾಸದ ಮತ್ತು ಸಂಸ್ಕೃತಿಯ ಶಿಕ್ಷಣವು ಹೆಚ್ಚು ವೇತನದ ಉದ್ಯೋಗಗಳನ್ನು ಪಡೆಯಲು ಅರ್ಹತೆ ನೀಡುವುದಿಲ್ಲ. ಸ್ವೋದ್ಯೋಗ ಅಥವಾ ಸ್ಟಾರ್ಟ್ ಅಪ್ ಮಾಡಲು ಬಂಡವಾಳ ಪಡೆಯುವ ಸಾಧ್ಯತೆಯೂ ಇಲ್ಲ. ಇನ್ನು ಅಂಕಗಳು ಕೂಡಾ ಮೌಲ್ಯಮಾಪಕರ ಕೃಪೆಯಿಂದ ಸಿಕ್ಕಿದಷ್ಟು ದಕ್ಕೀತು. ಅವುಗಳನ್ನು ಆಧರಿಸಿ ಭದ್ರವಾದ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಿಲ್ಲ. ವಿಜ್ಞಾನ ಕಲಿತವರು ತಾಂತ್ರಿಕತೆಯ ಪ್ರಯೋಗಗಳಿಂದ ಸ್ವಂತವಾಗಿ ಉದ್ಯಮವನ್ನು ಆರಂಭಿಸುವಷ್ಟು ಸುಲಭವಾಗಿ ಸಮಾಜವಿಜ್ಞಾನ ಕಲಿತವರಿಂದ ಸಾಧ್ಯವಾಗುವುದಿಲ್ಲ. ಅಲ್ಲದೆ ಸರಕಾರದಿಂದಲೂ ಯೋಜನೆಗಳ ಪ್ರಮಾಣವೂ ಕಡಿಮೆ ಇದೆ. ಅವುಗಳ ಒದಗುವಿಕೆಯೂ ಸಂದಿಗ್ಧವಾಗಿರುತ್ತದೆ. ಇನ್ನು ವ್ಯಾಪಾರ, ಏಜೆನ್ಸ್‍ಗಳು, ಗುಮಾಸ್ತಗಿರಿ, ಮೇನೇಜರ್ ಕೆಲಸ ಇತ್ಯಾದಿಗಳು ಉನ್ನತ ಆರ್ಥಿಕ ಸಂಪನ್ಮೂಲಗಳನ್ನು ಒದಗಿಸುವುದಿಲ್ಲ. ಹೀಗೆ ಸ್ವೋದ್ಯೋಗದ ಅವಕಾಶಗಳೂ ಕಡಿಮೆ ಇರುವ ಸಮಾಜ ವಿಜ್ಞಾನ ಹಾಗೂ ಭಾಷೆಗಳ ಶಿಕ್ಷಣವಾದ ಬಿ.ಎ. ಡಿಗ್ರಿ ಆಕರ್ಷಣೆ ಕಳೆದುಕೊಂಡಿದೆ. ಹಾಗಾಗಿ ಈಗ ಕಾಲೇಜುಗಳಲ್ಲಿ ಮೊದಲಿಗೆ ಬಿ.ಎ. ಪದವಿ ಶಿಕ್ಷಣದ ಕೊಂಡಿ ಕಳಚಿಕೊಳ್ಳುತ್ತದೆ. ಲಾಯರ್ ಪದವಿಗೂ ಬಿ.ಎ ಕಲಿತಿರುವುದು ಅನಿವಾರ್ಯವಲ್ಲ. ಅಲ್ಲಿ ಬಿಎಸ್ಸಿ, ಬಿ.ಕಾಂ ಪದವೀಧರರೂ ಪ್ರವೇಶ ಪಡೆಯುವುದರಿಂದ ಬಿ.ಎ ಶಿಕ್ಷಣಕ್ಕೆ ವಿದ್ಯಾರ್ಥಿಗಳ ಸಂಖ್ಯೆ ತೀವ್ರವಾಗಿ ಇಳಿಮುಖವಾಗಿದೆ. ಆದರೆ ಕಾಲೇಜನ್ನು ಉಳಿಸಿಕೊಳ್ಳುವುದಕ್ಕಾಗಿ ವಿಜ್ಞಾನ ಶಿಕ್ಷಣವಾದ ಬಿಎಸ್ಸಿಯನ್ನು ಮಾಡಲು ಅಗತ್ಯವಿರುವ ಪ್ರಯೋಗಾಲಯಗಳು ಹಾಗೂ ಕಂಪ್ಯೂಟರ್‍ಗಳ ಮೊತ್ತ ಅಪಾರವಾದುದರಿಂದ ಅದೂ ಕಷ್ಟದ ದಾರಿಯಾಗಿದೆ.

