ಸುಮಾರು ಮೂರು-ನಾಲ್ಕು ದಶಕದ ಹಿಂದಿನ ಘಟನೆ. ಸುಳ್ಯ ತಾಲೂಕಿನ ಕಲ್ಮಡ್ಕದಲ್ಲಿ ಉದ್ಧಾಮ ಕಲಾವಿದರ ಸಮ್ಮಿಲನದಲ್ಲಿ ತಾಳಮದ್ದಳೆ. ಅಂದಿನ ಪ್ರಸಂಗ ‘ಮಾಗಧ ವಧೆ’. ಕೀರ್ತಿಶೇಷ ಡಾ.ಶೇಣಿ ಗೋಪಾಲಕೃಷ್ಣ ಭಟ್ಟರದು ‘ಮಾಗಧ’. ಶೇಣಿಯವರು ಆ ಪಾತ್ರವನ್ನು ಮರುಹುಟ್ಟುಗೊಳಿಸಿದ ಕಾಲಘಟ್ಟವದು. ಕೀರ್ತಿಶೇಷ ಪೆರ್ಲ ಕೃಷ್ಣ ಭಟ್ಟರ ‘ಕೃಷ್ಣ’. ಕೆ.ವಿ.ಗಣಪಯ್ಯರ ‘ಭೀಮ’. ಶೇಣಿಯವರ ಮಾಗಧ ಎಂದರೆ ಕೇಳಬೇಕೇ? ವಾದ-ಪ್ರತಿವಾದ, ಹೂಂಕಾರ-ಝೇಂಕಾರ! ಕೊನೆಗೆ ಮಾಗಧ-ಭೀಮರ ಮುಖಾಮುಖಿಯ ಸಂದರ್ಭ. ಗಣಪಯ್ಯನವರು ಭೀಮನಾಗಿ ‘ದುಷ್ಟ….. ನಿಲ್ಲಿಸು’ ಎಂದಷ್ಟೇ ಗುಡುಗಿದ್ದು! ಆ ಸ್ವರ ಸ್ಥಾಯಿಯ ತಾರಕಕ್ಕೆ ಸಭಾಸದರೇ ಸ್ತಬ್ಧ! ಅದೊಂದು ರೀತಿಯ ಸಿಡಿಲಬ್ಬರ! ಬಿಸಿಬಿಸಿಯಾದ ವಾದ! ಮಾಗಧನಿಗೆ ನಿಂದೆಗಳ ಸುರಿಮಳೆ.
ತಾಳಮದ್ದಳೆ ಮುಗಿದು ಗಣಪಯ್ಯನವರಲ್ಲಿ ಆಪ್ತರು ಹೇಳಿದರಂತೆ – ‘ಶೇಣಿಯವರ ಎದುರು ಹಾಗೆ ಮಾತನಾಡೋದಾ’? ಅದಕ್ಕೆ ಗಣಪಯ್ಯರ ಉತ್ತರ – ತಾಳಮದ್ದಳೆಯಲ್ಲಿ ‘ಮಾಗಧ’ ಕಾಣದಿದ್ದರೆ ‘ಭೀಮ’ನನ್ನು ಕಾಣಿಸುವುದು ಹೇಗೆ? ನಾನು ಮಾಗಧನಲ್ಲಿ ‘ಶೇಣಿ’ಯನ್ನು ಕಂಡರೆ, ತಾಳಮದ್ದಳೆ ಪೂರ್ತಿ ಶೇಣಿಯೆ ಕಾಡುತ್ತಾರೆ! ಆಗ ನನ್ನೊಳಗಿನ ‘ಭೀಮ’ ಮೂಡಿ ಬರುವುದು ಹೇಗೆ?
