ಕೆಟ್ಟುಹೋದ ಪರಿವರ್ತಕ ಬದಲಿಸಲು ಪರಪ್ಪು ಪ್ರದೇಶದ ಬಳಕೆದಾರರಿಂದ ಆಗ್ರಹ

Advertisement

ಕಡಬ: ಕಳೆದ ಕೆಲವು ಸಮಯದಿಂದ ಕಡಬದ ಪರಪ್ಪು ಪ್ರದೇಶದಲ್ಲಿನ ವಿದ್ಯುತ್ ಪರಿವರ್ತಕ ಕೆಟ್ಟು ಹೋಗಿ ನಿರಂತರವಾಗಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ ಕಡಬ ಮೆಸ್ಕಾಂ ಉಪ ವಿಭಾಗದ ಕಚೇರಿಗೆ ತೆರಳಿದ ಬಳಕೆದಾರರು ಸಮಸ್ಯೆ ಬಗೆಹರಿಸುವಂತೆ ಅಧಿಕಾರಿಗಳನ್ನು ಆಗ್ರಹಿಸಿದರು.

Advertisement

ಬಳಕೆದಾರರ ನಿಯೋಗದ ನೇತೃತ್ವ ವಹಿಸಿದ್ದ ಸ್ಥಳೀಯ ಮುಂದಾಳು ವೇಣುಗೋಪಾಲ ರೈ ಕೊಲ್ಲಡ್ಕ ಅವರು ಕಡಬ ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸಜಿಕುಮಾರ್ ಅವರಿಗೆ ಮನವಿ ಸಲ್ಲಿಸಿ ಮಾತನಾಡಿ ವಿದ್ಯುತ್ ಸಮಸ್ಯೆಯಿಂದಾಗಿ ನಮ್ಮ ಪರಿಸರದಲ್ಲಿ ಅಡಿಕೆ ತೋಟಗಳು ಹಾಗೂ ಇತರ ಕೃಷಿಗಳು ನೀರಿಲ್ಲದೇ ಕರಟಿ ಹೋಗುತ್ತಿವೆ. ನೀರಾವರಿ ಪಂಪ್‍ಗಳು ಚಾಲೂ ಆಗುತ್ತಿಲ್ಲ. ಮೊದಲೇ ಧಾರಣೆ ಕುಸಿತ, ಕಾರ್ಮಿಕರ ಸಮಸ್ಯೆಯಿಂದಾಗಿ ಕಂಗೆಟ್ಟಿರುವ ಕೃಷಿಕರು ವಿದ್ಯುತ್ ಸಮಸ್ಯೆಯ ಹೊಡೆತಕ್ಕೆ ಬಸವಳಿದು ಹೋಗಿದ್ದಾರೆ. ಪರಪ್ಪು, ಕೊಲ್ಲಡ್ಕ, ಕೋಡಿ, ಕಜೆಮಾರು, ಪಲ್ಲತ್ತಾರು ಪ್ರದೇಶಕ್ಕೆ ವಿದ್ಯುತ್ ಪೂರೈಸುವ ಪರಿವರ್ತಕ ಕೆಟ್ಟು ಹೋಗಿರುವ ಕುರಿತು ಮೆಸ್ಕಾಂ ಗೆ ದೂರು ನೀಡಿ 15 ದಿನ ಕಳೆದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಸ್ಥಳೀಯ ಸುಮಾರು 36 ಮನೆಯವರು ಕುಡಿಯಲೂ ನೀರಿಲ್ಲದೆ ಪರದಾಡುತ್ತಿದ್ದಾರೆ ಎಂದು ದೂರಿದರು. ಕೂಡಲೇ ಹೊಸ ಪರಿವರ್ತಕ ಅಳವಡಿಸಲು ಕ್ರಮ ಕೈಗೊಳ್ಳದೇ ಇದ್ದಲ್ಲಿ ಊರಿನ ಎಲ್ಲಾ ವಿದ್ಯುತ್ ಬಳೆಕೆದಾರರನ್ನು ಸೇರಿಸಿಕೊಂಡು ಕಡಬ ಮೆಸ್ಕಾಂ ಕಚೇರಿ ಮುಂದೆ ಧರಣಿ ನಡೆಸುವುದಾಗಿ ಅವರು ಎಚ್ಚರಿಸಿದರು.
ಕೃಷಿಕ ವಾಸುದೇವ ಗೌಡ ಕೋಡಿ ಅವರು ಮಾತನಾಡಿ ನಾವು ಹಲವು ವರ್ಷ ಬೆವರು ಸುರಿಸಿ ಮಾಡಿದ ಕೃಷಿಗೆ ನೀರಿಲ್ಲದೆ ನಮ್ಮ ಕಣ್ಣೆದುರೇ ಕರಟಿ ಹೋಗುತ್ತಿದೆ. ಜನರಿಗೆ ಕುಡಿಯಲೂ ನೀರಿಲ್ಲದಂತಾಗಿದೆ ಎಂದು ಆಕ್ರೋಶವ್ಯಕ್ತಪಡಿಸಿದರು. ಗ್ರಾ.ಪಂ.ಸದಸ್ಯ ಹರ್ಷ ಕೋಡಿ, ಸ್ಥಳೀಯ ಪ್ರಮುಖರಾದ ಜಯರಾಮ ಗೌಡ ಅರ್ತಿಲ, ಮೋಹನ ಗೌಡ ಗೋಡಾಲ್, ಗಿರಿಧರ ರೈ ಪಜಕಳ, ಪುರಂದರ ರೈ ಪಿಜಕಳ, ಉಮೇಶ್ ನಾಯ್ಕ, ಪ್ರಸಾದ ಗೌಡ ಅಲುಂಗೂರು, ಯತೀಂದ್ರ ಗೌಡ ಗೋಡಾಲ್ ಮುಂತಾದವರು ನಿಯೋಗದಲ್ಲಿದ್ದರು.
ಮನವಿಗೆ ಪ್ರತಿಕ್ರಿಯಿಸಿ ಮಾತನಾಡಿದ ಕಡಬ ಮೆಸ್ಕಾಂ ಎಇಇ ಸಜಿಕುಮಾರ್ ಅವರು ಸದ್ಯಕ್ಕೆ ತಾತ್ಕಾಲಿಕ ನೆಲೆಯಲ್ಲಿ 3 ಫೇಸ್ ವಿದ್ಯುತ್ ನೀಡಲು ವ್ಯವಸ್ಥೆ ಕಲ್ಪಿಸಿ 2 ದಿನಗಳೊಳಗೆ ಹೆಚ್ಚು ಸಾಮರ್ಥ್ಯದ ಪರಿವರ್ತಕ ಅಳವಡಿಸಿ ಸಮಸ್ಯೆ ಬಗೆಹರಿಸಿಕೊಡುವುದಾಗಿ ಭರವಸೆ ನೀಡಿದರು.

Advertisement
Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement

Be the first to comment on "ಕೆಟ್ಟುಹೋದ ಪರಿವರ್ತಕ ಬದಲಿಸಲು ಪರಪ್ಪು ಪ್ರದೇಶದ ಬಳಕೆದಾರರಿಂದ ಆಗ್ರಹ"

Leave a comment

Your email address will not be published.


*