ಮಡಿಕೇರಿ : ಭಾರತೀಯ ಸೇನೆಗೆ ಸೇರಲು ಮಡಿಕೇರಿಯಲ್ಲಿ ನಡೆದ ಸೇನಾ ಆಯ್ಕೆ ಶಿಬಿರದಲ್ಲಿ ನೇಮಕವಾಗಿರುವ ಅಭ್ಯರ್ಥಿಗಳಿಗೆ ಕುಶಾಲನಗರದ ಅನುಗ್ರಹ ಕಾಲೇಜಿನಲ್ಲಿ ಆರಂಭಿಸಿದ ಲಿಖಿತ ಪರೀಕ್ಷೆಯ ಉಚಿತ ಕಾರ್ಯಾಗಾರವನ್ನು ನಿವೃತ್ತ ಯೋಧರಾದ ಗಣೇಶ್ ಪೊನ್ನಪ್ಪ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಸೇನೆಗೆ ಸೇರಲು ಈಗಾಗಲೇ ಮೆಡಿಕಲ್ ಹಾಗೂ ಫಿಸಿಕಲ್ ವಿಭಾಗದಲ್ಲಿ ನೇಮಕವಾಗಿರುವ ಅಭ್ಯರ್ಥಿಗಳಿಗೆ ಬಹು ಮುಖ್ಯ ಘಟ್ಟ ಲಿಖಿತ ಪರೀಕ್ಷೆ ಎದುರಿಸುವುದಾಗಿದೆ. ಕುಶಾಲನಗರದ ನಿವೃತ್ತ ಯೋಧರಾದ ಜನಾರ್ಧನ್ ಅವರ ಪರಿಶ್ರಮದಿಂದ ಬಹಳಷ್ಟು ಯುವಕರು ಇತ್ತೀಚಿನ ವರ್ಷಗಳಲ್ಲಿ ಆಯ್ಕೆಯಾಗುತ್ತಿರುವುದು ಸಂತಸದ ವಿಚಾರ. ಅಭ್ಯರ್ಥಿಗಳು ಸೇನೆಗೆ ಸೇರುವುದು ಅದೊಂದು ಬದುಕಿನ ಸೌಭಾಗ್ಯ ಎಂಬಂತೆ ಸ್ವೀಕರಿಸಿ ದೇಶ ಸೇವೆ ಮಾಡುವ ಅವಕಾಶವನ್ನು ಪಡೆದುಕೊಳ್ಳಬೇಕು, ಸತತವಾದ ಅಧ್ಯಯನ ಹಾಗೂ ಪರಿಶ್ರಮದಿಂದ ಸೇನಾ ಲಿಖಿತ ಪರೀಕ್ಷೆ ಎದುರಿಸಲು ಕರೆಕೊಟ್ಟರು.
ನಿವೃತ್ತ ಹವಾಲ್ದಾರ್ ಜನಾರ್ಧನ್ ಮಾತನಾಡಿ, ಸೇನೆಗೆ ಸೇರುವ ಮಕ್ಕಳಿಗೆ ನಾವು ಉಚಿತವಾದ ಸೇವೆ ಒದಗಿಸುತ್ತಿದ್ದೇವೆ. ನುರಿತ ಸಂಪನ್ಮೂಲ ಶಿಕ್ಷಕರಿಂದ ಜನವರಿ 16 ರ ವರೆಗೂ ಉಚಿತವಾಗಿ ಪ್ರತೀ ಶನಿವಾರ ಹಾಗೂ ಭಾನುವಾರಗಳಂದು ತರಗತಿ ಕೊಡಲಿದ್ದೇವೆ. ಅಭ್ಯರ್ಥಿಗಳು ಸಮಯ ಪಾಲನೆ ಮತ್ತು ಶಿಸ್ತಿನಿಂದ ಈ ಉಚಿತ ಶಿಬಿರದ ಸದುಪಯೋಗ ಪಡೆಯಲು ಕರೆಕೊಟ್ಟರು.
ಅನುಗ್ರಹ ಕಾಲೇಜಿನ ಪ್ರಾಂಶುಪಾಲ ಪಂಡರೀನಾಥ ನಾಯ್ಡು ಅವರು ಉಪಸ್ಥಿತರಿದ್ದರು.