Advertisement
The Rural Mirror ಕಾಳಜಿ

ಬರ ಸಂಭಾವ್ಯತೆಯ ಹಿನ್ನೆಲೆಯಲ್ಲಿ ಜಿಲ್ಲಾಡಳಿತಕ್ಕೆ ಪತ್ರಕರ್ತ ಶ್ರೀ ಪಡ್ರೆ ಸಲಹೆ ನೀಡಿದ್ದಾರೆ, ಅದೇನು ?

Share

ಬರ ಸಂಭಾವ್ಯತೆಯ ಹಿನ್ನೆಲೆಯಲ್ಲಿ ಜಿಲ್ಲಾಡಳಿತಕ್ಕೆ ಪತ್ರಕರ್ತ ಅಡಿಕೆ ಪತ್ರಿಕೆ ಕಾರ್ಯನಿರ್ವಾಹಕ ಸಂಪಾದಕ ಶ್ರೀಪಡ್ರೆ ಸಲಹೆಗಳನ್ನು ನೀಡಿದ್ದಾರೆ. ತಕ್ಷಣವೇ ಈ ಕಾರ್ಯಕ್ರಮಗಳ ಅನುಷ್ಠಾನವಾಗಬೇಕು ಎಂದು ಅವರು ಮನವಿ ಮಾಡಿದ್ದಾರೆ. ಸರಕಾರ ಈ ಬಗ್ಗೆ ಎಚ್ಚೆತ್ತುಕೊಂಡರೆ ಬರ ಪರಿಹಾರಕ್ಕೆ ಇದೊಂದು ಮಾರ್ಗವಾಗಬಲ್ಲುದು. ಅವರು ನೀಡಿರುವ ಸಲಹೆ ಯಥಾವತ್ತಾಗಿ ಇಲ್ಲಿದೆ….


ಶ್ರೀ ಪಡ್ರೆ, ಕಾರ್ಯನಿರ್ವಾಹಕ ಸಂಪಾದಕರು, ಅಡಿಕೆ ಪತ್ರಿಕೆ

 

1. ಮಳೆಕೊಯ್ಲು ಕಣ್ಣಾರೆ ಕಾಣಲು ‘ಎಕ್ಸ್ ಪೋಶರ್ ವಿಸಿಟ್’ :

ಜಿಲ್ಲೆಯಲ್ಲಿ ಬೇರೆಬೇರೆ ವಿಧಾನಗಳಿಂದ ಮಳೆಕೊಯ್ಲು ಮಾಡಿ ಗೆದ್ದ ನೂರಾರು ಸಾಧಕರು ಹಳ್ಳಿ ಮತ್ತು ಪಟ್ಟಣ ಎರಡರಲ್ಲೂ ಇದ್ದಾರೆ. ಇವರ ಸಾಧನೆಯ ವಿವರ ಸಂಗ್ರಹಿಸಿ, ಅವರಲ್ಲಿಗೆ ಆಸಕ್ತ ನಾಗರಿಕರನ್ನು ಒಂದು ದಿನದ ಅಧ್ಯಯನ ಭೇಟಿಗೆ ಕರೆದೊಯ್ಯುವುದು ಒಳ್ಳೆಯ ಫಲಿತಾಂಶ ನಿರ್ದೇಶಿತ ಕಾರ್ಯಕ್ರಮವಾಗಬಹುದು. ಇದನ್ನು ಈ ಮಳೆಗಾಲದಲ್ಲೇ ಸತತವಾಗಿ, ವಾರಕ್ಕೊಮ್ಮೆ, ಬೇಕಿದ್ದರೆ ಭಾನುವಾರ ನಡೆಸಬಹುದು. ಇದನ್ನು ನಗರಪಾಲಿಕೆಗಳು ಮಾಡಬಹುದು, ಇನ್ನೂ ಚೆನ್ನಾಗಿ ಆಸಕ್ತ ಸರಕಾರೇತರ ಸಂಸ್ಥೆಗಳು ಮಾಡಬಹುದು. ಅಂಥ ಸಂಸ್ಥೆಗಳಿಗೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಅಥವಾ ನಗರಪಾಲಿಕೆಗಳು ಆರ್ಥಿಕ ಸಹಾಯ ಕೊಡಬಹುದು.

