ಬೆಳ್ಳಾರೆ: ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಇಂಟರ್ಯಾಕ್ಟ್ ದಾರಿದೀಪವಾಗಿದ್ದು, ವಿದ್ಯಾರ್ಥಿಗಳಲ್ಲಿ ಸಮಾಜಮುಖಿ ಚಿಂತನೆಗಳನ್ನು ಸೃಷ್ಠಿಸಿ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ವೇದಿಕೆಯಾಗಿದೆ ಎಂದು ಇಂಟರ್ಯಾಕ್ಟ್ ವಲಯ 15ರ ಝೋನಲ್ ಕೋಆರ್ಡಿನೇಟರ್ ಜಿತೇಂದ್ರ ಎನ್.ಎ ಹೇಳಿದರು.
ಬೆಳ್ಳಾರೆ ಟೌನ್ ರೋಟರಿ ಕ್ಲಬ್ ಪ್ರಾಯೋಜಿತ ಜ್ಞಾನದೀಪ ಶಿಕ್ಷಣ ತರಬೇತಿ ಮತ್ತು ಅಭಿವೃದ್ಧಿ ಸಂಸ್ಥೆಯ ಇಂಟರ್ಯಾಕ್ಟ್ ಕ್ಲಬ್‍ನ 2019-20ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ನೆರವೇರಿಸಿ ಮಾತನಾಡಿದ ಅವರು ರೋಟರಿ ಧ್ಯೇಯಗಳನ್ನು ವಿದ್ಯಾರ್ಥಿಗಳು ಎಳವೆಯಲ್ಲೇ ಅರ್ಥ ಮಾಡಿಕೊಂಡರೆ ಅವರಲ್ಲಿ ನಾಯಕತ್ವದ, ವ್ಯಕ್ತಿತ್ವ ವಿಕಸನದ ಸಂಯಮದಂತಹ ಗುಣಗಳು ಬೆಳೆಯಲು ಸಾಧ್ಯ ಎಂದರು.
ಜ್ಞಾನದೀಪ ಇಂಟರ್ಯಾಕ್ಟ್ ಕ್ಲಬ್‍ನ ನಿರ್ಗಮಿತ ಅಧ್ಯಕ್ಷೆ ಶ್ರೀನಿಧಿ ನೂತನ ಅಧ್ಯಕ್ಷೆ ಯಶ್ಮಿತಾ ಅವರಿಗೆ ಮತ್ತು ನಿರ್ಗಮಿತ ಕಾರ್ಯದರ್ಶಿ ಸಾಯಿಶ್ವೇತ ನೂತನ ಕಾರ್ಯದರ್ಶಿ ಮೇಘಶ್ರೀ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ನೂತನ ಸದಸ್ಯರಾಗಿ ಸೇರ್ಪಡೆಯಾದ 30 ಮಂದಿ ವಿದ್ಯಾರ್ಥಿಗಳನ್ನು ಪದಗ್ರಹಣ ಅಧಿಕಾರಿ ಹೂ ನೀಡಿ ಸ್ವಾಗತಿಸಿದರು.
ವಿದ್ಯಾಥಿಗಳಿಗೆ ಪ್ರಥಮ ಚಿಕಿತ್ಸೆಯ ಬಗ್ಗೆ ಹಿತಾಯು ಕ್ಲಿನಿಕ್‍ನ ವೈದ್ಯ ಡಾ.ಯಸ್ ಭಾರದ್ವಾಜ್ ಮಾಹಿತಿ ನೀಡಿದರು. ಬೆಳ್ಳಾರೆ ಟೌನ್ ರೋಟರಿ ಕ್ಲಬ್ ಅಧ್ಯಕ್ಷ ಬಿ ನರಸಿಂಹ ಜೋಶಿ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಇಂಟರ್ಯಾಕ್ಟ್ ಚೆಯರ್ಮೆನ್ ಶಶಿಧರ್, ಇಂಟರ್ಯಾಕ್ಟ್ ಶಿಕ್ಷಕ ಸಂಯೋಜಕ ಗಣೇಶ್ ನಾಯಕ್, ಕಾರ್ಯದರ್ಶಿ ಗೋಪಾಲಕೃಷ್ಣ ಪಿ.ಎಸ್ ಉಪಸ್ಥಿತರಿದ್ದರು.
ಪೂರ್ವಾಧ್ಯಕ್ಷ ಸುಬ್ರಹ್ಮಣ್ಯ ಜೋಶಿ ಪ್ರಸ್ತಾವಿಸಿ ಸ್ವಾಗತಿಸಿದರು. ಮೇಘಶ್ರೀ ವಂದಿಸಿದರು.ವಿದ್ಯಾರ್ಥಿ ಶಿಕ್ಷಕಿ ಆಶಾ ಕಾರ್ಯಕ್ರಮ ನಿರೂಪಿಸಿದರು