ಉಜಿರೆ: ವೈದ್ಯರು ಮಾನವೀಯತೆಯೊಂದಿಗೆ ಹಾಗೂ ನಗುಮುಖದಿಂದ ಮಾತೃ ಹೃದಯದೊಂದಿಗೆ ರೋಗಿಗಳ ಸೇವೆ ಮಾಡಬೇಕು. ರೋಗಿಗಳ ಸೇವೆಯೇ ದೇವರ ಸೇವೆಯಾಗಿದೆ ಎಂದು ಬೆಂಗಳೂರಿನ ಶ್ರೀ ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ಹೇಳಿದರು.
ಅವರು ಸೋಮವಾರ ಧರ್ಮಸ್ಥಳದಲ್ಲಿ ಅಮೃತವರ್ಷಿಣಿ ಸಭಾ ಭವನದಲ್ಲಿ ಎರಡನೆ ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಆಸ್ಪತ್ರೆ, ಜೈಲು ಮತ್ತು ರುದ್ರಭೂಮಿ ನೋಡಿದಾಗ ನಮಗೆ ಆಧುನಿಕ ಜೀವನದ ಸಮಸ್ಯೆಗಳ ಅರಿವಾಗುತ್ತದೆ. ಆಧುನಿಕ ಜೀವನ ಶೈಲಿ, ಆಹಾರ ಸೇವನಾ ಕ್ರಮ, ಸದಾ ಒತ್ತಡದ ಕೆಲಸಗಳು, ಅತಿಯಾದ ತಂತ್ರಜ್ಞಾನದ ಬಳಕೆ, ವಾಯುಮಾಲಿನ್ಯ, ಮೊಬೈಲ್ ಫೋನ್ ಬಳಕೆ ಇತ್ಯಾದಿ ಕಾರಣಗಳಿಂದ ಇಂದು ಎಳೆಯ ಪ್ರಾಯದಲ್ಲೇ ಮನುಷ್ಯರು ಮಧುಮೇಹ, ರಕ್ತದೊತ್ತಡ, ಕ್ಯಾನ್ಸರ್, ಹೃದಯಾಘಾತ ಮೊದಲಾದ ಭೀಕರ ರೋಗಗಳಿಗೆ ಬಲಿಯಾಗುತ್ತಾರೆ. ಯೋಗ ಮತ್ತು ಪ್ರಕೃತಿ ಚಿಕಿತ್ಸಾ ವಿಧಾನದಿಂದ ನಾವು ಸಂಪೂರ್ಣ ಆರೋಗ್ಯ ಭಾಗ್ಯವನ್ನು ಹೊಂದಬಹುದು ಎಂದು ಅವರು ಹೇಳಿದರು.
ಕೀಳರಿಮೆ ಹಾಗೂ ಅಹಂ ತ್ಯಜಿಸಿ ಧನಾತ್ಮಕ ಚಿಂತನೆಯೊಂದಿಗೆ ಸದಾ ಒಳ್ಳೆಯ ಕೆಲಸಗಳನ್ನು ಮಾಡಬೇಕು. ವೈದ್ಯರು ರೋಗಿಗಳೊಂದಿಗೆ ನಗುಮೊಗದಿಂದ ಮಾನವೀತೆಯಿಂದ ಮಾತನಾಡಿ, ಶುಶ್ರೂಷೆ ನೀಡಬೇಕು ಎಂದು ಅವರು ಕಿವಿಮಾತು ಹೇಳಿದರು. ಅಲೋಪತಿ, ಹೋಮಿಯೋಪತಿ, ನಾಚುರೋಪತಿ ಇತ್ಯಾದಿ ವೈದ್ಯಕೀಯ ಪದ್ಧತಿಗಳಿಗಿಂತಲೂ ಮಿಗಿಲಾಗಿ ವೈದ್ಯರಿಗೆ ರೋಗಿಗಳಲ್ಲಿ ಸಿಂಪತಿ ಇರಬೇಕು ಎಂದು ಅವರು ಹೇಳಿದರು. ಉಪವಾಸ, ವ್ಯಾಯಾಮ, ಯೋಗಾಭ್ಯಾಸ, ನಿತ್ಯ ನಡಿಗೆ ಇತ್ಯಾದಿ ಕ್ರಿಯೆಗಳಿಂದ ಆರೋಗ್ಯ ಭಾಗ್ಯ ಪಡೆಯಬಹುದು ಎಂದು ಡಾ.ಮಂಜುನಾಥ್ ಅಭಿಪ್ರಾಯಪಟ್ಟರು.
