‘ರವಿ’ಯಿತ್ತ ಮೊಗ ಹೊತ್ತ ‘ಸೂರ್ಯಕಾಂತಿ’

July 12, 2019
2:00 PM

“ಮೌನ ಸಾಧನೆಯಿಂದ ಕೆಲವರು ಕೆಲವೊಂದು ವಿಚಾರಗಳನ್ನು ಸಾಧಿಸಿದ್ದು ನಿಜ. ಆದರೆ ಎಲ್ಲರೂ ಮೌನಿಗಳಾಗುವುದು ಸಾಧ್ಯವಲ್ಲ; ಸಾಧುವೂ ಅಲ್ಲ. ಕೆಲವೊಂದು ವಿಷಯಗಳ ಕುರಿತು ಮೌನವಹಿಸುವುದು ವಿಹಿತವಾದರೂ, ಮೌನಧಾರಣೆಯೂ ಕೆಲವೊಮ್ಮೆ ಅಪಾಯಕಾರಿ ಆಗಬಹುದು. ಆಗ ಮೌನವನ್ನು ಮುರಿಯಲೇಬೇಕು. ಆದರೆ, ಮೌನ ಮುರಿಯುವ ಉದ್ದೇಶ ಉದಾತ್ತವಾಗಿದ್ದರೆ ಮಾತ್ರ ಪರಿಣಾಮ ರಮಣೀಯತೆ ಉಂಟಾದೀತು. ಇಲ್ಲವಾದರೆ ಕಟ್ಟಿದುದೆಲ್ಲ ಮುರಿದು ಬೀಳಲೂಬಹುದು. ಉತ್ತಮ ಕವಿ ಮೌನ ಮುರಿದಾಗ ಸತ್ಯ ಶಿವ ಸೌಂದರ್ಯಗಳ ದರ್ಶನವಾಗಬಹುದು. “ ಹಿರಿಯ ಸಾಹಿತಿ ಅಮೃತ ಸೋಮೇಶ್ವರರು ರವಿಶಂಕರ ಒಡ್ಡಂಬೆಟ್ಟು ಅವರ ‘ಮೌನ ಮುರಿಯುವ ಸಮಯ’ಕ್ಕೆ ಬರೆದ ಮುನ್ನುಡಿಯ ಸಾಲುಗಳಿವು. ಅಕ್ಷರಗಳ ಮೂಲಕವೇ ಭಾವಗಳ ಹರಿಯ ಬಿಟ್ಟ ಕವಿ ಈಗ ಚಿರ ಮೌನಕ್ಕೆ ಶರಣಾಗಿದ್ದರೂ ಅವರ ಕೃತಿಗಳು ಮಾತನಾಡುತ್ತವೆ; ಸಾವಿರ ಭಾವಗಳ ಹೊಮ್ಮಿಸುತ್ತವೆ.

Advertisement
Advertisement
Advertisement

ರವಿಶಂಕರ ಒಡ್ಡಂಬೆಟ್ಟು ಅವರ ಪ್ರಕಟಿತ ನಾಲ್ಕು ಹನಿಗವನ ಸಂಕಲನ, ಎರಡು ಕವನ ಸಂಕಲನಗಳು, ಜೇನುಹನಿ ಅಂಕಣ ಬರಹಗಳು, ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾದ ಇತರ ಬರಹಗಳು, ನಾಲ್ಕೈದು ಕಥೆಗಳು, ವಿಡಂಬನೆ-ಚಿಂತನೆಗಳು, ರವಿಶಂಕರ್ ಬಗ್ಗೆ, ಅವರ ಸಾಹಿತ್ಯ ಕೃತಿಗಳ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟವಾದ ಲೇಖನಗಳು- ಹೀಗೆ ಒಡ್ಡಂಬೆಟ್ಟು ಅವರ ಸಾಹಿತ್ಯ ಹೆಜ್ಜೆಗಳೆಲ್ಲವನ್ನೂ ದಾಖಲಿಸುವ ಯತ್ನದ ಫಲವಾಗಿಯೇ ‘ಸೂರ್ಯಕಾಂತಿ’ ಎಂಬ ಸಮಗ್ರ ಸಾಹಿತ್ಯ ಕೃತಿಯೊಂದು ಅರಳಿದೆ, ಲೋಕಾರ್ಪಣೆಯಾಗುತ್ತಿದೆ.

Advertisement

ಸರಕ್ಕನೆ ಜಾರಿ
ಉರಿದು ಶೂನ್ಯವಾಗುವ
ಹೂವಿನುಲ್ಕೆಯಾಗಲಿ ಕವಿತೆ
ಫಳಕ್ಕನೆ ಹೊಳೆದು
ಸಾವು ತಪ್ಪಿಸುವ
ಭರವಸೆಯಾಗಲಿ ಕವಿತೆ

ಎನ್ನುವ ಕವಿಯು ತಮ್ಮ ಪ್ರತಿ ರಚನೆಯಲ್ಲಿ ಸ್ವಂತಿಕೆಯನ್ನು ಮೆರೆದಿದ್ದಾರೆ. ಅಪರೂಪವಾದ ಪ್ರಾಸ, ಸಾಮಾನ್ಯ ವಿಷಯವೂ ತಾತ್ವಿಕ ಹಿನ್ನಲೆಯೊಂದಿಗೆ ಹೆಣೆಯುವ ರೀತಿ, ಲೀಲಾಜಾಲವಾಗಿ ಮೂಡಿದ ಲಯ, ಪದಗಳಾಟ ಜೊತೆಗೆ ವಸ್ತು ಸ್ಥಿತಿಗೆ ಕನ್ನಡಿ ಹಿಡಿಯುವ ರೀತಿ ಅನನ್ಯವಾದುದು.
ಪರಿಣಾಮ ಎನ್ನುವ ಹನಿಗವನವೊಂದು ಹೀಗೆನ್ನುತ್ತದೆ:

Advertisement

ಸೆಟೆದು ನಿಂತ
ದೊಡ್ಡ ಮರ
ಪ್ರಬಲ ಬಿರುಗಾಳಿಗೆ
ಲಟಕ್ಕನೆ ಮುರಿಯಿತು
ಬುಡದಲ್ಲಿದ್ದ
ಸಣ್ಣ ಸಸಿ ಬಾಗಿ
ಮತ್ತೆ ನೇರವಾಯಿತು

ಇನ್ನೊಂದು ಹನಿಗವಿತೆ ‘ವಿನಂತಿ’ ಹೀಗಿದೆ:

Advertisement

ಓ ಕತ್ತರಿಗಳೇ
ನೀವು ಕುಣಿದಾಡುವುದ ನಿಲ್ಲಿಸಿ
ದಯಮಾಡಿ
ಸೂಜಿಗಳಿಗೆ ದಾರಿಬಿಡಿ

ಹೀಗೆ ಸೂಚ್ಯವಾದ ಅರ್ಥವನ್ನು ಬೈತಿರಿಸಿಕೊಂಡು ಮನದೊಳಗೆ ರಿಂಗಣವೆಬ್ಬಿಸುವ ಸಶಕ್ತ ಕವಿತೆಗಳನ್ನು, ಹನಿಗವಿತೆಗಳನ್ನು ಈ ಪುಸ್ತಕದಲ್ಲಿ ಕಾಣಬಹುದಾಗಿದೆ.
ಇವರ ಮೃತ್ಯುಚಿಂತನೆಯ ಹನಿಗವನಗಳಂತು ಮನಸ್ಸನ್ನು ಆರ್ದ್ರವಾಗಿಸುತ್ತವೆ.

Advertisement

ಕವಿತೆ ಬರೆಯುವುದು
ದೊಡ್ಡ ಸಂಗತಿಯಲ್ಲ
ಆಗುವುದು ಮಾತ್ರ
ದೊಡ್ಡ ಸಂಗತಿಯೇ!
***

ಇದ್ದರೇನು
ಆಯುಸ್ಸು ಕಡಿಮೆ ಚಿಟ್ಟೆಗೆ
ಕಟ್ಟಲಾದೀತೆ ಬೆಲೆ
ಬಣ್ಣದ ರೆಕ್ಕೆಗೆ!

