ಖೇಲೋ -ಕೂದೋ -ಸ್ವಾಸ್ಥ್ ರಹೋ : ವ್ಯಕ್ತಿಯಾರಾಧನಾ ಪಠ್ಯಾಭ್ಯಾಸ

May 19, 2019
7:31 PM

 ಲಕ್ಷ್ಮಣ ದೇವಶ್ಯ ಅವರ www.adaraache.com ನಿಂದ…….

Advertisement
Advertisement
Advertisement

ಭೂಮಿ ಅಂಗೈಯಷ್ಟಗಲವಾಗಿ ಮಾಹಿತಿಗಳ ಮಹಾಪೂರವೇ ಪ್ರವಾಹೋಪಾದಿಯಲ್ಲಿ ಹರಿದುಬರುತ್ತಿರುವ ಈ ಯುಗದಲ್ಲಾದರೂ ವ್ಯಕ್ತಿಯಾರಾಧನೆಯ ಪಠ್ಯಗಳ ಮೂಲಕ ಮುಂದಿನ ಜನಾಂಗದ ಜೀವನವಿಧಾನವನ್ನು ಪಟ್ಟಭದ್ರ ಹಿತಾಸಕ್ತಿಗಳ ಮೂಗಿನನೇರಕ್ಕೆ ನಿರ್ದೇಶಿಸಲುದ್ದೇಶಿತ ಪಠ್ಯಕ್ರಮದಿಂದ ಹೊರಬರಬೇಕಾಗಿದೆ.

Advertisement

ಈಗ ಹೇಗೋ ಗೊತ್ತಿಲ್ಲ. ನನ್ನ ಕಾಲದ ಶಾಲೆಗಳಲ್ಲಿ ಮಕ್ಕಳನ್ನು ವಿಧೇಯನೋ, ಅವಿಧೇಯನೋ ವರ್ಗೀಕರಿಸಲು ಸರ್ವಸಾಮಾನ್ಯವಾಗಿ ಬಳಸಲ್ಪಡುತ್ತಿದ್ದ ಮಾನದಂಡವೊಂದಿತ್ತು. ಮೇಷ್ಟ್ರುಹೇಳಿದ್ದಕ್ಕೆಲ್ಲಾ ಗೋಣಾಡಿಸಿದರೆ ವಿಧೇಯನೆಂತಲೂ, ತಿರುಗಿ ಪ್ರಶ್ನೆ ಮಾಡಿದರೆ ಅಧಿಕ ಪ್ರಸಂಗಿಯೆಂತಲೂ ಹಣೆಪಟ್ಟಿ ಹಚ್ಚಿಬಿಡುತ್ತಿದ್ದರು. ’ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ’ ಎಂದು ಪುರಂದರ ದಾಸರದಾರ್ಶನಿಕ ಮಾತಿನ ಅರ್ಥವನ್ನು ಶಬ್ದಾರ್ಥಕ್ಕೆ ಸೀಮಿತಗೊಳಿಸಿ ತಮಗನುಕೂಲವಾಗಿ ಆಗಾಗ ಬಳಸಿಕೊಂಡು ಆ ಮುಕ್ತಿಯೆಂಬ ಅನರ್ಘ್ಯ ದ್ರವ್ಯವೆಂತಾದ್ದೋ ದಕ್ಕದೆಂಬ ಬ್ಲಾಕ್‍ಮೈಲ್. ಇಂತಾದ್ದೊಂದು ಗುಲಾಮಿತನದಲ್ಲಿ ನನ್ನ ವಿಧ್ಯಾಭ್ಯಾಸದ ಆಯಸ್ಸನ್ನೆಲ್ಲಾ ಕಳೆದು ಬಿಟ್ಟೆನಾದರೂ ಆಗಾಗ ನನ್ನನ್ನು ಒಳಗೊಳಗೇ ತಿವಿಯುತ್ತಿದ್ದ ಬಹಳಷ್ಟು ಪ್ರಶ್ನಿಸಬಾರದಾದ ಪ್ರಶ್ನೆಗಳು ಮಾತ್ರ ನನ್ನ ಅಂತರ್ಮನದಲ್ಲಿ ಕಾರ್ಮೋಡಗಟ್ಟಿದ್ದುವು. ಪ್ರತಿ ಕ್ಲಾಸು ರೂಮಿನ ಜೇಡರ ಬಲೆ ಕವಿದ ಗೋಡೆಗಳಿಂದ ಜೋತಾಡುವ ಚೌಕಟ್ಟುಗಳೊಳಗಿನ ಭಾವಚಿತ್ರಗಳಿಂದ ನನಗರ್ಥವಾಗದ ನಗೆಬೀರುವ ಚಾಚಾ ನೆಹರು ರನ್ನು ತೋರಿಸಿ ಮಕ್ಕಳೇ ನೀವೆಲ್ಲ ಅವರಂತಾಗಬೇಕು ಎಂದು ಹೇಳುತ್ತಿದ್ದರು. ಅವರಂತಾಗಲಾಗದಿದ್ದುದು ನನ್ನ ವೈಫಲ್ಯವೋ, ಅದೃಷ್ಟವೋ ಗೊತ್ತಿಲ್ಲ. ಆದರೆ “ ಯಾಕೆ? ಅವರಲ್ಲೇನಂಥಾ ವಿಶೇಷತೆಯಿತ್ತು?” ಎಂದು ಅಂದೇ ಮೂಡಿದ ಜಿಜ್ಞಾಸೆಗೆ ಇಂದಿನವರೆಗೆ ಯಾವ ಮೇಷ್ಟರೂ ಸಮರ್ಪಕವಾಗಿ ಉತ್ತರಿಸಿಲ್ಲ. ಅವರಿಗೂ ಗೊತ್ತಿಲ್ಲವೋ? ಅಥವಾ “ಮುಕ್ತಿಗೆ (?)” ಹೆದರಿದರೋ?
ಮಕ್ಕಳ ದಿನಾಚರಣೆಯೆಂಬ ದಿನವೊಂದನ್ನು ಅವರಿಗಾಗಿಯೇ ಮೀಸಲಿಟ್ಟು ಇಡೀ ದೇಶದಮಕ್ಕಳು ನೆಹರೂ ಚಾಚಾರನ್ನು ಸ್ಮರಿಸಿಕೊಳ್ಳಲೇ ಬೇಕು. ನಿಜ, ಮಕ್ಕಳನ್ನು, ಮೊಮ್ಮಕ್ಕಳನ್ನು, ಮರಿಮಕ್ಕಳನ್ನು, ದಾಮಾದ್‍ಗಳನ್ನೂ ಅವರು ಪ್ರೀತಿಸಿದರು. ಕೂತುಂಡರೂ ಕರಗದಷ್ಟು ಶ್ರೀಮಂತಗೊಳಿಸಿದರು. ( ಆದರೆ ಆ ಮಕ್ಕಳು ಮರಿಮಕ್ಕಳು ಅನ್ಯರದ್ದಲ್ಲ ಅವರವೇ ಅನ್ನುವುದು ಮಾತ್ರ ಅನ್-ಟೋಲ್ದ್ ಟ್ರುಥ್)
ಅದರ ಬಗ್ಗೆ ನನ್ನದೇನೂ ಅಭ್ಯಂತರವಿಲ್ಲ. ಆದರೆ ನನ್ನನ್ನು ಮಾತ್ರವಲ್ಲ ನನ್ನ ಮುಂದಿನ ಜನಾಂಗವನ್ನೂ ಬೆಂಬಿಡದೆ ಕೂತರೆ ನಿಂತರೆ ನೆಹರೂರಂತಾಗು ನೆಹರೂರಂತಾಗು ಎಂದು ವಿಕ್ರಮಾದಿತ್ಯನ ಬೆನ್ನು ಹತ್ತಿದ ಬೇತಾಳದಂತೆ ಪೀಡಿಸುವ ಅಶರೀರವಾಣಿಗಳು ಮಾತ್ರ ನಿಜಕ್ಕೂ ಮನಸ್ಸಿಗೆ ಕಿರಿಕಿರಿಯುಂಟು ಮಾಡಿ ರೇಜಿಗೆ ಹಿಡಿಸುವಂತಾದ್ದು.
