ಮನೆ ಮನೆಗಳಲ್ಲಿ ಯಕ್ಷ ಕಲೆಯ ಧೀಂ ತರಿಕಿಟ ತೋಂ…..

July 20, 2019
8:00 AM

ಸುಳ್ಯ: ಸುಳ್ಯದಲ್ಲಿ ಕಳೆದ ಒಂದೂವರೆ ತಿಂಗಳಿನಿಂದ ಮನೆ ಮನೆಗಳಲ್ಲಿ ಸಂಜೆಯಾಗುತ್ತಿದ್ದಂತೆ ಯಕ್ಷಗಾನದ ಗೆಜ್ಜೆ ನಾದ, ಮದ್ದಳೆ, ತಾಳದ ಅಬ್ಬರ ಅನುರಣಿಸುತ್ತದೆ, ಭಾಗವತಿಕೆಯ ಭಾವಗಾಯನ ಮೊಳಗುತ್ತದೆ.ಯಕ್ಷಗಾನ ವೇಷಧಾರಿಗಳು, ಭಾಗವತರು, ಹಿಮ್ಮೇಳ ಕಲಾವಿದರು ಮನೆಗೆ ಬಂದು ಮನೆ ಮಂದಿಗೆ ಯಕ್ಷ ಕಲೆಯ ರಸದೌತಣವನ್ನು ಉಣಬಡಿಸುತ್ತಾರೆ.

Advertisement
Advertisement
Advertisement

ಸುಳ್ಯದ ಯುವಕ ಯಕ್ಷಗಾನ ಕಲಾರಂಗದ ಮಹಾವಿಷ್ಣು ಚಿಕ್ಕಮೇಳದ ವತಿಯಿಂದ ನಡೆಯುತ್ತಿರುವ ಮನೆ ಮನೆ ಯಕ್ಷಗಾನ ಪ್ರದರ್ಶನ ಈ ವರ್ಷ 250 ಮನೆಗಳಲ್ಲಿ ಯಕ್ಷಗಾನದ ರಾಗ ತಾಳ ಹರಿಸಿದ್ದು ಸುಳ್ಯದ ಜನತೆಗೆ ಯಕ್ಷ ಕಲೆಯ ನವ್ಯಾನುಭವವನ್ನು ನೀಡುತ್ತಿದೆ. ಕರಾವಳಿಯ ಇತರ ಭಾಗಗಳಲ್ಲಿ ಚಿಕ್ಕ ಮೇಳಗಳು ಮನೆ ಮನೆ ಭೇಟಿ ನೀಡಿ ಯಕ್ಷಗಾನದ ಕಿರು ಪ್ರಸಂಗವನ್ನು ಆಡಿ ತೋರಿಸುವುದು ಸಾಮಾನ್ಯವಾಗಿ ಇದ್ದರೂ ಸುಳ್ಯ ಭಾಗದಲ್ಲಿ ಅಪರೂಪವಾಗಿತ್ತು. ಕಳೆದ ಮೂರು ವರುಷಗಳೀಂದ ಯಕ್ಷಗಾನ ಕಲಾವಿದ ಶೇಖರ ಮಣಿಯಾಣಿ ನೇತೃತ್ವದಲ್ಲಿ ಚಿಕ್ಕಮೇಳವು ಸುಳ್ಯದಲ್ಲಿ ತನ್ನ ತಿರುಗಾಟವನ್ನು ನಡೆಸುತಿದೆ. ಕಳೆದ ವರ್ಷ 1371 ಮನೆಗಳಲ್ಲಿ ಪ್ರದರ್ಶನ ನೀಡಿದ್ದಾರೆ. ಈ ವರ್ಷ ಈಗಾಗಲೇ 250 ಮನೆಗಳಲ್ಲಿ ಯಕ್ಷಗಾನ ಪ್ರದರ್ಶನ ನೀಡಿದ್ದು ಮುಂದಿನ ಮೂರು ತಿಂಗಳಲ್ಲಿ ಸೇರಿ ಒಟ್ಟು ಎರಡು ಸಾವಿರ ಮನೆಗಳನ್ನು ಮುಟ್ಟುವುದು ತಂಡದ ಗುರಿ.

