ಸುಳ್ಯ:ಮಂಡೆಕೋಲಿನಲ್ಲಿ ಹಲವು ದಿನಗಳಿಂದ ಕಾಡಾನೆಗಳ ಹಿಂಡು ಬೀಡುಬಿಟ್ಟು ದಾಳಿ ನಡೆಸಿದರೂ ಅರಣ್ಯ ಇಲಾಖೆಯ ಸಿಬ್ಬಂದಿಗಳು ಬಂದಿಲ್ಲ ಮತ್ತು ಆನೆಗಳನ್ನು ಓಡಿಸಲು ಇಲಾಖೆ ಪಟಾಕಿಯನ್ನೂ ಒದಗಿಸಿಲ್ಲ ಎಂಬ ದೂರುಗಳು ಬಂದಿದೆ….! ಹೀಗೆಂದು ಅರಣ್ಯ ಇಲಾಖಾ ಸಿಬಂದಿಗಳನ್ನು ಪ್ರಶ್ನಿಸಿದ್ದು ತಾ ಪಂ ಅಧ್ಯಕ್ಷ ಚನಿಯ ಕಲ್ತಡ್ಕ.
ತಾ.ಪಂ.ಅಧ್ಯಕ್ಷ ಚನಿಯ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ತಾಲೂಕು ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಆನೆಯ ವಿಷಯ ಚರ್ಚೆಯಾಯಿತು. ಆನೆ ಬಂದರೂ ಬಾರದೇ ಇರುವುದು ಮಾತ್ರವಲ್ಲ ಜನಪ್ರತಿನಿಧಿಗಳಲ್ಲಿ ಈ ಬಗ್ಗೆ ದೂರು ಹೇಳಿದ್ದು ಯಾಕೆ ಎಂದು ಅರಣ್ಯ ಸಿಬ್ಬಂದಿಗಳು ಸ್ಥಳೀಯರ ಮೇಲೆ ಸವಾರಿ ಮಾಡಿರುವ ಬಗ್ಗೆ ದೂರುಗಳಿವೆ. ಇದು ಯಾಕೆ, ಈ ರೀತಿ ವರ್ತಿಸಿದ ಸಿಬ್ಬಂದಿಯ ಮೇಲೆ ಕ್ರಮ ಜರುಗಿಸಿ ಎಂದು ಅಧ್ಯಕ್ಷರು ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಹೇಳಿದರು. ಈ ಕುರಿತು ಸಿಬ್ಬಂದಿಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡುವುದಾಗಿ ವಲಯ ಅರಣ್ಯಾಧಿಕಾರಿ ಮಂಜುನಾಥ್ ಹೇಳಿದರು.
ಮಂಡೆಕೋಲು, ದೇಲಂಪಾಡಿಯಲ್ಲಿ ಸಭೆ:
ಗಡಿಪ್ರದೇಶದಲ್ಲಿ ಉಂಟಾಗಿರುವ ಆನೆ ಹಾವಳಿಯ ಕುರಿತು ಕೇರಳ ಮತ್ತು ಕರ್ನಾಟಕದ ಅಧಿಕಾರಿಗಳ ಜಂಟಿ ಸಭೆ ಮಂಗಳೂರಿನಲ್ಲಿ ನಡೆದಿತ್ತು. ಮುಂದಿನ ಹಂತದಲ್ಲಿ ಮಂಡೆಕೋಲು ಮತ್ತು ದೇಲಂಪಾಡಿಯಲ್ಲಿ ಎರಡೂ ರಾಜ್ಯಗಳ ಅಧಿಕಾರಿಗಳ ಸಭೆ ನಡೆಯಲಿದೆ ಎಂದು ಸುಳ್ಯ ವಲಯ ಅರಣ್ಯಾಧಿಕಾರಿ ಎನ್.ಮಂಜುನಾಥ್ ತಿಳಿಸಿದರು. ಸಭೆ ನಡೆಸಿ ಸ್ಥಳೀಯ ಜನರ ಮತ್ತು ಜನಪ್ರತಿನಿಧಿಗಳ ಅಭಿಪ್ರಾಯ ಪಡೆದು ಅದನ್ನು ಕ್ರೂಡೀಕರಿಸಿ ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಸಭೆ ನಡೆಸಿ ಶಾಶ್ವತ ಪರಿಹಾರ ಯೋಜನೆ ರೂಪಿಸಲಾಗುವುದು ಎಂದು ಅವರು ವಿವರಿಸಿದರು.