ಆಧುನಿಕ ಜಗತ್ತಿನಲ್ಲಿ ಹಣದ ಲೆಕ್ಕಾಚಾರ, ತೆರಿಗೆ ಪಾವತಿ, ಖಾಸಗಿ ವ್ಯಕ್ತಿಗಳು ಹಾಗೂ ವ್ಯವಹಾರ ಉದ್ಯಮಗಳಲ್ಲಿ ಆರ್ಥಿಕ ವ್ಯವಹಾರದ ದಾಖಲೆಗಳನ್ನು ಇಡುವುದು ಅನಿವಾರ್ಯವಾದುದರಿಂದ ಬಿ.ಕಾಂ ಪದವಿ ಕೋರ್ಸ್‍ಗೆ ಆಕರ್ಷಣೆ ಬಂದಿದೆ. ಆದರೆ ಅದಕ್ಕೂ ಒಂದು ಸಂತೃಪ್ತಿಯ ಕಾಲ ಬರಲಿದೆ. ಅಂದರೆ ಇನ್ನು ಸದ್ಯ ಬಿ.ಕಾಂ ಕಲಿತವರು ಬೇಕಾಗಿಲ್ಲವೆಂಬ ದಿನಗಳು ಬಂದಾಗ ವಿದ್ಯಾರ್ಥಿಗಳಿಲ್ಲದೆ ಕಾಲೇಜುಗಳು ಇನ್ನೂ ದುರ್ಬಲವಾಗುತ್ತವೆ. ಸಾಂಪ್ರದಾಯಿಕ ಬಿ.ಎಸ್ಸಿ ಕೋರ್ಸ್‍ಗಳೂ ಆಕರ್ಷಣೆ ಕಳೆದುಕೊಳ್ಳುವ ಕಾಲ ಬಂದಾಗ ಕಾಲೇಜುಗಳು ಮುಚ್ಚುತ್ತವೆ. ವಿಶ್ಲೇಷಕರ ಪ್ರಕಾರ ಇನ್ನು ಹತ್ತು ವರ್ಷಗಳಲ್ಲಿ ಈ ವಿದ್ಯಮಾನ ಕಂಡು ಬರಲಿದೆ. ಸುಮಾರು 80% ಕಾಲೇಜುಗಳು ಅನಗತ್ಯವಾಗುತ್ತವೆ. ಆಗ ವಿಶ್ವವಿದ್ಯಾಲಯಗಳೂ ಅಸ್ತಿತ್ವಕ್ಕಾಗಿ ಹೊಸ ಶಿಕ್ಷಣ ಸಂಸ್ಥೆಗಳನ್ನು ಬೆಳೆಸುವ ಉಪಾಯವನ್ನ ಹುಡುಕಬೇಕಾಗುತ್ತದೆ.