Advertisement

ರಾಧಾ – ಕೃಷ್ಣ  ವೇಷಧಾರಿಗಳು, ಭಾಗವತರು ಮತ್ತು ಮದ್ದಳೆವಾದಕರು. ಯಕ್ಷಗಾನ ತಂಡದಲ್ಲಿರುವವರು ಇಷ್ಟು ಮಂದಿ ಮಾತ್ರ. ಮನೆಗೆ ಬರುವ ಮೇಳಗಳು ಅರ್ಧಗಂಟೆಗಳ ಕಾಲ ಪೌರಾಣಿಕ ಕಥೆಗಳ ಪ್ರಸಂಗದ ಒಂದು ತುಣುಕನ್ನು ಪ್ರಸ್ತುತಪಡಿಸುತ್ತಾರೆ. ಶ್ರೀನಿವಾಸ ಕಲ್ಯಾಣ, ರತಿಕಲ್ಯಾಣ, ಶ್ರೀದೇವಿ ಚರಿತೆ, ನರಕಾಸುರ ವಧೆ, ರಾಜಾ ಯಾಯಾತಿ, ಬಪ್ಪನಾಡು ಕ್ಷೇತ್ರ ಮಹಾತ್ಮೆ ಹೀಗೆ ಪ್ರಸಂಗಗಳ ಚಿಕ್ಕ ತುಣುಕುಗಳನ್ನು ಆಡಿ ತೋರಿಸುತ್ತಾರೆ. ಮನೆಯಲ್ಲಿರುವವರು ಮತ್ತು ಸಮೀಪದ ಮನೆಗಳ ಒಂದಷ್ಟು ಮಂದಿ ಕಿರು ಯಕ್ಷಗಾನ ಪ್ರಸಂಗವನ್ನು ನೋಡಿ ಆಸ್ವಾದಿಸುತ್ತಾರೆ. ಆಟದ ರಸದೌತಣ ಆಸಕ್ತಿ ಹುಟ್ಟಿಸುವ ವೇಳೆಗೆ ಆಟ ಮುಗಿದು ಹೋಗುತ್ತದೆ. ಇನ್ನೊಂದು ಪ್ರಸಂಗವನ್ನು ಪ್ರಸ್ತುತಪಡಿಸಿ ಎಂದು ಹಲವು ಮನೆಗಳಲ್ಲಿ ಬೇಡಿಕೆಯಿಡುತ್ತಾರೆ. ಅದರಂತೆ ಕೆಲವು ಕಡೆ ಎರಡು, ಮೂರು ಪ್ರಸಂಗಗಳ ತುಣುಕುಗಳನ್ನು ಆಡಿ ತೋರಿಸುವುದೂ ಇದೆ.

Advertisement

ಕಳೆದ ಒಂದೂವರೆ ತಿಂಗಳಿನಿಂದ ಈ ಚಿಕ್ಕಮೇಳ ತಿರುಗಾಟದಲ್ಲಿ ತೊಡಗಿದ್ದು ಈಗಾಗಲೇ250 ಮನೆಗಳಲ್ಲಿ ಯಕ್ಷಗಾನ ಪ್ರದರ್ಶನ ನೀಡಿದ್ದಾರೆ. ಮನೆಗೆ ಆಗಮಿಸುವ ಯಕ್ಷಗಾನ ತಂಡವನ್ನು ಜನರು ಸಂತೋಷದಿಂದ ಬರಮಾಡಿಕೊಂಡು ಅವರಿಗೆ ಆದರದ ಆತಿಥ್ಯ ನೀಡಿ ಯಕ್ಷಗಾನವನ್ನು ನೋಡಿ ತನು-ಮನ-ಧನಗಳನ್ನಿತ್ತು ಕಳುಹಿಸಿ ಕೊಡುತ್ತಾರೆ. ಪ್ರತಿ ದಿನ ಸಂಜೆ ಆರರಿಂದ ರಾತ್ರಿ 11ರವರೆಗೆ ಮೇಳದ ತಿರುಗಾಟದ ಅವಧಿ. ಪ್ರತಿ ದಿನ ಎಂಟುನೆಗಳಲ್ಲಿ ಯಕ್ಷಗಾನ ಪ್ರದರ್ಶನ ನೀಡುತ್ತಾರೆ.

ಸುಳ್ಯದ ಯುವ ಯಕ್ಷಗಾನ ಕಲಾರಂಗದ ಸಂಚಾಲಕ ಶೇಖರ ಮಣಿಯಾಣಿಯವರ ನೇತೃತ್ವದಲ್ಲಿ ಸುಳ್ಯ ತಾಲೂಕಿನಲ್ಲಿ ಚಿಕ್ಕಮೇಳ ತಿರುಗಾಟ ನಡೆಸುತ್ತಿದೆ . ಭಾಗವತರಾಗಿ ರಾಧಾಕೃಷ್ಣ ಕಲ್ಲುಗುಂಡಿ, ಮದ್ದಳೆಯಲ್ಲಿ ಮೋನಪ್ಪ ಕೊಲಮೊಗ್ರ ಸಹಕರಿಸುತ್ತಾರೆ. ಯಕ್ಷಗಾನ ಕಲಾವಿದರಾದ ರವಿಶ್ಚಂದ್ರ ಚೆಂಬು ಮತ್ತು ದಿವಾಕರ ಕಾಣಿಯೂರು ರಾಧಾ-ಕೃಷ್ಣ ವೇಷಧಾರಿಗಳಾಗಿ ರಂಗ ಪ್ರವೇಶಿಸುತ್ತಾರೆ.

Advertisement

ಭಕ್ತಿ ಭಾವದ ಸಮರ್ಪಣೆ:
ಚಿಕ್ಕಮೇಳಕ್ಕೆ ಹಲವು ವರ್ಷದ ಪರಂಪರೆ ಇದೆ. ತೆಂಕು, ಬಡಗುತಿಟ್ಟುಗಳಲ್ಲಿ ಹತ್ತನಾವದಿಗೆ ಮೇಳಗಳ ತಿರುಗಾಟ ಮುಗಿಸಿ ಗೆಜ್ಜೆ ಬಿಚ್ಚಿದ ನಂತರ ಪಾರಂಪರಿಕವಾಗಿ ನಡೆದು ಬಂದ ಚಿಕ್ಕಮೇಳ ಜೂನ್ ತಿಂಗಳಿನಿಂದ ಪ್ರಾರಂಭವಾಗಿ ಅಕ್ಟೋಬರ್ ತಿಂಗಳಲ್ಲಿ ತಿರುಗಾಟವನ್ನು ಮುಗಿಸಿ ಮತ್ತೆ ಮೇಳದ ತಿರುಗಾಟಕ್ಕೆ ಅಣಿಯಾಗುತ್ತಾರೆ. ಕರಾವಳಿ ಜಿಲ್ಲೆಗಳಲ್ಲಿ ಹಲವೆಡೆ ಚಿಕ್ಕಮೇಳಗಳು ತಿರುಗಾಟ ನಡೆಸುತ್ತವೆ. ಮನೆಯ ಒಳಗೆ ಯಕ್ಷಗಾನ ಪ್ರದರ್ಶನ ನಡೆಸಲಾಗುತ್ತಿದ್ದು ಗೆಜ್ಜೆಯ ಶಬ್ದ, ವಾದ್ಯಗಳ ನಾದವು ಮನೆಯೊಳಗೆ ಮೊಳಗಿದರೆ ಅಂತಹಾ ಮನೆಗಳಲ್ಲಿ ಕ್ಷುದ್ರಶಕ್ತಿಗಳು ಹಾಗು ದೋಷಗಳು ದೂರವಾಗಿ ದೈವಸಾನ್ನಿಧ್ಯವಾಗುತ್ತದೆ ಎಂಬ ಪ್ರತೀತಿ ಇದೆ. ಆದುದರಿಂದ ಮನೆಯಲ್ಲಿ ಯಕ್ಷಗಾನ ಪ್ರದರ್ಶನ ಆಗುವುದರಿಂದ ಕಲೆಯ ಆರಾಧನೆಯ ಜೊತೆಗೆ ದೇವರು ಸಂಪ್ರೀತನಾಗಿ ಸಕಲ ಸೌಭಾಗ್ಯವನ್ನಿತ್ತು ಸನ್ಮಂಗಲವನ್ನು ಕರುಣಿಸುತ್ತಾನೆ ಎನ್ನುತ್ತಾರೆ ಚಿಕ್ಕಮೇಳದ ಸಂಯೋಜಕ ಶೇಖರ ಮಣಿಯಾಣಿ. ಮನೆ ಮಂದಿಯೆಲ್ಲ ಸಂತೋಷದಿಂದ ಆಸ್ವಾದಿಸುವುದರ ಜೊತೆಗೆ ಯಕ್ಷಗಾನ ಕಲೆಯೇ ಮನೆ ಮನೆ ತೆರಳುವುದರಿಂದ ಕಲೆಯ ಬಗ್ಗೆ ಜನರಲ್ಲಿ ಆಸಕ್ತಿ ಬೆಳೆಯಲು ಮತ್ತು ಕಲೆ ಇನ್ನಷ್ಟು ಪ್ರಚಾರ ಪಡೆಯಲು ಸಹಾಯಕ ಎಂಬುದು ಯಕ್ಷಗಾನ ವೀಕ್ಷಿಸುವ ಮನೆ ಮಂದಿಯ ಅಭಿಪ್ರಾಯ.

ಸುಳ್ಯ ತಾಲೂಕಿನಲ್ಲಿ ಮೂರನೇ ವರ್ಷ ಯಕ್ಷಗಾನದ ಚಿಕ್ಕಮೇಳ ತಿರುಗಾಟ ನಡೆಸುತಿದೆ. ಜನರಿಂದ ಉತ್ತಮ ಬೆಂಬಲ ಮತ್ತು ಸಹಕಾರ ವ್ಯಕ್ತವಾಗಿದೆ. ಯಕ್ಷ ತಂಡವನ್ನು ಬರಮಾಡಿಕೊಂಡು ಉತ್ತಮ ಆತಿಥ್ಯ ನೀಡಿ ಯಕ್ಷಗಾನವನ್ನು ಆಸ್ವಾದಿಸುತ್ತಾರೆ. – ಶೇಖರ ಮಣಿಯಾಣಿ.

Advertisement

 

ಕಲಾ ಸೇವೆಯಲ್ಲಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಚಿಕ್ಕಮೇಳ

Advertisement

ಬಿಳಿನೆಲೆ ಶ್ರೀ ಗೋಪಾಲಕೃಷ್ಣ ಕೃಪಾಪೋಷಿತ ಯಕ್ಷಗಾನ ಚಿಕ್ಕಮೇಳದಮ ಮೂಲಕ  ಯಕ್ಷಗಾನವನ್ನು ಉಳಿಸಿ ಬೆಳೆಸಿ ಯಕ್ಷಗಾನವನ್ನು ಪ್ರತಿಮನೆಗೆ ತಲುಪಿಸುವ ದಿಸೆಯಲ್ಲಿ ಮನೆಬಾಗಿಲಿಗೆ ತನ್ನ ತಿರುಗಾಟವನ್ನು ಜೂ.24ರಿಂದ ಆರಂಭಿಸಿದೆ. ಬಿಳಿನೆಲೆ, ಸುಬ್ರಹ್ಮಣ್ಯ ಪರಿಸರದಲ್ಲಿ ಮನೆಮನೆಗಳಿಗೆ ತೆರಳಿ  ಯಕ್ಷಗಾನ ಪ್ರದರ್ಶನ ನೀಡುತ್ತಿದೆ.

ಜು.17ರಂದು ಸುಬ್ರಹ್ಮಣ್ಯ ಪರಿಸರದ ಕುಲ್ಕುಂದ ಭಾಗದಲ್ಲಿ ಮನೆಮನೆ ತೆರಳಿ ಯಕ್ಷಗಾನ ಪ್ರದರ್ಶಿಸಿದರು.  ಹಿಮ್ಮೇಳದಲ್ಲಿ ಭಾಗವತರಾಗಿ ಧನಂಜಯ ಸುಬ್ರಹ್ಮಣ್ಯ, ಮದ್ದಳೆ ವಾದಕರಾಗಿ ಮೋಹನ್, ಈಶ್ವರ ಪಾತ್ರಧಾರಿಯಾಗಿ ಧನುಷ್ ಸವಣೂರು, ಪಾರ್ವತಿ ದೇವಿ ಪಾತ್ರದಲ್ಲಿ ಮುರಳೀಧರ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಇವರ ಜತೆ ಸಂಚಾಲಕ ಬಾಲಕೃಷ್ಣ ಕಲ್ಲಾಜೆ, ಸುಜಿತ್, ರಾಜೇಶ್ ಸುಬ್ರಹ್ಮಣ್ಯ ಸಹಕರಿಸುತ್ತಿದ್ದಾರೆ.

Advertisement

ಅವಿಭಜಿತ ದ. ಕ ಮತ್ತು ಉಡುಪಿ ಜಿಲ್ಲೆಯಲ್ಲಿ ಸುಮಾರು 40 ಕ್ಕೂ ಅಧಿಕ ಮೇಳಗಳು ತಿರುಗಾಟ ನಡೆಸುತ್ತವೆ.  ಯಕ್ಷಗಾನ ಮೇಳದ ಕಿರು ರೂಪವೇ ಚಿಕ್ಕ ಮೇಳ. ಅನೇಕ ಚಿಕ್ಕ ಮೇಳಗಳು ಇಂತಹ ತಿರುಗಾಟವನ್ನು ಮಳೆಗಾಲದ ಈ ಅವಧಿ ನಡೆಸುತ್ತಿರುತ್ತವೆ.ಯಕ್ಷಮಾತೆಯ ಗೆಜ್ಜೆಯ ನಿನಾದ ಮನೆಯೊಳಗೆ ಝೇಂಕಾರಗೊಂಡರೆ ಮನೆಗೆ ಶುಭಪ್ರದ ಎನ್ನುವ ನಂಬಿಕೆಯೂ ಕರಾವಳಿಯಲ್ಲಿ ಇರುವುದರಿಂದ ಚಿಕ್ಕ ಮೇಳ ಮನೆಗೆ ಆಗಮಿಸಿದಾಗ ಹಿರಿಕಿರಿಯರು ಮನೆ ಸದಸ್ಯರು ಬಹಳ ಸಂಭ್ರಮ ಪಡುತ್ತಾರೆ.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಅಡಿಕೆಯ ಔಷಧೀಯ ಗುಣ | “we made” ಅಡಿಕೆಯ ಲಿಕ್ವಿಡ್‌ ಸೋಪು | ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ |
November 26, 2024
7:11 AM
by: ಮಹೇಶ್ ಪುಚ್ಚಪ್ಪಾಡಿ
ನೀರಿಗಾಗಿ ಏಕಾಂಗಿಯಾಗಿ ಸುರಂಗ ತೋಡಿದ ಕೃಷಿಕ | ಹಸಿರಾದ ಕೃಷಿ |
November 25, 2024
8:44 PM
by: The Rural Mirror ಸುದ್ದಿಜಾಲ
ಮಲೆನಾಡಿನಲ್ಲಿ ಕಾಡಾನೆ ಹಾವಳಿ ತಡೆಗೆ ಅಧಿವೇಶನದಲ್ಲಿ ಚರ್ಚಿಸಿ ಶಾಶ್ವತ ಪರಿಹಾರ
November 25, 2024
7:15 AM
by: The Rural Mirror ಸುದ್ದಿಜಾಲ
ಅಡಿಕೆಯ ಬೆಳೆಯಲ್ಲಿ ಪೋಷಕಾಂಶಗಳ ನಿರ್ವಹಣೆ ಹೇಗೆ ? | ವಿಜ್ಞಾನಿ ಡಾ.ಭವಿಷ್ಯ ಅವರಿಂದ ಮಾಹಿತಿ |
November 24, 2024
7:50 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror