ಅಂತಾರಾಷ್ಟ್ರೀಯ ಯೋಗದಿನಾಚರಣೆಯ ಹನ್ನೊಂದನೇ ಉತ್ಸವ ಇದೇ ಜೂನ್ 21 ಕ್ಕೆ ಜರಗಲಿದೆ. ನಮ್ಮ ದೇಶದ ರಾಷ್ಟ್ರೀಯ ಹಬ್ಬಕ್ಕಿಂತಲೂ ಮಿಗಿಲಾದ ಸಂಭ್ರಮ ಉಂಟು ಮಾಡುವ ಒಂದು ಸಂದರ್ಭವಾಗಿ ಯೋಗೋತ್ಸವವು ಇಂದು ಜನಜನಿತವಾಗಿದೆ. ಇದು ವ್ಯಷ್ಟಿ ನೆಲೆಯಲ್ಲಿಯೂ ಸಮಷ್ಟಿ ನೆಲೆಯಲ್ಲಿಯೂ ಲಾಭಗಳನ್ನು ಪಡೆಯುವ ಒಂದು ಪ್ರಯೋಗವಾಗಿದೆ. ನಮ್ಮ ಮತ್ತು ನಮ್ಮದಲ್ಲದ ಕಾರಣಗಳಿಗಾಗಿ ಮನಸ್ಸು ವ್ಯಗ್ರಗೊಳ್ಳುವ ಇಂದಿನ ದಿನಗಳಲ್ಲಿ ಯೋಗ ಒಂದು ಸಾಮೂಹಿಕ ಚಿಕಿತ್ಸೆಯಾಗಿದೆ. ಯೋಗ ದೃಷ್ಟಾರನಾಗಿದ್ದ ಪತಂಜಲಿ ಋಷಿಯ ಪ್ರಕಾರ “ಯೋಗಃ ಚಿತ್ತ ವೃತ್ತಿ ನಿರೋಧಃ”. ಅಂದರೆ ಮನೋನಿಗ್ರಹವಿದ್ದರೆ ಆರೋಗ್ಯದ ಸ್ಥಿರತೆಯೂ ಸಾಧ್ಯವಿದೆ. ಹಾಗಾಗಿಯೇ ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧ್ಯಾನ, ಧಾರಣ ಮತ್ತು ಸಮಾಧಿ ಎಂಬ ಅಷ್ಟಾಂಗ ಯೋಗದ ಹಂತಗಳು ಸಾಧಿತವಾಗಲು ದೇಹಾರೋಗ್ಯವೂ ಮುಖ್ಯವಾದುದು ಎಂಬುದನ್ನು ಯೋಗವು ಸೂಚಿಸುತ್ತದೆ.
ಆರೋಗ್ಯಕರ ಮನಸ್ಸನ್ನು ಧರಿಸುವುದಕ್ಕಾಗಿ ದೇಹವನ್ನು ಆರೋಗ್ಯಕರವಾಗಿ ಇರಿಸಿಕೊಳ್ಳುವ ಜೀವನ ವಿಧಾನವೇ ಯೋಗವಾಗಿದೆ. ಮನಸ್ಸು ಮತ್ತು ದೇಹವನ್ನು ಸದೃಢವಾಗಿಡುವ ಭಾರತೀಯ ಪ್ರಾಚೀನ ವಿದ್ಯೆಯನ್ನು ಪ್ರಶಂಸೆಯೊಂದಿಗೆ ವಿಶ್ವಾದ್ಯಂತ ಸ್ವೀಕರಿಸಲಾಗಿದೆ ಎಂಬುದು ನಮಗೆ ಹೆಮ್ಮೆಯ ವಿಷಯ. ಪ್ರಕೃತಿಯ ಸತ್ವವನ್ನೂ ತತ್ವಗಳನ್ನೂ ಸಾವಿರಾರು ವರ್ಷಗಳ ಹಿಂದೆಯೇ ಸಂಶೋಧಿಸಿದ ಋಷಿಮುನಿಗಳ ಅನೇಕ ಕೊಡುಗೆಗಳಿಂದ ಭಾರತವು ಸಂಪದ್ಭರಿತ ಭೂಮಿಯಾಗಿತ್ತು.ಅವುಗಳಲ್ಲಿ ಅತ್ಯುತ್ತಮವಾದ ಯೋಗವನ್ನು ಕಳೆದ ಹತ್ತು ವರ್ಷಗಳಲ್ಲಿ ಪ್ರಪಂಚದೊಂದಿಗೆ ಹಂಚಿಕೊಳ್ಳುವ ಯೋಗ ಬಂದಿರುವುದಕ್ಕಾಗಿ ನಾವು ಸಂತೋಷಪಡುತ್ತೇವೆ.
