ಆಟಿ ಬಂತು ಆಟಿ .. .. .. ..

July 18, 2019
11:00 AM

 

ಇಂದು ಪ್ರಕೃತಿಯ ವಿಕೋಪ ಆಟಿ ತಿಂಗಳಿಗೇ ಮೀಸಲಾಗಿಲ್ಲ.ಆಷಾಢ ಅಥವಾ ಆಟಿ ತಿಂಗಳು ತುಳುನಾಡಿನ ಜಡಿ ಮಳೆಯ ಕಾಲ. ಈ ತಿಂಗಳು ಶುಭ ಕಾರ್ಯಗಳಿಗೆ ನಿಷಿದ್ಧ. ಆಟಿಡ್ದ್ ಬೊಕ್ಕ ಅರೆಗಾಲ(ಬೇಸಿಗೆ) ಮಾಯಿಡ್ದ್ ಬೊಕ್ಕ ಮರಿಯಾಲ (ಮಳೆಗಾಲ) ಈ ಮಾತು ಈಗ ಈ ತಿಂಗಳಿಗೆ ಅನ್ವಯಿಸುವುದಿಲ್ಲ.

ಹವಾಮಾನ ವೈಪರೀತ್ಯದಿಂದಾಗಿ ರೋಗ ರುಜಿನಗಳ ಕಾಟ ಆಟಿಯಲ್ಲಿ ಅತಿಯಾಗಿತ್ತು. ಆಹಾರ ಧಾನ್ಯಗಳ ಕೊರತೆ ಒಂದೆಡೆಯಾದರೆ ,ಇನ್ನೊಂದೊಡೆ ಪ್ರಕೃತಿಯ ಭಯಾನಕ. ಆಟಿ ತಿಂಗಳಲ್ಲಿ ಮಾರಿ ಕಳೆಯಲು ಆಟಿ ಕಳೆಂಜ ಮನೆ ಮನೆಗೆ ಭೇಟಿ ನೀಡುತ್ತಾನೆ. ಆಟಿ ತಿಂಗಳಲ್ಲಿ ಆಚರಿಸುವ ಆಚರಣೆ, ಆಟ, ಊಟ ಪ್ರತಿಯೊಂದಕ್ಕೂ ಅರ್ಥವಿದೆ. ಆಟಿ ಆಮಾವಾಸ್ಯೆ ದಿನ ಹಾಲೆ ಮರದ ಕೆತ್ತೆಯ ರಸ ಕುಡಿಯುವ ಕ್ರಮ ಈಗಲೂ ಇದೆ . ಈ ಸಂದರ್ಭದಲ್ಲಿ ಸಿಗುವ ಔಷಧೀಯ ಸಸ್ಯಗಳು, ಎಲೆಗಳು ಪೌಷ್ಠಿಕಾಂಶದ ಕೊರತೆಯನ್ನು ನೀಗಿಸುತ್ತದೆ.
ಅಟ್ಟದಲ್ಲಿದ್ದ ಹಲಸಿನ ಬೇಳೆ( ಬೀಜ), ಒಣಗಿಸಿ ಇಟ್ಟ ಹಪ್ಪಳ ಸೆಂಡಿಗೆಗಳು ಕೆಳಗಿಳಿಯುತ್ತದೆ. ಉಪ್ಪು ನೀರಲ್ಲಿ ಹಾಕಿಟ್ಟ ಹಲಸಿನ ಸೊಳೆ ಹಾಗೂ ಮಾವಿನಕಾಯಿ, ಹಾಳಾಗದಂತೆ ಕಾಪಿಟ್ಟ ಹಲಸಿನ ಬೀಜದಿಂದ ಖಾದ್ಯ ಜಿಟಿ ಜಿಟಿ ಮಳೆಗೆ ಹೊಟ್ಟೆಯನ್ನು ಬೆಚ್ಚಗೆ ಮಾಡುತ್ತದೆ. ಅಣಬೆ, ತೊಜಂಕು(ತಗಚೆ) ಸೊಪ್ಪಿನ ಪಲ್ಯ ಮತ್ತು ಪತ್ರೊಡೆ, ಮರಕೆಸುವಿನ ಪತ್ರೊಡೆ, ಹುರುಳಿ ಚಟ್ನಿ, ಉಪ್ಪು ಸೇರಿಸಿ ಬೇಯಿಸಿ ಒಣಗಿಸಿಟ್ಟ ಹಲಸಿನ ಬೀಜ(ಸಾಂತಾಣಿ), ಹಲಸಿನ ಕಾಯಿ ಸೊಂಟೆ, ಮಾಂಬಳ , ಗೆಣಸು, ಹಲಸಿನ ಹಪ್ಪಳ, ಕಣಿಲೆ ಗಸಿ, ಪಲ್ಯ, ಹಲಸಿನ ಹಣ್ಣಿನ ಕಡುಬು, ದೋಸೆ ಮಲೆನಾಡಿನ ಮಳೆಗೆ ಸೊಗಸು ನೀಡುತ್ತದೆ.

