Advertisement
ಅನುಕ್ರಮ

ಕೆಲಸವೆಂದರೆ ಮಕ್ಕಳಿಗೆ ಮನೆಯಲ್ಲಿ ಭಾರ, ಶಾಲೆಯಲ್ಲಿ ಹಗುರ

Share
ಇದು ನಮ್ಮ ಸುಳ್ಯದ ಸ್ನೇಹ ಶಾಲೆಯ ಪೋಷಕಬ್ಬರ ಮಾತು. ಅದು ಕೂಡಾ ಸಂಪೂರ್ಣ ಸಹಜ  ಕೃಷಿ ಚ್ಯಾನಲ್‍ನ  ಶಿವಪ್ರಸಾದ್ ಮಲೆಬೆಟ್ಟು ಅವರು ಕೇಳಿದ ಪ್ರಶ್ನೆಗೆ ‘ಥಟ್ಟಂತ’ ಹೇಳಿದ ಉತ್ತರ. ನಾವು ಮಲೆನಾಡು ಗಿಡ್ಡ ತಳಿಯ ಮೂರು ಕರುಗಳನ್ನು ಶಾಲೆಯ ಆವರಣದಲ್ಲಿ ಕಟ್ಟಿದ್ದನ್ನು ಕಂಡ ಶಿವಪ್ರಸಾದರು, “ನಿಮ್ಮ ಮಗಳಿಗೆ ಶಾಲೆಯಲ್ಲಿ ದನವನ್ನು ಮುಟ್ಟುವುದು ಇಷ್ಟವಾ?” ಎಂತ ಕೇಳಿದ ಪ್ರಶ್ನೆಗೆ ಪೂಜಿತಾಳ ತಂದೆ ಕಲ್ಲಪಳ್ಳಿಯ ರಾಧಾಕೃಷ್ಣರು ನೀಡಿದ ಉತ್ತರವಿದು. “ಮನೆಯಲ್ಲಿ ನಾವು ಹಟ್ಟಿಯ ಹತ್ತಿರ ಬಾ” ಎಂದು  ಕರೆದಾಗ “ಒಲ್ಲೆ” ಎನ್ನುತ್ತಿದ್ದವಳು ಈಗ ತನ್ನ ಸ್ನೇಹಶಾಲೆಯಲ್ಲಿ ಮೂರು ಕರುಗಳನ್ನು ಕಟ್ಟಿದ ಬಳಿಕ ಪೂಜಾಗೆ ದಿನಾಲೂ ಗೆಳತಿಯರೊಡನೆ ಅವನ್ನು ನೋಡಲು ಹಟ್ಟಿಗೆ ಬರುವುದು ಒಂದು ಅಭ್ಯಾಸವೇ ಆಗಿದೆ. ಅದೇ ಮುಂದುವರಿದು ಈಗ ಮನೆಯಲ್ಲೂ ಹಟ್ಟಿಗೆ ಬರುತ್ತಾಳೆ. ಅಮ್ಮ ಹಟ್ಟಿಗೆ ಕರೆದಾಗ ತಕರಾರಿಲ್ಲದೆ ನೆರವಾಗುತ್ತಾಳೆ. ಅಂದರೆ ಶಾಲೆಯ ಒಂದು ಚಟುವಟಿಕೆ ಮಕ್ಕಳಲ್ಲಿ ಒಂದು ವರ್ತನೆಯನ್ನು ಬೆಳೆಸಲು ಕಾರಣವಾಗುತ್ತದೆ! ಯಾವ ಶಾಲೆಯಲ್ಲೂ ಮಕ್ಕಳ ಶಿಕ್ಷಣಕ್ಕಾಗಿ ಗದ್ದೆ ಮಾಡುವುದಾಗಲೀ, ಜಾನುವಾರುಗಳ ಮೇಲಿನ ಪ್ರೀತಿಗಾಗಿ ದನ ಸಾಕುವುದಾಗಲೀ ಮಾಡುವುದಿಲ್ಲ. ಆದರೆ ಸ್ನೇಹ ಶಾಲೆಯಲ್ಲಿ ಮಾಡುತ್ತಾರೆ. ಅದರಿಂದ ಶಾಲೆಗೆ ಖರ್ಚಾಗುತ್ತದೆ ನಿಜ, ಆದರೆ ಪರೋಕ್ಷವಾಗಿ ಮಕ್ಕಳಿಗೆ ಕಲಿಕೆಯ ಲಾಭವಾಗುತ್ತದೆ. ಏಕೆಂದರೆ ಶಾಲೆಯಲ್ಲಿ ಕಸಗುಡಿಸುವುದು, ಶ್ರಮದಾನ ಮಾಡುವುದು, ಭತ್ತದ ಕೃಷಿಗಾಗಿ ಸಿದ್ಧಪಡಿಸಿದ ಕೆಸರುಗದ್ದೆಯಲ್ಲಿ ಕುಣಿಯುವುದು, ನೇಜಿ ನೆಡುವುದು, ತೆನೆ ಹೊರುವುದು ಇತ್ಯಾದಿಗಳು ಅಸಹ್ಯವೆನಿಸುವುದಿಲ್ಲ. ಬದಲಾಗಿ ಖುಷಿಯ ಕೆಲಸವಾಗುತ್ತದೆ. ಮನೆಯಲ್ಲಿ ಕಸ ಗುಡಿಸದವರೂ ಶಾಲೆಯಲ್ಲಿ ಗುಡಿಸಲು ಕಲಿಯುತ್ತಾರೆ. ಆ  ಕೆಲಸ ಅವರಿಗೆ ಸಹಪಾಠಿಗಳೊಡನೆ ಮಾಡುವಾಗ ಹಗುರವಾಗುತ್ತದೆ. ಹಾಗಾಗಿ ಶಾಲೆಯಲ್ಲಿ ಜೀವನ ಶಿಕ್ಷಣದ ಪಾಠಗಳೆಲ್ಲವೂ ಬೇಕು” ಎಂಬುದು ಪೋಷಕರಾಗಿ ರಾಧಾಕೃಷ್ಣರು ಹಂಚಿಕೊಂಡ ವಿಚಾರವಾಗಿತ್ತು.
ಯಾವುದೇ ಕೆಲಸವು ಭಾರವಾಗುವುದಾಗಲೀ ಹಗುರ ಎನ್ನಿಸುವುದಾಗಲೀ ಆ ಕೆಲಸದ ಬಗ್ಗೆ ತೋರುವ ಆಸಕ್ತಿಯನ್ನು ಅವಲಂಬಿಸಿದೆ. ಮಕ್ಕಳಿಗೆ ತಾವು ಮಾಡುವ ಕೆಲಸದ ಶ್ರೇಯಸ್ಸು ಸಿಗುವುದಾದರೆ ಅಥವಾ ಅವರು ಸ್ವಯಂ ಸೇವಾಸಕ್ತಿಯಿಂದ ಮಾಡುವುದಾದರೆ ಆಗ ಅವರ ಖುಷಿ ಬೇರೆ ಇರುತ್ತದೆ. ನಮ್ಮ ಶಾಲೆಯಲ್ಲಿ ನಿತ್ಯವೂ ಶಾಲಾ ಆವರಣವನ್ನು ಸ್ವಚ್ಛಗೊಳಿಸುವ ಹೊಣೆಯನ್ನು ಒಂದೊಂದು ತರಗತಿಗೆ ವಹಿಸಿಕೊಡಲಾಗಿದೆ. ವಿದ್ಯಾರ್ಥಿಗಳಿಗೆ ಶಾಲೆಗೆ ಬಂದ ತಕ್ಷಣ ತಮ್ಮ ಹೊಣೆ ನಿರ್ವಹಣೆಯ ಉಮೇದು ಇರುತ್ತದೆ. ಸಹಪಾಠಿಗಳೊಂದಿಗೆ ಕೆಲಸವನ್ನು ಹಂಚಿಕೊಂಡು ಮಾಡುವಾಗ ಪರಿಶ್ರಮದ ಸುಖವೇ ಬೇರೆ ಇರುತ್ತದೆ. ಹಾಗಾಗಿ ತಮ್ಮ ಗುಂಪಿನಲ್ಲಿ ಸೇರಿ ಶಾಲಾ ಅಂಗಳವನ್ನು ಸ್ವಚ್ಛಮಾಡಲು ಯಾವುದೇ ಮುಜುಗರವೂ ಇರುವುದಿಲ್ಲ. ಅಂದರೆ ಈ ಕೆಲಸವನ್ನು ಭಾರವೆಂದು ಪರಿಗಣಿಸುವುದಿಲ್ಲ. ಗುಡಿಸಿದ್ದು ಸರಿಯಾಗಿಲ್ಲವೆಂದು ಕಸವನ್ನು ತೋರಿಸಿದರೆ ತಕ್ಷಣ ಅದನ್ನು ಹೆಕ್ಕಿ ಶುಚಿಗೊಳಿಸುವ ಉತ್ಸಾಹ ಮಕ್ಕಳಲ್ಲಿರುತ್ತದೆ. ಆದರೆ ಇವೇ ಮಕ್ಕಳು ತಮ್ಮ ಮನೆಯಲ್ಲಿ ಕಸ ಗುಡಿಸುತ್ತಾರೋ ಎಂಬುದನ್ನು ಹೇಳುವುದು ಕಷ್ಟ. ಏಕೆಂದರೆ ಮನೆಯಲ್ಲಿ ಕಸ ಗುಡಿಸುವ ಕಾಯಕವು ಅಮ್ಮನದ್ದಾಗಿರುತ್ತದೆ, ಅಥವಾ ಕೆಲಸದವರದ್ದಾಗಿರುತ್ತದೆ. ಅಮ್ಮ ಮಗನನ್ನು ಅಥವಾ ಮಗಳನ್ನು ಕರೆದು ಕೆಲಸ ಕೊಡುವುದಿಲ್ಲ. “ಪಾಪ, ಶಾಲೆಗೆ ಹೋಗುವ ಮಗು, ನಿದ್ರಿಸಲಿ” ಎಂದು ಕನಿಕರ ತೋರುತ್ತಾರೆ. ಓದುತ್ತಿದ್ದರಂತೂ ಮಕ್ಕಳನ್ನು ಕೆಲಸಕ್ಕೆ ಕರೆಯುವುದೇ ಇಲ್ಲ. ಇನ್ನು ಕಸ ಗುಡಿಸುವ ಕೆಲಸಗಾರದಿದ್ದರೆ ಮನೆಯಲ್ಲಿ ಕಸ ಗುಡಿಸುವ ಗೋಜಿಗೇ ಮಕ್ಕಳು ಹೋಗುವುದಿಲ್ಲ. ಇಷ್ಟಾದರೆ ಪರವಾಗಿಲ್ಲ. ಆದರೆ ಒಂದು ದಿನ ಅಮ್ಮನಿಗೆ ಹುಷಾರಿಲ್ಲದಿದ್ದಾಗಲೂ ಮಕ್ಕಳು ಅಮ್ಮನ ಬಾಬತ್ತಿನ ಕೆಲಸ ಮಾಡದಿದ್ದರೆ ಕಷ್ಟ. ಅದೇ ರೀತಿ ಕೆಲಸದಾಳು ಬಾರದಿದ್ದಾಗಲೂ ತಾನು ಮನೆಯಲ್ಲೇ ಸ್ವಯಂಸೇವಕನಾಗುವ ಯೋಚನೆಯನ್ನು ಮಾಡದಿದ್ದರೆ ಮತ್ತೂ ಕಷ್ಟ.  ಹೀಗಾದಾಗ ಮಕ್ಕಳಿಗೆ ಆ ಕೆಲಸವನ್ನು ಹೇಳಿದರೂ ಮಾಡದಿದ್ದರೆ ಆಗ ಮಕ್ಕಳಿಗೆ ಆ ಕೆಲಸ ಹೊರೆಯೆಂಬ ಭಾವನೆ ಮೂಡಿರುವುದೇ ಕಾರಣವಾಗಿರುತ್ತದೆ.
ಮಕ್ಕಳು ದೈಹಿಕವಾಗಿ ಕೆಲಸ ಮಾಡಬೇಕೇ? ಯಾಕೆ ಮಾಡಬೇಕು? ಈ ಪ್ರಶ್ನೆಗಳು ಮಕ್ಕಳದ್ದಲ್ಲ. ದೊಡ್ಡವರಲ್ಲೆ ಇರುವ ಪ್ರಶ್ನೆಗಳು. ಮನೆಯಲ್ಲಿ ಮಕ್ಕಳು ಕೆಲಸ ಮಾಡಿದರೆ ಓದುವುದು, ಬರೆಯುವುದು ಕಡಿಮೆಯಾಗುತ್ತದೆ. ಉತ್ತಮ ಅಂಕಗಳನ್ನು ಗಳಿಸದ ಶಿಕ್ಷಣ ಯಾಕೆ? ಉತ್ತಮ ಅಂಕಗಳನ್ನು ಗಳಿಸಲು ಕೆಲಸದಿಂದಾಗಿ ಅಡಚಣೆಯಾಗಬಾರದು. ಹಾಗಾಗಿ ಮಕ್ಕಳನ್ನು