ಸುಳ್ಯ: ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಏರುತ್ತಿದೆ. ಸುಳ್ಯ ನಗರದಲ್ಲಿ ಕೆಜಿಯೊಂದಕ್ಕೆ 50-60 ರೂಗಳಿಗೆ ಈರುಳ್ಳಿ ಮಾರಾಟ ಆಗುತ್ತಿದೆ. ಒಂದು ವಾರದ ಅವಧಿಯಲ್ಲಿ ಈರುಳ್ಳಿ ಬೆಲೆ ಸುಳ್ಯದಲ್ಲಿ 15-20 ರೂ ಏರಿದೆ. 40-45 ರೂ ಆಸುಪಾಸಿನಲ್ಲಿದ್ದ ಈರುಳ್ಳಿ ಬೆಲೆ 60 ರವರೆಗೆ ತಲುಪಿದೆ. ಅಲ್ಲದೆ ಈರುಳ್ಳಿಯ ಲಭ್ಯತೆಯೂ ಕಡಿಮೆಯಾಗಿದೆ ಎನ್ನುತ್ತಾರೆ ವ್ಯಾಪಾರಸ್ಥರು.
ಕೆಲ ದಿನಗಳಿಂದ ಇಳಿಮುಖವಾಗಿದ್ದ ಈರುಳ್ಳಿ ಬೆಲೆ ಮತ್ತೆ ಏರುತ್ತಿ ದೆ. ಕೆಲವು ರಾಜ್ಯಗಳಲ್ಲಿ ಕೆಜಿಗೆ 90 ರಿಂದ 100 ರೂಪಾಯಿಯಂತೆ ಮಾರಾಟ ಮಾಡಲಾಗುತ್ತಿದೆ ಎಂಬ ವರದಿಗಳಿವೆ.
ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಕೆಜಿಗೆ 80 ರೂ.ನಂತೆ ಮಾರಾಟವಾಗಿದ್ದ ಈರುಳ್ಳಿ ಬೆಲೆ ಅಕ್ಟೋಬರ್ನಲ್ಲಿ ತಕ್ಕಮಟ್ಟಿಗೆ ಕಡಿಮೆಯಾಗಿತ್ತು. ಆದರೆ, ಈರುಳ್ಳಿ ಹೆಚ್ಚಾಗಿ ಬೆಳೆಯುವ ಮಹಾರಾಷ್ಟ್ರದಲ್ಲಿ ಅತಿವೃಷ್ಟಿ ಆಗಿರುವ ಹಿನ್ನೆಲೆಯಲ್ಲಿ ಈರುಳ್ಳಿ ಬೆಲೆ ಹೆಚ್ಚಳವಾಗಿದೆ ಎನ್ನಲಾಗುತ್ತಿದೆ . ನವೆಂಬರ್ನಲ್ಲಿ ಸುರಿಯುತ್ತಿರುವ ಅಕಾಲಿಕ ಮಳೆ ಕೂಡ ಈರುಳ್ಳಿ ಮಾರುಕಟ್ಟೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಇದರಿಂದಾಗಿ ಈರುಳ್ಳಿಯ ಬೆಲೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ತರಕಾರಿ ವ್ಯಾಪಾರಸ್ಥರು ಹೇಳುತ್ತಾರೆ.