ಸುಳ್ಯ: ಸಂಸದ ನಳಿನ್‍ಕುಮಾರ್ ಕಟೀಲ್ ಅವರು ಆದರ್ಶ ಗ್ರಾಮವಾಗಿ ಆಯ್ಕೆ ಮಾಡಿದ ಬಳ್ಪದಲ್ಲಿ ಕಳೆದ ನಾಲ್ಕು ವರ್ಷದಲ್ಲಿ ಸುಮಾರು 10 ಕೋಟಿಗೂ ಹೆಚ್ಚು ಮೊತ್ತದ ಅಭಿವೃದ್ಧಿ ಕೆಲಸಗಳು ನಡೆದಿದೆ. ಬಳ್ಪದಲ್ಲಿ ಅಭಿವೃದ್ಧಿ ನಡೆದಿಲ್ಲ ಎಂಬುದು ರಾಜಕೀಯ ಪ್ರೇರಿತ ಅಪಪ್ರಚಾರ ಎಂದು ಸುಳ್ಯ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ಹೇಳಿದ್ದಾರೆ.
ಆದರ್ಶ ಗ್ರಾಮವಾಗಿ ಅಯ್ಕೆಯಾದ ಮೇಲೆ ಬೇರೆ ಮೂಲಗಳಿಂದ ಬಳ್ಪಕ್ಕೆ ಅನುದಾನಗಳು ಹರಿದು ಬಂದಿದೆ. ಹಲವು ರಸ್ತೆಗಳು ಅಭಿವೃದ್ಧಿಯಾಗಿದೆ. ಕೆಲವೊಂದು ಸಮಸ್ಯೆಗಳು ಇರಬಹುದು, ಒಂದೊಂದು ಘಟನೆಯನ್ನು ಮುಂದಿರಿಸಿ ಇಲ್ಲಿ ಅಭಿವೃದ್ಧಿಯೇ ನಡೆದಿಲ್ಲ ಎಂಬ ಅಪಪ್ರಚಾರ ಸರಿಯಲ್ಲ. ಗ್ರಾಮದಲ್ಲಿ ಇನ್ನು ಅಭಿವೃದ್ಧಿಗೆ ಬಾಕಿ ಉಳಿದಿರುವ ಎಲ್ಲಾ ರಸ್ತೆಗಳನ್ನು ಮುಂದಿನ ದಿನಗಳಲ್ಲಿ ಅಭಿವೃದ್ಧಿಪಡಿಸಲಾಗುವುದು. ಇದಕ್ಕಾಗಿ ಕ್ರಿಯಾ ಯೋಜನೆ ತಯಾರಿಸಲಾಗಿದೆ. ಗ್ರಾಮದಲ್ಲಿ ಶಾಲೆ, ಅಂಗನವಾಡಿ, ರಸ್ತೆ , ಬ್ಯಾಂಕಿಂಗ್ ವ್ಯವಸ್ಥೆ, ಜನರಿಗೆ ವಿವಿಧ ಮಾಹಿತಿ ಶಿಬಿರಗಳು, ಹೈನುಗಾರಿಕೆಗೆ ಆದ್ಯತೆ, ಹೊಗೆರಹಿತ ಮನೆ ಕಡೆಗೆ ಆದ್ಯತೆ ಸೇರಿದಂತೆ ಹಲವಾರು ಅಭಿವೃದ್ಧಿ ಕೆಲಸಗಳು ನಡೆದಿದೆ. ಇತಿಹಾಸ ಪ್ರಸಿದ್ಧ ಬೋಗಾಯನ ಕೆರೆ ಅಭಿವೃದ್ಧಿಗೂ 1.8 ಕೋಟಿ ರೂ ಮಂಜೂರಾಗಿದೆ. ಅಭಿವೃದ್ಧಿ ಇಲ್ಲಿ ನಿರಂತರವಾಗಿ ನಡೆಯಲಿದೆ ಎಂದು ವೆಂಕಟ್ ವಳಲಂಬೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.