ಸುಳ್ಯ: ಥೊರಾಸಿಕ್ ಸ್ಕೋಲಿಯೋಸಿಸ್ ರೋಗದಿಂದ 89 ಡಿಗ್ರಿಯಷ್ಟು ಬಾಗಿದ್ದ ಸುಳ್ಯ ತಾಲೂಕು ದೇವಚಳ್ಳ ಗ್ರಾಮದ ತಳೂರು ಮೆತ್ತಡ್ಕದ ಕಡುಬಡ ಕುಟುಂಬದ 10 ವರ್ಷ ಬಾಲಕಿ ಅಮೃತಾ ಯಶಸ್ವಿ ಬಳಿಕ ಆಸ್ಪತ್ರೆಯಿಂದ ಮನೆಗೆ ಹೆಜ್ಜೆ ಇರಿಸಿದ್ದಾಳೆ.
ಊಟಕ್ಕೂ ಪರದಾಡಬೇಕಾದ ಸ್ಥಿತಿಯಲ್ಲಿದ್ದ ಕುಟುಂಬದ ಬಾಲಕಿಯ ಬದುಕಿನಲ್ಲಿ ಕೋಟೆ ಫೌಂಡೇಷನ್ ಜೀವನದ ಆಸೆ ಚಿಗುರೊಡೆಸಿದೆ. ಬೆನ್ನುಹುರಿ ಮೂಳೆ ತಜ್ಞ ಡಾ.ಈಶ್ವರ್ ಕೀರ್ತಿ ಹಾಗು ಮಂಗಳಾ ನರ್ಸಿಂಗ್ ಹೋಮ್‍ನ ಡಾ.ಗಣಪತಿ ಶುಲ್ಕ ರಹಿತವಾಗಿ ಯಶಸ್ವಿ ಚಿಕಿತ್ಸೆ ನೀಡಿದ್ದಾರೆ.
ಥೊರಾಸಿಕ್ ಸ್ಕೋಲಿಯೋಸಿಸ್ ಎಂದರೆ ಶಕ್ತಿ ಇಲ್ಲದೆ ಬೆನ್ನು ಬಾಗುವ ರೋಗ. ಮೆತ್ತಡ್ಕ ಸತೀಶ್ ನಾಯ್ಕ ಮತ್ತು ಗಾಯತ್ರಿ ನಾಯ್ಕ ದಂಪತಿ ಮಗಳಾದ ಅಮೃತಾಳಿಗೆ ಕೆಲವು ಸಮಯದ ಹಿಂದೆ ರೋಗ ಕಾಣಿಸಿಕೊಂಡಿತು. ಬೆನ್ನು ನೋವು ಆರಂಭವಾಗಿ ಕ್ರಮೇಣ ಬೆನ್ನು ಬಾಗಲು ಆರಂಭಿಸಿತು. ಈ ಚಿಕಿತ್ಸೆಗೆ ಸುಮಾರು 6 ಲಕ್ಷಕ್ಕೂ ಅಧಿಕ ಖರ್ಚನ್ನು ಹಲವು ಆಸ್ಪತ್ರೆಗಳು ಅಂದಾಜಿಸಿದ್ದವು.
ಮಂಗಳಾ ಆಸ್ಪತ್ರೆಯಲ್ಲಿ ಚಿಕಿತ್ಸೆ:ಊರಿನ ಯುವಕರು ಮತ್ತು ಕೋಟೆ ಫೌಂಡೇಷನ್‍ನವರು ಅಮೃತಾಳಿಗೆ ಚಿಕಿತ್ಸೆ ಕೊಡಿಸಲು ಮುಂದೆ ಬಂದಿದ್ದಾರೆ. ಮಂಗಳೂರಿನ ಬೆನ್ನುಹುರಿ ತಜ್ಞ ಡಾ.ಈಶ್ವರ ಕೀರ್ತಿ ಚಿಕಿತ್ಸೆ ನೀಡಲು ಸಮ್ಮತಿಸಿದ್ದಾರೆ. ಮಂಗಳಾ ನರ್ಸಿಂಗ್ ಹೋಮ್‍ನ ವೈದ್ಯಕೀಯ ನಿರ್ದೇಶಕ ಹಾಗೂ ಅರಿವಳಿಗೆ ತಜ್ಞ ಡಾ.ಗಣಪತಿ ತಮ್ಮ ಆಸ್ಪತ್ರೆಯಲ್ಲಿ ಔಷಧಿ ಹೊರತುಪಡಿಸಿ ಇತರ ಖರ್ಚನ್ನು ಕಡಿತಗೊಳಿಸಿದ್ದಾರೆ. ಇದೇ ತಿಂಗಳ 6 ರಂದು ಸತತ 6 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ಮೂಲಕ ಬೆನ್ನುಹುರಿಯನ್ನು ಸರಿಪಡಿಸಲಾಗಿದೆ.
