The Rural Mirror ವಾರದ ವಿಶೇಷ

ಒಂದು ಕಾಲಘಟ್ಟದ ಸಾಂಸ್ಕೃತಿಕ ಸಾಕ್ಷಿ ಪಾವಲಕೋಡಿ ಗಣಪತಿ ಭಟ್

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

1992ನೇ ಇಸವಿ. ಶಿವರಾತ್ರಿಯ ಪುಣ್ಯದಿನ. ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ‘ಶಿವಪಂಚಾಕ್ಷರಿ ಮಹಿಮೆ’ ಪ್ರಸಂಗದ ತಾಳಮದ್ದಳೆ. ನನ್ನ ಪುತ್ತೂರು ವಾಸ ಆರಂಭವಾಗಿ ಒಂದು ವರುಷವಾಗಿತ್ತಷ್ಟೇ. ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದ ಬರೆಪ್ಪಾಡಿ ಅನಂತಕೃಷ್ಣ ಭಟ್ಟರು (ದಿ.) ತಾಳಮದ್ದಳೆಗೆ ಆಹ್ವಾನಿಸಿದ್ದರು.
‘ಯಮ’ನ ಓಲಗದ ದೃಶ್ಯ. ಭಾಗವತರು ಪದ್ಯ ಎತ್ತುಗಡೆ ಮಾಡುತ್ತಿದ್ದಾಗ ಸಭೆಯ ಮಧ್ಯದಿಂದ ಓರ್ವರು ಗಂಭೀರ ನಡಿಗೆಯೊಂದಿಗೆ ಪಡಿಮಂಚವೇರಿದರು. ಅಟ್ಟಹಾಸ ಕೊಟ್ಟರು. ತುಂಬು ಸ್ವರದಲ್ಲಿ ಸ್ವಗತ ಹೇಳಿದರು. ಒಂದು ಸಂದರ್ಭದಲ್ಲಿ ‘ನನ್ನ ಯಮಪಾಶಕ್ಕೆ ಸಿಗದವರು ಯಾರೂ ಇಲ್ಲ’ ಎನ್ನುತ್ತಾ ಹೆಗಲಿನ ಶಲ್ಯವನ್ನು ತಿರುವಿ, ಇನ್ನೇನು ಧ್ವನಿವರ್ಧಕದ ಸ್ಟಾಂಡಿಗೆ ಸಿಲುಕಿಸುತ್ತಾರೆ ಎಂದಾವಾದ ಮೈಕ್ ನಿರ್ವಾಹಕ ಆಗಮಿಸಿದ! ಅಂದರೆ ‘ಯಮ’ನ ಪಾತ್ರವು ಅವರೊಳಗಿಳಿದಿತ್ತು. ಶಲ್ಯವು ‘ಪಾಶ’ವಾಗಿತ್ತು. ಒಟ್ಟೂ ಸನ್ನಿವೇಶವು ‘ಯಮಲೋಕ’ವನ್ನು ಕಟ್ಟಿಕೊಟ್ಟಿತ್ತು. ಬಹಳಷ್ಟು ಮಂದಿ ಮೆಚ್ಚಿಕೊಂಡಿದ್ದರು ಕೂಡಾ.

Advertisement
Advertisement

ಅಂದಿನ ‘ಯಮ’ನ ಅರ್ಥದಾರಿ ಅಧ್ಯಾಪಕ ಪಾವಲಕೋಡಿ ಗಣಪತಿ ಭಟ್ಟರು. ಮೇಲ್ನೋಟಕ್ಕೆ ನೋಡುವಾಗ ತಾಳಮದ್ದಳೆಯಲ್ಲೂ ಆಂಗಿಕ ಭಾಷೆಗಳು ಬೇಕೇ? ಎನ್ನುವ ಪ್ರಶ್ನೆ ಮೂಡುತ್ತದೆ. ಆದರೆ ಪಾತ್ರದೊಳಗೆ ತಲ್ಲೀನವಾಗಿ ಮಾತಿನ ಮೂಲಕ ಪುರಾಣ ಲೋಕವನ್ನು ಕಟ್ಟಲು ಆಂಗಿಕ ಭಾಷೆಯನ್ನು ತಾವಾಗಿಯೇ ರೂಢಿಸಿಕೊಂಡಿದ್ದರು. ರಾಕ್ಷಸ ಸ್ವಭಾವದ ಪಾತ್ರಗಳಿಗೆ ಸ್ವಲ್ಪವಾದರೂ ಬಯಲಾಟದ ಸ್ವರೂಪ ಕೊಡದಿದ್ದರೆ ಆ ಪಾತ್ರವು ಸೊರಗುತ್ತದೆ ಮಾತ್ರವಲ್ಲ ಅದರ ವ್ಯಕ್ತಿತ್ವದ ಅನಾವರಣ ಮಸುಕಾಗುತ್ತದೆ ಎನ್ನುವ ಎಚ್ಚರವನ್ನು ಬಲ್ಲಿದರೊಂದಿಗೆ ವಿಮರ್ಶಿಸಿ ರೂಢಿಸಿಕೊಂಡಿದ್ದಾರೆ.

ನಿರಂತರ ಓದು ಗಣಪತಿ ಭಟ್ಟರ ಅರ್ಥಗಾರಿಕೆಗೆ ಹೊಳಪು ತಂದಿದೆ. ಒಂದು ಕಾಲಘಟ್ಟದಲ್ಲಿ ಹಿರಿಯ ಕೂಟಗಳನ್ನು ಕೇಳಲೆಂದೇ ದೂರದೂರಿಗೆ ಹೋದುದುಂಟು. ಶೇಣಿ ಗೋಪಾಲಕೃಷ್ಣ ಭಟ್, ರಾಮದಾಸ ಸಾಮಗರಂತಹ ಉದ್ಧಮರ ಒಡನಾಟಗಳಿದ್ದುವು. ಹಾಗೆಂತ ಎಂದೂ ಅವರ ಅರ್ಥಗಾರಿಕೆಯನ್ನು ನಕಲು ಮಾಡಲಿಲ್ಲ. ಬದಲಿಗೆ ತನ್ನ ‘ಮಿತಿಯನ್ನರಿತು’ ನಿರ್ವಹಿಸುತ್ತಿದ್ದರು. ಶ್ರೀ ಆಂಜನೇಯ ಸಂಘದಲ್ಲಿ ಸಕ್ರಿಯ ಅರ್ಥದಾರಿಯಾಗಿದ್ದು ಒಂದು ಕಾಲಘಟ್ಟದ ಸಾಂಸ್ಕøತಿಕ ಸಾಕ್ಷಿಯಾಗಿ ನಿಲ್ಲುತ್ತಾರೆ.

“ಅನಂತಕೃಷ್ಣ ಭಟ್, ಎಸ್.ಆರ್.ಪಾಡಿ, ಬೆಣ್ಣೆಮನೆ ಗೋಪಾಲಕೃಷ್ಣ ಭಟ್, ಬಿ.ಎಸ್.ಓಕುಣ್ಣಾಯ, ಕೀರಿಕ್ಕಾಡು ಸುಬ್ರಹ್ಮಣ್ಯ ಭಟ್, ಕೋಡಿಯಾಡಿ ಶ್ರೀನಿವಾಸ ರೈ, ಜೆಡ್ಡು ನಾರಾಯಣ ಭಟ್.. ಮೊದಲಾದ ಅರ್ಥದಾರಿಗಳ ತಂಡದ ತಾಳಮದ್ದಳೆಯು ಜನಸ್ವೀಕೃತಿ ಪಡೆದಿತ್ತು. ಕಲಾಭಿಮಾನಿಗಳು ಗೌರವದಿಂದ ನೋಡುತ್ತಿದ್ದರು. ಪರಸ್ಪರ ಇದಿರಾಗಿ ಬರುವ ಪಾತ್ರಗಳ ಅರ್ಥಗಳನ್ನು ಹೇಳುತ್ತಿರಬೇಕು ಎನ್ನುವ ಅನಂತಕೃಷ್ಣ ಭಟ್ಟರ ಸೂಚನೆಯನ್ನು ಮಾನಿಸಿದ್ದರಿಂದ ಎಲ್ಲಾ ನಮೂನೆಯ ಅರ್ಥಗಳನ್ನು ಹೇಳಬಲ್ಲೆ ಎನ್ನುವ ಧೈರ್ಯ ಬಂದಿದೆ” ಎಂದು ಕಳೆದ ಕಾಲವನ್ನು ಜ್ಞಾಪಿಸಿಕೊಂಡರು.

ತನ್ನ ನಲವತ್ತೈದನೇ ವಯಸ್ಸು. ಅರ್ಥದಾರಿಯಾದರೆ ಸಾಲದು, ವೇಷಧಾರಿಯಾಗಬೇಕೆನ್ನುವ ಹಪಾಹಪಿ. ಖ್ಯಾತ ವೇಷಧಾರಿ ಕುಡಾಣ ಗೋಪಾಲಕೃಷ್ಣ ಭಟ್ಟರನ್ನು ಪ್ರತಿವಾರ ಮನೆಗೆ ಆಹ್ವಾನಿಸಿ ಸುಮಾರು ಆರು ತಿಂಗಳು ನಾಟ್ಯ ಕಲಿಕೆ. ತನ್ನ ವಯೋಮಾನಕ್ಕೆ ಹೊಂದುವ, ಮುಖ್ಯವಾಗಿ ಕಿರೀಟ ವೇಷ, ರಾಕ್ಷಸ ಪಾತ್ರಗಳ ನಡೆಗಳನ್ನು ಕಲಿತರು. ಹವ್ಯಾಸಿ ತಂಡಗಳಲ್ಲಿ ವೇಷಧಾರಿಯಾಗಿ ಹೊರಹೊಮ್ಮಿದರು. “ಹಾಸ್ಯ, ಸ್ತ್ರೀವೇಷ ಹೊರತಾಗಿ ಬಹುತೇಕ ಎಲ್ಲಾ ಪಾತ್ರಗಳನ್ನು ನಿರ್ವಹಿಸಿದ್ದೇನೆ. ಮುಂದಿನ ದಿನಗಳಲ್ಲಿ ವಯೋಸಹಜವಾಗಿ ಪಾತ್ರ ನಿರ್ವಹಿಸಲು ಕಷ್ಟವಾದಾಗ ನಾನಾಗಿಯೇ ವಿರಮಿಸಿದ್ದೇನೆ.” ಎನ್ನುತ್ತಾರೆ. ವೀರವರ್ಮ, ಶತ್ರುಘ್ನ, ಭೀಷ್ಮ, ಅರ್ಜುನ, ಕಂಸ, ಶುಂಭ, ವೀರಭದ್ರ, ಪಂಚಜನ.. ಮೊದಲಾದವುಗಳು ಗಣಪತಿ ಭಟ್ಟರಿಗೆ ‘ರಂಗಸುಖ’ವನ್ನು ನೀಡಿದ ಪಾತ್ರಗಳು.

Advertisement

“ಅರ್ಥದಾರಿಯಾದವನಿಗೆ ಓದುವಿಕೆ ಬಹಳ ಮುಖ್ಯ. ಮನೆಯಲ್ಲಿ ಚಿಕ್ಕ ಗ್ರಂಥಾಲಯ ಬೇಕೇ ಬೇಕು” ಎಂದು ತಮ್ಮ ಪುಸ್ತಕ ಸಂಗ್ರಹವನ್ನು ತೋರಿಸುತ್ತಾರೆ. ಪ್ರಸಂಗ ಪುಸ್ತಕಗಳ ಮುದ್ರಣ ಪ್ರತಿ ಸಿಗದಿದ್ದ ಕಾಲಘಟ್ಟದಲ್ಲಿ ಅದನ್ನೆಲ್ಲಾ ಕೈಬರಹದಲ್ಲಿ ಬರೆದು ಸಂಗ್ರಹಿಸಿದ್ದಾರೆ. “ನಾನು ಮತ್ತು ಮಗಳು ಎಷ್ಟು ಪ್ರಸಂಗಗಳನ್ನು ಕೈಬರಹದಲ್ಲಿ ನಕಲು ಮಾಡಿದ್ದೇವೆ ಎನ್ನುವ ಲೆಕ್ಕ ಸಿಗದು,” ಎಂದು ಗಣಪತಿ ಭಟ್ಟರ ಮಡದಿ ಲಲಿತ ಕಣ್ಣು ಮಿಟುಕಿಸುತ್ತಾರೆ. ಮಗ ನಾರಾಯಣ, ಮಗಳು ಉಮಾ. ಕುಟುಂಬದ ಎಲ್ಲಾ ಸದಸ್ಯರಲ್ಲಿ ಯಕ್ಷಗಾನದ ಪ್ರೀತಿ ಹರಿದಿದೆ.
ಗಣಪತಿ ಭಟ್ಟರ ಮುಖ್ಯ ವೃತ್ತಿ ಅಧ್ಯಾಪಕ. ಕನ್ಯಾನದ ಮಾದರಿ ಶಾಲೆಯ ಮೂಲಕ ಮಾಸ್ತರಿಕೆ ಆರಂಭ. ಮುಂದೆ ಉಪ್ಪಿನಂಗಡಿ, ಪುತ್ತೂರಿನ ನೆಲ್ಲಿಕಟ್ಟೆ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಕಾಣಿಯೂರು ಜ್ಯೂನಿಯರ್ ಕಾಲೇಜಿನಲ್ಲಿ ಅಧ್ಯಾಪಕರಾಗಿ ಸೇವೆ. ‘ನೆಲ್ಲಿಕಟ್ಟೆ ಶಾಲೆಯ ಮಾಸ್ಟ್ರು’ ಎಂದೇ ಪುತ್ತೂರಲ್ಲಿ ಪ್ರಸಿದ್ಧರು. 2002 ಜನವರಿ 31ರಂದು ನಿವೃತ್ತ. ಶಿಸ್ತಿಗೆ ‘ಶಿಸ್ತು’ಕೊಟ್ಟವರು. ವಿದ್ಯಾರ್ಥಿಗಳ ನೆಚ್ಚಿನ ಅಧ್ಯಾಪಕರು.

ಈಗವರಿಗೆ ಎಪ್ಪತ್ತಾರರ ಹರೆಯ. ವಯೋಸಹಜವಾದ ಹಿಂಜರಿಕೆ. ಮಾತಿಗೆ ನಿಂತರೆ ಮೂರ್ನಾಲ್ಕು ದಶಕದ ಹಿಂದಿನ ತಾಳಮದ್ದಳೆಗಳ ರೋಚಕ ಸನ್ನಿವೇಶಗಳನ್ನು ನೆನಪುಮಾಡಿಕೊಳ್ಳುತ್ತಾರೆ. ಪುತ್ತೂರಿನಲ್ಲಿ ಹವ್ಯಾಸಿ ಕಲಾವಿದನಾಗಿ ಯಕ್ಷಗಾನದ ಕಲಾ ತೇವವನ್ನು ಆರಲು ಬಿಡದ ಪಾವಲಕೋಡಿಯವರಂತಹ ನಿಸ್ಪೃಹ ಕಲಾವಿದರ ಕಲಾಯಾನವು ದಾಖಲಾಗುವುದಿಲ್ಲ. ದಾಖಲಿಸುವವರೂ ಇಲ್ಲ!

ಪಾವಲಕೋಡಿ ಗಣಪತಿ ಭಟ್ಟರು ಈಗ ‘ಪುತ್ತೂರು ಗೋಪಣ್ಣ’ ನೆನಪಿನ ಗೌರವಕ್ಕೆ ಭಾಜನರಾಗಿದ್ದಾರೆ. (ಪುತ್ತೂರು ಗೋಪಾಲಕೃಷ್ಣ – ಗೋಪಣ್ಣ – ನಗರ ಸಭಾ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್ ಇವರ ತೀರ್ಥರೂಪರು) ಜೂನ್ 30 ರವಿವಾರ, ಅಪರಾಹ್ನ ಗಂಟೆ 2ಕ್ಕೆ ಬಪ್ಪಳಿಗೆಯ ‘ಅಗ್ರಹಾರ’ ಗೃಹದಲ್ಲಿ ಗೌರವ ಪ್ರದಾನ ಸಮಾರಂಭ ಜರುಗಲಿದೆ. ಬಳಿಕ ತಾಳಮದ್ದಳೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ನಾ.ಕಾರಂತ ಪೆರಾಜೆ

ಪತ್ರಕರ್ತ , ಕಲಾವಿದ , ಅಂಕಣಕಾರ ನಾ.ಕಾರಂತ ಪೆರಾಜೆ ಅವರು ಪ್ರಸ್ತುತ ಅಡಿಕೆ ಪತ್ರಿಕೆಯ ಸಹಾಯಕ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಕರ್ತರಾಗಿ, ಕಲಾವಿದರಾಗಿ, ಅಂಕಣಕಾರರಾಗಿ ಗುರುತಿಸಿಕೊಂಡಿರುವ ನಾ.ಕಾರಂತ ಅವರು ತಾಳಮದ್ದಳೆಯಲ್ಲಿ ಅರ್ಥದಾರಿಯಾಗಿ ಹಾಗೂ ವಿವಿಧ ಮೇಳಗಳಲ್ಲಿ ವೇಷಧಾರಿಯೂ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಪುತ್ತೂರು ತಾಲೂಕಿನ 17ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

Published by
ನಾ.ಕಾರಂತ ಪೆರಾಜೆ

Recent Posts

ಕರೆಂಟ್ ಹೊದ ಕೂಡ್ಲೆ ಬೊಬ್ಬೆ ಹೊಡೆಯೋದು ಯಾಕೆ..!?

ಎಂತ ಮಾರ್ರೇ.... ಈ ಮನುಷ್ಯರಿಗೆ ಒಂದು ಸೊಲ್ಪ ಹೊತ್ತು ಕರೆಂಟ್ ಹೊದ್ರೆ ಕೂಡ್ಲೆ…

8 hours ago

ಮಳೆ Update | ಕರಾವಳಿ ಜಿಲ್ಲೆಯಲ್ಲಿ ವ್ಯಾಪಕ ಮಳೆ | ಹಲವು ಕಡೆ 100 ಮಿಮೀಗಿಂತಲೂ ಅಧಿಕ ಮಳೆ | ಉಡುಪಿಯಲ್ಲಿ 164 ಮಿಮೀ ಮಳೆ |

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ, ಸುಳ್ಯ, ಪುತ್ತೂರು,ಚೆಂಬು ಪ್ರದೇಶದ ಕೆಲವು ಕಡೆ 100…

9 hours ago

ಬಿತ್ತನೆ ಬೀಜ ರಸಗೊಬ್ಬರ ಕಾಳಸಂತೆಯಲ್ಲಿ ಮಾರಾಟ ಮಾಡಿದರೆ ಕಠಿಣ ಕ್ರಮದ ಎಚ್ಚರಿಕೆ

ಬಿತ್ತನೆ ಬೀಜ ಮತ್ತು ರಸಗೊಬ್ಬರವನ್ನು ಕಾಳಸಂತೆಯಲ್ಲಿ ಮಾರಾಟಮಾಡುವವರು ಮತ್ತು ಕೃತಕ ಅಭಾವ ಸೃಷ್ಟಿಸುವವರ…

12 hours ago

ರೈತರು ಉತ್ತಮ ಇಳುವರಿ ಪಡೆಯಲು ಸಂಯುಕ್ತ ರಸಗೊಬ್ಬರ ಬಳಸುವಂತೆ ಕೃಷಿ ಇಲಾಖೆ ಸೂಚನೆ

ರೈತರು ಉತ್ತಮ ಇಳುವರಿ ಪಡೆಯಲು ಡಿಎಪಿ ಗೊಬ್ಬರಕ್ಕೆ ಪರ್ಯಾಯವಾಗಿ ಸಂಯುಕ್ತ ರಸಗೊಬ್ಬರ ಬಳಸಲು…

12 hours ago

ಬದುಕು ಪುರಾಣ | ಎಲ್ಲರೊಳಗೂ ಏಕಲವ್ಯನಿದ್ದಾನೆ!

 ‘ಏಕಲವ್ಯ’ – ಈ ಪದವು ಸಾಧನೆಯ ಐಕಾನ್. ಪರ್ಯಾಯ ಪದ. ಸಾಧನೆಗೆ ಜಾತಿ,…

12 hours ago

ಮನೆಯಲ್ಲಿ ಸಂಪತ್ತು, ಸಂತೋಷ ಹೆಚ್ಚಾಗಲು ಮುಖ್ಯ ದ್ವಾರ ಹೀಗಿರಲಿ…

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

12 hours ago