ಸುಳ್ಯ: ಅರ್ಧ ಶತಮಾನದ ಹಿಂದೆ ಮಡಪ್ಪಾಡಿ ಗ್ರಾಮದ ಹಾಡಿಕಲ್ಲಿನ ಜನರ ಬದುಕು ಹೇಗಿತ್ತು. ಈಗಿನಂತೆ ವ್ಯವಸ್ಥೆಗಳು ಇತ್ತಾ, ಜನರು ಹೇಗೆ ಜೀವನ ಸಾಗಿಸಿದ್ದರು ಎಂಬ ಚಿತ್ರಣವನ್ನು ಹಾಡಿಕಲ್ಲಿನ ಹಿರಿಯರು ಎಳೆ ಎಳೆಯಾಗಿ ಬಿಚ್ಚಿಟ್ಟರು. ಪರಿಸರ, ಕೃಷಿ, ಕಾಡು, ಕಾಡು ಪ್ರಾಣಿಗಳ ಜೊತೆ ಸೆಣಸಾಡಿ ಬದುಕು ಕಟ್ಟಿಕೊಂಡ ರೀತಿಯನ್ನು ಕಣ್ಣಿಗೆ ಕಟ್ಟಿದಂತೆ ವಿವರಿಸುತ್ತಿದ್ದರೆ ಮೈ ಜುಮ್ಮೆನಿಸುತ್ತಿತ್ತು. ಹಿರಿಯರ ಬದುಕಿನ ಚಿತ್ರಣ ಹೊಸ ತಲೆಮಾರಿನ ಕಲ್ಪನೆಗೂ ನಿಲುಕದಷ್ಟು ರೋಮಾಂಚನಕಾರಿಯಾಗಿತ್ತು. ಇದು ಹೊಸ ತಲೆಮಾರಿನ ಬದುಕಿಗೆ ತೆರೆದ ಪಾಠ ಪುಸ್ತಕದಂತಿತ್ತು.
ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಸುಳ್ಯ ತಾಲೂಕಿನ ಮಡಪ್ಪಾಡಿ ಗ್ರಾಮದ ಹಾಡಿಕಲ್ಲಿನಲ್ಲಿ ನಡೆದ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ನಡೆದ ಚಾವಡಿ ಚರ್ಚೆಯಲ್ಲಿ ಹಿರಿಯರು ತಮ್ಮ ಅನುಭವದ ಬುತ್ತಿಯನ್ನು ಬಿಚ್ಚಿದರು. ಹಿರಿಯರಾದ ಶಿವಣ್ಣ ಗೌಡ, ಜಯರಾಮ ಗೌಡ ಜೀರ್ಮುಕಿ, ಪದ್ಮಯ್ಯ ಮಲೆ, ಚೆನ್ನಕೇಶವ ಗೌಡ ವಾಲ್ತಾಜೆ, ಮೋನಪ್ಪ ಗೌಡ ಹಾಡಿಕಲ್ಲು, ಮಡಪ್ಪಾಡಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಹಿರಿಯರಾದ ಎನ್.ಟಿ.ಹೊನ್ನಪ್ಪ ತಮ್ಮ ಅನುಭವಗಳನ್ನು ವಿವರಿಸಿದರು. 50 ವರ್ಷದ ಹಿಂದೆ ರಸ್ತೆ, ವಿದ್ಯುತ್, ವಾಹನ ಸೌಕರ್ಯಗಳು ಕನಸಿನ ಮಾತು. ತಮ್ಮ ಅಗತ್ಯ ವಸ್ತುಗಳಿಗೆ ಸುಮಾರು 18 ಕಿಮಿ. ದೂರದ ಗುತ್ತಿಗಾರಿಗೆ ನಡೆದುಕೊಂಡೇ ಹೋಗಬೇಕಿತ್ತು. ಕಾಡಿನ ಮಧ್ಯೆ ಕಾಲು ದಾರಿ ಮಾತ್ರ ಇತ್ತು. ಎಲ್ಲಿ ಹೋದರೂ ಸಂಜೆ ನಾಲ್ಕು ಗಂಟೆಯ ಮೊದಲು ಮನೆ ಸೇರಬೇಕಿತ್ತು.
ತಾವು ಬೆಳೆದ ಉತ್ಪನ್ನಗಳನ್ನು ತಲೆಯಲ್ಲಿ ಹೊತ್ತು ಕೊಂಡು ಗುತ್ತಿಗಾರಿಗೆ ಕೊಂಡೊಯ್ದು ಮಾರಾಟ ಮಾಡಿ ತಮಗೆ ಅಗತ್ಯವಿರುವ ವಸ್ತುಗಳನ್ನು ಖರೀದಿಸಿ ತಲೆಯಲ್ಲಿಯೇ ಹೊತ್ತು ತರಬೇಕಿತ್ತು. ಭತ್ತದ ಕೃಷಿಯೇ ಜೀವನಾಧಾರವಾಗಿತ್ತು. ಆರೋಗ್ಯ ಕೆಟ್ಟರೆ ಹಳ್ಳಿ ಮದ್ದು ಮಾಡುತ್ತಿದ್ದರು. ಇನ್ನೂ ಅಸೌಖ್ಯ ಹೆಚ್ಚಾದರೆ ಹೊತ್ತುಕೊಂಡೇ ಆಸ್ಪತ್ರೆಗೆ ಸಾಗಿಸಬೇಕಿತ್ತು. ಮಕ್ಕಳು ಕಿಲೋಮೀಟರ್ ಗಟ್ಟಲೆ ಬರಿಗಾಲಿನಲ್ಲಿ ನಡೆದುಕೊಂಡು ಮಡಪ್ಪಾಡಿ ಶಾಲೆಗೆ ಹೋಗುತ್ತಿದ್ದರು. ಕಾಡು ಪ್ರಾಣಿಗಳ ಬೇಟೆ ನಿಷೇದ ಇಲ್ಲದ ಕಾಲದಲ್ಲಿ ಬೇಟೆಯೂ ಜೀವನದ ಭಾಗವಾಗಿತ್ತು. ಕೆಲವೊಂದು ಹಬ್ಬದ ಸಂದರ್ಭದಲ್ಲಿ, ಬೇಸಾಯ ಮುಗಿದ ಬಳಿಕ ಬೇಟೆ ಮಾಡುತ್ತಿದ್ದರು. ತಮ್ಮ ಕೃಷಿ ಭೂಮಿಗೆ ಬರುತ್ತಿದ್ದ ಕಾಡು ಪ್ರಾಣಿಗಳ ಉಪಟಳ ತಡೆಯಲು ಕೂಡ ಬೇಟೆ ಅನಿವಾರ್ಯವಾಗಿತ್ತು. ಮನೋರಂಜನೆಗಾಗಿ ಕಬಡ್ಡಿ, ಲಗೋರಿ ಆಡುತ್ತಿದ್ದರು. ಹಬ್ಬ ಹರಿದಿನಗಳ ಸಂದರ್ಭದಲ್ಲಿ ಕೋಳಿ ಕಟ್ಟವೂ ನಡೆಯುತ್ತಿತ್ತು. ಅವಿಭಕ್ತ ಕುಟುಂಬಗಳೇ ಹೆಚ್ಚಾಗಿದ್ದು ಕುಟುಂಬಸ್ಥರೆಲ್ಲರೂ ಕೂಡಿ ಬಾಳುತ್ತಿದ್ದರು. ಕಂದ್ರಪ್ಪಾಡಿ ಜಾತ್ರೋತ್ಸವ ಸಂದರ್ಭದಲ್ಲಿ ನಾಡಿಗೆ ನಾಡೇ ಸಂಭ್ರಮಿಸುತ್ತಿತ್ತು ಹೀಗೆ ಒಂದೊಂದೇ ಅನುಭವಗಳನ್ನು ಹೇಳುತ್ತಿದ್ದರು. ಊರಿಗೆ ಊರೇ ಪರಸ್ಪರ ಪ್ರೀತಿ ಸೌಹಾರ್ಧತೆಯಿಂದ ಬದುಕುತ್ತಿದ್ದರು ಎಂದು ಅವರು ಬೊಟ್ಟು ಮಾಡಿದರು.
ಚಾವಡಿ ಚರ್ಚೆಯಲ್ಲಿ ಹಿರಿಯರು ತಮ್ಮ ಅನುಭವಗಳನ್ನು ಹೇಳುವುದರ ಜೊತೆಗೆ ಜಾನಪದ ಹಾಡುಗಳು, ಪಾಡ್ದನಗಳನ್ನು ಹೇಳಿ ಸಂಭ್ರಮಿಸಿದರು. ತಡರಾತ್ರಿಯಲ್ಲಿಯೂ ಗ್ರಾಮಸ್ಥರ ಸ್ಪಂದನೆ ಅದ್ಭುತವಾಗಿತ್ತು. ಸ್ಥಳೀಯ ಹಾಡಿಕಲ್ಲು ಭಾಗದ ಸುಮಾರು ಇನ್ನೂರಕ್ಕೂ ಹೆಚ್ಚು ಮಂದಿ ಉತ್ಸಾಹದಿಂದ ಭಾಗವಹಿಸಿದ್ದರು.
ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಭರತ್ ಮುಂಡೋಡಿ ಸ್ವಾಗತಿಸಿ, ಎಪಿಎಂಸಿ ಮಾಜಿ ಅಧ್ಯಕ್ಷ ಜಯರಾಮ ಹಾಡಿಕಲ್ಲು ವಂದಿಸಿದರು. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಮತ್ತು ಇತರ ಪತ್ರಕರ್ತರು ಉಪಸ್ಥಿತರಿದ್ದರು. ಭಾಸ್ಕರ ರೈ ಕಟ್ಟ ಕಾರ್ಯಕ್ರಮ ನಿರೂಪಿಸಿದರು. ಪತ್ರಕರ್ತ ಮೌನೇಶ್ ವಿಶ್ವಕರ್ಮ ಹಾಡುಗಳ ಮೂಲಕ ರಂಜಿಸಿದರು.
ಅಡಿಕೆ ಬೆಳೆಗಾರರು ಭವಿಷ್ಯದ ದೃಷ್ಟಿಯಿಂದ ಏಕೆ ಜಾಗ್ರತವಾಗಬೇಕು ಎಂದು ಕುಮಾರ ಸುಬ್ರಹ್ಮಣ್ಯ ಮುಳಿಯಾಲ…
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…