- ಸುಳ್ಯ: ಅರಂತೋಡು ಗ್ರಾಮ ಪಂಚಾಯತ್ ತನ್ನ ಕ್ರಿಯಾತ್ಮಕ ಕಾರ್ಯಾಚರಣೆಯ ಮೂಲಕ ತಮ್ಮ ಗ್ರಾಮವನ್ನು ಸ್ವಚ್ಛ ಗ್ರಾಮವಾಗಿಸುವತ್ತ ಹೆಜ್ಜೆ ಇರಿಸಿದೆ. ಈ ನಿಟ್ಟಿನಲ್ಲಿ ಕಳೆದ ಎರಡು ತಿಂಗಳಿನಿಂದ ಕಾರ್ಯಪ್ರವೃತ್ತವಾಗಿರುವ ಗ್ರಾಮ ಪಂಚಾಯತ್ ಸ್ವಚ್ಛತೆಯ ಆಂದೋಲನದ ಜೊತೆಗೆ ವೈಜ್ಞಾನಿಕವಾದ ಕಸ ವಿಲೇವಾರಿಯನ್ನು ಕೈಗೊಂಡಿದ್ದು ಗ್ರಾಮದ ಮನೆ ಮನೆಯಲ್ಲೂ ಸ್ವಚ್ಛತೆಗೆ ಮುನ್ನುಡಿ ಬರೆದಿದೆ.
ಹಸಿ ಕಸ-ಒಣ ಕಸ:
ಕಸ ವಿಲೇವಾರಿಗೆ ವ್ಯವಸ್ಥಿತವಾದ ಯೋಜನೆ ರೂಪಿಸಿಕೊಳ್ಳಲಾಗಿದ್ದು ಹಸಿ ಕಸ ಒಣ ಎಂದು ಬೇರ್ಪಡಿಸಿ ಅದನ್ನು ಮನೆ ಮನೆಗಳಿಂದ ಸಂಗ್ರಹಿಸಲಾಗುತಿದೆ. ಹಸಿ ಕಸವನ್ನು ಮನೆಗಳಲ್ಲಿಯೇ ಬೇರ್ಪಡಿಸಿ ಹಸಿ ಕಸವನ್ನು ಅಲ್ಲಿಯೇ ಗೊಬ್ಬರ ಮಾಡಬೇಕು ಅದಕ್ಕೆ ಪೈಪ್ ಕಂಪೋಸ್ಟ್ ವ್ಯವಸ್ಥೆ ಅಳವಡಿಸಲಾಗಿದೆ. ಸುಮಾರು 150 ಬಿಪಿಎಲ್ ಕುಟುಂಬಗಳ ಮನೆಗಳಿಗೆ ಪಂಚಾಯಿತಿ ವತಿಯಿಂದಲೇ ಪೈಪ್ ಕಂಪೋಸ್ಟ್ ವ್ಯವಸ್ಥೆ ನೀಡಲಾಗಿದ್ದು ಉಳಿದವರು ಸ್ವಯಂಪ್ರೇರಿತರಾಗಿ ಪೈಪ್ ಕಂಪೋಸ್ಟ್ ಅಳವಡಿಸಿ ಅರಂತೋಡು ಮತ್ತು ತೊಡಿಕಾನ ಗ್ರಾಮದ ಸುಮಾರು 400 ಮನೆಗಳಲ್ಲಿ ಪೈಪ್ ಕಂಪೋಸ್ಟ್ ಅಳವಡಿಸಲಾಗಿದೆ. ಪ್ಲಾಸ್ಟಿಕ್, ಗಾಜು, ಲೋಹ, ರಟ್ಟು, ಪ್ಲಾಸ್ಟಿಕ್ ಬಾಟಲಿ ಮತ್ತಿತರ ಒಣ ಕಸವನ್ನು ಮನೆಯವರು ತೆಗೆದಿರಿಸಬೇಕು. ಒಣ ಕಸವನ್ನು ತೆಗೆದಿರಿಸಲು ಪ್ರತಿ ಮನೆಯವರಿಗೂ ಪಂಚಾಯತ್ ವತಿಯಿಂದ ಚೀಲವನ್ನು ನೀಡಲಾಗಿದೆ. ಪ್ರತಿ ಚೀಲಕ್ಕೂ ನಂಬರ್ ನೀಡಲಾಗಿದ್ದು ಕಸ ಸಂಗ್ರಹದ ದಾಖಲೆಯನ್ನೂ ಮಾಡಲಾಗುತ್ತದೆ. 