ಶತಮಾನಗಳ ಹಿಂದೆ ಸಂಸ್ಕೃತ ಕವಿ ಭರ್ತೃಹರಿ ನಿಜವಾದ ಯೋಗ ಸಾಧಕನನ್ನು ವರ್ಣಿಸಿದ ಬಗೆ ಹೀಗಿದೆ:
ಧೈರ್ಯಂ ಯಸ್ಯ ಪಿತಾ ಕ್ಷಮಾಚ ಜನನೀ ಶಾಂತಿ ಶ್ಶಿರಂ ಗೇಹನಿ|
ಸತ್ಯಂ ಸೂನುರಯಂ ದಯಾಚ ಭಗಿನಿ ಭ್ರಾತಾ ಮನಃ ಸಂಯಮಃ||
ಶಯ್ಯಾ ಭೂಮಿತಲಂ ದಿಶೋಪಿ ವಸನಂ ಜ್ಞಾನಾಮೃತಂ ಭೋಜನಂ|
ಏತೇ ಯಸ್ಯ ಕುಟುಂಬಿನಃ ವದಸಖೇ ಕಸ್ಮಾದ್ ಭಯಂ ಯೋಗಿನಃ||
ಯೋಗವನ್ನು ನಿತ್ಯ ಆಚರಿಸುವ ವ್ಯಕ್ತಿಯನ್ನು ಧೈರ್ಯವು ತಂದೆಯಂತೆ ರಕ್ಷಿಸುತ್ತದೆ, ಕ್ಷಮಾಗುಣವು ತಾಯಿಯಂತೆ ಪಾಲಿಸುತ್ತದೆ, ಮಾನಸಿಕ ಶಾಂತಿಯು ಮಿತ್ರನಂತೆ ಇರುತ್ತದೆ, ಮಗುವಿನಂತೆ ಸತ್ಯ, ಕರುಣೆಯಂತೆ ಸಹೋದರಿ, ಆತ್ಮ ಸಂಯಮದಂತೆ ಸಹೋದರರಿದ್ದು ಆತನಿಗೆ ಭೂಮಿಯೇ ಹಾಸಿಗೆಯಾಗಿ ಜ್ಞಾನವೇ ಭೋಜನವಾಗಿರುತ್ತದೆ. ಇಂತಹ ಮಹತ್ತಿಕೆಯುಳ್ಳ ಯೋಗವನ್ನು ಏಕಾಂಗಿ ಸಾಧಕರು ಉಳಿಸಿಕೊಂಡು ಬಂದರು. ಯೋಗಕ್ಕೆ ರಾಜಾಶ್ರಯವಾಗಲೀ ಮಠಾಶ್ರಯವಾಗಲೀ ಸಿಗಲಿಲ್ಲ, ಆಧುನಿಕ ಪಾಠಶಾಲೆಗಳಾಗಲೀ ವಿಶ್ವವಿದ್ಯಾಲಯಗಳಾಗಲೀ ಯೋಗಕ್ಕೆ ಮಹತ್ವ ನೀಡಲಿಲ್ಲ. ನಮ್ಮ ದೇಶದ ಸ್ವಾಮಿ ವಿವೇಕಾನಂದರಂತಹ ಸಾಧಕರು ಭಾರತೀಯ ಜ್ಞಾನಪರಂಪರೆಗೆ ವಿದೇಶಗಳಲ್ಲಿ ಮನ್ನಣೆ ದೊರಕಿಸಿದ ಸಂದರ್ಭದಲ್ಲೇ ಯೋಗಿಗಳು ಮನೋದೈಹಿಕ ಸ್ವಾಸ್ಥ್ಯದ ಗುರುಗಳಾಗಿ ಮಿಂಚಿದರು. ಅವರ ಕೊಡುಗೆಗಳಿಂದಾಗಿ ಇಂದು ವಿಶ್ವ ಯೋಗ ದಿನಾಚರಣೆಗೆ ತಳಪಾಯ ಹಾಕಿದಂತಾಗಿದೆ. ನಮ್ಮ ಪ್ರಧಾನಿ ಮೋದಿಯವರು ವಿಶ್ವಸಂಸ್ಥೆಯಲ್ಲಿ ಮಾಡಿದ ಪ್ರಯತ್ನಕ್ಕೆ ವಿಶ್ವಾದ್ಯಂತ ಸಿಕ್ಕಿದ ಸ್ಪಂದನೆಯು ಯೋಗದ ಗೌರವವನ್ನು ಹೆಚ್ಚಿಸಿದೆ. ವೈಚಾರಿಕ ನಿರಾಕರಣೆಗಳ ಬಲೆಗಳನ್ನು ಹರಿದು, ಧಾರ್ಮಿಕ ಚೌಕಟ್ಟುಗಳನ್ನು ಮೀರಿ, ಗೊಡ್ಡು ಸಂಪ್ರದಾಯವೆಂಬ ಮುಜುಗರಗಳನ್ನು ಬದಿಗಿಟ್ಟು ವಿಶ್ವ ಯೋಗ ದಿನಾಚರಣೆಯಲ್ಲಿ ಭಾಗವಹಿಸಲು ಜನರು ಮುಗಿಬಿದ್ದರು. ತಾನೂ ಒಬ್ಬ ಯೋಗ ಸಾಧಕನೆಂದು ಹೇಳಿಕೊಳ್ಳಲು ಅಭಿಮಾನ ಪಡುವ ಕಾಲ ಬಂದಿದೆ. ಇದು ಪ್ರಗತಿಯತ್ತ ಪರಿವರ್ತನೆ ಎನ್ನಲು ಸಂಕೋಚ ಬೇಕಿಲ್ಲ. 2014 ಡಿಸೆಂಬರ್ 11 ರಂದು ವಿಶ್ವ ಸಂಸ್ಥೆಯ ಜನರಲ್ ಎಸೆಂಬ್ಲಿಯಲ್ಲಿ ಯೋಗ ದಿನಾಚರಣೆಯನ್ನು ಮಾಡುವ ಬಗ್ಗೆ ನಿರ್ಧಾರ ಕೈಗೊಳ್ಳಲಾಯಿತು. ಮುಂದಿನ 2015 ಜೂನ್ 21ರಂದು ಮೊತ್ತಮೊದಲ ವಿಶ್ವಯೋಗ ದಿನಾಚರಣೆಯನ್ನು ಸಂಘಟಿಸಲಾಯಿತು. ಕಾಕತಾಳೀಯವಾಗಿ ಅಂದು ಭಾನುವಾರವಾದ ಕಾರಣ ಮೊದಲ ಅಂತರರಾಷ್ಟ್ರೀಯ ಯೋಗ ದಿನದಂದು ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದಲ್ಲದೆ , ತಮ್ಮ ದೈನಂದಿನ ದಿನಚರಿಯಲ್ಲಿ ಯೋಗವನ್ನು ಸೇರಿಸಿಕೊಳ್ಳಲು