ಸವಣೂರು: ಈ ಸರಕಾರಿ ಶಾಲೆಯಲ್ಲಿ ಜೀವಂತಿಕೆ ಇದೆ. ಒಂದಿಲ್ಲೊಂದು ವಿನೂತನ ಪ್ರಯೋಗ ನಡೆಸಿ ಶಾಲೆಯ ಮಕ್ಕಳನ್ನು ಕ್ರಿಯೇಟಿವ್ ಮಾಡುತ್ತಾರೆ. ಸದಾ ಚಟುವಟಿಕೆಯಲ್ಲಿ ಇರುವಂತೆ ಮಾಡುತ್ತಾರೆ. ಈ ಬಾರಿ ಪುಸ್ತಕ ಜೋಳಿಗೆ ತುಂಬುವ ಮೂಲಕ ಶಾಲೆ ಪುನರಾರಂಭ ಮಾಡುತ್ತಿದ್ದಾರೆ. ಮಕ್ಕಳಿಗೆ ಓದುವ ರುಚಿ ಹತ್ತಿಸುತ್ತಿದ್ದಾರೆ. ಇದು ಸ.ಹಿ.ಪ್ರಾ.ಶಾಲೆ ಪುಣ್ಚಪ್ಪಾಡಿ.
ಪುತ್ತೂರು ತಾಲೂಕಿನ ಸುಳ್ಯ ವಿಧಾನಸಭಾ ಕ್ಷೇತ್ರದ ಗ್ರಾಮೀಣ ಭಾಗದ ಶಾಲೆ ಇದು. ಎಲ್ಲಾ ಜನಪ್ರತಿನಿಧಿಗಳೂ, ಅಧಿಕಾರಿಗಳು, ಶಿಕ್ಷಣ ಪ್ರೇಮಿಗಳು ಈ ಶಾಲೆಯನ್ನು ಗಮನಿಸುತ್ತಲೇ ಇರಬೇಕು. ಒಂದು ಸರಕಾರಿ ಶಾಲೆಯನ್ನು ಹೇಗೆ ಲೈವ್ ಆಗಿ ಇಡಬಹುದು ಹಾಗೂ ಮಕ್ಕಳನ್ನು ಹೇಗೆ ಕ್ರಿಯೇಟಿವ್ ಆಗಿ ಬೆಳೆಸಬಹುದು ಎಂಬುದಕ್ಕೆ ಈ ಶಾಲೆ ಮಾದರಿ.
ಕಳೆದ ಮೂರು ವರ್ಷಗಳಿಂದ ಅಕ್ಷರ ರಥ, ಕಲಿಕಾ ಪಲ್ಲಕ್ಕಿ, ಕಲಿಕಾ ಮಂಟಪ ಹೀಗೆ ವಿಶಿಷ್ಟವಾಗಿ ಪ್ರಾರಂಭೋತ್ಸವವನ್ನು ಆಚರಿಸಿಕೊಳ್ಳುತ್ತಿರುವ ಪುಣ್ಚಪ್ಪಾಡಿ ಶಾಲೆಯು ಈ ವರ್ಷ ವಿನೂತನವಾಗಿ ಪುಸ್ತಕ ಜೋಳಿಗೆಯಾಗಿ ಆಚರಿಸಲು ಅಣಿಯಾಗಿದೆ. ನೂತನ ಶೈಕ್ಷಣಿಕ ವರ್ಷವನ್ನು ಬರಮಾಡಿಕೊಳ್ಳುತ್ತಾ, ಶಾಲೆಗೆ ದಾಖಲಾಗುವ ಮಕ್ಕಳು ಪುಸ್ತಕ ಜೋಳಿಗೆಗೆ ಪುಸ್ತಕವನ್ನು ತುಂಬಿ ದಾಖಲಾತಿ ಹೊಂದಲಿದ್ದಾರೆ. ಶಾಲೆಯ ಪೋಷಕರೂ ಪುಸ್ತಕ ಜೋಳಿಗೆಯ ತುಂಬಲಿದ್ದಾರೆ. ಪುಸ್ತಕ ಜೋಳಿಗೆಯನ್ನು ಶಾಲೆಯಂಗಳದಲ್ಲಿ ಮಾಡುತ್ತಾರೆ. ನಾಳೆ ಹೊಸದಾಗಿ ದಾಖಲಾಗುವ 1 ನೇ ತರಗತಿಯ ಎಲ್ಲಾ ಮಕ್ಕಳು ಶಾಲಾ ಗ್ರಂಥಾಲಯಕ್ಕೆ ಬಳಸುವಂತಹ ಪುಸ್ತಕಗಳನ್ನು ಮನೆಯಿಂದಲೇ ತಂದು ಜೋಳಿಗೆಯನ್ನು ತುಂಬುತ್ತಾರೆ.
ಪುಸ್ತಕ ಜೋಳಿಗೆಯ ಮೂಲಕ ಶಾಲಾ ಗ್ರಂಥ ಭಂಡಾರಕ್ಕೆ ಪುಸ್ತಕದಾನ ನೀಡುವ ಪರಿಕಲ್ಪನೆಗೆ ಉತ್ತಮ ಬೆಂಬಲ ವ್ಯಕ್ತವಾಗಿದೆ. ಪುತ್ತೂರು ಕರ್ನಾಟಕ ಸಂಘದ ಅಧ್ಯಕ್ಷ ಹಿರಿಯ ಸಾಹಿತಿ ಬಿ. ಪುರಂದರ ಭಟ್ , ಅಂಕಣಕಾರರು, ಹಿರಿಯ ಸಾಹಿತಿ ಪ್ರೊ.ವಿ.ಬಿ.ಅರ್ತಿಕಜೆ , ಪ್ರಕಾಶ್ ಕೊಡಂಕಿರಿ, ಸಾಮಾಜಿಕ ಕಾರ್ಯಕರ್ತ ಲೋಕೇಶ್ ಗೌಡ ಅಲುಂಬುಡ ಹಾಗೂ ಇನ್ನೂ ಹಲವಾರು ಮಂದಿ ಪುಸ್ತಕಗಳನ್ನು ನೀಡಿದ್ದಾರೆ.
ಈ ಪುಸ್ತಕಗಳನ್ನು ಮಕ್ಕಳಿಗೆ ಹಂತ ಹಂತವಾಗಿ ಓದಿಸುವುದು ಹಾಗೂ ಶಾಲಾ ಗ್ರಂಥಾಲಯವನ್ನು ಜೋಪಾನವಾಗಿರಿಸಿ ಹಿರಿಯ ಮಕ್ಕಳಿಂದ ಓದಿಸುವುದು ಸೇರಿದಂತೆ ಮಕ್ಕಳಿಗೆ ಪುಸ್ತಕದ ಬಗ್ಗೆ ಪ್ರೀತಿ ಮೂಡಿಸುವ ಯೋಜನೆ ಈ ಶಾಲೆಯದ್ದಾಗಿದೆ.
ಅಂದ ಹಾಗೆ ಈ ಶಾಲೆಗೆ ಪುಸ್ತಕ ನೀಡಿ ಪುಸ್ತಕ ಜೋಳಿಗೆಯನ್ನು ನೀವೂ ತುಂಬಬಹುದು. ನಿಮ್ಮಲ್ಲೊಂದು ಒಳ್ಳೆಯ ಪುಸ್ತಕ ಇದ್ದರೆ ನೀಡಬಹುದು.