ಬೆನ್ನು ಹುರಿಯ ಬಳಿ ಇರಿಸಬೇಕಾಗಿದ್ದ ಡೆಪ್ಯು ಇಂಪ್ಲಾಂಟ್ ಅನ್ನು ಆಮದು ಮಾಡಲಾಗಿದ್ದು, 1.5 ಲಕ್ಷ ರೂಪಾಯಿಗಳ ವೆಚ್ಚ ತಗುಲಿದೆ. ಡಾ.ಈಶ್ವರ ಕೀರ್ತಿಯ ಮನವಿಗೆ ಸ್ಪಂದಿಸಿ ಔಷಧ ಕಂಪೆನಿಯೂ ದರ ಕಡಿತಗೊಳಿಸಿದೆ. ಒಟ್ಟಾರೆ 3ಲಕ್ಷ ರೂಪಾಯಿಗಳಲ್ಲಿ ಚಿಕಿತ್ಸೆಯಾಗಿದೆ. ಇಬ್ಬರೂ ವೈದ್ಯರೂ ಉಚಿತ ಸೇವೆ ನೀಡಿ ಮಾನವೀಯತೆ ಮೆರೆದಿದ್ದಾರೆ.
ಸುಳ್ಯ ತಾಲೂಕಿನ ಸಾಮಾಜಿಕ ಧುರೀಣ, ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಮಾಜಿ ಅಧ್ಯಕ್ಷ ಕಳಂಜ ಗ್ರಾಮದ ದಿ.ಕೋಟೆ ವಸಂತ್‍ಕುಮಾರ್ ಸ್ಮರಣಾರ್ಥ ಅವರ ಪುತ್ರ, ಬೆಂಗಳೂರಿನಲ್ಲಿ ಉದ್ಯಮಿಯಾಗಿರುವ ರಘುರಾಮ್ ಕೋಟೆ ಈ ಕೋಟೆ ಫೌಂಡೇಷನಿನ ಸ್ಥಾಪಕರು. ಪ್ರಚಾರವನ್ನೇ ಬಯಸದೇ ಅದೇಷ್ಟೋ ಸಾಮಾನ್ಯ ಜನರಿಗೆ ನೆರವಿನ ಹಸ್ತ ಚಾಚಿ ದಾರಿದೀಪವಾಗಿದ್ದಾರೆ.
ಅಮೃತಾಳ ಚಿಕಿತ್ಸೆ ಯಶಸ್ವಿಯಾಗಿದೆ. ಬೆಳವಣಿಗೆ ಕಾರಣ ಮುಂದಿನ ದಿನಗಳಲ್ಲಿ ವ್ಯತ್ಯಾಸ ಬರುವುದು ಸಹಜ. ಆಗ ಸುಲಭದಲ್ಲಿ ಚಿಕಿತ್ಸೆ ಮುಂದುವರಿಸಿ ಪರಿಹಾರ ಮಾಡಿಕೊಳ್ಳಬಹುದೆಂದು ವೈದ್ಯರು ತಿಳಿಸಿರುವುದಾಗಿ ಕೋಟೆ ಫೌಂಡೇಷನ್ ಸಂಚಾಲಕ ರಘುರಾಮ ಕೋಟೆ ತಿಳಿಸಿದ್ದಾರೆ.
ಇದರ ಜೊತೆ ವಿವಿಧ ಸಂಘ ಸಂಸ್ಥೆಗಳು ನೆರವು ನೀಡಿದ್ದವು. ಸ್ಥಳೀಯರು ವಿವಿಧ ಮಂದಿ ಸಾಮಾಜಿಕ ಕಾರ್ಯಕರ್ತರು ಈ ಬಗ್ಗೆ ಪ್ರಯತ್ನ ಮಾಡಿದ್ದರು.