Advertisement

ಜೇನಹನಿ ಎಂಬ ಅಂಕಣ ಬರಹಗಳಲ್ಲಿ ಒಂದಾದ ‘ದೇಹವೆಂಬ ದೇಗುಲ’ ಶೀರ್ಷಿಕೆಯ ಲೇಖನದಲ್ಲಿ ಕವಿಯು ಜೀವನದ ಸಾರ್ಥಕ್ಯವನ್ನು ಹೀಗೆ ವಿವರಿಸುತ್ತಾರೆ.
“ಜಡ್ಡು-ಜಾಪತ್ತುಗಳಿಂದ, ಹೊಲಸು-ವಾಸನೆ-ಮಲಿನಗಳಿಂದ ನಾರುವ ಈ ದೇಹ ಒಳ್ಳೆಯ ಕಾರ್ಯಗಳಿಂದ ಮಾತ್ರ ಪಾವಿತ್ರ್ಯವನ್ನು ಪಡೆಯುತ್ತದೆ. ದೇಹ ದೇಗುಲವಾಗುತ್ತದೆ. ನಾವು ಗತಿಸಿದ ನಂತರ ದೇಹ ಮಣ್ಣಲ್ಲಿ ಕೊಳೆತರೂ ಕೀರ್ತಿಯೆನ್ನುವ ದೇಹ ಈ ಭೂಮಿ ಇರುವವರೆಗೆ ಹೂ ಬಿಡುತ್ತಲೇ ಇರುತ್ತದೆ. ಅಲ್ಲವೆ?”
ಇಂತಹ ಹಲವು ಒಳನೋಟಗಳನ್ನು ಕೂಡಿಕೊಂಡಂತಹ ಕಥೆ, ಪ್ರಬಂಧ, ವಿಡಂಬನಾ ಬರಹಗಳನ್ನೂ ಕೂಡಾ ‘ಸೂರ್ಯಕಾಂತಿ’ ಒಳಗೊಂಡಿದೆ.

ಕ್ಯಾನ್ಸರ್ ರೋಗದಿಂದ ಬಳಲುತ್ತಿರುವಾಗಲೂ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡು ನೋವನ್ನು ಸಹಿಸಲು ಪ್ರಯತ್ನಿಸುತ್ತಿದ್ದ ರವಿಶಂಕರ್, ಸಾಹಿತ್ಯ ಲಹರಿ ವ್ಯಾಟ್ಸಾಪ್ ಬಳಗದ ಸದಸ್ಯರಾಗಿದ್ದರು. ಬಳಗವು ವಾರ್ಷಿಕೋತ್ಸವದ ತಯಾರಿಯಲ್ಲಿ ಇರುವಾಗಲೇ ಅಸ್ತಂಗತರಾದರು. ಲಹರಿಗರಾಗಿದ್ದು ಎಲ್ಲರ ಭಾವಬಂಧುವೇ ಆಗಿದ್ದ ರವಿಶಂಕರ್ ಅವರ ಹಿರಿಯಾಸೆಯು ‘ಸೂರ್ಯಕಾಂತಿ’ಯಾಗಿ ಅನಾವರಣಗೊಳ್ಳುತ್ತಿದೆ. ಸಾಹಿತ್ಯ ಲಹರಿ ವ್ಯಾಟ್ಸಾಪ್ ಬಳಗದ ಚೊಚ್ಚಲ ಕೃತಿ ಕಬ್ಬದೊಕ್ಕಲು ಮಾರಾಟದಿಂದ ಸಂಗ್ರಹಿತವಾದ ಹಣ ಸಾಲಾದಾದಾಗ ಸಮೂಹ ಪ್ರಕಾಶನ ದ ಮೂಲಕ ಒಂದಷ್ಟು ಸಹೃದಯರು ಬೆಂಬಲ ನೀಡಿದರು. ಜ್ಞಾನಗಂಗಾ ಪುಸ್ತಕ ಪ್ರಕಾಶನವೂ ಒತ್ತಾಸೆಯಾಗಿ ನಿಂತಿತು.