ದೈಹಿಕ ಕೆಲಸಗಳಿಗೆ ಹಚ್ಚಬಾರದು! ಹೆತ್ತವರಲ್ಲಿರುವ ಇಂತಹ ಮನೋಧರ್ಮವು ಮಕ್ಕಳಿಗೆ ಮನೆಯಲ್ಲಿ ಆಲಸಿಗಳಾಗಲು ಅನುಕೂಲವಾಗಿದೆ. ಹಾಗಾಗಿಯೇ ಪೋಷಕರು ಅಗತ್ಯದ ಕೆಲಸಗಳಿಗೆ ಕರೆದಾಗಲೂ ಬಾರದೆ ಉಳಿಯುತ್ತಾರೆ. ನಿಜಕ್ಕೂ ಮನೆಯಲ್ಲಿ ಕೆಲಸ ಮಾಡುವುದು ಒಂದು  ಭಾರ ಎಂಬಂತೆ ವರ್ತಿಸುತ್ತಾರೆ.
ಒಬ್ಬ ಪೋಷಕರು ಒಮ್ಮೆ ನನ್ನಲ್ಲಿ “ಮಕ್ಕಳು ಮನೆಯಲ್ಲಿ ಏನೂ ಓದುವುದಿಲ್ಲ. ಏನು ಮಾಡುವುದೆಂದು ಗೊತ್ತಾಗುತ್ತಿಲ್ಲ” ಎಂದರು. “ನಿಮಗೆ ಅಡಿಕೆ ತೋಟ ಇದೆಯಲ್ವಾ? ಬೆಳಗ್ಗೆ ಬೇಗ ಎಬ್ಬಿಸಿ ಅಡಿಕೆ ಹೆಕ್ಕಲು ಕಳಿಸಿ. ಅಷ್ಟು ಕೆಲಸ ಮಾಡಲಿ. ದೊಡ್ಡ ಸಮಯ  ನಷ್ಟ ಆಗುವುದಕ್ಕೇನೂ ಇಲ್ಲ. ಒಂದು ವೇಳೆ ಹಾಗೆ ಕೆಲಸ ಮಾಡುವುದು ಕಷ್ಟವೆನ್ನಿಸಿದರೆ ಆಗ ಸಹಜವಾಗಿಯೇ ಓದತೊಡಗುತ್ತಾರೆ”. ನನ್ನ ಈ ಸಲಹೆ ಅವರಿಗೆ ಒಪ್ಪಿಗೆಯಾಯಿತು. ಆದರೆ ಅದನ್ನು ಜಾರಿಗೊಳಿಸುವುದು ಕಷ್ಟವೆಂಬ ಅಭಿಪ್ರಾಯ ಅವರದಾಗಿತ್ತು. ನಾನು ಸಲಹೆ ಕೊಟ್ಟದ್ದು ವ್ಯರ್ಥವೆಂದು ನನಗೆ ಅನ್ನಿಸಿತು. ಆದರೂ ನಾನು ಅವರಲ್ಲಿ ಪ್ರತಿಪಾದಿಸಿದೆ, “ನಾನು ಅನುಭವ ಇಲ್ಲದೆ ಹೇಳುವುದಲ್ಲ. ನಾನು ಸಣ್ಣವನಿದ್ದಾಗ ಮನೆಯ ಅನೇಕ ಕೆಲಸಗಳನ್ನು ಮಾಡಿಯೇ ಶಾಲೆಗೆ ಹೋಗುವುದಾಗಿತ್ತು. ತರಕಾರಿಗೆ ನೀರು ಹಾಕುವುದು, ಅಡಿಕೆ ಹೆಕ್ಕುವುದು, ದನಗಳನ್ನು ಮೇಯಲು ಗುಡ್ಡಕ್ಕೆ ಅಟ್ಟುವುದು ಮುಂತಾದ ಕೆಲಸಗಳನ್ನು ಮಾಡಿಯೇ ಶಾಲೆಗೆ ಹೋಗುತ್ತಿದ್ದುದು. ನಿಮ್ಮ ಮಕ್ಕಳಿಗೂ  ಇದು ಅಸಾಧ್ಯವಲ್ಲ” ಎಂದು ಹೇಳಿದೆ. ಆದರೆ ಅದೇನೂ ಪರಿಣಾಮ ಬೀರಿಲ್ಲ. ಏಕೆಂದರೆ ಮಕ್ಕಳನ್ನು ಕೆಲಸಕ್ಕೆ ತೊಡಗಿಸುವ ಖಡಕ್ ಮನಸ್ಸು ಅವರಿಗೆ ಇದ್ದಂತಿಲ್ಲ.