1340 ಮನೆಯಿಂದ ಸಂಗ್ರಹಿಸಿದ ಪ್ರತಿ ಮನೆಯ ಕಸಕ್ಕೂ ಲೆಕ್ಕವನ್ನಿರಿಸಿ ಕಸ ಸಂಗ್ರಹದ ಕೋಸ್ಟಕವನ್ನೂ ತಯಾರಿಸಲಾಗುತ್ತದೆ. ಈ ಚೀಲದಲ್ಲಿ ಸಂಗ್ರಹಿಸಿಟ್ಟ ಒಣ ಕಸವನ್ನು ಗ್ರಾಮಗಳಲ್ಲಿ ಪ್ರತಿ ತಿಂಗಳ ಮೂರನೇ ಶನಿವಾರ ವಾಹನ ಕಳಿಸಿ ತಂದು ಅರಂತೋಡಿನ ಪ್ಲಾಸ್ಟಿಕ್ ಸೌಧಕ್ಕೆ ತಂದು ಶೇಖರಿಸಲಾಗುತ್ತದೆ. ಪೇಟೆಗಳ ಅಂಗಡಿಗಳಿಗೂ ಕಸ ಹಾಕಲು ಚೀಲ ಅಳವಡಿಸಲಾಗಿದ್ದು ಪ್ರತಿ ವಾರಕ್ಕೊಮ್ಮೆ ಅದನ್ನು ಸಂಗ್ರಹಿಸಲಾಗುತ್ತದೆ. ಕಸದ ನಿರ್ವಹಣೆಗೆ ಮನೆಗಳಿಂದ 20 ರೂ ಮತ್ತು ವಾಣೀಜ್ಯ ಸಂಸ್ಥೆಗಳಿಂದ ಐವತ್ತು ರೂಗಳನ್ನು ಶುಲ್ಕ ಪಡೆದುಕೊಳ್ಳಲಾಗುತ್ತದೆ.
ಕಸವನ್ನು ಸಂಪನ್ಮೂಲವಾಗಿಸುವ ಗುರಿ:
ಕಸ ಬೇರ್ಪಡಿಸಲು ಒಂದು ಕಟ್ಟಡವನ್ನು ಮೀಸಲಿರಿಸಿ ಪ್ಲಾಸ್ಟಿಕ್ ಸೌಧ ಮಾಡಲಾಗಿದೆ. ಕಸ ವಿಲೇವಾರಿ ಕಾರ್ಯ ತಂಡವನ್ನು ರಚಿಸಲಾಗಿದ್ದು ಮನೆ ಮನೆಗಳಿಂದ ಸಂಗ್ರಹಿಸಿ ತರುವ ಕಸವನ್ನು ಈ ಪ್ಲಾಸ್ಟಿಕ್ ಸೌಧದಲ್ಲಿ ಬೇರ್ಪಡಿಸಲಾಗುತ್ತದೆ. ನಾಲ್ಕು ಮಂದಿಯನ್ನು ಇದಕ್ಕಾಗಿ ನಿಯೋಜಿಸಲಾಗಿದ್ದು ಅವರು ಕಸವನ್ನು ಪ್ಲಾಸ್ಟಿಕ್ ಚೀಲ, ಪ್ಲಾಸ್ಟಿಕ್ ಬಾಟಲಿ, ಗಾಜು, ಲೋಹ, ರಟ್ಟು, ಕಾಗದ, ತಾಮ್ರ, ಬ್ಯಾಟರಿ, ಪ್ಲಾಸ್ಟಿಕ್ ಕವರ್ ಹೀಗೆ ಒಂಭತ್ತು ವಿಧಗಳಾಗಿ ಬೇರ್ಪಡಿಸಿ ಅದನ್ನು ಸ್ವಚ್ಛಗೊಳಿಸಿ ಗೋಣಿ ಚೀಲದಲ್ಲಿ ತುಂಬಿ ಪ್ರತ್ಯೇಕ ಸಂಗ್ರಹಿಸಿಡಲಾಗುತ್ತದೆ. ವ್ಯವಸ್ಥಿತವಾಗಿ ಬೇರ್ಪಡಿಸಿದ ವಸ್ತುಗಳಿಗೆ ಸಾಕಷ್ಟು ಬೇಡಿಕೆಯಿದ್ದು ಮುಂದೆ ಇದನ್ನು ಮಾರಾಟ ಮಾಡಿ ಪಂಚಾಯತ್ ಗೆ ಆದಾಯ ಗಳಿಸುವುದು ಉದ್ದೇಶ.
ಸಿದ್ಧವಾಗಿದೆ ತ್ಯಾಜ್ಯ ಘಟಕ:
ಗ್ರಾಮ ಪಂಚಾಯತ್ ವತಿಯಿಂದ ಅರಂತೋಡಿನಲ್ಲಿ 20 ಲಕ್ಷ ರೂ ವೆಚ್ಚದಲ್ಲಿ ತ್ಯಾಜ್ಯ ವಿಲೇವಾರಿ ಘಟಕವನ್ನು ನಿರ್ಮಿಸಲಾಗುತ್ತಿದ್ದು ಕಾಮಗಾರಿ ಅಂತಿಮ ಹಂತದಲ್ಲಿದೆ. ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿಯಲ್ಲಿ 50 ಸೆಂಟ್ಸ್ ಜಾಗದಲ್ಲಿ ಸುಮಾರು 13 ಲಕ್ಷ ರೂ ವೆಚ್ಚದಲ್ಲಿ ಕಟ್ಟಡ ನಿರ್ಮಾಣಗೊಳ್ಳುತಿದೆ. ಕಸ ಸಾಗಾಟ ವಾಹನ ಮತ್ತಿತರ ಕೆಲಸ ಸೇರಿ ಒಟ್ಟು 20 ಲಕ್ಷ ವೆಚ್ಚದಲ್ಲಿ ಸುಸಜ್ಜಿತ ಘಟಕ ತಯಾರಾಗಲಿದೆ. ಬಳಿಕ ಇಲ್ಲಿ ಹಸಿ ಕಸವನ್ನು ಬಳಸಿ ಗೊಬ್ಬರ ತಯಾರಿಸುವ ಯೋಜನೆ ಇದೆ. ಅದಕ್ಕಾಗಿ ಗೊಬ್ಬರ ತೊಟ್ಟಿ ನಿರ್ಮಿಸಲಾಗಿದೆ. ಅಲ್ಲದೆ ಒಣ ಕಸ ಬೇರ್ಪಡಿಸಲು, ಸಂಗ್ರಹಿಸಿಡಲು ಕೊಠಡಿಗಳನ್ನು ನಿರ್ಮಿಸಲಾಗಿದೆ. ಘಟಕ ನಿರ್ಮಾಣವಾದ ಮೇಲೆ ಬೇರೆ ಕಡೆಗಳಿಂದಲೂ ಕಸವನ್ನು ತರಿಸಿ ಅದನ್ನು ಸಂಪನ್ಮೂಲವಾಗಿಸುವ ಯೋಜನೆ ಪಂಚಾಯಿತಿ ಆಡಳಿತ ಮಂಡಳಿಯದ್ದು.
