ಈ ಬಾರಿ ಪಯಸ್ವಿನಿ ನದಿ ಉಕ್ಕಿ ಹರಿದರೆ ಕಾಡಲಿದೆ ನೆರೆ ಭೀತಿ….!

May 16, 2019
8:00 AM

ಸುಳ್ಯ: ಕಳೆದ ಮಳೆಗಾಲದಲ್ಲಿ ಜೋಡುಪಾಲ ಮತ್ತು ಮೊಣ್ಣಂಗೇರಿಯಲ್ಲಿ ಉಂಟಾದ ಭೂಕುಸಿತ ಮತ್ತು ಜಲಪ್ರಳಯದ ಪರಿಣಾಮವಾಗಿ ಉಕ್ಕಿ ಹರಿದ ಪಯಸ್ವಿನಿ ನದಿಯ ಒಡಲು ಪೂರ್ತಿ ಕೆಸರು, ಮಣ್ಣು, ಮರಳು ತುಂಬಿ ಹೋಗಿದೆ. ಸುಮಾರು ಒಂದೂವರೆ ತಿಂಗಳಿಗೂ ಹೆಚ್ಚು ಕಾಲ ಮಣ್ಣು ಮಿಶ್ರಿತ ಕೆಂಪು ನೀರು ನದಿಯಲ್ಲಿ ಉಕ್ಕಿ ಹರಿದಿತ್ತು. ಇದರ ಪರಿಣಾಮ ನದಿಯ ಒಡಲಲ್ಲಿ ಮರಳು ಮತ್ತು ಮಣ್ಣು ತುಂಬಿ ಕೊಂಡಿದೆ. ಇದರಿಂದ ನದೀ ಪಾತ್ರ ಮೇಲಕ್ಕೆ ಬಂದಿದ್ದು ಮುಂದೆ ಮಳೆಗಾಲದಲ್ಲಿ ನದಿ ಮತ್ತೆ ಉಕ್ಕಿ ಹರಿದರೆ ನದಿಯ ಸುತ್ತಲ ಪ್ರದೇಶದಲ್ಲಿ ನೆರೆ ಉಂಟಾಗಬಹುದು ಎಂಬ ಭೀತಿ ಉಂಟಾಗಿದೆ.

Advertisement
Advertisement

ಎರಡನೇ ಮೊಣ್ಣಂಗೇರಿ, ಜೋಡುಪಾಲ ಭಾಗದಲ್ಲಿ ಉಂಟಾದ ಜಲಪ್ರಳಯದ ನಂತರ  ಭೂಕುಸಿತದಿಂದ ಟನ್‍ಗಟ್ಟಲೆ ಮಣ್ಣು, ಮರಳು ಹರಿದು ಬಂದಿದೆ. ಹೀಗೆ ಬಂದಂತಂಹ ಮಣ್ಣು,ಹೂಳು ನದಿಯಲ್ಲಿದ್ದ ಭಾರೀ ಗಾತ್ರದ ಹೊಂಡ ಮತ್ತು ಗಯಗಳಲ್ಲಿ ತುಂಬಿ ಕೊಂಡಿದೆ. ಇದರಿಂದ ನದಿಯ ಪಾತ್ರದಲ್ಲಿ ಕೆಲವೆಡೆ 10-15 ಅಡಿಗಳಷ್ಟು ಹೂಳು ತುಂಬಿದ್ದರೆ, ಬಹುತೇಕ ಕಡೆಗಳಲ್ಲಿ ಆರು-ಏಳು ಅಡಿಗಳಷ್ಟು ಹೂಳು ನಿಂತಿದೆ ಎಂಬುದನ್ನು ಭೂ ವಿಜ್ಞಾನಿಗಳು ಸಾಕ್ಷೀಕರಿಸುತ್ತಾರೆ.