ಶಿಕ್ಷಣ ಮತ್ತು ದೈಹಿಕ ಕೆಲಸಗಳು  ವಿರುದ್ಧ ದಿಕ್ಕಿನಲ್ಲಿ ಸಾಗುವ ಮೌಲ್ಯಗಳಾಗಿವೆ. ಶಿಕ್ಷಣವು ಪ್ರತಿಷ್ಠೆ ಮತ್ತು ವಿಶೇಷಾರ್ಹತೆಗಳ ಬೇಗಡೆಗಳಿಂದ ಆವರಿಸಲ್ಪಟ್ಟಿದೆ. ಅದು ಕೈ ಕೆಸರಾಗುವ ಕೆಲಸಗಳನ್ನು ದೂರ ಇಟ್ಟಿದೆ. ಅರ್ಥಾತ್ “ಕೆಲಸ ಮಾಡಲು ಶಿಕ್ಷಣ ಬೇಕಾಗಿಲ್ಲ” ಎಂಬ ಭಾವನೆಯ ವಿರುದ್ಧಾರ್ಥ ಪಡೆದು ಶಿಕ್ಷಿತರು ಕೆಲಸ ಮಾಡಬಾರದೆಂಬ ಚಿಂತನೆ ವ್ಯಾಪಿಸಿದೆ. ಇದಕ್ಕೆ ಪೂರಕವೆನ್ನುವಂತೆ ಶಿಕ್ಷಣ ಪಡೆದವರು ಹೆಚ್ಚು ಸಂಬಳದ ಉದ್ಯೋಗ ಪಡೆಯುತ್ತಿದ್ದಾರೆ. ಈ ವಿದ್ಯಮಾನವು ಶಾಲೆಗೆ ಹೋಗುವಲ್ಲಿ ತಮ್ಮ ಮಕ್ಕಳಿಗೆ ಭವಿಷ್ಯವಿದೆ ಎಂದು ತಿಳಿಯುವಂತಾಗಿದೆ. ಶಾಲೆಗಳ ಮೇಲೆ ಮತ್ತು ಶಿಕ್ಷಣದ ಮೇಲೆ ವಿಶ್ವಾಸವಿಟ್ಟು ತಮ್ಮ ಸಮಯವನ್ನು ಮತ್ತು ಸಂಪತ್ತನ್ನು ಸುರಿಯುತ್ತಾರೆ. ಆದರೆ ಮಕ್ಕಳು ಈ ವ್ಯವಸ್ಥೆಯಲ್ಲಿ ಕೆಲಸಕ್ಕೆ ಕೈ ಜೋಡಿಸದೆ ಇರುವ ಗುಣವನ್ನು ಬೆಳೆಸಿಕೊಳ್ಳುವ ಋಣಾತ್ಮಕ ಪರಿಣಾಮದ ಬಗ್ಗೆ ಪೋಷಕರು ತಲೆ ಕೆಡಿಸಿಕೊಳ್ಳುವುದಿಲ್ಲ. ಅಲ್ಲದೆ ಅವರೇ ಮಕ್ಕಳಲ್ಲಿ ಬೆಳೆಯುವ ಈ ಸ್ವಭಾವವನ್ನು ಪೋಷಿಸುತ್ತಾರೆ. ಹಾಗಾಗಿ ಮಕ್ಕಳಿಗೆ ಸಣ್ಣದಾದ ಕೊಳೆಯನ್ನು ತೆಗೆದು ಬಿಸಾಡುವುದಾಗಲೀ, ಗಿಡಗಳಿಗೆ ನೀರು ಹಾಕುವುದಾಗಲೀ, ತಾವು ತಿಂದ ಚಾಕೋಲೇಟ್‍ನ ಪ್ಲಾಸ್ಟಿಕ್ ಸಿಪ್ಪೆಯನ್ನು ಕಂಡಲ್ಲಿ ಎಸೆಯದೆ ಇರುವುದಾಗಲೀ, ಹಾಗೆಯೇ ಎಸೆಯುವವರಿಗೆ ಚಾಕೋಲೇಟ್ ಸಿಪ್ಪೆಯನ್ನು ನಿಮ್ಮ ಜೇಬಲ್ಲೇ ಹಾಕಿಕೊಳ್ಳಿ ಎಂದು ಹೇಳುವ ಜವಾಬ್ದಾರಿಯನ್ನು ಇಂದಿನ ಶಿಕ್ಷಣ ಕಲಿಸುವುದಿಲ್ಲ, ಅಥವಾ ಅಂತಹ ಧೈರ್ಯವನ್ನು ಮೂಡಿಸುವುದಿಲ್ಲ. ಬದಲಿಗೆ ಕಸವನ್ನೇ ಮೆಟ್ಟಿಕೊಂಡು ಹೋದರೂ ತಪ್ಪೆನ್ನಿಸದ ಮನೋಭೂಮಿಕೆ ಅವರಲ್ಲಿ ಸ್ಥಾಯಿಗೊಂಡಿರುತ್ತದೆ.  