ಅಥಣಿ : ಭಾರೀ ಪ್ರವಾಹದಿಂದ ರಾಜ್ಯದಲ್ಲಿ ಮನೆ, ಬೆಳೆ ಕಳೆದುಕೊಂಡು ಜನರು ಸಂಕಷ್ಟದಲ್ಲಿದ್ದಾರೆ. ಸಂತ್ರಸ್ತರಿಗೆ ರಾಜ್ಯ ಸರಕಾರ ಈಗ ಸಾಧ್ಯವಿರುವ ಎಲ್ಲಾ ನೆರವು ನೀಡಿದೆ. ರಾಜ್ಯದ ಹಣಕಾಸು ಪರಿಸ್ಥಿತಿ ಸರಿ ಇಲ್ಲದಿದ್ದರೂ ಪ್ರವಾಹದಿಂದ ಸಂಪೂರ್ಣ ಮನೆ ಕಳೆದುಕೊಂಡಿರುವವರಿಗೆ 5 ಲಕ್ಷ ರೂಪಾಯಿ ನೀಡಲು ಸರಕಾರ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಅಥಣಿ ತಾಲೂಕಿನ ದರೂರ ಗ್ರಾಮದಲ್ಲಿ ಶುಕ್ರವಾರ ನಡೆದ ಪರಿಹಾರ ವಿತರಣೆ- ಅಹವಾಲು ಸ್ವೀಕಾರ ಸಭೆಯಲ್ಲಿ ಅವರು ಮಾತನಾಡಿದರು. ವಿವಿಧ ಹಂತದಲ್ಲಿ ಪರಿಹಾರ ವಿತರಣೆ ಕಾರ್ಯ ಈಗಾಗಲೇ ನಡೆದಿದೆ. ಒಂದೇ ಮನೆಯಲ್ಲಿ ವಾಸಿಸುವ ಎರಡೂ ಕುಟುಂಬಗಳಿಗೂ ಪ್ರತ್ಯೇಕ ಪರಿಹಾರ ನೀಡಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದ ಅವರು ರೈತರು ಒಪ್ಪಿದರೆ ಶಾಶ್ವತ ಸ್ಥಳಾಂತರಕ್ಕೆ ಸರಕಾರ ಸಿದ್ಧವಿದೆ. ಕೆಲವು ವರ್ಷಗಳ ಹಿಂದೆ ಸ್ಥಳಾಂತರ ಮಾಡಿದ ಗ್ರಾಮಗಳಿಗೆ ಜನರು ಹೋಗಲಿಲ್ಲ. ಗ್ರಾಮಸ್ಥರು ಒಟ್ಟಾಗಿ ಸಂಪೂರ್ಣ ಗ್ರಾಮ ಸ್ಥಳಾಂತರಕ್ಕೆ ಒಪ್ಪಿಗೆ ನೀಡಿದರೆ ತಕ್ಷಣ ಸ್ಥಳಾಂತರಕ್ಕೆ ಕ್ರಮಕೈಗೊಳ್ಳಲಾಗುವುದು ಎಂದರು.
ಬೆಳೆಹಾನಿ ಪರಿಹಾರಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಮಾದರಿಯನ್ನು ಅಧ್ಯಯನ ಮಾಡಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅಧ್ಯಯನ ವರದಿಯ ಬಳಿಕ ಸರಕಾರದ ಆರ್ಥಿಕ ಸ್ಥಿತಿ ಆಧರಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಯಡಿಯೂರಪ್ಪ ಹೇಳಿದರು.
ಇದೇ ಸಂದರ್ಭ ಅಥಣಿ ತಾಲೂಕಿನ ಕೃಷ್ಣಾ ನದಿ ಪ್ರವಾಹ ಪೀಡಿತ ದರೂರು ಗ್ರಾಮಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಬಿ .ಎಸ್. ಯಡಿಯೂರಪ್ಪ ಅವರು ಹಾನಿಗೊಳಗಾದ ಬೆಳೆ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ದರೂರು ಗ್ರಾಮದ ಸಂತ್ರಸ್ತರಿಗೆ ಮನೆ ನಿರ್ಮಾಣಕ್ಕಾಗಿ ನೀಡಲಾಗಿರುವ ಸಹಾಯಧನದ ಪತ್ರಗಳನ್ನು ವಿತರಿಸಿದರು