ಕಾಲೇಜುಗಳನ್ನು ಮುಚ್ಚಲು ಇನ್ನೂ ಒಂದು ಕಾರಣವಿದೆ. ಮುಖ್ಯವಾಗಿ ಶಿಕ್ಷಣವು ಅರ್ಥಪೂರ್ಣವಾಗಿ ನಡೆಯದಿರುವುದೇ ಪ್ರಬಲ ಕಾರಣವಾಗಿದೆ. ಅಂದರೆ ಶಿಕ್ಷಣಾರ್ಥಿಗಳನ್ನು ಸೃಜನಶೀಲ ಚಿಂತನೆಗಳ ಉತ್ಸಾಹಿ ವ್ಯಕ್ತಿಗಳನ್ನಾಗಿ ಬೆಳೆಸುವಲ್ಲಿ ಶಿಕ್ಷಣ ವ್ಯವಸ್ಥೆಯು ಸೋತಿದೆ. ಅತಿಯಾದ ಪಾಠಪಟ್ಟಿ, ಪರೀಕ್ಷೆಗಳ ಹೊರೆ, ಉದಾರವಾದ ಮೌಲ್ಯಮಾಪನ, ವಿದ್ಯಾರ್ಥಿಗಳು ಕಲಿಯದಿದ್ದರೂ ತೇರ್ಗಡೆಗೊಳಿಸುತ್ತ ಹೋಗುವುದು, ಅದಕ್ಕಾಗಿ ಪಬ್ಲಿಕ್ ಪರೀಕ್ಷೆಗಳಲ್ಲಿ ಗ್ರೇಸ್ ಮಾರ್ಕ್ ಕೊಡುವುದು ಇತ್ಯಾದಿಗಳಿಂದ ಪರೀಕ್ಷಾ ಫಲಿತಾಂಶದಲ್ಲಿ ಏರಿಕೆ ತೋರಿಸುವಾಗ ಗುಣಮಟ್ಟವನ್ನು ಪೂರ್ತಿಯಾಗಿ ಅವಗಣಿಸುವುದು ಇತ್ಯಾದಿಗಳು ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಕಂಡುಬರುವ ವಿದ್ಯಮಾನಗಳಾಗಿವೆ. ಇವುಗಳೇ ಮುಂದುವರಿದು ಕಾಲೇಜಿಗೆ ಬಂದ ವಿದ್ಯಾರ್ಥಿಗಳಿಗೂ ಸರಿಯಾದ ಅಕ್ಷರ ಜ್ಞಾನವಿಲ್ಲ. ಪರಿಕಲ್ಪನೆಗಳ ಪರಿಚಯವಿಲ್ಲ, ಸ್ಪೆಲ್ಲಿಂಗ್ ಸರಿ ಇಲ್ಲ, ನಿಯಮಗಳ ತಾರ್ಕಿಕ ವಿವರಣೆ ಗೊತ್ತಿಲ್ಲ, ಏನನ್ನು ಸರಿಯಾಗಿ ಬರೆಯುವುದಕ್ಕಾಗಲೀ, ವಿವರಿಸುವುದಕ್ಕಾಗಲೀ ತಿಳಿದಿಲ್ಲದಿದ್ದರೂ ಅವರಿಗೆ ಫಸ್ಟ್ ಕ್ಲಾಸ್ ಅಂಕಗಳೊಂದಿಗೆ ಬಿ.ಎ. ಪದವಿಯನ್ನು ನೀಡಲಾಗುತ್ತದೆ. ಅಂತಹವರು ಕೆಲವರು ಬಿ.ಎಡ್. ಪದವಿಗೆ ಸೇರಿ ಇದೇ ಅಜ್ಞಾನಗಳ ಮುಂದುವರಿದ ಸರಕಾರಿ ಪರೀಕ್ಷೆಯಲ್ಲಿ ಉನ್ನತ ಅಂಕಗಳನ್ನು ಗಳಿಸಿ ಶಿಕ್ಷಕರಾಗುತ್ತಾರೆ. ಮತ್ತೆ ಅವರ ಸಾಮರ್ಥ್ಯ ಅಷ್ಟೇ ಇರುತ್ತದೆ. ಅವರು ಎಂತಹ ವಿದ್ಯಾರ್ಥಿಗಳನ್ನು ರೂಪಿಸಬಲ್ಲರು? ಹೀಗಾಗಿ ಒಟ್ಟಾರೆಯಾಗಿ ಶಿಕ್ಷಣ ವ್ಯವಸ್ಥೆಯೇ ಬುಡದಲ್ಲಿ ದುರ್ಬಲವಾಗಿದ್ದು ಮೊದಲಿಗೆ ಕಾಲೇಜುಗಳೇ ಕುಸಿಯುತ್ತವೆ. ನಂತರ ಪ್ರೌಢ ಮತ್ತು ಪ್ರಾಥಮಿಕ ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆಯಾಗಬೇಕಾಗಿದೆ. ಶಾಲೆಗಳ ಚಿತ್ರಣವೇ ಹೊಸತಾಗಿ ರೂಪುಗೊಳ್ಳಬೇಕಿದೆ.

ಕಾಲೇಜುಗಳು ಮುಚ್ಚಲ್ಪಡುವುದು ಯಾಕೆ ಅನಿವಾರ್ಯ ಎಂದರೆ ಪ್ರಸ್ತುತ ಶೈಕ್ಷಣಿಕ ವ್ಯವಸ್ಥೆಯಲ್ಲಿ ಮೂರು ವರ್ಷ ಕಲಿತು ಡಿಗ್ರಿ ಪಡೆದವನಿಂದ ಏನು ಸಾಧ್ಯವೆಂಬ ಪ್ರಶ್ನೆಗೆ ಉತ್ತರ ಸಿಗುವುದಿಲ್ಲ. ಆದರೆ ಕೆಲವೇ ತಿಂಗಳುಗಳ ತರಬೇತಿ ಪಡೆದ ಪ್ಲಂಬರ್ ದಿನಕ್ಕೆ 1200/-ರಿಂದ 2000/- ರೂಪಾಯಿ ಸಂಪಾದಿಸುತ್ತಾನೆ. ಅಂದರೆ ತಿಂಗಳಿಗೆ 30 ರಿಂದ 50 ಸಾವಿರದಷ್ಟು ಸಂಪಾದನೆ ಆಗುತ್ತದೆ. ಅಲ್ಲದೆ ಪ್ಲಂಬಿಂಗ್ ನಿರಂತರ ಡಿಮಾಂಡ್ ಇರುವ ವೃತ್ತಿಯಾಗಿದೆ. ಇಲೆಕ್ಟ್ರಿಶಿಯನ್ ದಿನಕ್ಕೆ 1500/- ರಿಂದ 2,500/- ಸಂಪಾದಿಸುತ್ತಾನೆ. ಅಂದರೆ ತಿಂಗಳಿಗೆ ರೂ 45,000/- ದಿಂದ 60,000/- ಆಗುತ್ತದೆ. ಪ್ರಸ್ತುತ ಇಲೆಕ್ಟ್ರಿಶಿಯನ್‍ಗಳಿಗೆ ಪುರುಸೊತ್ತೇ ಇಲ್ಲದಷ್ಟು ಕೆಲಸವಿದೆ. ಸಾರಣೆ ಕೆಲಸ ಮಾಡುವ ಮೇಸ್ತ್ರಿ ಅಥವಾ ಟೈಲ್ಸ್ ಅಂಟಿಸುವ ಗಾರೆಯವನು ತಿಂಗಳಿಗೆ 45,000 ರಿಂದ 60,000 ಸಂಪಾದಿಸುತ್ತಾನೆ. ಕಟ್ಟಡಗಳ ನಿರ್ಮಾಣವು ನಿರಂತರವಾಗಿ ಆಗುತ್ತಲೇ ಇದೆ. ಅಮೆಜಾನ್ ಇತ್ಯಾದಿ ಕೊರಿಯರ್‍ಗಳನ್ನು ಬೈಕಲ್ಲಿ ಹೋಗಿ ವಿತರಣೆ ಮಾಡುವವರಿಗೆ ಮತ್ತು ಜೊಮಾಟೊ, ಸ್ವಿಗ್ಗಿ ಮೊದಲಾದ ಆಹಾರ ತಲುಪಿಸುವವರಿಗೆ ತಿಂಗಳಿಗೆ 30 ರಿಂದ 40 ಸಾವಿರ ಆದಾಯವಿದೆ. ಸಣ್ಣ ವ್ಯಾಪಾರಿಗಳಿಗೂ ತಿಂಗಳ ಆದಾಯ 30ರಿಂದ 70 ಸಾವಿರ ಇದೆ.

ಆದರೆ ಕಾಲೇಜಿನಿಂದ ಹೊರಗೆ ಬಂದು ಜಗತ್ತನ್ನು ನೋಡಿದರೆ ಬಿ.ಎ., ಬಿ.ಕಾಂ ಆದವರನ್ನು ಕರೆದು ಕೆಲಸ ಕೊಡುವವರಿಲ್ಲ. ಹೋಗಿ ಕೇಳಿದರೂ ಈಗ ಬೇಡವೆನ್ನುತ್ತಾರೆ. ಉದ್ಯೋಗಕ್ಕೆ ಜನ ಬೇಕಿದ್ದರೂ ನೇಮಕಾತಿಗೆ ಇವರು ಯೋಗ್ಯರಲ್ಲವಾಗಿರುವುದೇ ಈ ಬಗೆಯ ತಿರಸ್ಕಾರಕ್ಕೆ ಕಾರಣವಾಗಿದೆ. ಕೊನೆಗೂ ಬಿ.ಎ. ಆದವರನ್ನು ತಿಂಗಳಿಗೆ 8 ರಿಂದ 10 ಸಾವಿರ ಸಂಬಳಕ್ಕೆ ಸೇರಿಸಿಕೊಳ್ಳಬಹುದು. ಬಿ.ಕಾಂ, ಎಂ.ಕಾಂ ಕಲಿತವರೂ ಸಾಕಷ್ಟು ಮಂದಿ ಹೊರಗೆ ಬರುತ್ತಿರುವುದರಿಂದ ಅವರಿಗೂ ತಿಂಗಳಿಗೆ 10 ರಿಂದ 15 ಸಾವಿರ ಸಿಗಬಹುದು. ಬಿ.ಎಸ್ಸಿ ಆದವರಿಗೆ ಬಿ.ಎಡ್ ಆಗಿದ್ದರೆ 10 ರಿಂದ 15 ಸಾವಿರ ಸಿಗಬಹುದು. ಎಂ.ಎಸ್ಸಿ ಆಗಿದ್ದರೂ ವಿಶೇಷ ವೇತನವೇನೂ ಇಲ್ಲ. ಏಕೆಂದರೆ ಇವರಲ್ಲಿ ಪದವಿ ಇರುತ್ತದೆಯೇ ಹೊರತು ಕೌಶಲ ಇರುವುದಿಲ್ಲ. ಅಂದರೆ ನಮ್ಮ ಕಾಲೇಜುಗಳು ವಿದ್ಯಾರ್ಥಿಗಳನ್ನು ಕೌಶಲ್ಯಾಧಾರಿತವಾಗಿ ಜ್ಞಾನ ಸಂಪನ್ನರನ್ನಾಗಿ ಮಾಡುವುದಿಲ್ಲ. ಅವರಲ್ಲಿ ತಾರ್ಕಿಕತೆ, ಶೋಧನಶೀಲತೆ, ವೈಚಾರಿಕತೆ, ವಿಶ್ಲೇಷಣಾ ಸಾಮರ್ಥ್ಯ ಇತ್ಯಾದಿ ಏನೂ ಇರುವುದಿಲ್ಲ. ಅಲ್ಲದೆ ದೈಹಿಕವಾಗಿ ಕೆಲಸ ಮಾಡಲು ಎದ್ದೇಳುವ ಉತ್ಸಾಹವೂ ಇರುವುದಿಲ್ಲ. ಹಾಗಾಗಿ ಇವರ ವೇತನ ಇನ್ನು ಹತ್ತು ವರ್ಷಗಳಾದರೂ ಏರುವುದಿಲ್ಲ. ಹೀಗಿರುವಾಗ ಪದವಿ ಗಳಿಸುವುದೇ ವ್ಯರ್ಥ ಎಂಬ ಚಿಂತನೆಗೆ ಪೋಷಕರೂ ವಿದ್ಯಾರ್ಥಿಗಳೂ ಬಂದರೆ ಆಗ ಕಾಲೇಜುಗಳನ್ನು ಮುಚ್ಚದೆ ಇನ್ನೇನು ಮಾಡುವುದು?

ಮುಂದಿನ ಜಗತ್ತು ಹೇಗೆಂದರೆ ಡಿಗ್ರಿ ಪಡೆದವರು ಕೆಲಸಕ್ಕಾಗಿ ಕಾಯುತ್ತಿರುತ್ತಾರೆ. ಆದರೆ ಕೌಶಲ ಗಳಿಸಿದವರು ಹೊಸ ಕೌಶಲಗಳ ಶೋಧನೆ ಹಾಗೂ ತರಬೇತಿಯೊಂದಿಗೆ ಹೆಚ್ಚು ಗಳಿಸುತ್ತಾರೆ. ಹೆಚ್ಚು ಕೌಶಲವೆಂದರೆ ಹೆಚ್ಚು ಆದಾಯವೆಂದು ಅರ್ಥ. ಹಾಗಾಗಿ ಸಾಂಪ್ರಾದಾಯಿಕ ಡಿಗ್ರಿ ಪಡೆದವನಿಗೆ ಕಾಯುವುದೇ ಕೆಲಸ, ಕೌಶಲ ಪಡೆದವನಿಗೆ ಪ್ರಗತಿಯತ್ತ ಚಲಿಸುವುದೇ ಕೆಲಸ.

