ಕೇರಳದ ಖ್ಯಾತ ಯೂಟ್ಯೂಬರ್ ಒಬ್ಬರ ಪತ್ನಿ ಯಾರೊಂದಿಗೋ ಹೋಗಿಬಿಟ್ಟಳಂತೆ..! ಕಳೆದ ಎರಡು ದಿನಗಳಿಂದ ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಓಡಾಡಿತು. ಒಬ್ಬರು ಹೇಳಿದರೆ, ಮತ್ತೊಬ್ಬರು ಅದಕ್ಕೆ ಇನ್ನೊಂದಿಷ್ಟು ಸೇರಿಸಿದರು. ನೋಡಿದವರು ಮತ್ತೊಬ್ಬರಿಗೆ ಹೇಳಿದರು. ಹೀಗೆ ಒಂದು ಮನೆಯ ವೈಯಕ್ತಿಕ ಸಂಗತಿ, ಕೆಲವೇ ಗಂಟೆಗಳಲ್ಲಿ ಸಾವಿರಾರು ಜನರ ಕುತೂಹಲದ ವಿಷಯವಾಯಿತು. ಕೊನೆಗೆ ಇನ್ಯಾರೋ ಸ್ಪಷ್ಟನೆ ಹೇಳಿದನಂತೆ..!.
ಇದಕ್ಕೂ ಒಂದು ವಾರದ ಹಿಂದೆ, ತಂದೆಯ ಅಂತ್ಯಸಂಸ್ಕಾರಕ್ಕೆ ಬಾರದ ಮೂವರು ಹೆಣ್ಣುಮಕ್ಕಳ ವಿಚಾರವೂ ದೊಡ್ಡ ಸುದ್ದಿಯಾಗಿತ್ತು. ಯಾರು ಏಕೆ ಬರಲಿಲ್ಲ? ಅವರ ಸಂಬಂಧ ಹೇಗಿತ್ತು? ಅವರ ಕುಟುಂಬದಲ್ಲಿ ಏನಾಯಿತು? ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕುವುದಕ್ಕಿಂತ, “ನಿಮಗೆ ಈ ವಿಷಯ ಗೊತ್ತಾ?” ಎಂದು ಮತ್ತೊಬ್ಬರಿಗೆ ಹೇಳುವುದೇ ದೊಡ್ಡ ಕುತೂಹಲವಾಗಿತ್ತು. ಆ ಮಕ್ಕಳು ಅಪರಾಧಿಗಳಾಗಿ ಬಿಟ್ಟರು..!.
ಆದರೆ, ಇದೇ ಸಮಾಜದ ಮತ್ತೊಂದು ಮುಖವೂ ಇದೆ. ಮದುವೆಯಾದ ಎರಡನೇ ದಿನವೇ ಪತಿಗೆ ಅಪಘಾತವಾಗಿ, ಹಲವು ವರ್ಷಗಳಿಂದ ಹಾಸಿಗೆ ಹಿಡಿದಿದ್ದರೂ ಆತನನ್ನು ಬಿಟ್ಟು ಹೋಗದೆ ಬದುಕನ್ನು ಮುಂದುವರಿಸಿದ ಪತ್ನಿ. ಆಕೆಯ ತ್ಯಾಗ ಸುದ್ದಿಯಾಗಲಿಲ್ಲ.
ತಂದೆ-ತಾಯಿಯನ್ನು ನೋಡಿಕೊಳ್ಳಲು ನಗರದ ದೊಡ್ಡ ಹುದ್ದೆ, ಉತ್ತಮ ಸಂಬಳದ ಕೆಲಸವನ್ನೇ ಬಿಟ್ಟು ಹಳ್ಳಿಗೆ ಮರಳಿದ ಮಗ. ಆತನ ನಿರ್ಧಾರವೂ ದೊಡ್ಡ ಸುದ್ದಿಯಾಗಲಿಲ್ಲ. ಯಾಕೆ?
ಏಕೆಂದರೆ, ನಮಗೆ ಅನೇಕ ಬಾರಿ ಸಮಸ್ಯೆಯೊಳಗಿನ ಪರಿಹಾರಕ್ಕಿಂತ, ಸಮಸ್ಯೆಯೊಳಗಿನ ರೋಚಕತೆ ಇಷ್ಟವಾಗುತ್ತದೆ. ಅದೇ ಸಮಸ್ಯೆ ನಮ್ಮದಾಗಿದ್ದರೆ, “ಮೌನ” ಅಥವಾ “ಅದೇನಿಲ್ಲಪ್ಪ, ಸುಮ್ಮನೆ”. ಇಷ್ಟೇ ವ್ಯತ್ಯಾಸ.
ಪಕ್ಕದ ಮನೆಯ ಬಾಗಿಲು ಮುಚ್ಚಿದ್ದರೆ, ಅದರೊಳಗೆ ಏನಾಗುತ್ತಿದೆ ಎನ್ನುವುದು ತಿಳಿಯಬೇಕು. ಅದೊಂದು ಕುತೂಹಲ. ಮನೆಯೊಳಗಿನ ಜಗಳ, ಸಂಬಂಧಗಳ ಬಿರುಕು, ಗಂಡ-ಹೆಂಡತಿಯ ನಡುವಿನ ಸಮಸ್ಯೆ, ಅಣ್ಣ-ತಮ್ಮಂದಿರ ಕಲಹ, ವಿವಾದ, ಮಕ್ಕಳ ನಡುವಿನ ಅಸಮಾಧಾನ… ಇವೆಲ್ಲವೂ ನಮ್ಮ ಪಾಲಿಗೆ “ವಿಷಯ”. ನಮ್ಮ ಮನೆಯದ್ದು ಮಾತ್ರಾ ನಮಗೆ, “ಸಂಕಟ”.
“ನಿಮಗೆ ಗೊತ್ತಾ…?” ಎನ್ನುವ ಒಂದು ಮಾತು ಸಾಕು. ಅದಾದ ಮೇಲೆ ಕಥೆ ಶುರು…. ಒಬ್ಬರು ಹೇಳುತ್ತಾರೆ. ಮತ್ತೊಬ್ಬರು ಕೇಳುತ್ತಾರೆ. ಮೂರನೆಯವರು ತಮ್ಮದೇ ಒಂದು ಕಾರಣ ಸೇರಿಸುತ್ತಾರೆ. ನಾಲ್ಕನೆಯವರು ಅದನ್ನು ವಿಶ್ಲೇಷಿಸಿ ಇನ್ನೂ ದೊಡ್ಡದಾಗಿ ಹೇಳುತ್ತಾರೆ. ಕೊನೆಗೆ ನಡೆದ ಘಟನೆಗಿಂತ, ಜನರು ಕಟ್ಟಿದ ಕಥೆಯೇ ದೊಡ್ಡ ಸುದ್ದಿಯಾಗಿ ಬಿಡುತ್ತದೆ…!.
ಇದರ ನಡುವೆ ಸಲಹೆಗಳೂ ಬರುತ್ತವೆ. ಆದರೆ ಎಷ್ಟು ಸಲಹೆಗಳು ನಿಜವಾದ ಪರಿಹಾರಕ್ಕಾಗಿ ಬರುತ್ತವೆ? ಎಷ್ಟು ಮಂದಿ, “ಅವರಿಗೆ ಹೇಗೆ ಸಹಾಯ ಮಾಡಬಹುದು?” ಎಂದು ಯೋಚಿಸುತ್ತಾರೆ? ಎಷ್ಟು ಮಂದಿ, “ಈ ಕುಟುಂಬದ ನೋವು ಕಡಿಮೆಯಾಗಲು ನಾನು ಏನು ಮಾಡಬಹುದು?” ಎಂದು ತಮ್ಮನ್ನು ತಾವು ಕೇಳಿಕೊಳ್ಳುತ್ತಾರೆ? ಇದೇ ದೊಡ್ಡ ಪ್ರಶ್ನೆ.
ಬಹುಶಃ ಇಂದಿನ ಸಮಾಜಕ್ಕೆ ಸುದ್ದಿಗಿಂತ ಹೆಚ್ಚು ಬೇಕಾಗಿರುವುದು ಸಂವೇದನೆ. ಕುತೂಹಲಕ್ಕಿಂತ ಹೆಚ್ಚು ಬೇಕಾಗಿರುವುದು ಕಾಳಜಿ. ವಿಮರ್ಶೆಗಿಂತ ಹೆಚ್ಚು ಬೇಕಾಗಿರುವುದು ಪರಿಹಾರ. ಆದರೆ ನಾವು ಅದನ್ನು ಮರೆತಿದ್ದೇವೆ.
ಯಾರದ್ದೋ ಮನೆಯ ಸಮಸ್ಯೆ ನಮಗೆ ಒಂದು ಕಥೆಯಾಗಿರಬಹುದು. ರೋಚಕತೆ ಆಗಿರಬಹುದು. ಆದರೆ ಆ ಮನೆಯವರಿಗೆ ಅದು ಒಂದು ರಾತ್ರಿ ನಿದ್ದೆ ಇಲ್ಲದ ಸಂಕಟವಾಗಿರಬಹುದು. ನಮಗೆ ಅದು ಚರ್ಚೆಯ ವಿಷಯ. ಅವರಿಗೆ ಅದು ಬದುಕಿನ ಪ್ರಶ್ನೆ, ಸವಾಲಿನ ಪ್ರಶ್ನೆಯಾಗಿರಬಹುದು.
ಇದಕ್ಕಾಗಿಯೇ ಒಂದು ಮಾತನ್ನು ನಾವು ಸದಾ ನೆನಪಿಟ್ಟುಕೊಳ್ಳಬೇಕು. “ನಮ್ಮ ಮನೆಯ ಯಾವುದೇ ವಿಷಯ ಜಗತ್ತಿಗೆ ವಿಷಯವಾಗಬಹುದು, ಆದರೆ ನಮಗೆ ಮಾತ್ರ ಅದು ಸಂಕಟ.” ಹೀಗಾಗಿ ನಮ್ಮ ಬದುಕಿನ ಕ್ಲಿಷ್ಟ ಪರಿಸ್ಥಿತಿಗಳನ್ನು ಯಾರ ಬಳಿ ಹಂಚಿಕೊಳ್ಳಬೇಕು ಎಂಬುದೂ ಬಹಳ ಮುಖ್ಯ.
ಎಲ್ಲರಿಗೂ ಹೇಳಿಕೊಳ್ಳುವುದರಿಂದ ಪರಿಹಾರ ಸಿಗುವುದಿಲ್ಲ. ಕೆಲವೊಮ್ಮೆ ಸಮಸ್ಯೆ ಪರಿಹಾರವಾಗುವುದರ ಬದಲು, ಅದಕ್ಕೆ ಇನ್ನೂ ಹತ್ತು ಸಮಸ್ಯೆಗಳು ಸೇರುತ್ತವೆ. ಒಂದು ಮಾತು ಮತ್ತೊಂದು ಮನೆಗೆ ತಲುಪುತ್ತದೆ. ಒಂದು ಅನುಮಾನ ಮತ್ತೊಂದು ಸಂಬಂಧವನ್ನು ಹಾಳು ಮಾಡುತ್ತದೆ. ಒಂದು ತಪ್ಪು ಮಾಹಿತಿ ಸಂಬಂಧದ ಮೇಲೆ ಮತ್ತೆ ಬಿರುಕು ಮೂಡಿಸಬಹುದು. ಹಾಗಾಗಿ ನಮ್ಮ ಸಂಕಟವನ್ನು ಪರಿಹಾರ ಕಂಡುಕೊಳ್ಳಬಲ್ಲವರೊಂದಿಗೆ ಮಾತ್ರ ಹಂಚಿಕೊಳ್ಳಬೇಕು. ಅದು ಕುಟುಂಬದ ಹಿರಿಯರಾಗಿರಬಹುದು. ನಮ್ಮನ್ನು ನಿಜವಾಗಿ ಅರ್ಥಮಾಡಿಕೊಳ್ಳುವ ಸ್ನೇಹಿತರಾಗಿರಬಹುದು. ಅಗತ್ಯವಿದ್ದರೆ ತಜ್ಞರಾಗಿರಬಹುದು.
ಎಲ್ಲರಿಗೂ ತನ್ನ ಸಮಸ್ಯೆ ಹೇಳಿಕೊಳ್ಳುವುದು ಮನಸ್ಸನ್ನು ಹಗುರಗೊಳಿಸುವುದಿಲ್ಲ; ಕೆಲವೊಮ್ಮೆ ಸಮಸ್ಯೆಯ ಭಾರವನ್ನು ಇನ್ನಷ್ಟು ಹೆಚ್ಚಿಸುತ್ತದೆ. ನಮ್ಮ ಸಮಸ್ಯೆಗಳಿಗೆ ನಾವು ಹೊಣೆಗಾರರು. ನಮ್ಮ ಮನೆಯ ಸಮಸ್ಯೆಗಳನ್ನು ಪರಿಹರಿಸುವ ಮೊದಲ ಜವಾಬ್ದಾರಿಯೂ ನಮ್ಮದೇ. ಅದಕ್ಕೆ ಕೆಲವೊಮ್ಮೆ ದೊಡ್ಡ ಜ್ಞಾನ ಬೇಕಾಗಿಲ್ಲ. ಸ್ವಲ್ಪ ಸಹನೆ ಬೇಕು. ಸ್ವಲ್ಪ ತ್ಯಾಗ ಬೇಕು. ಇನ್ನಷ್ಟು ಪ್ರಬುದ್ಧತೆ ಬೇಕು. ಅಷ್ಟೇ.
ಎಲ್ಲಾ ಕಡೆ “ನಾನು ಗೆಲ್ಲಬೇಕು” ಎನ್ನುವುದಕ್ಕಿಂತ, “ನಮ್ಮ ಮನೆ ಗೆಲ್ಲಬೇಕು” ಎನ್ನುವ ಮನಸ್ಸು ಬಂದರೆ ಸಾಕು. ಗಂಡ-ಹೆಂಡತಿಯ ನಡುವೆ ಸಮಸ್ಯೆ ಬಂದಾಗ, ಯಾರು ತಪ್ಪು ಎಂಬುದನ್ನು ಸಾಬೀತುಪಡಿಸುವುದಕ್ಕಿಂತ ಸಂಬಂಧವನ್ನು ಹೇಗೆ ಉಳಿಸಿಕೊಳ್ಳುವುದು ಎಂಬುದು ಮುಖ್ಯವಾಗುತ್ತದೆ. ಸ್ವಾರ್ಥ ದೂರವಾಗುತ್ತದೆ.
ತಂದೆ-ತಾಯಿಯೊಂದಿಗೆ ಭಿನ್ನಾಭಿಪ್ರಾಯ ಬಂದಾಗ, ಹಳೆಯ ಘಟನೆ ತೆರೆದು ನೋಡುವುದಕ್ಕಿಂತ, ಅವರೊಂದಿಗೆ ಉಳಿದಿರುವ ಸಮಯವನ್ನು ನೆನಪಿಸಿಕೊಳ್ಳುವುದು ಮುಖ್ಯವಾಗಬಹುದು. ಅಣ್ಣ-ತಮ್ಮಂದಿರ ನಡುವೆ ಜಗಳ ಬಂದಾಗ, ಸಂಬಂಧದ ಬೆಲೆ ದೊಡ್ಡದು ಎನ್ನುವುದನ್ನು ಅರಿಯಬೇಕಾಗಬಹುದು. ಮಕ್ಕಳೊಂದಿಗೆ ಮಾತನಾಡುವಾಗ, “ನಾನು ಹಿರಿಯ” ಎನ್ನುವುದಕ್ಕಿಂತ “ ನಾನು ಅವರ ಮಾತನ್ನು ಒಮ್ಮೆ ಕೇಳುತ್ತೇನೆ” ಎನ್ನುವ ಪ್ರಬುದ್ಧತೆ ಬೇಕಾಗಬಹುದು. ಇದಕ್ಕೆ ಮನಸ್ಸು ತೆರೆಯಬೇಕು.
ಬದುಕಿನಲ್ಲಿ ಎಲ್ಲ ಸಮಸ್ಯೆಗಳಿಗೂ ಹೊರಗಿನ ಯಾರೂ ಬೇಕಾಗುವುದಿಲ್ಲ. ಕೆಲವು ಸಮಸ್ಯೆಗಳಿಗೆ ಮನೆಯೊಳಗಿನ ಒಂದು ಕ್ಷಮೆ, ಒಂದು ಮಾತು, ಒಂದು Sorry, ಒಂದು ಹೆಜ್ಜೆ ಹಿಂದೆ ಸರಿಯುವ ಮನಸ್ಸು ಸಾಕಾಗುತ್ತದೆ. ಮತ್ತೆ ಕೆದಕದೇ ಮುಗಿದರೆ ಅದಲ್ಲಿಗೇ ಮುಗಿಯಿತು.
ಇಂದು ನಾವು ಮತ್ತೊಬ್ಬರ ಮನೆಯ ಸುದ್ದಿಯನ್ನು ತಿಳಿದುಕೊಳ್ಳಲು ಬಹಳ ಉತ್ಸುಕರಾಗಿದ್ದೇವೆ. ಆದರೆ ಒಮ್ಮೆ ನಮ್ಮ ಮನೆಯೊಳಗೆ ತಿರುಗಿ ನೋಡೋಣ. ನಮ್ಮ ಮನೆಯಲ್ಲೇ ಯಾರಾದರೂ ಮೌನವಾಗಿದ್ದಾರೆಯೇ? ಯಾರಾದರೂ ನಮ್ಮ ಮಾತಿಗಾಗಿ ಕಾಯುತ್ತಿದ್ದಾರೆಯೇ? ಯಾರಾದರೂ ನಮ್ಮಿಂದ ಕ್ಷಮೆ ನಿರೀಕ್ಷಿಸುತ್ತಿದ್ದಾರೆಯೇ? ನಮ್ಮಿಂದ ಒಂದು ಕರೆ ಬಂದರೆ ಸಾಕು ಎಂದು ಕಾಯುತ್ತಿರುವವರಿದ್ದಾರೆಯೇ? ಅದನ್ನು ಗಮನಿಸುವುದು ಹೆಚ್ಚು ಮುಖ್ಯ. ಜಗತ್ತನ್ನು ಬದಲಾಯಿಸುವ ಮೊದಲು ಒಂದು ಮನೆಯ ವಾತಾವರಣವನ್ನು ಬದಲಾಯಿಸುವುದೇ ದೊಡ್ಡ ಕೆಲಸ.
ನಾವು ಪ್ರತಿದಿನ ಬೇರೆ ಮನೆಯ ಹಂಚಿಕೊಳ್ಳುವ “ಬ್ರೇಕಿಂಗ್ ನ್ಯೂಸ್”ಗಿಂತ, ಯಾರೋ ಒಬ್ಬರ ಬದುಕಿನಲ್ಲಿ ನಾವು ಉಂಟುಮಾಡುವ ಒಂದು ಸಣ್ಣ ಬದಲಾವಣೆ ಹೆಚ್ಚು ಅರ್ಥಪೂರ್ಣ. ಪಕ್ಕದ ಮನೆಯ ಸಮಸ್ಯೆಯನ್ನು ಜಗತ್ತಿಗೆ ಹೇಳುವುದರಿಂದ ನಾವು ದೊಡ್ಡವರಾಗುವುದಿಲ್ಲ. ಆ ಸಮಸ್ಯೆಯನ್ನು ಯಾರಿಗೂ ಹೇಳದೆ, ಸಾಧ್ಯವಾದರೆ ಪರಿಹಾರಕ್ಕೆ ಒಂದು ಕೈ ಚಾಚುವುದರಿಂದ ನಾವು ಮನುಷ್ಯರಾಗುತ್ತೇವೆ. ಇದು ತಿಳಿಯುವ ಹೊತ್ತಿಗೆ ನಮ್ಮ ಬದುಕಿನ ನಿಜವಾದ ತಿರುವು ಆರಂಭವಾಗುತ್ತದೆ.
ಈಗಾಗಲೇ ಸಾಕಷ್ಟು ಇಶ್ಯೂಗಳು ಇರುವ ಜಗತ್ತಿನಲ್ಲಿ, ನಮ್ಮ ಮನೆಯದ್ದೋ, ಪಕ್ಕದ ಮನೆಯದ್ದೋ ಇನ್ನಷ್ಟು “ಇಶ್ಯೂ”ಗಳು ಜಗತ್ತಿಗೆ ಬೇಕಾಗಿಲ್ಲ. ಜಗತ್ತಿಗೆ ಪರಿಹಾರ ಹುಡುಕುವ ಮನಸ್ಸುಗಳು ಬೇಕು. ಅದು ಆರಂಭವಾಗಲಿ.
ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಫಾಲೋಮಾಡಲು ಇಲ್ಲಿ ಕ್ಲಿಕ್ ಮಾಡಿ
A family’s private pain may be an interesting topic for outsiders, but for the people involved, it is a deeply personal crisis that needs understanding and solutions. Real maturity lies not in spreading someone’s problem, but in helping them find a way forward with patience, sacrifice, empathy and wisdom. Instead of asking “Do you know what happened?”, society needs more people asking, “How can I help?”

