ಸುಳ್ಯ: ಶೀಘ್ರವೇ ಸರಕಾರಿ ಶಾಲೆಗಳಲ್ಲಿ ಗ್ರಾಮ ವಾಸ್ತವ್ಯ ಆರಂಭಿಸುವುದಾಗಿ ರಾಜ್ಯ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಟ್ವಿಟ್ಟರ್ ಮೂಲಕ ಘೋಷಿಸಿಕೊಂಡಿದ್ದಾರೆ. ಇದಕ್ಕೆ ಸುಳ್ಯ ತಾಲೂಕಿನ ಗಡಿ ಗ್ರಾಮದ ಸರಕಾರಿ ಶಾಲೆಯಲ್ಲಿ ಗ್ರಾಮ ವಾಸ್ತವ್ಯ ಮಾಡುವಂತೆ ಸುಳ್ಯದ ವಕೀಲ ಧರ್ಮಪಾಲ ಕೊಯಿಂಗಾಜೆ ಇದಕ್ಕೆ ಪ್ರತಿಕ್ರಿಯೆ ನೀಡುವ ಮೂಲಕ ಸಿಎಂ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ.
ಜನರೊಂದಿಗೆ ಬೆರೆಯಲು ಅವರ ಸಮಸ್ಯೆಗಳನ್ನು ತಿಳಿಯಲು, ಸರಕಾರದ ಕಾರ್ಯವೈಖರಿ ತಿಳಿಯಲು ನೆರವಾಗುವುದು ಗ್ರಾಮ ವಾಸ್ತವ್ಯ. ಶೀಘ್ರವೇ ಸರಕಾರಿ ಶಾಲೆಯಲ್ಲಿ ಗ್ರಾಮ ವಾಸ್ತವ್ಯ ಆರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಟ್ವೀಟ್ ಮಾಡಿದ್ದಾರೆ. ಇದೇ ಟ್ವೀಟ್ ಗೆ ಪ್ರತಿಕ್ರಿಯೆ ಮಾಡಿರುವ ಧರ್ಮಪಾಲ ಅವರು ಸುಳ್ಯಕ್ಕೆ ಆಗಮಿಸುವಂತೆ ಆಹ್ವಾನ ನೀಡಿದರು.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ಕೋಲ್ಚಾರು ಎಂಬಲ್ಲಿ ಕೇರಳ ಗಡಿ ಪ್ರದೇಶಕ್ಕೆ ಹೊಂದಿಕೊಂಡು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಇದೆ. ಇಲ್ಲಿ ಗ್ರಾಮ ವಾಸ್ತವ್ಯ ಮಾಡಿ ಸುಳ್ಯ ತಾಲೂಕಿನ ಸಮಸ್ಯೆ ಬಗೆಹರಿಸಬೇಕು ಎಂದು ಧರ್ಮಪಾಲ ಕೊಯಿಂಗಾಜೆ ಟ್ವೀಟ್ ಮಾಡಿ ವಿನಂತಿಸಿಕೊಂಡಿದ್ದಾರೆ. ಇದಕ್ಕೆ ಸೀಎಂ ಅವರಿಂದ ಪ್ರತಿಕ್ರಿಯೆ ಬರಲಿಲ್ಲ. ಆದರೆ ಅಧಿಕಾರಿ ವಲಯ ಇದನ್ನು ಗುರುತಿಸಿಕೊಂಡಿದೆ.