ಪ್ರೇರೇಪಿಸಲ್ಪಟ್ಟರು. ನಮ್ಮ ದೇಶದಲ್ಲೂ ಉದ್ಯಾನವನಗಳು, ಸಮುದಾಯ ಭವನಗಳು ಮತ್ತು ಇತರ ಸ್ಥಳಗಳಲ್ಲಿ ಜನರು ವಿವಿಧ ಯೋಗ ಆಸನಗಳನ್ನು ಅಭ್ಯಾಸ ಮಾಡಲು ಒಟ್ಟುಗೂಡಿದರು. ಮಹಾನಗರಗಳಲ್ಲಿ ವಾಸಿಸುವ ಜನರು ಮಾತ್ರವಲ್ಲ, ಸಣ್ಣ ಪಟ್ಟಣಗಳು ಮತ್ತು ಹಳ್ಳಿಗಳಲ್ಲಿ ವಾಸಿಸುವ ಜನರು ಸಹ ಯೋಗ ಅವಧಿಗಳನ್ನು ಆಯೋಜಿಸಿ ಭಾಗವಹಿಸಿದರು. ಇದು ಒಂದು ಅದ್ಭುತ ದೃಶ್ಯವಾಗಿತ್ತು. ಇದಲ್ಲದೆ, ದೇಶದ ವಿವಿಧ ಸ್ಥಳಗಳಲ್ಲಿ ಹಲವಾರು ಯೋಗ ಶಿಬಿರಗಳನ್ನು ಆಯೋಜಿಸಲಾಗಿತ್ತು. ಈ ಯೋಗ ಅವಧಿಗಳನ್ನು ಯಶಸ್ವಿಗೊಳಿಸಲು ಯೋಗ ತರಬೇತುದಾರರು ಸ್ವಯಂಸೇವಕರಾಗಿ ಜನರನ್ನು ಮುನ್ನಡೆಸಿದರು. ಸಾರ್ವಜನಿಕರು ತೋರಿಸಿದ ಉತ್ಸಾಹ ಅಪಾರವಾಗಿತ್ತು. ಇದಕ್ಕೆ ಪೂರಕವಾಗಿ ಅದೇ ದಿನ ಎನ್‍ಸಿಸಿ ಕೆಡೆಟ್‍ಗಳು “ಒಂದೇ ಸಮವಸ್ತ್ರ ಧರಿಸಿದ ಯುವ ಸಂಘಟನೆಯು ಏಕಕಾಲದಲ್ಲಿ ಅತಿದೊಡ್ಡ ಯೋಗ ಪ್ರದರ್ಶನ” ಮಾಡಿದ್ದಕ್ಕಾಗಿ ಲಿಮ್ಕಾ ಬುಕ್ ಆಫ್ ರೆಕಾಡ್ರ್ಸ್ ಗೆ ಪ್ರವೇಶಿಸಿದರು. ಹೀಗೆ ಪ್ರಥಮ ಯೋಗ ದಿನಾಚರಣೆಯಲ್ಲಿ ವಿಶ್ವಾದ್ಯಂತ ಅತಿ ದೊಡ್ಡ ಭಾಗವಹಿಸುವಿಕೆಯನ್ನು ದಾಖಲಿಸಲು ಸಾಧ್ಯವಾಯಿತು. ಅಲ್ಲದೆ ಇದು ಭಾರತದಲ್ಲಿ ಮತ್ತು ವಿದೇಶಗಳಲ್ಲಿ ಅನೇಕ ಹೊಸ ಯೋಗ ಕೇಂದ್ರಗಳ ಸ್ಥಾಪನೆಗೆ ಕಾರಣವಾಯಿತು.