Advertisement

ಈ ಸಮಗ್ರ ಕೃತಿಗೆ ಫ್ರೊ.ಮುರಳೀಧರ ಉಪಾಧ್ಯ ಹಿರಿಯಡ್ಕ ಅವರು ಮುನ್ನುಡಿ ಬರೆದಿದ್ದಾರೆ. ಮಣಿಪಾಲವಾಸಿಯಾಗಿರುವ ಕವಯಿತ್ರಿ ಸುಪ್ತದೀಪ್ತಿ (ಜ್ಯೋತಿ ಮಹಾದೇವ್) ಮತ್ತು ಕವಿತಾ ಅಡೂರು ಸಂಪಾದಕೀಯದ ಸಾರಥ್ಯವನ್ನು ವಹಿಸಿದ್ದಾರೆ. ಒಕ್ಟೋಬರ್ ಆರರಂದು ಪುತ್ತೂರಿನ ಅನುರಾಗ ವಠಾರದಲ್ಲಿ ರವಿಶಂಕರ್ ಒಡ್ಡಂಬೆಟ್ಟು ಅವರ ಪತ್ನಿ ಶರ್ಮಿಳಾ ಒಡ್ಡಂಬೆಟ್ಟು ಅವರು ಕೃತಿ ಅನಾವರಣಗೊಳಿಸಲಿದ್ದಾರೆ.
ಕವಿಯು ತನ್ನ ಸಾಹಿತ್ಯ ಕೃತಿಗಳಲ್ಲಿ ಅಜರಾಮರನಾಗಿರುತ್ತಾನೆ ಎನ್ನುವ ಮಾತಿನಂತೆ ಪ್ರತಿಭಾನ್ವಿತ ಕವಿಯೊಬ್ಬನಿಗೆ ಗೌರವದ ನಮನವೊಂದು ಪುಸ್ತಕರೂಪದಲ್ಲಿ ಸಲ್ಲಿಕೆಯಾಗಲಿದೆ.
ನಮ್ಮ ತಂಬಿಗೆಯ
ಗಾತ್ರದಷ್ಟೇ
ನಮಗೆ ದಕ್ಕುವುದು
ಉಳಿದದ್ದು ಕಡಲಲ್ಲಿ
ಮಿಕ್ಕುವುದು
ಅದಕ್ಕೇಕೆ ನಾವು
ಬಿಕ್ಕುವುದು.
ಇದು ಕವಿಯ ಮಾತು; ನಮ್ಮ ಮಾತೂ ಕೂಡಾ.
; ಕವಿತಾಜ್ಯೋತಿ

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ರಘುಪತಿ ಭಟ್ಟರಿಗೆ ಮಧ್ಯ ಪ್ರದೇಶ ಸರ್ಕಾರದಿಂದ ಕಾಳಿದಾಸ ಸಮ್ಮಾನ್ ಪ್ರಶಸ್ತಿ
October 19, 2024
10:00 PM
by: The Rural Mirror ಸುದ್ದಿಜಾಲ
ರಾಜ್ಯದ ಆರು ರಂಗಾಯಣಗಳಿಗೆ ನಿರ್ದೇಶಕರ ನೇಮಕ | ಸಚಿವ ಶಿವರಾಜ ತಂಗಡಗಿ ಘೋಷಣೆ
August 15, 2024
10:00 AM
by: The Rural Mirror ಸುದ್ದಿಜಾಲ
ಕಣ್ಮರೆಯಾದ ಅಚ್ಚ ಕನ್ನಡದ ಮಾತಿನ ಮಲ್ಲಿ ಅಪರ್ಣಾ | ಕ್ಯಾನ್ಸರ್‌ಗೆ ಬಲಿಯಾದ ಅಪರ್ಣಾ |
July 12, 2024
9:24 AM
by: The Rural Mirror ಸುದ್ದಿಜಾಲ
ಪಡುಕಾನ ತಿಮ್ಮಯ್ಯ ಆಚಾರ್ ಸ್ಮೃತಿ | ಹೊಸ ತಲೆಮಾರಿಗೆ ಗತಿಸಿದ ಸಾಧಕರನ್ನು ಪರಿಚಯಿಸಬೇಕು –  ನಾ. ಕಾರಂತ ಪೆರಾಜೆ
July 11, 2024
9:40 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror