ಬಾಲ್ಯದಲ್ಲಿ ಅಪ್ಪ ಎಂದರೆ ನಿಯಮಗಳ ಮನುಷ್ಯ…. ಅಪ್ಪ ಎಂದರೆ ಬೈಯುವವನು.
ಯೌವನಕ್ಕೆ ಕಾಲಿಟ್ಟಾಗ ಅಪ್ಪ ಎಂದರೆ ಅಡ್ಡಗಾಲು ಹಾಕುವ ವ್ಯಕ್ತಿ… ನಮ್ಮನ್ನು ಅರ್ಥ ಮಾಡಿಕೊಳ್ಳದವನು.
ಆದರೆ ಬದುಕು ಮುಂದೆ ಸಾಗಿದಂತೆ ಒಂದು ದಿನ ಗೊತ್ತಾಗುತ್ತದೆ, ಅಪ್ಪ ಎಂದರೆ ಬದುಕನ್ನು ನಮಗಿಂತ ಮೊದಲೇ ಅನುಭವಿಸಿದ ಮನುಷ್ಯ. ಅನುಭವ ಹೊಂದಿದ ಜೀವ.
“ಅಪ್ಪ ಯಾಕೆ ವಿಚಿತ್ರವಾಗಿ ಕಾಣುತ್ತಾನೆ?”ಈ ಪ್ರಶ್ನೆ ಬಹುತೇಕ ಮಗ ಅಥವಾ ಮಗಳ ಮನಸ್ಸಿನಲ್ಲಿ ಒಂದಲ್ಲ ಒಂದು ಹಂತದಲ್ಲಿ ಮೂಡಿರುತ್ತದೆ. “ಹಾಗೆ ಮಾಡಬೇಡ”, “ಹೀಗೆ ಹೋಗಬೇಡ”, “ಇದು ಈಗ ಬೇಡ”, “ಸ್ವಲ್ಪ ಯೋಚಿಸಿ ನಿರ್ಧಾರ ಮಾಡು” ಎನ್ನುವ ಅಪ್ಪನ ಮಾತುಗಳು ಆಗ ಕಿರಿಕಿರಿಯಾಗಿ ಕೇಳಿಸುತ್ತವೆ. ಯಾಕೆ ಇಷ್ಟೊಂದು ತಡೆ? ಯಾಕೆ ಇಷ್ಟೊಂದು ಪ್ರಶ್ನೆ? ಯಾಕೆ, ನನ್ನ ಮೇಲೆ ನಂಬಿಕೆ ಇಲ್ವಾ? ಎನ್ನುವ ಭಾವನೆ ಮನಸ್ಸನ್ನು ಆವರಿಸಿಬಿಡುತ್ತದೆ.
ಆಗ ಕಣ್ಣಿಗೆ ಕಾಣುವ ಸ್ವಾತಂತ್ರ್ಯವೇ ದೊಡ್ಡ ಸತ್ಯ. ಅಪ್ಪನ ಕಣ್ಣಿಗೆ ಅನುಭವವೇ ದೊಡ್ಡ ಸತ್ಯ. ಈ ಎರಡರ ನಡುವೆ ಆಗಾಗ ತಿಕ್ಕಾಟ ನಡೆಯುತ್ತದೆ.
ಚಿಗುರು ಮೀಸೆಯ ವಯಸ್ಸಿನಲ್ಲಿ ಪ್ರತಿಯೊಂದು ಸಲಹೆಯೂ ಸವಾಲಾಗಿ ಕಾಣುತ್ತದೆ. ಅಪ್ಪ “ಹೋಗಬೇಡ” ಎಂದರೆ ಅಲ್ಲಿಗೇ ಹೋಗಬೇಕು ಎನ್ನಿಸುತ್ತದೆ. “ಹೀಗೆ ಮಾಡಬೇಡ” ಎಂದರೆ ಅದನ್ನೇ ಮಾಡಿ ತೋರಿಸಬೇಕು ಎನ್ನುವ ಹಠ ಹುಟ್ಟುತ್ತದೆ. ಅಪ್ಪನ ಮಾತನ್ನು ತಪ್ಪು ಎಂದು ಸಾಬೀತುಪಡಿಸುವುದೇ ಗೆಲುವು ಎನ್ನುವ ಅಹಂಕಾರವೂ ಇರುತ್ತದೆ. ಆದರೆ ಅನುಭವದ ಮುಂದೆ ಅಹಂಕಾರ ಯಾವತ್ತೂ ಹೆಚ್ಚು ಕಾಲ ನಿಲ್ಲುವುದಿಲ್ಲ.
ಜೀವನ ನಿಧಾನವಾಗಿ ತನ್ನ ಪಾಠಗಳನ್ನು ಕಲಿಸುತ್ತಾ ಹೋಗುತ್ತದೆ. ಕೆಲವು ಸೋಲುಗಳು, ಕೆಲವು ಮೋಸಗಳು, ಕೆಲವು ನಷ್ಟಗಳು, ಕೆಲವು ನಿರಾಸೆಗಳ, ಕೆಲವು ಬೆನ್ನ ಹಿಂದಿನ ಘಟನೆಗಳು…. ಇವೆಲ್ಲವೂ ಅಪ್ಪ ಹೇಳಿದ್ದ ಮಾತುಗಳನ್ನೇ ಮತ್ತೆ ನೆನಪಿಗೆ ತರುತ್ತವೆ. ಆಗ ಗೊತ್ತಾಗುತ್ತದೆ, ಅಪ್ಪ ಭವಿಷ್ಯ ಹೇಳಿರಲಿಲ್ಲ, ವಿಚಿತ್ರವಾಗಿ ವರ್ತಿಸಲಿಲ್ಲ, ತಾನು ನಡೆದ ದಾರಿಯ ಮುಳ್ಳುಗಳನ್ನು ಮಾತ್ರ ತೋರಿಸಿದ್ದ ಎಂದು, ಆಗ ತಡವಾಗಿರುತ್ತದೆ.
ಅಪ್ಪನ ಪ್ರೀತಿ ಬಹಳ ವಿಚಿತ್ರ. ಅದು ತಾಯಿಯ ಪ್ರೀತಿಯಂತೆ ಕಣ್ಣೀರು ಸುರಿಸುವುದಿಲ್ಲ. ಅಪ್ಪ ಅನೇಕ ಬಾರಿ ತನ್ನ ನೋವನ್ನು ಒಳಗೇ ನುಂಗಿಕೊಳ್ಳುತ್ತಾನೆ. ಮನೆಯ ಆರ್ಥಿಕ ಹೊರೆ, ಮಕ್ಕಳ ಭವಿಷ್ಯದ ಚಿಂತೆ, ತನ್ನ ಅಪೂರ್ಣ ಕನಸುಗಳು, ಆರೋಗ್ಯದ ಸಮಸ್ಯೆಗಳು, ಈ ನಡುವೆ ನೂರಾರು ಸಲಹೆಗಳು…. ಇವೆಲ್ಲವನ್ನೂ ತನ್ನೊಳಗೇ ಇರಿಸಿ ಬಿಡುತ್ತಾನೆ. ಮಕ್ಕಳ ಮುಂದೆ ಮಾತ್ರ ಗಟ್ಟಿಯಾಗಿ ನಿಲ್ಲುತ್ತಾನೆ. ಅನೇಕ ಬಾರಿ ಅವನು ಸಮಯ ಕೊಟ್ಟಿರುತ್ತಾನೆ. ಅವಕಾಶ ಕೊಟ್ಟಿರುತ್ತಾನೆ. ಹಣ ಕೊಟ್ಟಿರುತ್ತಾನೆ. ತನ್ನ ಆಸೆಗಳನ್ನು ಬಿಟ್ಟಿರುತ್ತಾನೆ.
ಆದರೆ, ಮಗನ ಅಥವಾ ಮಗಳ ಕಣ್ಣಿಗೆ ಕಾಣುವುದು ಒಂದೇ ಒಂದು ವಿಷಯ. ತನ್ನ ಒಂದು ಸಣ್ಣ ಬೇಡಿಕೆಯನ್ನು ಈಡೇರಿಸದೇ ಇದ್ದದ್ದು. ಉಳಿದ ಸಾವಿರ ತ್ಯಾಗಗಳು ಆ ಕ್ಷಣ ಕಾಣುವುದೇ ಇಲ್ಲ. ಹೀಗಾಗಿ ನನ್ನ “ಅಪ್ಪ ಕಠೋರ” ಎನ್ನಿಸುತ್ತಾನೆ, ವಿಚಿತ್ರ ಎನ್ನಿಸುತ್ತಾನೆ. ಕೆಲವೊಮ್ಮೆ ತನ್ನನ್ನು ಅರ್ಥ ಮಾಡಿಕೊಳ್ಳದ ವ್ಯಕ್ತಿಯಂತೆ ಕಾಣುತ್ತಾನೆ. ಇನ್ನೊಬ್ಬನ ಅಪ್ಪ ಎಷ್ಟು ಉದಾರಿ ಅಂತ ಅನಿಸುತ್ತದೆ. ಜೀವನದ ದೊಡ್ಡ ವ್ಯಂಗ್ಯವೇ ಇದು.
ಅಪ್ಪ ಬದುಕಿರುವಾಗ ಅವನ ಕಾಳಜಿಯನ್ನು ನಿಯಂತ್ರಣ ಎಂದು ಅರ್ಥೈಸುತ್ತೇವೆ. ಅವನು ಇಲ್ಲವಾದ ನಂತರ ಅದೇ ಕಾಳಜಿಯ ಬೆಲೆ ಗೊತ್ತಾಗುತ್ತದೆ. ಇನ್ನೊಂದು ತಿರುವು ಬದುಕಿನಲ್ಲಿ ಯಾವಾಗ ಬರುತ್ತದೆ ಗೊತ್ತೇ?, ನಾವೇ ಅಪ್ಪನಾದಾಗ. ಆ ದಿನದಿಂದ ನಮ್ಮ ಬಾಯಲ್ಲೂ ಅದೇ ಮಾತುಗಳು ಹೊರಬರಲು ಆರಂಭಿಸುತ್ತವೆ. “ಹಾಗೆ ಮಾಡಬೇಡ…” “ಸ್ವಲ್ಪ ಜಾಗ್ರತೆ…” “ಅದು ಈಗ ಬೇಡ…” ಆಗ, ನಮ್ಮ ಮಕ್ಕಳು ನಮ್ಮನ್ನು ನೋಡಿ ನಾವು ಅಂದು ಅಪ್ಪನನ್ನು ನೋಡಿದಂತೆಯೇ ಯೋಚಿಸುತ್ತಾರೆ. ಆಗ ಒಂದು ಕ್ಷಣ ಮನಸ್ಸು ನಿಂತು ಬಿಡುತ್ತದೆ. “ಅಯ್ಯೋ… ಇದೇ ಮಾತುಗಳನ್ನು ನನ್ನ ಅಪ್ಪನಿಗೆ ಕೂಡ ಹೇಳುತ್ತಿದ್ದೆನಲ್ಲ!” ಎನ್ನುವ ಅರಿವು ಎದೆಗೆ ಬಡಿದಂತೆ ಆಗುತ್ತದೆ.
ಆಗ ಗೊತ್ತಾಗುವುದು ಅಪ್ಪ ಬದಲಾದ್ದಲ್ಲ, ಬದಲಾಗಿದ್ದು ನಮ್ಮ ದೃಷ್ಟಿ.
ಅಪ್ಪನ ವಿಚಿತ್ರತನ ಎಂದು ಕಂಡದ್ದು ವಾಸ್ತವವಾಗಿ ಅವನ ಅನುಭವ. ಅವನ ಕಠೋರತೆ ಎಂದು ನಾವು ಭಾವಿಸಿದ್ದು ಹೊಣೆಗಾರಿಕೆ. ಅವನ ಮೌನವೆಂದು ಅರ್ಥೈಸಿದ್ದು ತ್ಯಾಗ. ಅವನ ನಿರಾಕರಣೆಯ ಹಿಂದೆ ಇದ್ದದ್ದು ಪ್ರೀತಿಗಿಂತಲೂ ದೊಡ್ಡ ಕಾಳಜಿ. ಬಹಳ ಬಾರಿ ತಂದೆ ತನ್ನ ಮಕ್ಕಳಿಗೆ ಹೀರೋ ಆಗುವುದಿಲ್ಲ. ಆದರೆ ಮಕ್ಕಳು ಕುಸಿಯದಂತೆ ಹಿಡಿದು ನಿಲ್ಲಿಸುವ ಬೆನ್ನೆಲುಬಾಗಿರುತ್ತಾನೆ. ಅವನನ್ನು ಅರ್ಥ ಮಾಡಿಕೊಳ್ಳಲು ಜೀವನವೇ ಸಾಕಾಗದು. ಇದು ಅರ್ಥವಾದಾಗ ಅಪ್ಪನೇ ಹೀರೋ ಆಗಿ ಬಿಡುತ್ತಾನೆ, ಕಾಲ ಮಿಂಚಿರುತ್ತದೆ.
ಬದುಕಿನ ಅತ್ಯಂತ ದೊಡ್ಡ ತಿರುವು ಎಂದರೆ, ಅಪ್ಪನನ್ನು ಅರ್ಥ ಮಾಡಿಕೊಳ್ಳುವುದು ವಯಸ್ಸಿನಿಂದ ಅಲ್ಲ, ಅನುಭವದಿಂದ. ನಾವು ಟೀಕಿಸಿದ್ದ ಅಪ್ಪನ ಜಾಗದಲ್ಲೇ ಒಂದು ದಿನ ನಾವೇ ನಿಂತಾಗ, ಅಪ್ಪ ವಿಚಿತ್ರವಾಗಿ ಕಾಣುವುದಿಲ್ಲ. ಅವನು ಹೇಳಿದ ಪ್ರತಿಯೊಂದು ಮಾತಿನ ಹಿಂದೆಯೂ ಕಾಳಜಿಯೇ ಇತ್ತು, ಅಪ್ಪ ಹೇಳಿದ್ದು ಆಜ್ಞೆಗಳಲ್ಲ, ಬದುಕು ನಮ್ಮನ್ನು ನೋಯಿಸದಿರಲಿ ಎನ್ನುವ ಕಾಳಜಿ ಎಂಬ ಸತ್ಯ ಅರ್ಥವಾಗುತ್ತದೆ. ಅದೇ ಬದುಕಿನ ನಿಜವಾದ ತಿರುವು. ಅದೇ ಬದುಕಿನ ಬುತ್ತಿ, ಅನುಭವದ ಬುತ್ತಿ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಫಾಲೋಮಾಡಲು ಇಲ್ಲಿ ಕ್ಲಿಕ್ ಮಾಡಿ
Father often appears strict and difficult during childhood and youth, but life’s experiences reveal that his discipline is rooted in love, sacrifice, and responsibility. We truly understand our fathers only when we ourselves become parents.