ದೇಹವನ್ನು ಬಾಗಿಸುವ, ಕುಳಿತುಕೊಳ್ಳುವ, ಏಳುವ, ಹೊರುವ ಮುಂತಾದ ಕನಿಷ್ಟ ದೈಹಿಕ ಶಕ್ತಿಯನ್ನು ಉಪಯೋಗಿಸುವ ಕೆಲಸಗಳು ಕೂಡಾ ಇಂದು ವಿದ್ಯಾವಂತರಿಗೆ ಕಡಿಮೆ ಗೌರವದ ಕೆಲಸಗಳಾಗಿವೆ.
ಮೌಲ್ಯಮಾಪನಕ್ಕೆ ಒಳಪಡದೆ ಶುಭಚಿಂತನೆಯ ಕೆಲಸವೆಂದರೆ ಅದು ಸ್ವಯಂ ಸೇವೆ. ಅದು ಶಾಲೆಯಲ್ಲಿ ಸಹಪಾಠಿಗಳೊಂದಿಗೆ ಅಂಗಳ ಗುಡಿಸುವ ಕೆಲಸ ಇರಬಹುದು, ಮದುವೆ ಮಂಟಪದಲ್ಲಿ ಬಂಧುಗಳೊಡನೆ ಎಂಜಲೆಲೆ ತೆಗೆದು ನೆಲ ಗುಡಿಸುವುದಿರಬಹುದು, ಸಾರ್ವಜನಿಕ ಗಣೇಶೋತ್ಸವದಲ್ಲಿ ರಾತ್ರಿ ಪೂರ್ತಿ ಅಲಂಕಾರ ಮಾಡುವ ಕೆಲಸ ಇರಬಹುದು, ರಸ್ತೆಯಲ್ಲಿ ಕೆಟ್ಟು ನಿಂತ ವಾಹನವನ್ನು ತಳ್ಳುವುದಿರಬಹುದು ಹೀಗೆ ಸ್ವಯಂ ಆಸಕ್ತಿಯಿಂದ ಸೇವೆ ನೀಡುವ ಸಂದರ್ಭಗಳಲ್ಲಿ ಕಾರ್ಯಗೌರವವೇ ದೊಡ್ಡದು, ಧನ್ಯವಾದಗಳೇ ಸಂಭಾವನೆ, ನಗುನಗುತ್ತ ಓಡಾಡುವ ಪರಿಸರವೇ ಕೆಲಸಕ್ಕೆ ಪ್ರೇರಣೆ, ಅಲ್ಲಿ ಸ್ಫೋಟಗೊಳ್ಳುವ ಜೋಕ್‍ಗಳೇ ಬಹುಮಾನಗಳು. ಇಂತಹ ಪರಿಶ್ರಮದ ಅಭ್ಯಾಸಕ್ಕೆ ಹಿರಿಯರ ಅನುಮತಿಯೂ ಪ್ರೋತ್ಸಾಹವೂ ಬೇಕು. ಅದು ಇದ್ದಾಗ ಮಕ್ಕಳು ಕೆಲಸಕ್ಕೆ ಕೈ ಜೋಡಿಸುವ ಸಾಧ್ಯತೆ ಇದೆ. ಅದನ್ನು ನಾವು ಶಾಲೆ, ಮನೆ ಮತ್ತು ಸಮುದಾಯ ಸೇರಿ ಮಾಡಬೇಕು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್‌ ಮಾಡಿ..
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಡಾ.ಚಂದ್ರಶೇಖರ ದಾಮ್ಲೆ