ನನ್ನ ಮಾತು ನಿಮಗೆ ಅರ್ಥವಾಗಬೇಕಾದರೆ 9 ನೇ ತರಗತಿಯ ತೃತೀಯ ಭಾಷಾ ಪಠ್ಯ ಪುಸ್ತಕ ಹಿಂದಿ ವಲ್ಲರಿ -2015 (ಕರ್ನಾಟಕ ಟೆಕ್ಸ್ಟ್ ಬುಕ್ ಸೊಸೈಟಿ) ಕೈಗೆ ತೆಗೆದುಕೊಳ್ಳಿ. ಅದರಲ್ಲಿ 9 ನೇ ಕ್ರಮಾಂಕದ ಗದ್ಯ ಪಾಠವೊಂದಿದೆ, “ಖೇಲೋ -ಕೂದೋ -ಸ್ವಾಸ್ಥ್ ರಹೋ “
ಆಟಗಳ ಪ್ರಪಂಚದಲ್ಲಿ ಸದಾ ಆನಂದ ಮತ್ತು ಉಲ್ಲಾಸದ ವಾತಾವರಣವಿರುತ್ತದೆ. ಉತ್ಸಾಹದ ತಂಗಾಳಿ ಬೀಸುತ್ತಿರುತ್ತದೆ. ಆಟಗಳಿಂದ ತನು ಮನ ಆರೋಗ್ಯವಾಗಿರುತ್ತದೆ. ಮನೋರಂಜನೆ ದೊರೆಯುತ್ತದೆ. ಎಂಬಿತ್ಯಾದಿ ಏನೇನೂ ವಿಶೇಷತೆಗಳಿಲ್ಲದ ಸವಕಲು ನಾಣ್ಯದ ಹಳಸಲುಮಾಹಿತಿಗಳಿಂದ ಪಾಠ ಆರಂಭವಾಗುತ್ತದೆ. ಅರ್ಧಕ್ಕರ್ಧ ಇಂತಹ ಪಠ್ಯ ವಿಷಯಗಳಿಂದಲೇ ತುಂಬಿದ್ದ ನಮ್ಮ ಕಲಿಕಾ ವ್ಯವಸ್ಥೆಯಲ್ಲಿ ಅಂಥಾದ್ದನ್ನೆಲ್ಲಾ ಸಹಿಸಿ ಸಹಿಸಿ ಈಗೀಗಒಗ್ಗಿಕೊಂಡಿದ್ದೇವೆ ಅನ್ನಿ.
ಈ ಪಾಠದ ಅರ್ಧ ಭಾಗವೋ, ಅದಕ್ಕಿಂತ ಕಮ್ಮಿಯೋ ಇಂತಹ ಕ್ಲೀಷೆಯ ವಿಚಾರಗಳನ್ನೇ ಉರುಹಿದ ಮೇಲೆಇದ್ದಕ್ಕಿದ್ದಂತೆ ನೀರಸ ಸಿನೇಮಾದ ಮದ್ಯೆ ತುರುಕಿದ ಪೆಪ್ಸಿ ಜಾಹೀರಾತಿನಂತೆ ದುತ್ತನೆ – ತಾಳ ಮೇಳವಿಲ್ಲದ ಹಾಗೂ ಪಾಠದ ಮಾಹಿತಿಯ ಚೌಕಟ್ಟಿಗೆ ಪ್ರಸ್ತುತವೇ ಅಲ್ಲದ ನಮ್ಮ ಶ್ರೀಮಾನ್ ಚಾಚಾ ಜವಾಹರಲಾಲಾ ನೆಹರೂರವರು “ಟಡಾ…..” ಎನ್ನುತ್ತಾ ಅಲಾವುದ್ದೀನದ ಜೀನಿಯಂತೆ ಎಂಟ್ರಿಕೊಡುತ್ತಾರೆ.
ನಂಬಿ. ಗಾಬರಿಬಿದ್ದು ತಕ್ಷಣ ನಾನು ನೆಹರೂರವರು ಯಾವ ಯಾವ ಆಟೋಟದಲ್ಲಿ ಪರಿಣತರು ಮತ್ತು ಯಾವಯಾವ ಒಲಿಂಪಿಕ್ಸ್ ಅಥವಾ ಏಷ್ಯಾಡ್ ನಲ್ಲಿ ಭಾಗವಹಿಸಿ ಮೆಡಲ್ ತಂದಿದ್ದಾರೆಯೆಂದು ತಿಳಿಯಲು ತಡಬಡಾಯಿಸುತ್ತಾ ಗೂಗಲ್ ಮಾಡಿದೆ. ಫಲಿತಾಂಶ ನಾನು ಹೇಳುವುದಿಲ್ಲ. ಗೂಗಲ್ ಮಾಡಿ ನೀವೇ ತಿಳಿಯಿರಿ.ಇಂತಹದ್ದೇ ಬೆಸ್ತುಬೀಳುವ ಪ್ರಸಂಗ ನಿಮಗೆ ಬೆಂಗಳೂರಿನಲ್ಲಿರುವ ತಾರಾಲಯಕ್ಕೆ ಭೇಟಿಕೊಟ್ಟಾಗಲೂ ಆಗದಿರದು. ತಾರಾಲಯ ಅಂದಕೂಡಲೇ ಪಾಠ ಪುಸ್ತಕಗಳ ಹೊರತಾಗಿ ಒಂದಿಷ್ಟು ತಿಳಿದುಕೊಂಡವರು ನೀವಾಗಿದ್ದರೆ ತಕ್ಷಣ ನಿಮ್ಮ ತಲೆಗೆ ಆರ್ಯಭಟ, ಬ್ರಹ್ಮಗುಪ್ತ, ಭಾಸ್ಕರ, ವರಾಹಮಿಹಿರ, ಇಸ್ರೋ ವಿಜ್ಞಾನಿಗಳು ಹೀಗೆ ಹೆಸರುಗಳು ಸುಳಿಯುತ್ತವೆ. ಆದರೆ ವಿಡಂಬನೆಯೆಂದರೆ ಆ ಎಲ್ಲಾ ಮಹಾನುಭಾವರನ್ನು ಒಂದೇ ಏಟಿಗೆ ಬದಿಗೊತ್ತಿ ನಮ್ಮ ಚಾಚಾ ಜವಾಹರಲಾಲಾ ನೆಹರೂ ರವರು ವಿಜ್ರಂಭಿಸಿದ್ದಾರೆ. ತಾರಾಲಯದ ಹೆಸರೇ – ನೆಹರೂ ತಾರಾಲಯ. ವೈಮಾಂತರಿಕ್ಷ ಕ್ಷೇತ್ರದಲ್ಲಿ ಚಾಚಾ ನೆಹರೂರವರ ಮಹತ್ತರ ಸಾಧನೆಗಳನ್ನು ವರ್ಣಿಸಲು ನನಗೆ ತಿಳಿಯುತ್ತಿಲ್ಲ. ನೀವೇ ಗೂಗಲ್ ಮಾಡಿ – ನನ್ನನ್ನು ಆ ಕಷ್ಟದಿಂದ ಪಾರುಮಾಡಿ.
ವಿಪರ್ಯಾಸವೆಂದರೆ, ಭಾಗ್ ಮಿಲ್ಖಾ ಭಾಗ್ ಸಿನೆಮಾ ನೋಡುವವರೆಗೆ ನನಗೆ ನೆಹರೂರವರ ಸಮಕಾಲೀನರಾದ ಜೀವಂತ ದಂತ ಕಥೆಯಾಗಿರುವ ಮಿಲ್ಖಾ ಸಿಂಗ್ ಬಗ್ಗೆ ಗೊತ್ತಿರಲಿಲ್ಲ. ಗೊತ್ತಿರಲಿಲ್ಲ ಅನ್ನುವುದಕ್ಕಿಂತ ಅಂಥವರ ಬಗ್ಗೆ ಗೊತ್ತಾಗದಂತೆ ಮಾಡಿದ್ದರು ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ.
