ಸುಳ್ಯ: ಸುಳ್ಯ -ಪಾಣತ್ತೂರು ಅಂತಾರಾಜ್ಯ ರಸ್ತೆಯಲ್ಲಿ ಕೇರಳದ ಭಾಗದ ಅಭಿವೃದ್ಧಿಗೆ ಮತ್ತೆ 3.80 ಕೋಟಿ ರೂ ಅನುದಾನ ಮಂಜೂರಾಗಿದೆ. ಕಾಸರಗೋಡು ಅಭಿವೃದ್ಧಿ ಯೋಜನೆಯಡಿ ಸರಕಾರ ಅನುದಾನ ಬಿಡುಗಡೆ ಮಾಡಿದ್ದು ಇದಕ್ಕೆ ಆಡಳಿತಾತ್ಮಕ ಮಂಜೂರಾತಿ ದೊರಕಿದೆ ಎಂದು ಪನತ್ತಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಪಿ.ಜಿ.ಮೋಹನನ್ ತಿಳಿಸಿದ್ದಾರೆ.
ಸುಳ್ಯ-ಪಾಣತ್ತೂರು ರಸ್ತೆ ಒಟ್ಟು 20 ಕಿ.ಮಿ. ಇದೆ. ರಸ್ತೆಯಲ್ಲಿ ಪಾಣತ್ತೂರಿನಿಂದ ಕೇರಳ ಗಡಿ ಬಾಟೋಳಿವರೆಗೆ ಕೇರಳದ ಭಾಗ 10 ಕಿ.ಮಿ.ಇದ್ದು ರಸ್ತೆಯಲ್ಲಿ ಕಲ್ಲಪಳ್ಳಿಯಲ್ಲಿ 6ನೇ ಕಿ.ಮಿಯಿಂದ 10 ನೇ ಕಿ.ಮಿ.ವರೆಗೆ 4 ಕಿ.ಮಿ 3.80 ಕೋಟಿ ಅನುದಾನದಲ್ಲಿ ಅಭಿವೃದ್ಧಿ ಆಗಲಿದೆ. ಮಳೆಗಾಲ ಕಳೆದ ಬಳಿಕ ಕಾಮಗಾರಿ ಆರಂಭವಾಗುವ ನಿರೀಕ್ಷೆ ಇದೆ. ಇದೇ ರಸ್ತೆಯಲ್ಲಿ ಕೇರಳದ ಭಾಗದಲ್ಲಿ ಕಳೆದ ಬೇಸಿಗೆಯಲ್ಲಿ ಮೂರು ಕೋಟಿ ರೂ ಅನುದಾನದಲ್ಲಿ 3 ಕಿ.ಮಿ.ರಸ್ತೆ ಅಭಿವೃದ್ಧಿ ಪಡಿಸಲಾಗಿತ್ತು.
ಮಡಿಕೇರಿಗೆ ಪರ್ಯಾಯ ರಸ್ತೆ:ಸುಳ್ಯ-ಪಾಣತ್ತೂರು ರಸ್ತೆಯಲ್ಲಿ ಈ ಕಾಮಗಾರಿ ಪೂರ್ತಿಯಾದರೆ ಕೇರಳದ ಭಾಗ ಬಹುತೇಕ ಅಭಿವೃದ್ಧಿಯಾಗಲಿದೆ. ಕರ್ನಾಟಕದ ಭಾಗ 10 ಕಿ.ಮಿ.ರಸ್ತೆ ಡಾಮರೀಕರಣ ಕಂಡಿದ್ದರೂ ಹೊಂಡ ಗುಂಡಿಗಳಿಂದ ಕೂಡಿದ್ದು ಸಂಚಾರಕ್ಕೆ ದುಸ್ತರವಾಗಿದೆ. ಕರ್ನಾಟಕದ ಭಾಗದ ದುರಸ್ತಿಗೆ 25 ಲಕ್ಷ ಮಂಜೂರಾಗಿದ್ದರೂ ಕಾಮಗಾರಿ ನಡೆಸಿಲ್ಲ.
ಸುಳ್ಯ-ಮಡಿಕೇರಿ ರಸ್ತೆಗೆ ಪರ್ಯಾಯ ಈ ರಸ್ತೆ. ಸುಳ್ಯ-ಪಾಣತ್ತೂರು-ಕರಿಕೆ ಭಾಗಮಂಡಲ ಮೂಲಕ ಮಡಿಕೇರಿಗೆ ಹೋಗಬಹುದು. ಕಳೆದ ವರ್ಷ ಮಳೆಗಾಲದಲ್ಲಿ ಸುಳ್ಯ- ಮಡಿಕೇರಿ ರಸ್ತೆ ಮುಚ್ಚಿದ ಸಂದರ್ಭದಲ್ಲಿ ಪರ್ಯಾಯವಾಗಿ ಈ ರಸ್ತೆಯನ್ನು ಬಳಸಿಕೊಳ್ಳಲಾಗಿತ್ತು.