ಡಾ. ಚಂದ್ರಶೇಖರ ದಾಮ್ಲೆಯವರು ಸುಳ್ಯದ ನೆಹರು ಮೆಮೋರಿಯಲ್ ಕಾಲೇಜ್ ನಲ್ಲಿ ಸಮಾಜಶಾಸ್ತ್ರ ಪ್ರಾಧ್ಯಾಪಕರಾಗಿ 35 ವರ್ಷಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರು. ವೃತ್ತಿಯಲ್ಲಿರುವಾಗಲೇ ರಾಷ್ಟ್ರೀಯ ಸೇವಾ ಯೋಜನಾಧಿಕಾರಿಯಾಗಿ ಸಮಾಜಸೇವೆಯಲ್ಲಿ ತೊಡಗಿಕೊಂಡವರು. ಸಾಂಸ್ಕೃತಿಕ ಸಂಘದ ಮೂಲಕ ಮಕ್ಕಳಿಗೆ ಯಕ್ಷಗಾನ ನಿರ್ದೇಶಕನ, ಸುಳ್ಯದಲ್ಲಿ ಯಕ್ಷಗಾನ ಹಿತರಕ್ಷಣಾ ವೇದಿಕೆಯ ಸ್ಥಾಪನೆ, ಸಂಪೂರ್ಣ ಸಾಕ್ಷರತಾ ಆಂದೋಲನದಲ್ಲಿ ಸಂಪನ್ಮೂಲ ವ್ಯಕ್ತಿ, ಕನ್ನಡಮಾಧ್ಯಮದಲ್ಲಿ ಸ್ನೇಹ ಶಿಕ್ಷಣ ಸಂಸ್ಥೆಯ ಸ್ಥಾಪನೆ ಮುಂತಾದ ಸಮಾಜಮುಖಿ ಕಾರ್ಯಗಳಲ್ಲಿ ಸೇವೆ ನೀಡಿದವರು. ಶಿಕ್ಷಣದಲ್ಲಿ ಸೃಜನಶೀಲತೆಗೆ ಒತ್ತು ನೀಡುವ ದಾಮ್ಲೆಯವರು ಸಂಶೋಧಕರಾಗಿದ್ದು ಕನ್ನಡ ಇಂಗ್ಲಿಷ್ ಭಾಷೆಗಳಲ್ಲಿ ಕೃತಿ ರಚನೆ ಮಾಡಿದವರು. 'ನೆಲದನಂಟು' ಮತ್ತು "ಶಾಲೆ ಎಲ್ಲಿದೆ?" ಇವು ಇವರ ಪ್ರಸಿದ್ಧ ಕಾದಂಬರಿಗಳು. ಅನೇಕ ಪ್ರಶಸ್ತಿ ಸಮ್ಮಾನಗಳಿಂದ ಗೌರವಿಸಲ್ಪಟ್ಟ ದಾಮ್ಲೆಯವರಿಗೆ ಅಸಾಮಾನ್ಯ ಕನ್ನಡಿಗ ಪ್ರಶಸ್ತಿ, ಯಕ್ಷಮಂಗಳ ಪ್ರಶಸ್ತಿ, ಅರಣ್ಯಮಿತ್ರ ಮತ್ತು ಜಲಮಿತ್ರ ಪ್ರಶಸ್ತಿ, Nation Builder ಪ್ರಶಸ್ತಿ ಮುಂತಾದುವು ಲಭಿಸಿವೆ. ಹೊಸದಿಗಂತ ಪತ್ರಿಕೆಯಲ್ಲಿ "ಇದ್ಯಾಕೆ ಹೀಗೆ " ಅಂಕಣವನ್ನು ಬರೆಯುತ್ತಿದ್ದರು.