ಬಹುಶಃ ಈ ಒಂದು ಘಟನೆ ಗಣಪಯ್ಯನವರ ಅರ್ಥಗಾರಿಕೆಯ ಪಕ್ವತೆಯನ್ನು ಅರಿಯಲು ಸಾಕು. ವ್ಯಕ್ತಿಗಿಂತ ಪಾತ್ರ ಮುಖ್ಯ ಎಂದು ನಂಬಿದವರು. ಆಗಾಗಿಯೇ ಇರಬೇಕು, ಅವರಲ್ಲಿ ‘ವ್ಯಕ್ತಿ ಆರಾಧನೆ’ ಇರಲಿಲ್ಲ! ಪಾತ್ರದ ಆರಾಧನೆ ಮಾತ್ರ. ವ್ಯಕ್ತಿ ಆರಾಧನೆಯಾದಾಗ ಪ್ರಸಂಗ, ಅದರ ಆಶಯ, ಪಾತ್ರ ಸ್ವಭಾವಗಳೆಲ್ಲಾ ಕುಬ್ಜವಾಗಿ ಬಿಡುತ್ತವೆ.
ಗಣಪಯ್ಯನವರದು ದಶಮುಖ ವ್ಯಕ್ತಿತ್ವ. ಯಕ್ಷಗಾನ, ಶಿಕ್ಷಣ, ಸಮಾಜ ಸೇವೆ, ಧಾರ್ಮಿಕ, ಯುವ ಸಂಘಟನೆ, ಗ್ರಾಮೀಣಾಭಿವೃದ್ಧಿ, ಸಾಹಿತ್ಯ, ನಾಟಕ, ಪುರಾಣ ಪ್ರವಚನ, ಕಲಾವಿದರಿಗೆ ಪ್ರೋತ್ಸಾಹ, ಉಪನ್ಯಾಸ. ವಿದ್ಯಾರ್ಥಿಗಳ ನೆಚ್ಚಿನ ಅಧ್ಯಾಪP. ಈಗ ನಿವೃತ್ತರು. ಬಂಗಾಡಿ-ಮಿತ್ತಬಾಗಿಲು ಶಾಲೆಯಲ್ಲಿ ಮಾಸ್ತರಿಕೆಯೊಂದಿಗೆ ಸರಕಾರಿ ಸೇವೆಯ ಆರಂಭ. ಪುತ್ತೂರು ತಾಲೂಕಿನ ಕಾಣಿಯೂರು ಶಾಲೆಯಲ್ಲಿ ನಿವೃತ್ತ.
ಕೀರ್ತಿಶೇಷ ಕೊಳಂಬೆ ಪುಟ್ಟಣ್ಣ ಗೌಡರು ಗುರುಸಮಾನ. ಶಾಲಾ ಕಲಿಕೆಯಲ್ಲಿದ್ದಾಗಲೇ ಗಣಪಯ್ಯರಿಗೆ ಯಕ್ಷಗಾನದ ಒಲವು ಹೆಚ್ಚಿತ್ತು. ಮುಂದದು ಬದುಕಿನೊಂದಿಗೆ ನಂಟಾಯಿತು. ಆ ನಂಟು ‘ಹವ್ಯಾಸ’ವಾಗಿಯೇ ಉಳಿಯಿತು! ಯಕ್ಷಗಾನ ಅರ್ಥಗಾರಿಕೆಯಲ್ಲಿ ಅಪಾರ ಸಿದ್ಧಿಯಿದೆ. ಪ್ರಸಿದ್ಧಿಯಿದೆ. ಆದರೆ ‘ಸುಪ್ರಸಿದ್ಧ’ ಎಂಬ ಮನೆಗೆ ಪ್ರವೇಶ ಮಾಡುತ್ತಿರುವಾಗಲೇ, ಯಾಕೋ ಆ ಮನೆಯ ಬಾಗಿಲು ಸುಲಲಿತವಾಗಿ ಅವರಿಗೆ ತೆರೆಯಲಿಲ್ಲ! ಬಾಗಿಲು ತೆರೆದುಕೊಳ್ಳದಿದ್ದರೆ, ಪ್ರವೇಶ ಮಾಡುವುದಾದರೂ ಹೇಗೆ? ‘ಈ ಮನೆಯ ಸಹವಾಸವೇ ಬೇಡ’ ಎನ್ನುತ್ತಾ ದೂರವುಳಿದರು!