ಈ ವಾಸ್ತವಿಕತೆಯ ಬಗ್ಗೆ ತಿಳಿದಿದ್ದರೂ ರಾಜಕಾರಣಿಗಳು ಶಿಕ್ಷಣ ಸುಧಾರಣೆಯ ಕಡೆಗೆ ಗಮನ ಕೊಡುವುದಿಲ್ಲ. ಅವರು ವಂಚನೆಯ ಮಾರ್ಗಗಳಿಂದ ಪರೀಕ್ಷಾ ಫಲಿತಾಂಶವನ್ನು ಹೆಚ್ಚು ಮಾಡಿ ತೋರಿಸುವತ್ತ ಚಿತ್ತ ಹರಿಸುತ್ತಾರೆ. ಇನ್ನು ಶ್ರೀಮಂತರು ಮತ್ತು ಗಣ್ಯರಿಗೆ ಈ ಬಗ್ಗೆ ಚಿಂತೆ ಇಲ್ಲ. ಏಕೆಂದರೆ ಅವರಿಗೆ ಸಾಧಾರಣ ಅನುತ್ಪಾದಕ ಕೆಲಸಗಳಿಗೆ ಜನ ಬೇಕು. ಅತ್ತ ವಿಶ್ವವಿದ್ಯಾಲಯಗಳಲ್ಲಿ ಸಂಭ್ರಮದ ಪದವಿ ಪ್ರದಾನ ಸಮಾರಂಭ ಮಾಡಿ ಕೋಟು ಮುಂಡಾಸು ಧರಿಸಿ ಔತಣ ಏರ್ಪಡಿಸಿ ಸಮಾರಂಭ ಮುಗಿಸುತ್ತಾರೆ. ಇತ್ತ ಡಿಗ್ರಿ ಪತ್ರ ಪಡೆದವರು ಹೊರಗೆ ಬಂದು ದಾರಿ ಕಾಣದಾಗುತ್ತಾರೆ. ಆದರೆ ಇದು ಮಧ್ಯಮ ವರ್ಗದ ಪೆÇೀಷಕರಿಗೆ ತಿಳಿಯುವುದಿಲ್ಲ. ಅವರಿನ್ನೂ ಕಾಲೇಜಿಗೆ ಮಕ್ಕಳನ್ನು ಕಳಿಸುವ ಬಗ್ಗೆಯೇ ಚಿಂತಿಸುತ್ತಿರುತ್ತಾರೆ. ಡಿಗ್ರಿ ಮುಗಿಸಿ ಉದ್ಯೋಗಕ್ಕೆ ತಯಾರಾಗುವ ಹೊತ್ತಲ್ಲಿ ತಮ್ಮ ಮಕ್ಕಳು ಎಂತಹ ಪ್ರಪಂಚವನ್ನು ಎದುರಿಸುತ್ತಾರೆಂದು ಹೆತ್ತವರಿಗೂ ಅಂದಾಜಿಸಲು ಕಷ್ಟ, ಮಕ್ಕಳಿಗಂತೂ ತಾವು ಅಸಮರ್ಥರೆಂದೇ ಗೊತ್ತಿರುವುದಿಲ್ಲ. ಬದಲಾಗುತ್ತಿರುವ ಜಗತ್ತಿನತ್ತ ಶಿಕ್ಷಣದ ಮಾರ್ಗವೂ ಮುಖ ಮಾಡಿರಬೇಕು. ಅಗತ್ಯವಿಲ್ಲದ ಪಠ್ಯಗಳು, ಅನುಪಯುಕ್ತ ತರಬೇತಿ, ಪರೀಕ್ಷೆಗಳಿಗಾಗಿ ಬಾಯಿಪಾಠದ ಕಲಿಕೆಗಳು, ದಿನ ಕಳೆಯುವ ರಜೆಗಳು ಇತ್ಯಾದಿಗಳನ್ನು ಮೀರಿದ ಶಿಕ್ಷಣ ವ್ಯವಸ್ಥೆ ಸಾಧ್ಯವೇ ಎಂಬುದನ್ನು ಯೋಜಿಸಬೇಕಾಗಿದೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಡಾ.ಚಂದ್ರಶೇಖರ ದಾಮ್ಲೆ

