ಬೆಂಗಳೂರಿನ ನ್ಯಾಷನಲ್ ಗ್ಯಾಲರಿ ಆಫ್ ಮಾರ್ಡನ್ ಆರ್ಟ್ ನಲ್ಲಿ ಕೇಂದ್ರ ಸಂಸ್ಕೃತಿ ಸಚಿವಾಲಯ ಸಹಯೋಗದಲ್ಲಿ ದಿವರ ಸಮುದಾಯದ ಸಾಂಸ್ಕೃತಿಕ ಕಲೆಯಾದ ಚಿತ್ತಾರ ಕಲೆ ಬಗ್ಗೆ ಕಾರ್ಯಾಗಾರ ನಡೆಯಿತು.ಕಾರ್ಯಾಗಾರದಲ್ಲಿ ಮಕ್ಕಳಿಗೆ ನುರಿತರು ಚಿತ್ತಾರ ಕಲೆಯ ಬಗ್ಗೆ ತರಬೇತಿ ನೀಡಿದರು.
ಕಲಾವಿದರು ತರಹೇವಾರಿ ಚಿತ್ತಾರ ಕಲೆಯ ರಚನೆ ಹಾಗೂ ಬಣ್ಣ ಹಚ್ಚುವ ಪ್ರಾಕೃತಿಕ ವಸ್ತುಗಳ ಬಗ್ಗೆ ಮಕ್ಕಳಿಗೆ ತಿಳಿಸಿಕೊಟ್ಟರು. ಮದುವೆ ಸಮಾರಂಭದಲ್ಲಿ ಬಿಡಿಸುವ ಹಸೆಮಣೆ ಚಿತ್ತಾರ, ಭೂಮಿ ಹುಣ್ಣಿಮೆ ಬುಟ್ಟಿ, ಹಸೆಗೋಡೆ ಚಿತ್ತಾರ, ತೇರಿನ ಚಿತ್ರ, ತಿರುಗೆ ಮನೆ ಚಿತ್ತಾರ ಸೇರಿದಂತೆ ವಿವಿಧ ರೀತಿಯ ಚಿತ್ತಾರಗಳ ಬಗ್ಗೆ ಮಕ್ಕಳಿಗೆ ತಿಳುವಳಿಕೆ ನೀಡಲಾಯಿತು. ಭತ್ತದ ತೋರಣ, ಈಚಲು ಚಾಪೆ ತಯಾರಿಕೆ, ಅಡಿಕೆ ತಟ್ಟೆ ಹೀಗೆ ವಿವಿಧ ಪರಿಕರಗಳ ತಯಾರಿಕೆ ಬಗ್ಗೆ ಮಾಹಿತಿ ನೀಡಲಾಯಿತು.
ಜೇಡಿಮಣ್ಣು, ಅಕ್ಕಿ ಹಿಟ್ಟು, ಹಿಟ್ಟಂಡ ಹುಲ್ಲು, ಗುರ್ಗೆ ಹರಳಿನ ಪುಡಿಯಲ್ಲಿ ಚಿತ್ತಾರ ಬಿಡಿಸುವುದು, ಹಾಗೂ ಜೊಂಡು ಬಳಸಿ ವರನಿಗೆ ಬಾಸಿಂಗ ತಯಾರಿಸುವ ಕುರಿತು ಮಾಹಿತಿ ನೀಡಲಾಯಿತು.
ನಮ್ಮ ಪೂರ್ವಿಕರು ನಡೆಸಿಕೊಂಡು ಬಂದಂತಹ ಚಿತ್ತಾರ ಕಲೆಯನ್ನು ಮುಂದುವರೆಸಿಕೊಂಡು ಬರುತ್ತಿದ್ದು, ಇದನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಮೂಲಕ ಉಳಿಸಿ ಬೆಳಸಬೇಕಿದೆ. ನಾನು 15 ವರ್ಷದಿಂದ ಈ ಕಲೆಯನ್ನು ಮಾಡುತ್ತಾ ಬಂದಿದ್ದೇನೆ, ನಮ್ಮ ದಿವರ ಜನಾಂಗದ ಪ್ರಮುಖ ಕಲೆ ಇದಾಗಿದೆ. ಇದು ನಮ್ಮ ಸಂಸ್ಖೃತಿಯ ದ್ಯೋತಕವಾಗಿದೆ. ಪ್ರಾಕೃತಿಕವಾಗಿ ಸಿಗುವ ಪದಾರ್ಥಗಳಿಂದ ಈ ಚಿತ್ತಾರ ಕಲೆಯನ್ನು ರಚನೆ ಮಾಡಲಾಗುತ್ತದೆ. ಇದನ್ನು ಮುಂದುವರೆಸಿಕೊಂಡು ಹೋಗುವ ಮೂಲಕ ನಮ್ಮ ಸಂಸ್ಕೃತಿಯನ್ನು ಬೆಳೆಸಬೇಕಿದೆ ಎಂದು ಚಿತ್ತಾರ ಕಲಾವಿದರಾದ ಪವಿತ್ರಾ ಮೋಹನ್ ನಾಯಕ್ ಹೇಳಿದರು.
ಚಿತ್ತಾರ ಕಲೆ ಮೊದಲು ನೋಡಿದಾಗ ತುಂಬಾ ಇಷ್ಟವಾಯಿತು. ಈ ಕುರಿತು 20 ವರ್ಷ ಅಧ್ಯಯನ ಮಾಡಿ ಜಪಾನಿನಲ್ಲಿ ಚಿತ್ತಾರ ಪ್ರದರ್ಶನ ಜೊತೆಗೆ ದಿವರ ಜನಾಂಗದ ಜೀವನ ಚರಿತ್ರೆ ಕುರಿತು ಛಾಯಾಚಿತ್ರ ಪ್ರದರ್ಶನ ಹಾಗೂ ಕಾರ್ಯಾಗಾರವನ್ನು ಏರ್ಪಡಿಸಿದ್ದೇವು. ಅಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈ ಕಲೆಯನ್ನು ಇಂದಿನ ಮಕ್ಕಳಿಗೆ ಕಲಿಸುವ ಮೂಲಕ ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸಬೇಕಾಗಿದೆ. ಈ ಚಿತ್ತಾರ ಕಲೆ ಬಗ್ಗೆ ಕೃತಿ ರಚನೆ ಮಾಡುತ್ತಿದ್ದು, ಈ ಮೂಲಕ ಶಾಲಾ ಮಕ್ಕಳಿಗೆ ಚಿತ್ತಾರ ಕಲೆ ಕಲಿಸಿಕೊಡುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಕಲ್ಚರ್ ಫಾರ್ ರಿವೈವಲ್ ಇಂಡಿಜೀನಿಯಸ್ ಆರ್ಟ್ ನ ಸಂಸ್ಥಾಪಕಿ ಗೀತಾ ಭಟ್ ಹೇಳುತ್ತಾರೆ.