‘ಸುಪ್ರಸಿದ್ಧ’ರಾಗದಿದ್ದರೆ ಏನಾಯಿತು? ‘ಪ್ರಸಿದ್ಧಿ’ ಇದೆಯಲ್ಲಾ. ಅದು ಅರಸಿಕೊಂಡು ಬಂತು. ನಾಡಿನುದ್ದಗಲಕ್ಕೂ ಅವಕಾಶದ ಬಾಗಿಲು ತೆರೆಯಿತು. ತನ್ನ ಅದ್ಭುತ ಪಾಂಡಿತ್ಯದಿಂದ ಪ್ರಾಕಾಂಡರೂ ತಲೆದೂಗುವಂತೆ ಮಾಡಿದರು. ‘ಇಂದು ಗಣಪಯ್ಯರ ಅರ್ಥ’ ಎನ್ನುವಾಗಲೆ ಸಹ ಅರ್ಥಧಾರಿಗಳ ಹಣೆಯಲ್ಲಿ ಬೆವರು ಜಿನುಗುವಷ್ಟ್ಟು ಸ್ವ-ವರ್ಚಸ್ಸನ್ನು ರೂಪಿಸಿಕೊಂಡರು. ಜತೆಜತೆಗೆ ಸುಪ್ರಸಿದ್ಧರ ಕೂಟಗಳಲ್ಲಿ ಗಣಪಯ್ಯರೆಡೆಗೆ ಸಭಾಸದರ ವಿಶೇಷ ನೋಟವಂತೂ ಇತ್ತು!
‘ಮತ್ಸರ ಬಿಟ್ರೆ ಸಿದ್ಧಿ ಬೆಳಕಿಗೆ ಬರುತ್ತದೆ’, ‘ಅರ್ಥಧಾರಿ ಪಾತ್ರದೊಳಗೆ ಪರಕಾಯ ಪ್ರವೇಶ ಮಾಡಬೇಕು. ಆಗ ಸ್ವಯಂಸ್ಪೂರ್ತಿಯಿಂದ ವಿಚಾರ ಹೊರಹೊಮ್ಮುತ್ತದೆ’ – ಮಾತಿನ ಮಧ್ಯೆ ಗಣಪಯ್ಯನವರು ಹೇಳಿದ ಮಾತು. ಅವರ ಅರ್ಥಗಾರಿಕೆಯಲ್ಲಿ ಈ ಹೊಳಹನ್ನು ಕಾಣಬಹುದು.
ಬಹುತೇಕ ಎಲ್ಲಾ ವಿಧದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಕೃಷ್ಣ ಸಂಧಾನ ಪ್ರಸಂಗದ ‘ಕೌರವ’ನ ಅರ್ಥಗಾರಿಕೆಯ ಮೊನಚು, ‘ಕೃಷ್ಣ’ನ ಜಾಣ್ಮೆ; ಅಂತೆಯೇ ‘ದಶರಥ’, ‘ಮಾಗಧ’, ‘ವಾಲಿ’…ಪಾತ್ರಗಳಲ್ಲಿ ಗಣಪಯ್ಯರ ಛಾಪು ಪ್ರತ್ಯೇಕ. ಯಾರದ್ದೇ ನಕಲಲ್ಲ. ಸ್ವ-ನಿರ್ಮಿತ ಶಿಲ್ಪಗಳು. ಪುರಾಣದ ಚೌಕಟ್ಟಿನಲ್ಲಿ ಪ್ರಸಂಗದ ಆಶಯವನ್ನು ಬಿಂಬಿಸುವ ರೀತಿ ಅನನ್ಯ. ಒಂದು ಪಾತ್ರದಲ್ಲಿ ಎಷ್ಟು ಪ್ರಶ್ನೆಗಳು ಮೂಡುತ್ತದೋ, ಅಷ್ಟು ಪ್ರಶ್ನೆಗಳನ್ನು ಕೇಳುವುದರಲ್ಲಿ ರಾಜಿಯಿಲ್ಲ.
