ಪಂಜ: ಎಚ್ಚರಿಕೆ…. ಎಚ್ಚರಿಕೆ… ಕಡಬ ತಾಲೂಕಿನ ನಾಕೂರುಗಯದಲ್ಲಿ ಮೊಸಳೆ ಇದೆ. ತೀರ್ಥಸ್ನಾನ ಮಾಡುವ ಭಕ್ತರೇ, ನದಿಗೆ ಹಾಲೆರೆಯುವ ಭಕ್ತರೇ ಸ್ವಲ್ಪ ಗಮನಿಸಿಕೊಳ್ಳಿ.
ಕಡಬ ತಾಲೂಕಿನ ಪುಳಿಕುಕ್ಕು ಬಳಿಯ ನಾಕೂರುಗಯದಲ್ಲಿ ಮೊಸಳೆ ಕಂಡುಬಂದಿದೆ. ಈ ಮೊಸಳೆ ಗಯದಲ್ಲಿ ಮಾತ್ರವಲ್ಲ ಪುಳಿಕುಕ್ಕು ಪ್ರದೇಶದ ಕುಮಾರಧಾರಾ ನದಿಯಲ್ಲಿ ಓಡಾಡುತ್ತಿರುತ್ತದೆ ಎಂದು ಈಗ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಕಳೆದ ವರ್ಷ ನದಿ ಸಮೀಪದ ಕೃಷಿಕರ ನಾಯಿಯನ್ನು ಹಿಡಿದಿದೆ ಎಂದೂ ತಿಳಿಸಿದ್ದಾರೆ.
ನಾಕೂರುಗಯಕ್ಕೆ ಅನೇಕ ಭಕ್ತಾದಿಗಳು ಪ್ರತಿದಿನ ಆಗಮಿಸುತ್ತಾರೆ. ತೀರ್ಥಸ್ನಾನ ಮಾಡಲು ಆಗಮಿಸಿದರೆ, ಇನ್ನೂ ಕೆಲವರು ನದಿಗೆ ಹಾಲು ಬಿಡಲು ಆಗಮಿಸುತ್ತಾರೆ. ಈ ನಾಕೂರುಗಯದಲ್ಲಿ ನೀರಿನ ಒಳಗಡೆ ದೇವಸ್ಥಾನ ಇದೆ ಎಂಬ ನಂಬಿಕೆ ಭಕ್ತರಲ್ಲಿದೆ ಇದೆ. ಹೀಗಾಗಿ ಭಕ್ತಿಯಿಂದ ಆಗಮಿಸುವ ಜನರಿಗೆ ಮೊಸಳೆಯ ಸಂಗತಿ ತಿಳಿಯದೆ ನೀರಿಗೆ ಇಳಿಯುವ ಸಂದರ್ಭ ಅಪಾಯ ಆಗುವ ಸಾಧ್ಯತೆ ಇದೆ. ಈ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ಮೊಸಳೆ ವ್ಯಕ್ತಿಯನ್ನು ಹಿಡಿದುಕೊಂಡು ಮೊಸಳೆ ನೀರೊಳಗೆ ಮುಳುಗಿದ ದೃಶ್ಯ ಹರಿದಾಡುತ್ತಿತ್ತು. ಈಗ ಇಲ್ಲೂ ಅಂತಹ ಅಪಾಯ ತಪ್ಪಿಸಲು ಕ್ರಮ ಆಗಬೇಕಿದೆ. ಜಾಗೃತಿ ಮೂಡಬೇಕಿದೆ.
ಈ ಕಾರಣದಿಂದ ಅರಣ್ಯ ಇಲಾಖೆ ಹಾಗೂ ಸ್ಥಳೀಯ ಪಂಚಾಯತ್ ಗಮನಿಸಿ ಸೂಚನಾ ಫಲಕ ಅಳವಡಿಕೆ ಮಾಡಬೇಕಿದೆ. ಎಚ್ಚರಿಕಾ ಫಲಕ ಅಳವಡಿಕೆ ಬಗ್ಗೆ ನಾಕೂರು ಗಯ ಹಿತರಕ್ಷಣಾ ವೇದಿಕೆಯೂ ಗಮನಹರಿಸಬೇಕಿದೆ.
- ಚಿತ್ರ ಕೃಪೆ: ಶಿವಸುಬ್ರಹ್ಮಣ್ಯ ಕಲ್ಮಡ್ಕ , ಪತ್ರಕರ್ತ