ನಮ್ಮ ಈ ಖೇಲೋ -ಕೂದೋ ಹಿಂದೀ ಪಾಠದಲ್ಲಿ ಚಾಚಾ ಜವಹರಲಾಲಾ ನೆಹರು ರವರ ಹೊರತಾಗಿ ಒಬ್ಬನೇ ಒಬ್ಬ ಅಥವಾ ಒಬ್ಬಳು ಕ್ರೀಡಾ ಪಟುವಿನ ವಿಚಾರವೇ ಅದರಲ್ಲಿ ಬರುವುದಿಲ್ಲ. ಒಂದು ಕ್ರೀಡೆಯ ಬಗೆಗಿನ ಪಾಠವೆಲ್ಲ ನೆಹರೂಮಯ ಮತ್ತು ವ್ಯಕ್ತಿಯಾರಾಧನೆಯ ಸಾಲುಗಳನ್ನು ಭಜಿಸುತ್ತಾ ಗಿರಕಿಹೊಡೆಯುತ್ತದೆ. ಕುದುರೆ ಸವಾರಿ ಕಲಿಯಲು ಹೋಗಿ ಬಿದ್ದುಗಾಯಮಾಡಿಕೊಂಡದ್ದೇ ಇತರ ಯಾವುದೇ ಕ್ರೀಡಾಪಟುವಿಗಿಂತ ಅತಿ ದೊಡ್ಡ ಅರ್ಹತೆಯಾಗಿ ಅವರೊಬ್ಬರ ಹೆಸರೇ ಕ್ರೀಡೆಯ ಈ ಇಡೀ ಪಠ್ಯದಲ್ಲಿ ಬರೊಬ್ಬರಿ ಒಂಬತ್ತು ಸಲ ನೆಹರೂರವರ ಹೆಸರು ಉಲ್ಲೇಖಿಸಿ ವಿವರಿಸಲಾಗಿದೆ.ನೀವೇ ಲೆಕ್ಕಹಾಕಿನೋಡಿ. ಅಷ್ಟಕ್ಕೇ ಮುಗಿಯಿತು ಅಂದುಕೊಂಡಿರಾ? ತಾಳಿ ಪಠ್ಯದ ಕೊನೆಗೆ ಇರುವ ಪ್ರಶ್ನೆಗಳೂ ಅವರ ಸುತ್ತಲೇ ಪ್ರದಕ್ಷಿಣೆಮಾಡುತ್ತವೆ.

ಇಂಥಾ ಆಭಾಸಗಳಿಂದಲೇ ತುಂಬಿದ ಪಾಠಗಳನ್ನು ವಿವೇಚನೆಯಿಲ್ಲದೆ ಉರುಹೊಡೆದು ನೂರಕ್ಕೆ ನೂರು ವಾಂತಿಮಾಡುವ ಮಕ್ಕಳನ್ನು ಪ್ರತಿಭಾವಂತರೆಂದು ವರ್ಗೀಕರಿಸಿ ತಲೆಯಮೇಲೆ ಹೊತ್ತು ಸನ್ಮಾನಿಸುತ್ತದೆ ನಮ್ಮ ಶಿಕ್ಷಣ ವ್ಯವಸ್ಥೆ.ಈಗಿನ ಶಿಕ್ಷಣ ವ್ಯವಸ್ಥೆಯಲ್ಲಿ ಬಹಳಷ್ಟು ಹುಳುಕುಗಳೇ ತುಂಬಿವೆ ಎಂಬುದು ಬಹುತೇಕ ಚಿಂತಕರ ಅಂಬೋಣ. ಇದು ಶಿಕ್ಷಣವೇ ಅಲ್ಲ ಅನ್ನುವವರೂ ಬಹಳಷ್ಟು ಮಂದಿ ಇದ್ದಾರೆ. ಎಲ್ಲಿ ಹೇಗೆ ತಪ್ಪಾಗಿದೆ ಎಂಬುದರ ಸ್ಪಷ್ಟ ಚಿತ್ರಣ ಅಳತೆಗೆ ಸಿಗದಿರುವುದರಿಂದ ಸರಿಪಡಿಸುವ ಪ್ರಕ್ರಿಯೆಯನ್ನು ಎಲ್ಲಿಂದ ಆರಂಭಿಸಬೇಕೇಂದೇ ಗೊತ್ತಾಗದ ಗೋಜಲು-ಗೊಂದಲ. ಒಂದೊಮ್ಮೆ ಭಾರತವನ್ನು ಸುವರ್ಣಯುಗಕ್ಕೆ ಕೊಂಡೊಯ್ದಿದ್ದ ಇಲ್ಲಿಯ ಕಲಿಕಾ ವ್ಯವಸ್ಥೆಯನ್ನು ಧ್ವಂಸಮಾಡಿ ನಮ್ಮನ್ನು ದಾಸ್ಯಕ್ಕೆ ಮಾನಸಿಕವಾಗಿ ಅಣಿಗೊಳಿಸುವ ಆಧುನಿಕ ಶಿಕ್ಷಣ ವ್ಯವಸ್ಥೆಯೆಂಬ ಉರುಹೊಡೆಯುವ ಮತ್ತು ಉರುಹೊಡೆದುದನ್ನು ಯಥಾವತ್ತಾಗಿ ವಾಂತಿಮಾಡುವ ಯಾಂತ್ರಿಕ ಪದ್ದತಿಯೊಂದು ಆಚರಣೆಗೆ ಬಂದುದು ಈಗ ಇತಿಹಾಸ. 1947 ರ ಸ್ವಾತಂತ್ರ್ಯವೆಂದು ಕರೆಯಲ್ಪಡುವ ಅಧಿಕಾರ ಹಸ್ತಾಂತರದ ನಂತರ ಬಂದ ಗೋಧಿವರ್ಣದ ಭಾರತೀಯ ಬ್ರಿಟೀಷರು ಯೂರೋಪಿನ ಬ್ರಿಟಿಷರನ್ನು ನಾಚಿಸುವಂತೆ ತಮ್ಮ ಪಟ್ಟಭದ್ರ ಹಿತಾಸಕ್ತಿಗಳಿಗೆ ಆ ಶಿಕ್ಷಣ ವ್ಯವಸ್ಥೆಯನ್ನು ಯಶಸ್ವಿಯಾಗಿ ಬಳಸಿಕೊಂಡರು. ವ್ಯಕ್ತಿಯಾರಾಧನೆಯ ಪಠ್ಯಗಳನ್ನು ಹೊಟ್ಟೆ ಉಬ್ಬರಿಸಿ ಅಜೀರ್ಣವಾಗುವಷ್ಟು ಮಕ್ಕಳಿಗೆ ಉರುಹೊಡೆಸಿದವು.
ಇದೀಗ ತಡವಾಗಿಯಾದರೂ, ಬಹುತೇಕರ ಮನಸ್ಸಿಗೆ ನಮ್ಮ ಮಕ್ಕಳನ್ನು ರೋಬೋಟ್‍ಗಳಂತಲ್ಲದೆ ತಾರ್ಕಿಕ ಮನಸ್ಸಿನ, ಸಂವೇದನಾಶೀಲ, ಬುದ್ದಿವಂತ ಮನುಷ್ಯರನ್ನಾಗಿಸುವಂತಹ ರಚನಾತ್ಮಕ ಶಿಕ್ಷಣ ವ್ಯವಸ್ಥೆಯೊಂದರ ಹಂಬಲ ತೀವ್ರವಾಗುತ್ತಿದೆ.
ಒಟ್ಟಂದದಲ್ಲಿ ಧನಾತ್ಮಕ ಬೆಳವಣಿಗೆಯೇ. ಆದರೆ ಬುದ್ದಿಜೀವಿಗಳೆಂದು ಕರೆದುಕೊಳ್ಳುವ  ನಮ್ಮ ವ್ಯವಸ್ಥೆಯಲ್ಲಿ ಸೃಜನಾತ್ಮಕ ಬದಲಾವಣೆಯೊಂದು ಅಸಾಧ್ಯ. ಪ್ರಜೆಗಳು ಚಿಂತನಶೀಲರಾದರೆ ಅವರ ಓಲೈಕೆಯ ಜಾತಿ-ಧರ್ಮಾಧಾರಿತ ವ್ಯವಸ್ಥೆಗೂ ಕಂಟಕವೇ ಆದುದರಿಂದ ಯಥಾಸ್ಥಿತಿಯನ್ನು ಕಾಪಾಡಿಕೊಳ್ಳುವುದು ಅಸ್ಥಿತ್ವ ಉಳಿಸಿಕೊಳ್ಳುವ ದೃಷ್ಟಿಯಿಂದ ಅವರಿಗೆ ಅದು ಅನಿವಾರ್ಯ ಕೂಡಾ.
ಯುವಲ್ ನೋಹ್ ಹರಾರಿಯವರು ಬರೆದ ಸೇಪಿಯನ್ಸ್ – ಎ ಬ್ರೀಫ್ ಹಿಸ್ಟರಿ ಆಫ್ ಮ್ಯಾನ್ ಕೈಂಡ್ ಪುಸ್ತಕ ನೀವು ಓದಿದರೆ ವ್ಯಕ್ತಿಯಾರಾಧನೆಯ ಪಠ್ಯಗಳನ್ನು ಮಕ್ಕಳ ಮೇಲೆ ಹೇರುವುದರ ಹಿಂದಿನ ಮರ್ಮ ಸರಳವಾಗಿ ನಿಮಗೆ ಅರ್ಥವಾಗುತ್ತದೆ. ಪಿಗ್ಮೆಂಟ್ ಆಫ್ ಇಮ್ಯಾಜಿನೇಶನ್ಸ್ ಮತ್ತು ಇಮ್ಯಾಜಿನ್ಡ್ ಆರ್ಡರ್ ಎಂದು ಅವರು ಪುಸ್ತಕದಲ್ಲಿ ಕರೆದಿರುವ ಕಲ್ಪನೆಯ ಲೋಕವೊಂದನ್ನು ಮಕ್ಕಳ ತಲೆಗೆ ತುಂಬಿ ಅಥವಾ ವರ್ಗಾಯಿಸಿ ಅವರ ಬದುಕಿನ ವಿಧಾನವನ್ನು,ದಾರಿಗಳನ್ನು ಮತ್ತು ತಿರುವುಗಳನ್ನು ತಮಗನುಕೂಲವಾಗುವಂತೆ ನಿರ್ದೇಶಿಸುವುದು ಹಿಂದಿನ ತಲೆಮಾರು ಮಾಡಿಕೊಂಡು ಬಂದಿರುವ ಯಶಸ್ವೀಸರಳಮತ್ತುಅತೀಅಗ್ಗದ ವಿಧಾನ. ಮೇಲ್ನೋಟಕ್ಕೆ ಇದು ಅಂಥ ಮಹತ್ವದ್ದಾಗಿ ಕಾಣಿಸದಿದ್ದರೂ ಇದರ ಸಾಮರ್ಥ್ಯ ಅಣುಬಾಂಬಿಗಿಂತಲೂ ದೊಡ್ಡದು. ಇಂತಹ ತಂತ್ರಗಳಿಂದಲೇ ಗ್ರಾಹಕೀಕರಣ (ಕನ್ಸ್ಯೂಮರಿಸ್ಮ್) ವಿಜ್ರಂಭಿಸುತ್ತಿರುವುದು. ಆರೋಗ್ಯಕ್ಕೆ ಒಳ್ಳೆಯದಲ್ಲವೆಂದು ತ್ಜಿಳಿದಿದ್ದರೂ ಜನದುಂಬಾಲುಬಿದ್ದು ಕೋಕ್ ಕುಡಿಯುವುದು.
ಭೂಮಿ ಅಂಗೈಯಷ್ಟಗಲವಾಗಿ ಮಾಹಿತಿಗಳ ಮಹಾಪೂರವೇ ಪ್ರವಾಹೋಪಾದಿಯಲ್ಲಿ ಹರಿದುಬರುತ್ತಿರುವ ಈ ಯುಗದಲ್ಲಾದರೂ ವ್ಯಕ್ತಿಯಾರಾಧನೆಯ ಪಠ್ಯಗಳ ಮೂಲಕ ಮುಂದಿನ ಜನಾಂಗದ ಜೀವನವಿಧಾನವನ್ನು ಪಟ್ಟಭದ್ರ ಹಿತಾಸಕ್ತಿಗಳ ಮೂಗಿನನೇರಕ್ಕೆ ನಿರ್ದೇಶಿಸಲುದ್ದೇಶಿತ ಪಠ್ಯಕ್ರಮದಿಂದ ಹೊರಬರಬೇಕಾಗಿದೆ.ತಮ್ಮ ಇಚ್ಚೆಗನುಸಾರವಾಗಿ ಅವರವರ ಜೀವನವನ್ನು ರೂಪಿಸಿಕೊಳ್ಳುವ ಅಧಿಕಾರ ಸ್ವಾತಂತ್ರ ಮಕ್ಕಳಿಗೆ ಕೊಡೋಣ.ದೇಶಕ್ಕೆ ಸಮಾಜಕ್ಕೆ ಮತ್ತು ಲೋಕಕ್ಕೆ ಆ ಜೀವನಕ್ರಮಗಳು ಆರೋಗ್ಯಪೂರ್ಣವಾಗಿರುವಂತೆ ತಿಳಿಹೇಳುವುದಷ್ಟೇ ಶಿಕ್ಷಕರಮತ್ತುಹಿರಿಯರ ಕೆಲಸವಾಗಲಿ.ಈನಿಟ್ಟನಲ್ಲಿ, ಶಿಕ್ಷಕರು ಆರೋಗ್ಯಪೂರ್ಣ ಅಡುಗೆ ತಯಾರಿಸುವ ವಿಧಾನವನ್ನು ಕಲಿಸುವ ಗುರುಗಳಾಗಿಯಷ್ಟೇ ನಮ್ಮ ಶಿಕ್ಷಣವ್ಯವಸ್ಥೆಯಲ್ಲಿ ಜವಾಬ್ದಾರಿಯನ್ನು ನಿರ್ವಹಿಸಬೇಕಾಗಿದೆ. ಕಗ್ಗದ ನಾಲ್ಕೇ ಸಾಲುಗಳು ಇದನ್ನು ಮನೋಜ್ಞವಾಗಿ ವಿವರಿಸುತ್ತದೆ.

Advertisement

ನೂರಾರು ಮತವಿಹುದು ಲೋಕದುಗ್ರಾಣದಲಿ
ಆರಿಸಿಕೋ ನಿನ್ನ ರುಚಿಗೊಪ್ಪುವುದನದರೊಳ್
ಸಾರದಡುಗೆಯನೊಳವಿಚಾರದೊಲೆಯಲಿ ಮಾಡು
ಬೇರೆ ಮತಿ ಬೇರೆ ಮತ – ಮಂಕುತಿಮ್ಮ

 

Advertisement
Advertisement
Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಚುನಾವಣೆ ಹಾಗೂ “ನೀತಿ” ಸಂಹಿತೆ ಮತ್ತು ಜಗಳ…! |
April 18, 2024
3:00 PM
by: ಮಹೇಶ್ ಪುಚ್ಚಪ್ಪಾಡಿ
ದೇವರು ಧರ್ಮ ಭಕ್ತಿ ಒಂದು ಒಣ ಆಡಂಬರವಲ್ಲ, ಅದು ನಮ್ಮ ಆತ್ಮಸಾಕ್ಷಿಯ ನಡವಳಿಕೆ | ರಾಮನವಮಿ ಪ್ರಯುಕ್ತ ಬರೆಯುತ್ತಾರೆ ವಿವೇಕಾನಂದ. ಎಚ್. ಕೆ.
April 17, 2024
4:37 PM
by: ವಿವೇಕಾನಂದ ಎಚ್‌ ಕೆ
ಅಡಿಕೆ ತೋಟಕ್ಕೆ ಉದಿ ಏಕೆ ಹಾಕಬೇಕು…?
April 15, 2024
7:55 PM
by: ಪ್ರಬಂಧ ಅಂಬುತೀರ್ಥ
ಬಾಬಾಸಾಹೇಬರನ್ನು ನೆನೆಯುತ್ತಾ…… ಸಂವಿಧಾನ, ಬಾಬಾ ಸಾಹೇಬ್ ನೀಡಿದ ನೆರಳು
April 13, 2024
4:36 PM
by: ವಿವೇಕಾನಂದ ಎಚ್‌ ಕೆ

You cannot copy content of this page - Copyright -The Rural Mirror