ಅಧ್ಯಕ್ಷತೆ ವಹಿಸಿದ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ನಾವು ಪಂಚೇಂದ್ರಿಯಗಳ ದಾಸರಾಗಬಾರದು, ಒಡೆಯರಾಗಬೇಕು. ಪಂಚೇಂದ್ರೀಯಗಳ ನಿಯಂತ್ರಣದಿಂದ ರೋಗರಹಿತವಾಗಿ ಆರೋಗ್ಯಪೂರ್ಣ ಜೀವನ ನಡೆಸಬಹುದು. ಧಾರ್ಮಿಕ ಆಚಾರ-ವಿಚಾರಗಳ ಅನುಷ್ಠಾನದಿಂದ, ಸದಾಚಾರದೊಂದಿಗೆ ಆದರ್ಶಜೀವನ ನಡೆಸಬೇಕು. ರಾಷ್ಟ್ರಪಿತ ಮಹಾತ್ಮಾಗಾಂಧೀಜಿ ಯೋಗ, ಪ್ರಾರ್ಥನೆ, ಧ್ಯಾನ ಮತ್ತು ಪ್ರಕೃತಿ ಚಿಕಿತ್ಸಾ ಪದ್ಧತಿಯನ್ನು ಸ್ವಯಂ ಅನುಷ್ಠಾನ ಮಾಡಿ ಆಚಾರ್ಯರಾದರು ಎಂದು ಹೆಗ್ಗಡೆಯವರು ಹೇಳಿದರು.
ಪ್ರಕೃತಿಚಿಕಿತ್ಸಾ ವೈದ್ಯರು ಕೀಳರಿಮೆ ಹೊಂದದೆ ಅಭಿಮಾನದಿಂದ ಈ ಪದ್ಧತಿಯ ರಾಯಭಾರಿಗಳಾಗಬೇಕು ಎಂದು ಹೆಗ್ಗಡೆಯವರು ಸಲಹೆ ನೀಡಿದರು. ಡಾ. ನವೀನ್ ಕೆ.ವಿ. ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರಕೃತಿ ಚಿಕಿತ್ಸಾ ದಿನಾಚರಣೆಯ ಮಹತ್ವ ವಿವರಿಸಿದರು. ಆಯುಷ್ ಇಲಾಖೆಯ ಜಂಟಿ ನಿರ್ದೇಶಕ ಡಾ.ಶ್ರೀಧರ ಭಟ್, ಹೇಮಾವತಿ ವಿ. ಹೆಗ್ಗಡೆಯವರು, ಡಿ. ಹರ್ಷೇಂದ್ರಕುಮಾರ್, ಸುಪ್ರಿಯಾ ಹರ್ಷೇಂದ್ರಕುಮಾರ್ ಉಪಸ್ಥಿತರಿದ್ದರು.
ಎಸ್.ಡಿ.ಎಂ.ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ.ಪ್ರಶಾಂತ ಶೆಟ್ಟಿ ಸ್ವಾಗತಿಸಿದರು. ಮೂಡಬಿದ್ರೆಯ ಆಳ್ವಾಸ್ ಪ್ರಕೃತಿ ಚಿಕಿತ್ಸಾ ಕಾಲೇಜಿನ ಪ್ರಾಂಶುಪಾಲೆ ಡಾ.ವನಿತಾ ರೈ ಧನ್ಯವಾದವಿತ್ತರು. ಜೋಸ್ನಾ ಮತ್ತು ಅನನ್ಯ ಕಾರ್ಯಕ್ರಮ ನಿರ್ವಹಿಸಿದರು. ಎಂಟು ಕಾಲೇಜುಗಳಿಂದ ಮುನ್ನೂರು ಪ್ರತಿನಿಧಿಗಳು ಭಾಗವಹಿಸಿದರು.
ದೇಶದ ಹಲವು ರಾಜ್ಯಗಳಲ್ಲಿ ಮುಂದಿನ ಎರಡು ದಿನ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಕರ್ನಾಟಕದ…
ವಿಜಯಪುರ ಜಿಲ್ಲೆಯಲ್ಲಿ ಕೋಟಿ ವೃಕ್ಷ ಅಭಿಯಾನ ಸೇರಿದಂತೆ ವಿವಿಧ ಯೋಜನೆಗಳ ಮೂಲಕ ಹಸಿರು…
ಅಡಿಕೆ ಸಿಪ್ಪೆ, ಸೋಗೆ ಮತ್ತು ಇತರ ಕೃಷಿ ಅವಶೇಷಗಳಿಂದ ಕಾರ್ಬನ್ ನ್ಯಾನೋಸ್ಫಿಯರ್ಗಳನ್ನು ಅಭಿವೃದ್ಧಿಪಡಿಸಿ,…
ದಕ್ಷಿಣ ಕನ್ನಡ ಜಿಲ್ಲೆಯನ್ನು ಮಂಗಳೂರು ಜಿಲ್ಲೆ ಎಂದು ಮರುನಾಮಕರಣ ಮಾಡುವ ಪ್ರಸ್ತಾವನೆಗೆ ಬೆಳ್ಳಾರೆ…
ಸುಬ್ರಹ್ಮಣ್ಯದಲ್ಲಿ ಐದು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಶ್ರೀ ಹೋಮಿಯೋಕೇರ್ ಗುತ್ತಿಗಾರಿಗೆ ಸ್ಥಳಾಂತರಗೊಂಡಿದ್ದು, ಎಸ್ಎಂಎಸ್ಜಿ ಕಾಂಪ್ಲೆಕ್ಸ್ನಲ್ಲಿ…
ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲೂ ಗುಡುಗು…