ಮೊದಮೊದಲು ಇವರು ಯಾವುದೇ ಪಾತ್ರವನ್ನು ನಿರ್ವಹಿಸಿದರೂ, ‘ಸ್ವಗತ’ ದೀರ್ಘವಾಗಿ ಲಂಬಿಸುತ್ತಿತ್ತಂತೆ.
‘ಓ..ಅವರದಾ….ಒಂದು ಗಂಟೆ ಸ್ವಗತ ಗ್ಯಾರಂಟಿ’ ಜತೆ ಅರ್ಥಧಾರಿಗಳು ವಿನೋದಕ್ಕೆ ಹೇಳುತ್ತಿದ್ದರಂತೆ. ದೀರ್ಘವಾದÀ ಸ್ವಗತ ಹೇಗೆ ಕಡಿಮೆಯಾಯಿತು? ಅವರ ಮಾತಲ್ಲೇ ಕೇಳೋಣ – “ಒಮ್ಮೆ ಭೀಷ್ಮಾರ್ಜುನ ಪ್ರಸಂಗ. ಸ್ಥಳ ನೆನಪಿಲ್ಲ. ಸಂಘಟಕರು ‘ಇಂದಿನ ಕೂಟಕ್ಕೆ ಟೇಪ್ ರೆಕಾರ್ಡರ್ ಉಂಟು’ ಎಂದರಂತೆ. ಆಗ ಟೇಪ್ ಅಂದರೆ ಅದು ‘ಬಹುದೊಡ್ಡ’ ಕೂಟ ಅಂದರೆ ಗೌಜಿಯ ಕೂಟ ಅಂತ ನಂಬುಗೆ. ನನ್ನ ಪಾತ್ರ ಭೀಷ್ಮ. ತಾಳಮದ್ದಳೆ ಮುಂದುವರಿಯಿತು. ನನ್ನ ಸ್ವಗತ ಮುಗಿಯುತ್ತಿದ್ದಂತೆ ಸಂಘಟಕರು ಕಿವಿಯಲ್ಲಿ ಹೇಳಿದರು – ಒಂದು ಗಂಟೆಯ ಕ್ಯಾಸೆಟ್ ಮುಗಿಯಿತು! ಈಗ ಎರಡನೇ ಕ್ಯಾಸೆಟ್ ಹಾಕಬೇಕಷ್ಟೇ! ತಾಳಮದ್ದಳೆ ಮುಗಿದು, ನನ್ನ ಅರ್ಥವನ್ನು ಟೇಪ್‍ನಲ್ಲಿ ಕೇಳಿದೆ. ಅಷ್ಟು ದೀರ್ಘವಾದ ಅರ್ಥಗಾರಿಕೆ ಎಷ್ಟು ಕಿರಿಕಿರಿಯಾಯಿತೆಂದರೆ, ‘ಇನ್ನು ಮುಂದೆ ದೀರ್ಘವಾದ ಸ್ವಗತ ಹೇಳುವುದಿಲ್ಲ’ ಎಂದು ಶಪಥ ಮಾಡಿದೆ”. ಹೀಗೆ ಅರ್ಥಗಾರಿಕೆಯಲ್ಲಿ ಸ್ವ-ನಿಯಂತ್ರಣ.
