ಜೊತೆ ಜೊತೆಗೇ ಬಂದ ಹೊಸವರ್ಷದ ಹಬ್ಬಗಳಿಗೆ ಶುಭಾಶಯ.
ಯುಗಾದಿಯ ಬೇವು ಬೆಲ್ಲದ ಸವಿ, ವಿಷುವಿನ ಕಣಿ ವೈಭವ ಎರಡು ಒಂದು ದಿನ ವ್ಯತ್ಯಾಸದಲ್ಲಿ ಬಂದಿವೆ. ಯುಗಾದಿ, ವಿಷು ಎರಡೂ ನಮಗೆ ಹೊಸವರುಷದ ಸಂಭ್ರಮವೇ. ಕೆಲವೆಡೆ ಚಾಂದ್ರಮಾನ ಯುಗಾದಿಯ ಆಚರಣೆಯಾದರೆ ಉಳಿದೆಡೆಯಲ್ಲಿ ಸೌರಮಾನ ಯುಗಾದಿ ( ಬಿಸು)ವಿಗೆ ಪ್ರಾಮುಖ್ಯತೆ.
ಯುಗಾದಿ ಹಬ್ಬ ಬಂತೆಂದರೆ ಎಲ್ಲೆಲ್ಲೂ ಸಂತೋಷ, ಸಡಗರ ಅದರ ತಯಾರಿಯೇ ಬಲು ಜೋರು. ಆದರೆ ಬೇರೆಲ್ಲ ಏನೇ ಗೌಜಿ ಗದ್ದಲಗಳಿದ್ದರೂ ಮುಖ್ಯ ಪಾತ್ರ ವಹಿಸುವುದು ಬೇವು , ಬೆಲ್ಲ. ಬದುಕಿನಲ್ಲಿ ಬೇವಿನ ಕಹಿ, ಬೆಲ್ಲದ ಸಿಹಿ ಎರಡನ್ನೂ ಸಮಾನವಾಗಿ ಸ್ವೀಕರಿಸುವ ಮನೋಧರ್ಮವನ್ನು ಪ್ರತಿನಿಧಿಸುತ್ತವೆ. ಬೆಲ್ಲದ ಸಿಹಿಯನ್ನು ಸುಲಭವಾಗಿ, ಸಹಜವಾಗಿ ಸ್ವೀಕರಿಸಿದ ಮನಸು ಬೇವಿನ ಕಹಿಯನ್ನು ಇಷ್ಟಪಡದು. ಆದರೆ ಬದುಕೆಂದರೆ ಕಷ್ಟ , ಸುಖಗಳೆರಡೂ ಇರುತ್ತವೆ, ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಹೇಗೆ ಯುಗಾದಿ ಬಂದಾಗ ಮರಗಳೆಲ್ಲ ಎಲೆಗಳನ್ನು ಉದುರಿಸಿ ಹೊಸ ಚಿಗುರುಗಳಿಂದ ಕಂಗೊಳಿಸುತ್ತವೆಯೋ ಹಾಗೇ ಮನುಜರೂ ಕೂಡ. ಬಂದ ಕಷ್ಟಗಳನ್ನು ಎದುರಿಸಿ ಮುನ್ನಡೆಯಲು ಬರುವ ಹೊಸ ಸಂವತ್ಸರ ನಾಂದಿಯಾಗಲಿ.
‘ಶಾರ್ವರಿಯ ಶಬ್ದಾರ್ಥ ಕತ್ತಲು ,ಬರುವ ಸಂವತ್ಸರ ‘ಪ್ಲವ’ ದ ಅರ್ಥ ತೆಪ್ಪ, ದೋಣಿ .
ಶಾರ್ವರಿ ಸಂವತ್ಸರದಲ್ಲಿದ್ದ ಕೊರೊನಾ ದ ಕಪಿಮುಷ್ಠಿಯಿಂದ ಪ್ಲವ ಸಂವತ್ಸರದಲ್ಲಿ ಬಿಡುಗಡೆ ದೊರೆಯ ಬಹುದೆಂಬ ನಿರೀಕ್ಷೆಯೊಂದಿಗೆ.
ವಿಷು ಅಥವಾ ಬಿಸುವಿನ ಪ್ರಮುಖ ಆಕರ್ಷಣೆಯೇ ವಿಷು ಕಣಿ. ತರಕಾರಿ , ಹಣ್ಣುಗಳು, ತೆಂಗಿನಕಾಯಿ, ಅಕ್ಕಿ, ಕನ್ನಡಿ, ಬೆಳ್ಳಿ ಬಂಗಾರ, ನಾಣ್ಯ, ವೀಳ್ಯದೆಲೆ, ಅಡಿಕೆ ಮೊದಲಾದ ಸಾಮಗ್ರಿಗಳನ್ನು ಹಿಂದಿನ ದಿನವೇ ದೇವರ ಕೋಣೆಯಲ್ಲಿ ಸರಿ ಮಾಡಿ ಇಡಲಾಗುತ್ತೆ. ಇದಕ್ಕೇ ವಿಷುಕಣಿಯೆಂದು ಹೆಸರು. ನಮ್ಮ ಸಮೃದ್ಧಿಯ ಸಂಕೇತ ಈ ವಿಷುಕಣಿ. ಬೆಳಗ್ಗೆ ಎದ್ದ ಕೂಡಲೇ ಮೊದಲು ಕಣ್ತೆರೆಯುವುದು ವಿಷುಕಣಿಯ ಮುಂದೆಯೇ. ಮುಂಜಾನೆಯೇ ಎದ್ದು ಸೀದಾ ದೇವರ ಕೋಣೆಗೆ ಬಂದು ವಿಷು ಕಣಿಯನ್ನು ಕಣ್ತುಂಬಿಸಿಕೊಂಡು ನಮಸ್ಕರಿಸಿ ಮುಂದಿನ ಕಾರ್ಯಕ್ಕೆ ಸಜ್ಜಾಗುವುದು ನಮ್ಮ ದಕ್ಷಿಣಕನ್ನಡ, ಉಡುಪಿ ಕಾಸರಗೋಡು ಮೊದಲಾದ ಜಿಲ್ಲೆಗಳ ಜನರು ಪಾಲಿಸಿಕೊಂಡು ಬಂದ ಪದ್ಧತಿ.
ಈ ಪ್ಲವ ಸಂವತ್ಸರವು ವಿಶ್ವಕ್ಕೇ ಹಬ್ಬಿದ ವೈರಸ್ ನ ಕತ್ತಲೆಯನ್ನು ಹೊಡೆದೋಡಿಸಿ ಜಗತ್ತಿಗೆ ಹೊಸ ಅಧ್ಯಾಯದ ನಾಂದಿಗೆ ಎಂಬ ಆಶಯದೊಂದಿಗೆ ಶುಭಹಾರೈಕೆ.
ಯುಗಾದಿ ಹಾಗೂ ವಿಷುವಿನ ಶುಭಾಶಯಗಳು.
# ಅಶ್ವಿನಿಮೂರ್ತಿ ಅಯ್ಯನಕಟ್ಟೆ