ಹಿಂದಿನ ಹತ್ತು ವರ್ಷಗಳಲ್ಲಿ ಪ್ರತಿ ಜೂನ್ 21 ರಂದು ನಮ್ಮ ಪ್ರಧಾನಿ ಮೋದಿಯವರು ಒಂದಲ್ಲ ಒಂದು ಕಡೆ ಭಾಗವಹಿಸುತ್ತ ಯೋಗದೆಡೆಗೆ ಜನರ ಪ್ರೀತಿಯನ್ನೂ ನಿಷ್ಟೆಯನ್ನೂ ಹೆಚ್ಚಿಸುತ್ತಿದ್ದಾರೆ. 2015 ಜೂನ್ 21 ರಂದು ಸದ್ಭಾವನೆ ಮತ್ತು ಶಾಂತಿಯ ಘೋಷಣೆಯೊಂದಿಗೆ ದೆಹಲಿಯ ರಾಜಪಥದಲ್ಲಿ ಎರಡು ಗಿನ್ನೆಸ್ ದಾಖಲೆಗಳಾದುವು. 2016 ಜೂನ್ 21 ರಂದು ಯುವಜನ ಸ್ನೇಹ ಘೋಷಣೆಯೊಂದಿಗೆ ಚಂದೀಘರ್ ನಲ್ಲಿ, 2017 ಜೂನ್ 21 ರಂದು ಆರೊಗ್ಯಕ್ಕಾಗಿ ಯೋಗ ಘೋಷಣೆಯೊಂದಿಗೆ ಲಕ್ನೋದಲ್ಲಿ, 2018 ಜೂನ್ 21 ರಂದು ವಿಶ್ವಶಾಂತಿಗಾಗಿ ಯೋಗ ಘೋಷಣೆಯೊಂದಿಗೆ ಡೆಹರಾಡೂನ್ ನಲ್ಲಿ, 2019 ಜೂನ್ 21 ರಂದು ವಾತಾವರಣ ರಕ್ಷಣೆಯ ಘೋಷಣೆಯೊಂದಿಗೆ ರಾಂಚಿಯಲ್ಲಿ, 2020 ಜೂನ್ 21 ರಂದು ಕೋವಿಡ್ ಕಾರಣದಿಂದಾಗಿ ಸ್ವಾಸ್ಥ್ಯಕ್ಕಾಗಿ ಮನೆಮನೆಯಲ್ಲೂ ಯೋಗ ಘೋಷಣೆಯೊಂದಿಗೆ ದೇಶಾದ್ಯಂತ ಆಚರಣೆ, 2021 ಜೂನ್ 21 ರಂದು ಆರೊಗ್ಯ ಆಪ್ ಬಿಡುಗಡೆ, 2022 ಜೂನ್ 21 ರಂದು ಮಾನವತೆಗಾಗಿ ಯೋಗ ಘೋಷಣೆಯೊಂದಿಗೆ ಮೈಸೂರು ಅರಮನೆ ಮೈದಾನ, 2023 ಜೂನ್ 21 ರಂದು ವಸುಧೈವ ಕುಟುಂಬಕಂ ಘೋಷಣೆಯೊಂದಿಗೆ ನ್ಯೂಯಾರ್ಕನಲ್ಲಿ ಹಾಗೂ 2024 ಜೂನ್ 21 ರಂದು ಮಹಿಳಾ ಸಬಲೀಕರಣಕ್ಕಾಗಿ ಯೋಗ ಎಂಬ ಘೋಷಣೆಯೊಂದಿಗೆ ಹೃಷಿಕೇಶದಲ್ಲಿ ವಿಶ್ವ ಯೋಗ ದಿನಾಚರಣೆಯ ದಶಮಾನೋತ್ಸವವನ್ನು ಆಚರಿಸಲಾಯಿತು. ಈ ವರ್ಷ 2025 ಜೂನ್ 21 ರಂದು ಪಂಜಾಬಿನ ಭಟಿಂಡಾದಲ್ಲಿ ‘one earth one healthʼ ಘೋಷಣೆಯೊಂದಿಗೆ ಆಚರಿಸಲು ಸಿದ್ಧತೆ ನಡೆದಿದೆ. ಈ ಸಂದರ್ಭದಲ್ಲಿ ಯೋಗ ಕ್ವಿಜ್, ಯೋಗ ನನ್ನ ಹೆಮ್ಮೆ ಫೊಟೊಗ್ರಾಫಿ ಸ್ಪರ್ಧೆ, e ಪೋಸ್ಟರ್ ಸ್ಪರ್ಧೆ, ಯೋಗ ಗೀತೆ ಜಿಂಗಲ್ ಸ್ಪರ್ಧೆ ಹೀಗೆ ಅನೇಕ ವಿಶಿಷ್ಟ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿದೆ. ಅಂತೂ ವಿಶ್ವ ಯೋಗ ದಿನಾಚರಣೆಯು ಒಂದು ಮಾನವತೆಯ ಚಳವಳಿಯಂತೆ ವಿಸ್ತರಿಸುತ್ತಿರುವುದು ಅಭಿಮಾನದ ಬೆಳವಣಿಗೆ ಎನ್ನಬಹುದು.