ಹಿಂದೆ ಮರ ಕೆಸುವಿಗಾಗಿ ಕಾಡು ಮೇಡು ಅಲೆಯಬೇಕಾಗಿತ್ತು. ಇಂದು ಅಂತಹ ಪರಿಸ್ಥಿತಿ ಇಲ್ಲ. ಈ ತಳಿಗಳನ್ನು ನೆಲದಲ್ಲಿ ಬೆಳೆಸಿ ಮಾರುಕಟ್ಟೆಗೆ ತಲುಪಿಸುತ್ತಾರೆ. ಮಳೆಗಾಲದಲ್ಲಿ ಕಾಣ ಸಿಗುವ ಈ ಮರ ಕೆಸು ಔಷಧೀಯ ಗುಣಗಳನ್ನು ಹೊಂದಿದೆ. ಈ ಕೆಸುವನ್ನು ಬಳಸಿ ಪತ್ರೊಡೆ, ಸಾಂಬಾರ್, ಚಟ್ನಿಗಳನ್ನು ಸವಿಯುವುದರಿಂದ, ಹಸಿವು ಹೆಚ್ಚಾಗುತ್ತದೆ. ಕೆಸುವಿನ ಎಲೆ, ದಂಡಿನಿಂದ ಮಾಡಿದ ಪದಾರ್ಥಗಳು ಹೊಟ್ಟೆಗಂಟು, ಗುಲ್ಮವಾಯು, ಅಜೀರ್ಣಕ್ಕೆ ರಾಮಬಾಣ. ಇದೀಗ ಸುಳ್ಯ ಪೇಟೆಯ ತರಕಾರಿ ಅಂಗಡಿಗಳಲ್ಲಿ ಮರ ಕೆಸುವಿನ ತೋರಣ ನಿಮ್ಮನ್ನು ಸ್ವಾಗತಿಸುತ್ತಿದೆ.

ಮರ ಕೆಸುವಿನ ಪತ್ರೊಡೆ
ಅಕ್ಕಿ, ತೆಂಗಿನಕಾಯಿ, ಬೆಲ್ಲ, ಹುಣಿಸೆಹಣ್ಣು, ಉಪ್ಪು, ಅರಸಿನ(ಕೊತ್ತಂಬರಿ, ಜೀರಿಗೆ , ಒಣಮೆಣಸಿನಕಾಯಿ, ಉದ್ದಿನಬೇಳೆ, ಮೆಂತೆ ಹುರಿದ ಮಸಾಲೆ) ಎಲ್ಲ ಒಟ್ಟಿಗೆ ನುಣ್ಣಗೆ ರುಬ್ಬಿ. ಕೆಸುವಿನ ಎಲೆಯ ಹಿಂಬದಿಗೆ ಹಿಟ್ಟನ್ನು ಹಚ್ಚಿ. ಹೀಗೆ ಒಂದರ ಮೇಲೆ ಒಂದು ಎಲೆ ಇಡುತ್ತಾ ಮಸಾಲೆ ಹಚ್ಚುತ್ತಾ ಆನಂತರ ಇದನ್ನು ಸುರುಳಿ ಸುತ್ತಿ ಹಬೆಯಲ್ಲಿ ಬೇಯಿಸಿ.

 

 

ಅರಸಿನ ಎಲೆ ಕಡುಬು:
ನೆನಸಿದ ಬೆಳ್ತಿಗೆ ಅಕ್ಕಿ ಸ್ವಲ್ಪ ಅವಲಕ್ಕಿಯೊಂದಿಗೆ ನುಣ್ಣಗೆ ರುಬ್ಬಿ. ಅರಸಿನ ಎಲೆಗೆ ಹಚ್ಚಿ ಅದರ ಮೇಲೆ ಬೆಲ್ಲ ಬೆರಸಿದ ತೆಂಗಿನತುರಿಯನ್ನು ಇಟ್ಟು ಮಡಚಿ ಹಬೆಯಲ್ಲಿ ಬೇಯಿಸಿ.

 

 

ತಿಮರೆ ಚಟ್ನಿ :
ಕೊತ್ತಂಬರಿ, ಒಣಮೆಣಸಿನಕಾಯಿಯನ್ನು ಎಣ್ಣೆ ಹಾಕಿ ಹುರಿದು ತಿಮರೆ ಎಲೆಗಳು, ತೆಂಗಿನ ತುರಿ, ಉಪ್ಪು, ಹುಣಿಸೆಹಣ್ಣು ಒಟ್ಟಿಗೆ ತರಿತರಿಯಾಗಿ ರುಬ್ಬಿ, ಚಟ್ನಿ ತಯಾರು.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಎಳೆಅಡಿಕೆ ಮಾತ್ರವಲ್ಲ, ಬಲಿತ ಅಡಿಕೆಯೂ ಒಡೆದು ಬೀಳುತ್ತಿದೆ…! ಕಾರಣ ಏನು?
June 13, 2026
1:49 PM
by: ಮಹೇಶ್ ಪುಚ್ಚಪ್ಪಾಡಿ
ಸುಲಭವಾಗಿ ಮಾಡಿ ರುಚಿಕರ ಹಲಸಿನ ಕಾಯಿ ಚಟ್ನಿ – ಬಿಸಿ ಅನ್ನಕ್ಕೆ ಸೂಪರ್ ಕಾಂಬಿನೇಷನ್!
June 11, 2026
6:47 AM
by: ದಿವ್ಯ ಮಹೇಶ್
ಮಲೆನಾಡಿನ ಸಂಕಷ್ಟವೇ ಅವಕಾಶವಾಗಬಹುದೇ? : ‘ನಿರಪೇಕ್ಷಿತ ಕಾಡು ಕೃಷಿ’ ಹೊಸ ಪರಿಕಲ್ಪನೆ
June 5, 2026
8:20 PM
by: ಪ್ರಬಂಧ ಅಂಬುತೀರ್ಥ
ಬೇಸಿಗೆಯಲ್ಲಿ ನಿಮ್ಮ ಕಿಡ್ನಿಯನ್ನು ಕಾಪಾಡಿ..! ಮೂತ್ರಪಿಂಡದ ಕಲ್ಲು ಸಮಸ್ಯೆ ಏಕೆ ಹೆಚ್ಚುತ್ತಿದೆ?
May 23, 2026
7:12 AM
by: ಡಾ.ಆದಿತ್ಯ ಭಟ್‌, ಚಣಿಲ, BHMS

You cannot copy content of this page - Copyright -The Rural Mirror