ಯಾವುದೇ ಶುೃತಿಗೆ ಹೊಂದಾಣಿಕೆಯಾಗಬಲ್ಲ ಅದ್ಭುತ ಸ್ವರಸಂಪತ್ತು. ಎದುರಾಳಿಯ ಪ್ರಶ್ನೆಗೆ ‘ರಪ್’ ಅಂತ ಬರುವ ಪ್ರತ್ಯುತ್ತರ. ಎದುರಾಳಿಯ ಅರ್ಥಗಾರಿಕೆಯ ನಡೆ ಹೇಗುಂಟೋ, ಅದೇ ದಾರಿಯಲ್ಲಿ ಸಾಗುವ ಪರಿ. ಹರಿಹಾಯುವ ಸ್ವಭಾವದ ಅರ್ಥಗಾರಿಕೆಯಲ್ಲ. ಆದರೆ “ಎಲ್ಲಾದರೂ ತನ್ನ ಮೇಲೆ ‘ಅ್ಯಟಾಕ್ ಮಾಡ್ತಾನೆ’ ಎಂದು ಗೊತ್ತಾದರೆ ಸಾಕು. ಮತ್ತಿನ ‘ಗಣಪಯ್ಯ’ರನ್ನು ನೋಡಬೇಕು. ಆಗ ಇದಿರಾಳಿಗೆ ನೀಡುವ ಚಿಕಿತ್ಸೆಗೆ ಮತ್ತೆಂದೂ ಆ ಕಲಾವಿದ ಗಣಪಯ್ಯರ ಹೆಸರು ಹೇಳಿದಾಗಲೇ ಬೆವರಬೇಕು’ ಸ್ನೇಹಿತ ಗಂಗಾಧರ ಬೆಳ್ಳಾರೆ (ದಿ.) ನೆನಪಿಸಿಕೊಳ್ಳುತ್ತಿದ್ದರು.
ಇವರ ಅರ್ಥಗಾರಿಕೆಯಲ್ಲಿ ಪ್ರತ್ಯೇಕವಾದ ‘ಶಾಸ್ತ್ರೀಯ ಮಟ್ಟು’ ಗಮನಿಸಬಹುದು. ಕಾವ್ಯದ ಹೊಸ ಹೊಳಹುಗಳನ್ನು ತೆರೆದುಕೊಳ್ಳುವ ಪರಿ ಅನ್ಯಾದೃಶ. ಇವರದು ಸ್ವರ ಪ್ರಧಾನವಾದ ಅರ್ಥ. ಉದಾ: ಕೃಷ್ಣನ ಮೃದುತ್ವ, ಕೌರವ ದೌಷ್ಟ್ರ್ಯ..ಇತ್ಯಾದಿ.
ಇವರು ಎಂದಿಗೂ ಸಂಘಟಕರಿಗೆ ಹೊರೆಯಲ್ಲ. ‘ಇಂತಹುದೇ ಅರ್ಥ ಬೇಕು’ ಎಂದು ಪಟ್ಟು ಹಿಡಿವವರಲ್ಲ. ತನಗೆ ಪ್ರತ್ಯೇಕವಾದ ವ್ಯವಸ್ಥೆ ಬೇಕು ಎಂದು ಸಂಘಟಕರ ‘ತಲೆ ತಿಂದದ್ದಿಲ್ಲ’! ಒಪ್ಪಿದ ತಾಳಮದ್ದಳೆಗೆ ನಿಖರವಾಗಿ ಭಾಗವಹಿಸುತ್ತಿದ್ದರು. ಇದ್ದ ವ್ಯವಸ್ಥೆಯಲ್ಲಿ, ಪಾಲಿಗೆ ಬಂದ ಪಾತ್ರವನ್ನು ‘ಅದ್ಭುತ’ವಾಗಿ ಬಿಂಬಿಸುವ ಗಣಪಯ್ಯರ ಅರ್ಥಕ್ಕೆ ಸಾಟಿಯಿಲ್ಲ. ಅವರೇ ಸಾಟಿ.
‘ರಾಗ ಬರುವಾಗ ತಂತಿ ಕಡಿಯಿತು. ಬೇಡಿಕೆ ಬರುವಾಗ ಮನೆಯ ತಾಪತ್ರಯ’ – ತಾಳಮದ್ದಳೆಯ ಕ್ಷೇತ್ರದಿಂದ ತಾನು ದೂರವಾದ ಕಾರಣವನ್ನು ಹೇಳುತ್ತಾರೆ. ಈಗಂತೂ ಪೂರ್ತಿ ವಿಶ್ರಾಂತ. ‘ಹಳೆಯ ನೆನಪುಗಳು ಸಿಹಿ’ ಎನ್ನುತ್ತಾ ಬುತ್ತಿ ಬಿಚ್ಚಿದರೆ ಸಾಕು – ಅದರಲ್ಲಿ ಸಿಗುವ ಅನುಭವ ಇದೆಯಲ್ಲಾ, ಅದು ದಾಖಲಾಗಬೇಕಾದ ಅಂಶಗಳು. ಹಿರಿಯ, ವಿದ್ವಾಂಸ ಕೆ.ವಿಗಣಪಯ್ಯರ ಯಕ್ಷಗಾನ ಕ್ಷೇತ್ರದ ಅವರ ಸಾಧನೆಗೆ ‘ಬೊಳ್ಳಿಂಬಳ ಪ್ರಶಸ್ತಿ’ ಅರಸಿ ಬಂದಿತ್ತು.
ಈಚೆಗೆ ಸ್ನೇಹಿತ ಗುಡ್ಡಪ್ಪ ಬಲ್ಯರೊಂದಿಗೆ ಅವರ ನಿವಾಸಕ್ಕೆ ಭೇಟಿ ನೀಡಿದೆ. ಎಂಭತ್ತಾರು ವರುಷದ ಗಣಪಯ್ಯರಿಗೆ ವಯೋಸಹಜವಾದ ನಿಶ್ಶಕ್ತಿ ಬಾಧಿಸಿತ್ತು. ನೆನಪಿನ ಶಕ್ತಿ ಗಾಢವಾಗಿತ್ತು. ಬೌದ್ಧಿಕತೆಗೆ ಸವಾಲೊಡ್ಡುವ, ಆ ಸವಾಲಿನಲ್ಲಿ ಪಕ್ವವಾಗುತ್ತಾ ಬರುತ್ತಿದ್ದ ಅರ್ಥಗಾರಿಕೆಯ ದಿನಮಾನಗಳನ್ನು ನೆನಪಿಸಿಕೊಂಡರು. ಒಂದೊಂದು ಪಾತ್ರ ವಹಿಸುವಾಗಲೂ ಅರ್ಥದಾರಿ ವಹಿಸಬೇಕಾದ ಎಚ್ಚರಗಳನ್ನು ಹೇಳಿದರು. ತಾಳಮದ್ದಳೆಯ ಅರ್ಥ ಎಂದರೆ ಅದು ಸಿದ್ಧ ಮಾದರಿಯಲ್ಲ, ಅಂದಂದಿನ ರಂಗದ ಮನಃಸ್ಥಿತಿಯಂತೆ ರೂಪುಗೊಳ್ಳುತ್ತದೆ ಎಂದು ಗಣಪಯ್ಯನವರ ಸ್ವಾನುಭವಕ್ಕೆ ಕಿವಿಯಾಗುವ ಅವಕಾಶ ಪ್ರಾಪ್ತವಾಗಿತ್ತು. ಜತೆಗೆ ವರ್ತಮಾನದ ತಾಳಮದ್ದಳೆ ರಂಗದ ಕೆಲವು ‘ಪ್ಯಾಕೇಜ್’ ಅರ್ಥಗಾರಿಕೆಯ ಮಾದರಿಗಳೂ ನೆನಪಾದುವು.