ಇತ್ತೀಚಿನ ವರ್ಷಗಳಲ್ಲಿ ಪಕ್ಷಾತೀತವಾಗಿ ರಾಜಕಾರಣಿಗಳು, ಸಿಲೆಬ್ರಿಟಿಸ್ ಎನ್ನಲಾಗುವ ಕ್ರೀಡಾಳುಗಳು, ಚಿತ್ರರಂಗದ ಕಲಾವಿದರು, ಸಾಹಿತಿಗಳು, ಶಿಕ್ಷಕರು ಹಿಗೆ ವಿವಿಧ ಕ್ಷೇತ್ರಗಳ ಪ್ರಸಿದ್ಧರು ಕೂಡಾ ಯೋಗ ದಿನಾಚರಣೆಯ ಮೆರುಗನ್ನು ಹೆಚ್ಚಿಸುತ್ತಿದ್ದಾರೆ. ಯಾವುದೇ ಕಾಯಿಲೆಗೆ ವಿದೇಶೀ ಮದ್ದು ಆಗಬೇಕು ಎಂತ ನಂಬಿದ್ದವರಿಗೆ ಈಗ ಯೋಗದ ಮೇಲೆ ವಿಶ್ವಾಸ ಬಂದಿದೆ. ಆರೋಗ್ಯವೇ ಭಾಗ್ಯ ಎಂಬ ಆಡು ಮಾತಿನ ಪ್ರಾಯೋಗಿಕ ಲಾಭ ಪಡೆಯಲು ಯೋಗವೇ ಸರಳ ಮಾರ್ಗ ಎಂಬುದು ಅರ್ಥವಾಗಿದೆ. ಯೋಗ ಶಿಕ್ಷಕರೂ ತಮ್ಮ ಸಾಂಪ್ರದಾಯಿಕ ಬಿಗಿ ನೀತಿಗಳನ್ನು ಸಡಿಲಿಸಿ ವ್ಯಕ್ತಿಯ ಸಾಮಥ್ರ್ಯಕ್ಕೆ ತಕ್ಕಂತಹ ಯೋಗ, ವ್ಯಾಯಾಮ ಮತ್ತು ಧ್ಯಾನಗಳನ್ನು ಹೇಳಿಕೊಡುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ತಾವು ಮಾಡುತ್ತಿರುವ ಎರಡು ಮೂರು ವ್ಯಾಯಾಮಗಳನ್ನಷ್ಟೇ ಮಾಡಿ ತೋರಿಸಿ ಆರೋಗ್ಯ ರಕ್ಷಣೆಯ ಉಪಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅಂದರೆ ಯೋಗದ ಸಂಕ್ಷಿಪ್ತ ಪಾಠಗಳು ಬೇಕಾದಷ್ಟು ಸಿಗುತ್ತವೆ. ತಂತಮ್ಮ ಆಸಕ್ತಿ ಮತ್ತು ಸಾಧ್ಯತೆಗಳಿಗೆ ತಕ್ಕಂತೆ ಅಭ್ಯಾಸ ಮಾಡುತ್ತ ಸ್ವಯಮಾರೋಗ್ಯ ರಕ್ಷಣೆಗೆ ಯೋಗದ ಪ್ರಯೋಜನವನ್ನು ಪಡೆಯಲು ಸಾಧ್ಯವಿದೆ.