ಸುಳ್ಯ: ಸುಳ್ಯ ತಾಲೂಕು ಪಂಚಾಯತ್ ಸಾಮಾನ್ಯ ಸಭೆ ತಾ.ಪಂ.ಅಧ್ಯಕ್ಷ ಚನಿಯ ಕಲ್ತಡ್ಕ ಅಧ್ಯಕ್ಷತೆಯಲ್ಲಿ ಬುಧವಾರ ನಡೆಯಿತು. ಈ ಬಾರಿಯ ಸಭೆಯಲ್ಲಿ ಆಡಳಿತ ಪಕ್ಷದ ಸದಸ್ಯರ ನಡುವಿನ ಭಿನ್ನಾಭಿಪ್ರಾಯ ಸಭೆಯಲ್ಲಿ ಬಹಿರಂಗಗೊಂಡಿದೆ.
ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಬಿಜೆಪಿ ಸದಸ್ಯ ರಾಧಾಕೃಷ್ಣ ಬೊಳ್ಳೂರು ಅವರ ನಿಲುವನ್ನು ತಾಪಂ ಅಧ್ಯಕ್ಷ ಹಾಗೂ ಬಿಜೆಪಿ ಸದಸ್ಯರು ಬಹಿರಂಗವಾಗಿಯೇ ಖಂಡಿಸಿದರು. ನಗರ ಪಂಚಾಯತ್ ಕೊಳಚೆ ವಿಚಾರದಲ್ಲಿ ಸುದೀರ್ಘವಾಗಿ ಮಾತನಾಡಿದಾಗಲೂ ಬಿಜೆಪಿ ಸದಸ್ಯರೊಬ್ಬರು ಅಸಹಿಷ್ಣುತೆ ವ್ಯಕ್ತಪಡಿಸಿದರು.
ವಿವರ ಹೀಗಿದೆ…..
ಸಭೆ ಆರಂಭಗೊಂಡು ಪಾಲನಾ ವರದಿ ಚರ್ಚೆ ಆರಂಭಿಸಿದಾಗ “ಮೊದಲು ಸ್ಥಾಯಿ ಸಮಿತಿಯ ಲೆಕ್ಕಪತ್ರ ಮತ್ತು ಪಾಲನಾ ವರದಿ ಮಂಡಿಸಿ ಬಳಿಕ ತಾ.ಪಂ. ಪಾಲನಾ ವರದಿ ಕುರಿತು ಚರ್ಚೆ ನಡೆಯಬೇಕು ಎಂಬುದು ಕಾನೂನು. ಹಾಗೆ ಮಾಡಬೇಕು” ಎಂದು ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿಜೆಪಿ ಸದಸ್ಯ ರಾಧಾಕೃಷ್ಣ ಬೊಳ್ಳೂರು ಪಟ್ಟು ಹಿಡಿದರು.
ಇದಕ್ಕೆ ಉತ್ತರಿಸಿದ ಅಧ್ಯಕ್ಷ ಚನಿಯ ಕಲ್ತಡ್ಕ “ಈ ತಾಲೂಕು ಪಂಚಾಯತ್ ಆರಂಭದಿಂದಲೂ ಇದೇ ರೀತಿಯ ನಡವಳಿ ಮುಂದುವರಿಯುತ್ತಾ ಬಂದಿದೆ. ಕಾನೂನು ಹಾಗಿದ್ದರೆ ನೀವು ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದಾಗ ಯಾಕೆ ಕಾನೂನು ಪಾಲನೆ ಮಾಡಲಿಲ್ಲ” ಎಂದು ರಾಧಾಕೃಷ್ಣ ಬೊಳ್ಳೂರು ಅವರನ್ನು ಪ್ರಶ್ನಿಸಿದರು. ಅಧ್ಯಕ್ಷರ ಉತ್ತರಕ್ಕೆ ಬಿಜೆಪಿಯ ಇತರ ಸದಸ್ಯರು ಧ್ವನಿಗೂಡಿಸಿದರು.
ನಗರ ಪಂಚಾಯತ್ ಕೊಳಚೆ ವಿಚಾರದಲ್ಲಿ ರಾಧಾಕೃಷ್ಣ ಬೊಳ್ಳೂರು ಸುದೀರ್ಘ ಚರ್ಚೆ ನಡೆಸಿದಾಗ ಅಸಹಿಷ್ಣುತೆ ವ್ಯಕ್ತಪಡಿಸಿದ ಬಿಜೆಪಿ ಸದಸ್ಯ ಉದಯ ಕೊಪ್ಪಡ್ಕ ನಗರ ಪಂಚಾಯತ್ ಕೊಳಚೆ ಒಂದು ವಿಷಯವನ್ನು ಮಾತ್ರ ಅಸ್ಟು ದೀರ್ಘ ಚರ್ಚೆ ಮಾಡಿದರೆ ಹೇಗೆ, ನಮಗೆ ಬೇರೆ ವಿಚಾರ ಚರ್ಚೆ ಮಾಡಲು ಇದೆ ಎಂದು ಹೇಳಿದ ಘಟನೆಗೂ ಸಭೆ ಸಾಕ್ಷಿಯಾಯಿತು.
ಅಧಿಕಾರಿಗಳು ಗೈರು- ಒಂದು ಗಂಟೆ ತಡವಾಗಿ ಸಭೆ ಆರಂಭ:
ತಾ.ಪಂ.ಸಭೆಗೆ ಅಧಿಕಾರಿಗಳು ಗೈರಾದ ಕಾರಣ ತಾ.ಪಂ.ಸಾಮಾನ್ಯ ಸಭೆ ಸುಮಾರು ಒಂದು ಗಂಟೆ ತಡವಾಗಿ ಆರಂಭವಾಯಿತು. ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಹಾಜರಿರಲಿಲ್ಲ. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಸದಸ್ಯರು ಅಧಿಕಾರಿಗಳು ಇಲ್ಲದೆ ಸಭೆ ನಡೆಸುವುದು ಬೇಡ. ಹಾಜರಾಗದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಶಿಫಾರಸ್ಸು ಮಾಡಬೇಕು ಎಂದು ಸದಸ್ಯರು ಒತ್ತಾಯಿಸಿದರು. ಬಳಿಕ ಕೆಲವು ಅಧಿಕಾರಿಗಳು ಆಗಮಿಸಿದ ಬಳಿಕ ಒಂದು ಗಂಟೆಗೂ ಹೆಚ್ಚು ಸಮಯ ತಡವಾಗಿ ಸಭೆ ಆರಂಭಗೊಂಡಿತು.
ಕಳೆದ ಕೆಲವು ಸಮಯಗಳಿಂದ ಸುಳ್ಯದ ಹಲವು ಸಭೆಗಳು ಇದೇ ಮಾದರಿಯಲ್ಲಿ ನಡೆಯುತ್ತಿದೆ. ಸಭೆ ನಡೆಸಿದ ಬಳಿಕ ಫಾಲೋ ಅಪ್ ಇಲ್ಲದೇ ಇರುವುದು ಕಂಡುಬಂದರೆ. ಅಧಿಕಾರಿಗಳಿಗೂ ಸಭೆಯ ಬಗ್ಗೆ ಗಂಭೀರತೆ ಇಲ್ಲದೇ ಇರುವುದು ಕಂಡುಬಂದಿದೆ. ಸಭೆಯಲ್ಲಿ ಕೇಳುವ ಪ್ರಶ್ನೆಗೆ ಮಾಡಲಾಗಿದೆ, ತಿಳಿಸಲಾಗಿದೆ ಎಂಬ ವರದಿಯೊಂದಿಗೆ ಸಭೆ ಮುಕ್ತಾಯವಾಗುವುದು ಕಂಡುಬರುತ್ತಿದೆ. ಸುಳ್ಯದ ಪ್ರಮುಖವಾದ ವಿದ್ಯುತ್ ಸಮಸ್ಯೆ , ಕುಡಿಯುವ ನೀರಿನ ಸಮಸ್ಯೆ, ರಸ್ತೆ ಸಮಸ್ಯೆಯ ಬಗ್ಗೆ ಇದುವರೆಗೆ ನಡೆದ ಬಹುತೇಕ ಸಭೆಗಳೂ ಫಲ ನೀಡದೇ ಇರುವುದು ಕಂಡುಬಂದಿದೆ.