ಡಾ. ಚಂದ್ರಶೇಖರ ದಾಮ್ಲೆಯವರು ಸುಳ್ಯದ ನೆಹರು ಮೆಮೋರಿಯಲ್ ಕಾಲೇಜ್ ನಲ್ಲಿ ಸಮಾಜಶಾಸ್ತ್ರ ಪ್ರಾಧ್ಯಾಪಕರಾಗಿ 35 ವರ್ಷಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರು. ವೃತ್ತಿಯಲ್ಲಿರುವಾಗಲೇ ರಾಷ್ಟ್ರೀಯ ಸೇವಾ ಯೋಜನಾಧಿಕಾರಿಯಾಗಿ ಸಮಾಜಸೇವೆಯಲ್ಲಿ ತೊಡಗಿಕೊಂಡವರು. ಸಾಂಸ್ಕೃತಿಕ ಸಂಘದ ಮೂಲಕ ಮಕ್ಕಳಿಗೆ ಯಕ್ಷಗಾನ ನಿರ್ದೇಶಕನ, ಸುಳ್ಯದಲ್ಲಿ ಯಕ್ಷಗಾನ ಹಿತರಕ್ಷಣಾ ವೇದಿಕೆಯ ಸ್ಥಾಪನೆ, ಸಂಪೂರ್ಣ ಸಾಕ್ಷರತಾ ಆಂದೋಲನದಲ್ಲಿ ಸಂಪನ್ಮೂಲ ವ್ಯಕ್ತಿ, ಕನ್ನಡಮಾಧ್ಯಮದಲ್ಲಿ ಸ್ನೇಹ ಶಿಕ್ಷಣ ಸಂಸ್ಥೆಯ ಸ್ಥಾಪನೆ ಮುಂತಾದ ಸಮಾಜಮುಖಿ ಕಾರ್ಯಗಳಲ್ಲಿ ಸೇವೆ ನೀಡಿದವರು. ಶಿಕ್ಷಣದಲ್ಲಿ ಸೃಜನಶೀಲತೆಗೆ ಒತ್ತು ನೀಡುವ ದಾಮ್ಲೆಯವರು ಸಂಶೋಧಕರಾಗಿದ್ದು ಕನ್ನಡ ಇಂಗ್ಲಿಷ್ ಭಾಷೆಗಳಲ್ಲಿ ಕೃತಿ ರಚನೆ ಮಾಡಿದವರು. 'ನೆಲದನಂಟು' ಮತ್ತು "ಶಾಲೆ ಎಲ್ಲಿದೆ?" ಇವು ಇವರ ಪ್ರಸಿದ್ಧ ಕಾದಂಬರಿಗಳು. ಅನೇಕ ಪ್ರಶಸ್ತಿ ಸಮ್ಮಾನಗಳಿಂದ ಗೌರವಿಸಲ್ಪಟ್ಟ ದಾಮ್ಲೆಯವರಿಗೆ ಅಸಾಮಾನ್ಯ ಕನ್ನಡಿಗ ಪ್ರಶಸ್ತಿ, ಯಕ್ಷಮಂಗಳ ಪ್ರಶಸ್ತಿ, ಅರಣ್ಯಮಿತ್ರ ಮತ್ತು ಜಲಮಿತ್ರ ಪ್ರಶಸ್ತಿ, Nation Builder ಪ್ರಶಸ್ತಿ ಮುಂತಾದುವು ಲಭಿಸಿವೆ. ಹೊಸದಿಗಂತ ಪತ್ರಿಕೆಯಲ್ಲಿ "ಇದ್ಯಾಕೆ ಹೀಗೆ " ಅಂಕಣವನ್ನು ಬರೆಯುತ್ತಿದ್ದರು.

Published by
ಡಾ.ಚಂದ್ರಶೇಖರ ದಾಮ್ಲೆ

Recent Posts

ಸರ್ಕಾರಿ ಶಾಲೆ ಮಕ್ಕಳಿಗೆ ಚೆಸ್ ಪಾಠ | ದ.ಕ ದಲ್ಲಿ “ಚೆಸ್ ಇನ್ ಸ್ಕೂಲ್” ಆರಂಭ | ಗ್ರಾಮೀಣ ಮಕ್ಕಳಿಗೆ ಬೌದ್ಧಿಕ ಅವಕಾಶ

ದಕ್ಷಿಣ ಕನ್ನಡ ಜಿಲ್ಲೆಯ ಸರ್ಕಾರಿ ಶಾಲಾ ಮಕ್ಕಳಿಗೆ ಚೆಸ್ ಆಟವನ್ನು ಪರಿಚಯಿಸುವ “ಚೆಸ್…

5 hours ago

ಕೊಳೆ ರೋಗ ನಿಯಂತ್ರಣಕ್ಕೂ ತೆರಿಗೆ…? ಮೈಲುತುತ್ತಿಗೆ ಸುಂಕ – ಅಡಿಕೆ ರೈತನಿಗೆ ಮತ್ತೊಂದು ಹೊರೆ..!

ಅಡಿಕೆ ಬೆಳೆಗಾರ ಇಂದು ಕೇವಲ ಬೆಳೆಗಾರನಲ್ಲ. ಅವನು ಹವಾಮಾನ ಬದಲಾವಣೆ, ರೋಗದ ಸಮಸ್ಯೆ,…

12 hours ago

ದೇಶದಲ್ಲಿ ರಬಿ ಋತು ಬಿತ್ತನೆ ದಾಖಲೆ ಹೆಚ್ಚಳ | 660.48 ಲಕ್ಷ ಹೆಕ್ಟೇರ್‌ಗೆ ಏರಿದ ಒಟ್ಟು ವಿಸ್ತೀರ್ಣ

ಕೇಂದ್ರ ಕೃಷಿ ಸಚಿವಾಲಯವು ಜನವರಿ 23, 2026ರವರೆಗಿನ ರಬಿ ಬೆಳೆ(ಚಳಿಗಾಲದ ಬಿತ್ತನೆ) ಬಿತ್ತನೆಯ…

12 hours ago

ಯೂರಿಯಾ ಮಾರಾಟ 3.8% ಏರಿಕೆ | ದೇಶೀಯ ಉತ್ಪಾದನೆ ಕುಸಿತ, ಆಮದು 85% ಹೆಚ್ಚಳ

ದೇಶದಲ್ಲಿನ ಕೃಷಿ ಬೆಳೆಗಳಿಗೆ ಅಗತ್ಯವಾದ ಪೋಷಕಾಂಶ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ರಸಗೊಬ್ಬರ ವಲಯವು ದೇಶೀಯ…

13 hours ago

ಶುದ್ಧ ಹಿಮಾಲಯವೂ ಸುರಕ್ಷಿತವಲ್ಲ..! ಮರುಭೂಮಿ ಧೂಳಿನೊಂದಿಗೆ ಹರಡುವ ರೋಗಕಾರಕಗಳು

ಹಿಮಾಲಯವನ್ನು ಶುದ್ಧ ಮತ್ತು ಸುರಕ್ಷಿತ ವಾತಾವರಣದ ಪ್ರತೀಕವೆಂದುಕೊಂಡಿದ್ದರೂ, ಜಾಗತಿಕ ಹವಾಮಾನ ಬದಲಾವಣೆ ಹಾಗೂ…

13 hours ago

ಕೃಷಿ ಆಧಾರಿತ ಕೈಗಾರಿಕೆ ಉತ್ತೇಜನದಿಂದ ರೈತರ ಭವಿಷ್ಯ ರೂಪಾಂತರ

ರಾಜಸ್ಥಾನದಲ್ಲಿ ಕೃಷಿ ಆಧಾರಿತ ಕೈಗಾರಿಕೆಗಳನ್ನು ಉತ್ತೇಜಿಸುವ ಮೂಲಕ ರೈತರ ಭವಿಷ್ಯವನ್ನು ಸಂಪೂರ್ಣವಾಗಿ ಬದಲಾಯಿಸಬಹುದು…

13 hours ago