ಮೊಣ್ಣಂಗೇರಿಯಿಂದ ಆರಂಭಗೊಂಡು, ಕೊಯನಾಡು, ಸಂಪಾಜೆ, ಊರುಬೈಲು, ಚೆಂಬು, ಕಲ್ಲುಗುಂಡಿ, ಅರಂತೋಡು, ಪೆರಾಜೆ ಭಾಗದವರೆಗೆ ನದಿಯ ಒಡಲು ಹೂಳಿನಿಂದ ತುಂಬಿ ಹೋಗಿದ್ದು ಹೊಂಡಗಳೆಲ್ಲ ಮುಚ್ಚಿ ನದಿಯ ಮೇಲ್ಪದರ ಸಮ ತಟ್ಟಾಗಿದೆ. ಕಳೆದ ವರ್ಷವೇ ಮಳೆಗಾಲದಲ್ಲಿ ನದಿಯಲ್ಲಿ ನೀರು ಉಕ್ಕಿ ಹರಿದಾಗ ನದಿಯ ಬದಿಯಲ್ಲಿರುವ ಪ್ರದೇಶಗಳಿಗೆ, ತೋಟ, ಕೃಷಿಭೂಮಿಗಳಿಗೆ ನೀರು ನುಗ್ಗಿತ್ತು. ಊರುಬೈಲಿನ ಸೇತುವೆ ಸೇರಿ ಕೆಲವೆಡೆ ಮೋರಿ, ಸೇತುವೆಗಳು ಕೊಚ್ಚಿ ಹೋಗಿತ್ತು. ಇದೀಗ ಹೂಳು ತುಂಬಿ ನದೀ ಪಾತ್ರ ಮೇಲಕ್ಕೆ ಬಂದಿರುವುದರಿಂದ ಮಳೆಗಾಲದಲ್ಲಿ ನದಿ ಮತ್ತೆ ಉಕ್ಕಿ ಹರಿದರೆ ನದಿ ನೀರು ಇನ್ನಷ್ಟು ಎತ್ತರಕ್ಕೆ ಚಿಮ್ಮಿ ತೀರ ಪ್ರದೇಶವನ್ನು ಆಪೋಷನ ತೆಗೆದುಕೊಳ್ಳಬಹುದು ಎಂಬ ಆತಂಕ ಜನರನ್ನು ಕಾಡಿದೆ.

ಬೇಸಿಗೆಯಲ್ಲಿ ಸಂಕಟ ತಂದಿತ್ತು:

