ಸುಳ್ಯ: ಸುಳ್ಯದ 110 ಕೆ.ವಿ. ವಿದ್ಯುತ್ ವಿತರಣಾ ಕಾಮಗಾರಿಯ ವಿದ್ಯುತ್ ಲೈನ್ ಅರಣ್ಯ ಭೂಮಿ ಮಂಜೂರಾತಿಯ ವಿಚಾರ ಮುಖ್ಯಮಂತ್ರಿಗಳಲ್ಲಿ ಪೆಂಡಿಂಗ್ ಇದೆ. ಕೊರೊನಾ ಲಾಕ್ಡೌನ್ ಮುಗಿದ ಕೂಡಲೇ ಆ ಬಗ್ಗೆ ಮತ್ತೊಮ್ಮೆ ನೆನಪಿಸಿ ಅರಣ್ಯ ಭೂಮಿ ಮಂಜೂರಾಗುವಂತೆ ಮಾಡುತ್ತೇವೆ ಎಂದು ಶಾಸಕ ಅಂಗಾರ ಹೇಳಿದ್ದಾರೆ.
ಸುಳ್ಯ ನಿರೀಕ್ಷಣಾ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಸುಳ್ಯದ 110 ಕೆವಿ ವಿದ್ಯುತ್ ಸಬ್ ಸ್ಟೇಶನ್ ಬಗ್ಗೆ ಪತ್ರಕರ್ತರು ಗಮನ ಸೆಳೆದಾಗ ಕೊರೊನಾ ಲಾಕ್ಡೌನ್ ಮುಗಿದ ಬಳಿಕ ಈ ಬಗ್ಗೆ ಚರ್ಚೆ ನಡೆಸಲಿದ್ದೇವೆ ಎಂದರು. ತಾಲೂಕಿನಲ್ಲಿ ವಿದ್ಯುತ್ ಬಿಲ್ ಹೆಚ್ಚು ಬಂದಿರುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಇದೇ ವೇಳೆ ಹೇಳಿದರು.
ಕೊರೊನಾ ಲಾಕ್ಡೌನ್ ಸಂದರ್ಭದಲ್ಲಿ ಸಂಕಷ್ಟಕ್ಕೊಳಗಾಗದಂತೆ ಕ್ರಮ ಕೈಗೊಂಡ ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರಗಳಿಗೆ ಕೃತಜ್ಞತೆ ಸಲ್ಲಿಸಿದ ಅಂಗಾರ ಅವರು ಪ್ರಧಾನಿ ನರೇಂದ್ರ ಮೋದಿಯವರು ಕೇಂದ್ರ ಸರಕಾರದ ವತಿಯಿಂದ ಘೋಷಿಸಿರುವ 20 ಲಕ್ಷ ಕೋಟಿ ರೂ.ಗಳು ಜನರಿಗೆ ಯಾವ ರೀತಿ ಸಿಗಲಿದೆ ಎಂಬುದು ವಿತ್ತ ಸಚಿವರು ವಿವರಣೆ ನೀಡುವುದು ಪೂರ್ಣಗೊಂಡ ಕೂಡಲೇ ಗೊತ್ತಾಗಲಿದೆ ಎಂದು ತಿಳಿಸಿದರು.
ಕೇಂದ್ರದ 20 ಲಕ್ಷ ಕೋಟಿ ಸಣ್ಣ ಉದ್ದಿಮೆದಾರರಿಗೆ ಸಾಲ ಕೊಡಲು, ಆದ್ಯತಾ ವಲಯಗಳ ಚೇತರಿಕೆಗೆ ಸಹಾಯ ಮಾಡಲು ಕಾರ್ಯಕ್ರಮ ರೂಪಿಸಲಾಗಿದೆ. ಎಲ್ಲೂ ಜನರಿಗೆ ನೇರವಾಗಿ ಕೊಡುವುದಿಲ್ಲ. ಸಾಲ ಸಹಿತ ಅದನ್ನು ವಾಪಾಸ್ ಕೊಡಬೇಕಾಗುತ್ತದೆ. 20 ಲಕ್ಷ ಕೋಟಿಯಲ್ಲಿ ಪ್ರತೀ ವರ್ಗದವರಿಗೂ ನೆರವು ದೊರೆಯುತ್ತವೆ ವಿತ್ತ ಸಚಿವರು ಅದರ ಪೂರ್ಣ ವಿವರ ನೀಡಿದಾಗ ಜನರಿಗೆ ಗೊತ್ತಾಗುತ್ತದೆ ಎಂದು ಶಾಸಕರು ಹೇಳಿದರು.
ಈಗ ರಾಜ್ಯ ಸರಕಾರದ ವತಿಯಿಂದ ಮುಖ್ಯಮಂತ್ರಿ ಯಡಿಯೂರಪ್ಪನವರು ಕ್ಷೌರಿಕರಿಗೆ, ಅಗಸರಿಗೆ ಮತ್ತು ಚಮ್ಮಾರರಿಗೆ, ರಿಕ್ಷಾ-ಟ್ಯಾಕ್ಸಿ ಚಾಲಕರಿಗೆ, ಕಾರ್ಮಿಕರಿಗೆ ತಲಾ 5 ಸಾವಿರ ನೀಡುವುದಾಗಿ ಘೋಷಿಸಿದ್ದಾರೆ. ಆಶಾ ಕಾರ್ಯಕರ್ತೆಯರಿಗೆ ಮೂರು ಸಾವಿರ ರೂ. ಘೋಷಿಸಿದ್ದಾರೆ ಎಂದು ಶಾಸಕರು ವಿವರ ನೀಡಿದರು.
ಬ್ಯಾಡ್ಜ್ ಇಲ್ಲದ ರಿಕ್ಷಾ ಚಾಲಕರಿಗೆ ಸಹಾಯಧನ ಬಗ್ಗೆ ಮಾತನಾಡಿ, ರಿಕ್ಷಾದವರು ನನ್ನ ಗಮನಕ್ಕೆ ತಂದಿದ್ದಾರೆ. ನಿಬಂಧನೆಗಳಲ್ಲಿ ಕೆಲವು ಲೋಪದೋಷಗಳಾಗಿವೆ. ಆ ಬಗ್ಗೆ ಸಚಿವರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತಂದಿದ್ದೇನೆ. ಅದನ್ನು ಸರಕಾರ ಸರಿಪಡಿಸಲಾಗುತ್ತದೆ ಎಂದು ಶಾಸಕ ಅಂಗಾರ ತಿಳಿಸಿದರು.
34 ಸಾವಿರ ಕಿಟ್ ವಿತರಣೆ : ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರ ನೇತೃತ್ವದಲ್ಲಿ ಸೇವಾ ಭಾರತಿಯ ಮೂಲಕ 34 ಸಾವಿರ ಕಿಟ್ಟ್ ಗಳನ್ನು ವಿತರಿಸಲಾಗಿದೆ. ಈ ಕಾರ್ಯಕ್ಕೆ ಅನೇಕ ದಾನಿಗಳು ಸಹಕಾರ ನೀಡಿದ್ದಾರೆ. ಅವರಿಗೆಲ್ಲ ನಾವು ಕೃತಜ್ಞತೆ ಸಲ್ಲಿಸುತ್ತೇವೆ ಎಂದು ಜಿ.ಪಂ. ಸದಸ್ಯ ಹಾಗೂ ಬಿಜೆಪಿ ಮಂಡಲ ಅಧ್ಯಕ್ಷ ಹರೀಶ್ ಕಂಜಿಪಿಲಿ ಹೇಳಿದರು.
ಜಿಲ್ಲಾ ಜಿಜೆಪಿ ಉಪಾಧ್ಯಕ್ಷ ವೆಂಕಟ್ ವಳಲಂಬೆ, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಮುಳಿಯ ಕೇಶವ ಭಟ್, ಮುಖಂಡರಾದ ವೆಂಕಟ್ ದಂಬೆಕೋಡಿ, ವಿನಯ ಕಂದಡ್ಕ, ಸುಭೋದ್ ಶೆಟ್ಟಿ ಮೇನಾಲ, ರಾಕೇಶ್ ರೈ ಕೆಡೆಂಜಿ ಉಪಸ್ಥಿತರಿದ್ದರು.