ಸ್ವಚ್ಛತಾ ಆಂದೋಲನ:
ಕಸ ಸಂಗ್ರಹ, ಬೇರ್ಪಡಿಸುವಿಕೆಯ ಜೊತೆಗೆ ರಸ್ತೆ ಬದಿ, ಪೇಟೆಯಲ್ಲಿ ಸ್ವಚ್ಛತಾ ಕಾರ್ಯವನ್ನೂ ನಡೆಸಲಾಗುತ್ತದೆ. ಮಂಗಳೂರಿನ ರಾಮಕೃಷ್ಣ ಮಿಷನ್ ಸಹಕಾರದೊಂದಿಗೆ ಪ್ರತಿ ತಿಂಗಳ ಪ್ರಥಮ ಆದಿತ್ಯವಾರ ತೊಡಿಕಾನದಲ್ಲಿ ಮತ್ತು ಕೊನೆಯ ಆದಿತ್ಯವಾರ ಅರಂತೋಡಿನಲ್ಲಿ ಸ್ವಚ್ಛತಾ ಆಂದೋಲನವನ್ನು ನಡೆಸುತ್ತಾ ಬಂದಿದ್ದಾರೆ. ಇದರಿಂದ ಸಾರ್ವಜನಿಕ ಸ್ಥಳಗಳು ಕೂಡ ಸ್ವಚ್ಛತೆಯತ್ತ ಮುಖ ಮಾಡಿದೆ. ಮುಂದಿನ ಅಕ್ಟೋಬರ್‍ವರೆಗೆ ಈ ಸ್ವಚ್ಛತಾ ಆಂದೋಲನ ಮುಂದುವರಿಸಲು ಯೋಚಿಸಲಾಗಿದೆ. ಪೇಟೆಯಲ್ಲಿ ಪ್ಲಾಸ್ಟಿಕ್ ಬಾಟಲಿಯ ಹಾವಳಿಯನ್ನು ತಪ್ಪಿಸಲು ಶುದ್ಧ ಕುಡಿಯುವ ನೀರಿನ ಘಟಕವನ್ನೂ ಸ್ಥಾಪಿಸಲಾಗಿದೆ. ಇದರಿಂದ ನೀರಿನ ಬಾಟಲಿ ಸಿಕ್ಕಿ ಸಿಕ್ಕಿದಲ್ಲಿ ಎಸೆಯುವುದು ಕಡಿಮೆ ಆಗಿದೆ. ಎಲ್ಲರೂ ಘಟಕದಿಂದ ನೀರನ್ನು ತೆಗೆದುಕೊಂಡು ಹೋಗುತ್ತಾರೆ. ಸಾರ್ವಜನಿಕರು, ಪ್ರಯಾಣಿಕರಿಗಾಗಿ ಹಸಿ ಕಸ ಮತ್ತು ಒಣ ಕಸಕ್ಕೆ ಪ್ರತ್ಯೇಕ ಡಬ್ಬಗಳನ್ನು ಇರಿಸಲಾಗಿದೆ.
ವಂಡ್ಸೆ ಗ್ರಾ.ಪಂ.ಮಾದರಿ:
“ಅರಂತೋಡು ಗ್ರಾ.ಪಂ.ಗೆ ಕಸ ವಿಲೇವಾರಿಗೆ ನೂತನ ಹೆಜ್ಜೆಯನ್ನಿಡಲು ಉಡುಪಿ ಜಿಲ್ಲೆಯ ವಂಡ್ಸೆ ಗ್ರಾಮವನ್ನು ಮಾದರಿಯಾಗಿಸಿದ್ದೇವೆ” ಎನ್ನುತ್ತಾರೆ ಅರಂತೋಡು ಗ್ರಾ.ಪಂ.ಉಪಾಧ್ಯಕ್ಷ ಶಿವಾನಂದ ಕುಕ್ಕುಂಬಳ. ಅಲ್ಲಿನ ಕಸ ವಿಲೇವಾರಿ ಮಾದರಿಯನ್ನು ಅಧ್ಯಯನ ನಡೆಸಲು ಆಡಳಿತ ಮಂಡಳಿ ಸದಸ್ಯರು ಮತ್ತು ಸಿಬ್ಬಂದಿಗಳು ವಂಡ್ಸೆ ಗ್ರಾ.ಪಂ.ಗೆ ಭೇಟಿ ನೀಡಿದ್ದರು. ಅಲ್ಲಿನ ಸ್ವಚ್ಛತಾ ಕಾರ್ಯಕ್ರಮವನ್ನು ಇಲ್ಲಿ ಅಳವಡಿಸಿ ಅನುಷ್ಠಾನಕ್ಕೆ ಮುಂದಡಿಯಿಟ್ಟಿದ್ದಾರೆ.