Published by
ಡಾ.ಚಂದ್ರಶೇಖರ ದಾಮ್ಲೆ

Recent Posts

2025-26 ರಲ್ಲಿ ಅಡಿಕೆ ಕೊಳೆರೋಗ ಮತ್ತು ಎಲೆಚುಕ್ಕಿ ರೋಗ ಪ್ರಕರಣ ವರದಿಯಾಗಿಲ್ಲ…!

ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯ ಕೇಂದ್ರದ ಸಮಗ್ರ ಕೀಟ ನಿರ್ವಹಣಾ ಕೇಂದ್ರಗಳು…

4 hours ago

ಮನೆಯ ಮೇಲ್ಛಾವಣಿಯನ್ನು ಕೃಷಿ ಭೂಮಿಯನ್ನಾಗಿಸಿದ ಆಸಿಯಾ ಇತರ ಮಹಿಳೆಯರಿಗೂ ಇಂದು ಮಾದರಿ..

ಮನಸ್ಸಿದ್ದರೆ ಮಾರ್ಗ ಎಂಬ ಗಾದೆ ಮಾತು ನಾವು ಕೇಳಿದ್ದೇವೆ. ಆದರೆ, ಕೆಲವು ಜನರ…

5 hours ago

ನಮ್ಮ ಹೊಲ ನಮ್ಮ ದಾರಿ : ರಸ್ತೆಗೆ 12.5 ಲಕ್ಷ ಸಹಾಯಧನ

ಕೆಲವು ಕಡೆಗಳಲ್ಲಿ ರೈತರು ತಮ್ಮ ಜಮೀನಿಗೆ ಹೋಗಲು ಸರಿಯಾದ ದಾರಿಯಿಲ್ಲದೆ ಪರದಾಟ ನಡೆಸಬೇಕಾಗುತ್ತದೆ.…

5 hours ago

2025-26 ನೇ ಸಾಲಿನ ಕೃಷಿ ಇಲಾಖೆ ಸಹಾಯಧನ ಯೋಜನೆಗಳು

ಕೃಷಿ ಇಲಾಖೆಯು ರೈತರಿಗೆಂದು ವಿವಿಧ ಸಬ್ಸಿಡಿ ಯೋಜನೆಗಳನ್ನು ಜಾರಿಗೆ ತಂದಿದೆ. ಇದಕ್ಕೆ ಯಾವ…

5 hours ago

ಕುಕ್ಕುಟ ಸಂಜೀವಿನಿ ಯೋಜನೆ : ಉಚಿತ ಕೋಳಿ ಮರಿ ಶೇಡ್ ನಿರ್ಮಾಣಕ್ಕೆ ಆರ್ಥಿಕ ನೆರವು

ಮಹಿಳೆಯರ ಏಳಿಗೆಗೆ ಸರ್ಕಾರವೂ ಹಲವಾರು ರೀತಿಯ ಯೋಜನೆಯನ್ನು ಜಾರಿಗೊಳಿಸಿದೆ. ಇದೀಗ ಗ್ರಾಮೀಣ ಮಹಿಳೆಯರಿಗೆ…

5 hours ago

ಹವಾಮಾನ ವರದಿ | 16-12-2025 | ಮೋಡ ಮಾತ್ರವೇ ಮಳೆ ಇದೆಯೇ…? | ಮುಂದೆ ಚಳಿಯ ಪ್ರಭಾವ ಹೇಗಿರಬಹುದು..?

17.12.2025 ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ…

22 hours ago