ಮಳೆಗಾಲದಲ್ಲಿ ಜಲಪ್ರಳಯ ಹರಿದರೂ ನದಿಯಲ್ಲಿ ಹೂಳು ತುಂಬಿದ ಕಾರಣ ಬೇಸಿಗೆಯಲ್ಲಿಯೂ ಕೃಷಿಕರಿಗೆ, ಸಾರ್ವಜನಿಕರಿಗೆ ಸಂಕಟ ಎದುರಾಗಿತ್ತು. ಹೂಳು ತುಂಬಿ ಹೊಂಡಗಳು ಮುಚ್ಚಿ ಹೋಗಿ ನೀರಿನ ಶೇಖರಣೆಯೇ ಇಲ್ಲದಂತಾಗಿತ್ತು. ಹಲವು ಕಡೆಗಳಲ್ಲಿ ನದಿಯ ಮೇಲ್ಭಾಗದಲ್ಲಿ ನೀರಿನ ಹರಿವು ನಿಂತು ಹೋಗಿ ನದಿ ಸಣ್ಣ ತೋಡಿನಂತಾಗಿತ್ತು. ತುಂಬಿದ ಮರಳು ಮತ್ತು ಹೂಳಿನ ಅಡಿ ಭಾಗದಲ್ಲಿ ನೀರು ಸೇರಿಕೊಂಡ ಕಾರಣ ಕೃಷಿಕರು ನದಿಯಲ್ಲಿ ಹೊಂಡ ತೋಡಿ ನೀರು ತೆಗೆಯಬೇಕಾದ ಪರಿಸ್ಥಿತಿ ಉಂಟಾಗಿತ್ತು.
ನದಿಯಲ್ಲಿನ ದೊಡ್ಡ ಹೊಂಡಗಳಿಗೆ ಪಂಪ್ ಸೆಟ್ ಇಟ್ಟು ಕೃಷಿಕರು ತಮ್ಮ ತೋಟಗಳಿಗೆ ನೀರು ಹಾಯಿಸುತ್ತಿದ್ದರು. ಆದರೆ ಮರಳು, ಹೂಳು ತುಂಬಿ ಹೊಂಡಗಳೆಲ್ಲ ಭರ್ತಿಯಾದ ಕಾರಣ ನದಿಯ ನೀರಿನ ಆಗರಗಳೇ ಭರಿದಾಗಿ ತೋಟಕ್ಕೆ ನೀರು ಹಾಯಿಸಲಾಗದೆ ಕೃಷಿಕರು ಸಂಕಷ್ಟಕ್ಕೆ ಸಿಲುಕಿದ್ದರು. ಪಂಪ್ ಸೆಟ್ ಸ್ಟಾರ್ಟ್ ಮಾಡಿದರೆ ಮರಳಿನ ಕಣಗಳು ನುಗ್ಗಿ ಪಂಪ್‍ಸೆಟ್‍ಗಳು ಕೆಟ್ಟು ಹೋಗುವುದು ಸಾಮಾನ್ಯವಾಗಿತ್ತು. ಪಯಸ್ವಿನಿ ನದಿಯನ್ನು ಆಶ್ರಯಿಸಿ ಕೃಷಿ ಮಾಡುತ್ತಿರುವ ಹಲವು ಕೃಷಿಕರಿಗೆ ನೀರಿನ ಅಭಾವದಿಂದ ತೋಟಕ್ಕೆ ನೀರು ಹಾಯಿಸಲು ಸಂಕಷ್ಟ ಎದುರಾಗಿತ್ತು.

Advertisement

ಬೇಸಿಗೆಯಲ್ಲಿನ ನೀರು ಸಂಗ್ರಹ ಕೇಂದ್ರಗಳಾದ ಹಲವು ಹೊಂಡಗಳು ಮುಚ್ಚಿ ಹೋಗಿ ನೀರಿಗೆ ಸಮಸ್ಯೆ ಎದುರಾಗಿರುವುದಲ್ಲದೆ ಹೂಳು ತುಂಬಿ ನದಿಯ ಒಡಲು ಮೇಲೆ ಬಂದಿರುವುದರಿಂದ ಮಳೆಗಾಲದಲ್ಲಿ ನೀರು ಉಕ್ಕಿ ಹರಿದರೆ ಸಮೀಪದ ಪ್ರದೇಶಗಳು ಕೊಚ್ಚಿ ಹೋಗುವ ಸಾಧ್ಯತೆ ಇದೆ. ಆದುದರಿಂದ ಈ ಮರಳು ಮತ್ತು ಹೂಳನ್ನು ಎತ್ತಲು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಹಲವು ತಿಂಗಳ ಹಿಂದೆಯೇ ಬೇಡಿಕೆ ಇಟ್ಟಿದ್ದರು.

ಭೂ ಕುಸಿತ ಆದರೆ ಇನ್ನಷ್ಟು ಅಪಾಯ: ಭೂ ವಿಜ್ಞಾನಿಗಳ ಎಚ್ಚರಿಕೆ:

ಪ್ರಳಯಜಲ ಹರಿದು ಮಣ್ಣು ತುಂಬಿ ನದಿಯ ಒಡಲು ಬರಿದಾಗಿರುವ ಪ್ರದೇಶದಲ್ಲಿ ಭೂ ವಿಜ್ಞಾನಿ ಅನನ್ಯ ವಾಸುದೇವ್ ಆರ್.ಎಂ.ನೇತೃತ್ವದಲ್ಲಿ ಇತ್ತೀಚೆಗೆ ಪರಿಶೀಲನೆ ನಡೆಸಿದ್ದರು. ಹೂಳು ತುಂಬಿ ಬೃಹದಾಕಾರದ ಹೊಂಡಗಳು ಮಚ್ಚಿ ಹೋಗಿದೆ. ಎಲ್ಲೆಡೆ ಕನಿಷ್ಠ ಆರು ಅಡಿಗಳಷ್ಟು ಹೂಳು ತುಂಬಿರುವುದು ಕಂಡು ಬಂದಿದೆ. ಕಳೆದ ಬಾರಿ ಪಯಸ್ವಿನಿ ನದಿಯ ಮೇಲೆಯೇ ಬಾರೀ ಪ್ರಮಾಣದಲ್ಲಿ ಗುಡ್ಡ ಕುಸಿದಿದೆ. ಆ ಮಣ್ಣು ಹರಿದು ಬಂದು ನದಿಯಲ್ಲಿ ಸೇರಿಕೊಂಡಿದೆ. ಮುಂದಿನ ಮಳೆಗಾಲದಲ್ಲಿ ಮತ್ತೆ ಭಾರೀ ಮಳೆಯಾಗಿ ಗುಡ್ಡ ಕುಸಿದರೆ ಆ ಮಣ್ಣು ಮತ್ತು ನೀರು ನದಿಯಲ್ಲಿ ಉಕ್ಕಿ ಹರಿದರೆ ತೀರ ಪ್ರದೇಶಗಳಿಗೆ ವ್ಯಾಪಕ ಹಾನಿಯಾಗುವ ಸಂಭವವಿದೆ ಜೊತೆಗೆ ನದಿ ತನ್ನ ಹರಿವಿನ ದಿಕ್ಕನ್ನೇ ಬದಲಿಸುವ ಅಪಾಯವೂ ಇದೆ ಎಂದು ಅಭಿಪ್ರಾಯಪಡುತ್ತಾರೆ ಅನನ್ಯ ವಾಸುದೇವ್.

Advertisement
Advertisement

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

58ನೇ ಜ್ಞಾನಪೀಠ ಪ್ರಶಸ್ತಿ  ಪ್ರದಾನ | ಜಗದ್ಗುರು ರಾಮಭದ್ರಾಚಾರ್ಯ ಅವರಿಗೆ ಜ್ಞಾನಪೀಠ ಪ್ರಶಸ್ತಿ ಪ್ರದಾನ
May 17, 2025
10:22 PM
by: The Rural Mirror ಸುದ್ದಿಜಾಲ
ವಾಯುಭಾರ ಕುಸಿತ | ಕೇರಳದಲ್ಲಿ ಗುಡುಗು ಸಹಿತ ಭಾರೀ ಮಳೆ ಸಾಧ್ಯತೆ | ಆರು ಜಿಲ್ಲೆಗಳಲ್ಲಿ ಎಲ್ಲೋ ಎಲರ್ಟ್‌ | ರಾಜ್ಯದಲ್ಲೂ ಮಳೆ ಸಾಧ್ಯತೆ |
May 17, 2025
8:27 PM
by: ದ ರೂರಲ್ ಮಿರರ್.ಕಾಂ
ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಬಾಗಲಕೋಟೆ ಜಿಲ್ಲೆಯ  ಶೂರ್ಪಾಲಿಯ ಶ್ರೀಲಕ್ಷ್ಮೀ ನರಸಿಂಹ ದೇವಾಲಯ
May 16, 2025
9:59 PM
by: The Rural Mirror ಸುದ್ದಿಜಾಲ
ಕಾಯಕ ಗ್ರಾಮ  ಯೋಜನೆ | ಹಿಂದುಳಿದ ಗ್ರಾಮಗಳನ್ನು ದತ್ತು ಸ್ವೀಕರಿಸುವಂತೆ ಸಲಹೆ
May 16, 2025
9:51 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group