ಸಹಕಾರಿ ಸಂಘ:
ಕಸವನ್ನು ಸಂಪನ್ಮೂಲವಾಗಿಸಿ ಅದರಿಂದ ನಿರಂತರ ಆದಾಯ ಪಡೆಯವುದು ಪಂಚಾಯತ್ ಯೋಜನೆ. ಈಗ ಗ್ರಾ.ಪಂ.ನೇತೃತ್ವದಲ್ಲಿಯೇ ತ್ಯಾಜ್ಯ ವಿಲೇವಾರಿ ಕಾರ್ಯಕರ್ತರ ತಂಡ ಇದರ ಕೆಲಸವನ್ನು ಮಾಡುತ್ತಿದ್ದಾರೆ. ಮುಂದೆ ಇದನ್ನು ಸಹಕಾರಿ ಕಾನೂನು ಪ್ರಕಾರ ನೋಂದಣಿ ಮಾಡಿ ಸಹಕಾರಿ ಸಂಘ ಸ್ಥಾಪಿಸಿ ಪಂಚಾಯತ್ ನೊಂದಿಗೆ ಒಪ್ಪಂದ ಮಾಡಿ ಸಂಘದ ಮೂಲಕ ತ್ಯಾಜ್ಯ ವಿಲೇವಾರಿ ಯೋಜನೆಯನ್ನು ಮುಂದುವರಿಸುವ ಶಾಶ್ವತ ಯೋಜನೆ ರೂಪಿಸಲಾಗುವುದು
ಅರಂತೋಡು ಸ್ವಚ್ಛತಾ ಅಭಿಯಾನದ ಬಗ್ಗೆ “ಸುಳ್ಯನ್ಯೂಸ್.ಕಾಂ“ ಜೊತೆ ಮಾತನಾಡಿದ ಅರಂತೋಡು ಗ್ರಾಪಂ ಅಧ್ಯಕ್ಷೆ ಲೀಲಾವತಿ ಕೊಡೆಂಕೇರಿ, “ಗ್ರಾಮ ಪಂಚಾಯತ್ ಹಮ್ಮಿಕೊಂಡ ಸ್ವಚ್ಛತಾ ಆಂದೋಲನಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ಮತ್ತು ಬೆಂಬಲ ಬಂದಿದೆ. ಇದನ್ನು ಯಶಸ್ವಿಯಾಗಿ ಮುಂದುವರಿಸಿ ಸ್ವಚ್ಛ ಮತ್ತು ಮಾದರಿ ಗ್ರಾಮ ಪಂಚಾಯತ್ ಮಾಡುವ ಕನಸು ಆಡಳಿತ ಮಂಡಳಿಯದ್ದು” ಎಂದು ಹೇಳುತ್ತಾರೆ.
ಪಂಚಾಯತ್ ಉಪಾಧ್ಯಕ್ಷ ಶಿವಾನಂದ ಕುಕ್ಕುಂಬಳ “ಸುಳ್ಯನ್ಯೂಸ್.ಕಾಂ” ಜೊತೆ ಮಾತನಾಡುತ್ತಾ, “ನಮ್ಮ ಅಧಿಕಾರ ಅವಧಿ ಆರಂಭಗೊಂಡಾಗ ಏನಾದರು ವಿಶೇಷವಾದ ಯೋಜನೆಯನ್ನು ಗ್ರಾಮ ಪಂಚಾಯತ್ ನಲ್ಲಿ ಮಾಡಬೇಕೆಂಬ ಕನಸಿತ್ತು. ಈ ಹಿನ್ನಲೆಯಲ್ಲಿ ಸ್ವಚ್ಛ ಗ್ರಾಮದ ಕನಸನ್ನು ಸಾಕಾರಗೊಳಿಸಬೇಕು ಮತ್ತು ತ್ಯಾಜ್ಯವನ್ನು ಸಂಪನ್ಮೂಲವಾಗಿಸಬೇಕೆಂಬ ದೃಷ್ಠಿಯಲ್ಲಿ ಈ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ” ಎಂದು ಹೇಳುತ್ತಾರೆ.