ಪುತ್ತೂರು : ಅ.13ರಂದು ದರ್ಬೆ ಸಚ್ಚಿದಾನಂದ ಸೇವಾ ಸದನದಲ್ಲಿ ನಡೆದ “ಪುತ್ತೂರು ಸಂಘ”ದ 96ನೇ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷರಾದ ಶ್ರೀ ಸುನಿಲ್ ಬೋರ್ಕರ್ ಮುಂಡಕೊಚ್ಚಿ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
2022-23ನೇ ಸಾಲಿನಲ್ಲಿ ಸಂಘದ ಶತಮಾನೋತ್ಸವ ನಡೆಯಲಿರುವ ಹಿನ್ನೆಲೆಯಲ್ಲಿ ಪೂರ್ವ ತಯಾರಿ ದೃಷ್ಟಿಯಲ್ಲಿ ಸಂಘದ ಆಡಳಿತ ಮಂಡಲಿಯ ನಿರ್ದೇಶಕರ ಸ್ಥಾನವನ್ನು 15ರಿಂದ 30ಕ್ಕೆ ಏರಿಸುವ ನಿರ್ಣಯವನ್ನು ಕೈಗೊಳ್ಳಲಾಯಿತು.
ವಾರ್ಷಿಕ ಮಹಾಸಭೆಯಲ್ಲಿ ಸಂಘದಿಂದ ಪ್ರಾರಂಭಿಸಿದ ಶ್ರೀ ಸರಸ್ವತಿ ಎಜುಕೇಶನ್ ಸೊಸೈಟಿಯು ಪ್ರಾರಂಭಿಸಿದ ಶ್ರೀ ಸರಸ್ವತಿ ಐ ಟಿ ಐಯು ಪ್ರಾರಂಭದಲ್ಲಿ ಸಂಘದಿಂದ ನೀಡಿದ ಪ್ರಾರಂಭಿಕ ಸಹಾಯಕ್ಕೆ ಪ್ರತಿಫಲವಾಗಿ ಎಜುಕೇಶನ್ ಸೊಸೈಟಿಯು ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ ಸಂಟ್ಯಾರಿನಲ್ಲಿ ನಿರ್ಮಿಸುತ್ತಿರುವ ನೂತನ ಕಟ್ಟಡ ಮಳಿಗೆಯಲ್ಲಿ ಅಂದಾಜು 8000 ಚದರ ಅಡಿ ವಿಸ್ತೀರ್ಣದ ಕಟ್ಟಡವನ್ನು ಕಟ್ಟಿಕೊಳ್ಳುವರೇ ಸಂಘಕ್ಕೆ ಹಕ್ಕು ನೀಡುವ ಕುರಿತು ಎಜುಕೇಶನ್ ಸೊಸೈಟಿಯ ಆಡಳಿತ ಮಂಡಲಿ ನೀಡಿದ ಅವಕಾಶವನ್ನು ತುಂಬು ಮನಸ್ಸಿನಿಂದ ಸ್ವಾಗತಿಸಿ ಒಪ್ಪಿಕೊಳ್ಳಲಾಯಿತು.
ಸನ್ಮಾನ : ಮಹಾಸಭೆಯು – ಪುತ್ತೂರು ತಾಲೂಕು ಪಂಚಾಯತ್ ಅಧ್ಯಕ್ಷರಾದ ರಾಧಾಕೃಷ್ಣ ಬೋರ್ಕರ್ ಕತ್ತಲಕಾನ , ತೆಂಕುತಿಟ್ಟು ಯಕ್ಷಗಾನದ ಪ್ರಸಿದ್ಧ ಮದ್ದಳೆವಾದಕರಾದ ನೇರೋಳು ಗಣಪತಿ ನಾಯಕ್, ಗೀತ ಸಾಹಿತ್ಯ ಸಂಭ್ರಮ ಕಾರ್ಯಕ್ರಮದ ಮುಖಾಂತರ ಸಮಾಜದ ಅಂಕು ಡೊಂಕು ತಿದ್ದುವ ಕಲಾವಿದರಾದ ವಿಠಲ ನಾಯಕ್ ವಿಟ್ಲ , ಉದ್ಯಮಿ , ಸಮಾಜ ಸೇವಕ, ಧಾರ್ಮಿಕ ಕಾರ್ಯಕರ್ತ, ಪ್ರಸ್ತುತ ಸುಳ್ಯ ಭಾಲಾವಲೀಕಾರ್ ರಾಜಾಪುರ ಸಾರಸ್ವತ ಸಂಘದ ನೂತನ ಅಧ್ಯಕ್ಷರಾದ ಕರೋಡಿ ಗೋಪಾಲಕೃಷ್ಣ ಬೋರ್ಕರ್ ಇವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಮಹಾಸಭೆಯು ಪ್ರಸ್ತುತವಿರುವ ಆಡಳಿತ ಮಂಡಲಿಯನ್ನೇ ಮುಂದುವರಿಯಬೇಕೆನ್ನುವ ಒತ್ತಾಯದ ಹಿನ್ನಲೆಯಲ್ಲಿ ಅವಶ್ಯವಿರುವ ಬದಲಾವಣೆಯನ್ನು ಮಾಡಿಕೊಂಡು, ಆಡಳಿತ ಮಂಡಲಿಯಲ್ಲಿನ ಹೆಚ್ಚುವರಿ 15 ಸ್ಥಾನಗಳನ್ನು ಕೋ-ಆಪ್ಟ್ ಮಾಡಿ ತುಂಬಲು ನೂತನ ಆಡಳಿತ ಮಂಡಳಿಗೆ ಅಧಿಕಾರ ನೀಡಲಾಯಿತು.
ಸಭೆಯಲ್ಲಿ ಮಹಿಳಾ ಮಂಡಲಿ, ಯುವ ವೇದಿಕೆ, ವಿದ್ಯಾರ್ಥಿ ಸಂಘದ ಸದಸ್ಯರು, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು, ದೇವಸ್ಥಾನಗಳ ಆಡಳಿತ ಮಂಡಲಿಯ ಪ್ರಮುಖರು ಉಪಸ್ಥಿತರಿದ್ದರು.