2. ತೆರೆದ ಬಾವಿ ಉಳಿಸಿ, ಬಳಸಿ ಅಭಿಯಾನ ಆರಂಭಿಸಿ :

ಆನೆ ಜೀವಂತ ಇದ್ದರೂ ಬೆಲೆಯಿದೆ, ಸತ್ತರೂ ಬೆಲೆಯಿದೆ ಎನ್ನುವಂತೆಯೇ ತೆರೆದ ಬಾವಿಗಳ ಸ್ಥಿತಿಯೂ. ಬಾವಿ ಮೇಲಿನ ಜಲಧರ ಪ್ರದೇಶದ ಜಲಮೂಲ. ಮರುಪೂರಣ ಮಾಡಲು ಸುಲಭ. ಅವರವರ ಮನೆ ಚಾವಣಿ, ಅಂಗಳದ ನೀರು ಬಳಸಿ ಬಾವಿಯ ಜಲಮಟ್ಟ ಕಾಯ್ದುಕೊಳ್ಳಬಹುದು. ಬಾವಿಯ ಸ್ಥಿತಿಗತಿ, ಮರುಪೂರಣ ಮಾಡಿದುದರ ಫಲಿತಾಂಶ – ಎಲ್ಲವೂ ಪಾರದರ್ಶಕ. ಬಗ್ಗಿ ನೋಡಿದರೆ ತಿಳಿಯುತ್ತದೆ, ಕೊಳವೆ ಬಾವಿಯಂತಲ್ಲ. ಬಾವಿಗೆ 4,500 ವರ್ಷಗಳ ಇತಿಹಾಸವಿದೆ. ಕೊಳವೆಬಾವಿಗೆ ಕೇವಲ ಅರ್ಧ ಶತಕದ ಇತಿಹಾಸ ಇದೆಯಷ್ಟೇ. ಕೊಳವೆಬಾವಿಯ ಹಾಗೆ ಮುಂದೊಂದು ದಿನ ಅದಕ್ಕೆ ಯಾರೋ ಪಾಲುದಾರರು ಕಾಣಿಸಿಕೊಳ್ಳುವ ಆತಂಕವಿಲ್ಲ. ಬಾವಿಗಳಲ್ಲಿ ಕಸ, ಕೊಳಕು ತುಂಬಿದ್ದರೆ ಅದನ್ನು ಶುಚಿಗೊಳಿಸಿ ಮರುಪೂರಣ ಮಾಡಬೇಕು. ವಿನಾ ಕಾರಣ ಬಾವಿ ಮುಚ್ಚುವುದು ತಪ್ಪು. ಹೊಟ್ಟು ಬಾವಿಯಾದರೂ ಅದನ್ನು ದೊಡ್ಡ ರೀತಿಯಲ್ಲಿ ಮರುಪೂರಣಕ್ಕೆ ಬಳಸಬಹುದು. ಬಾವಿಯನ್ನು ಮುಚ್ಚಿದ್ದರೂ, ಸ್ವಲ್ಪ ಮಣ್ಣು ಮೇಲೆತ್ತಿ ಅದನ್ನು ಮರುಪೂರಣಕ್ಕಾಗಿ, ಇಂಗು ಬಾವಿಯಾಗಿ ಬಳಸಬಹುದು. ಕರಾವಳಿ ಕರ್ನಾಟಕದ ಜನಕ್ಕೇ ತಮ್ಮ ಬಾವಿಯಲ್ಲಿ ನೀರುಳಿಸಿಕೊಳ್ಳಲು ಸಾಧ್ಯವಿಲ್ಲದಿದ್ದರೆ, ದೇಶದ ಯಾವ ಬಾವಿಯಲ್ಲೂ ನೀರಿರದು. ಅಷ್ಟು ಮಳೆ ಇಲ್ಲಿದೆ. ಇಲ್ಲಿ ಐದು ಸೆಂಟ್ಸ್ ಮನೆಯಲ್ಲಿರುವ ತೀರಾ ಬಡವನಿಗೂ ಕೂಡಾ ಅವನ ಇಡೀ ಕುಟುಂಬಕ್ಕೆ, ಇಡಿ ವರ್ಷಕ್ಕೆ ಬೇಕಾದಕ್ಕಿಂತ ಹೆಚ್ಚು ಮಳೆನೀರು ಚಾವಣಿಯ ಮೇಲೆಯೇ ಸುರಿಯುತ್ತದೆ. ಅದನ್ನೇ ಬಾವಿಗೆ ಇಳಿಸಿದರೆ, ಸಾಮಾನ್ಯ ಪರಿಸ್ಥಿತಿಯಲ್ಲಿ ಆ ಬಾವಿ ಬತ್ತದು.

3. ‘ಮದಕ ಪುನರುಜ್ಜೀವನ’ ಅಭಿಯಾನ ಆರಂಭಿಸಿ :

ಮೂರೂ ಬದಿಗಳಲ್ಲಿ ನೈಸರ್ಗಿಕ ಇಳಿಜಾರು ಇದ್ದು ನಾಲ್ಕನೇ ಬದಿಯಲ್ಲಿ ಒಡ್ಡು ನಿರ್ಮಿಸಿ ಲಕ್ಷ – ಕೋಟಿಗಟ್ಟಲೆ ಲೀಟರ್ ಮಳೆನೀರು ತಡೆಯುವ ಮದಕ ಕರಾವಳಿ ಕನ್ನಾಡಿನ ನಾವು ಮರೆತ ಜಲನಿಧಿ. ಕರಾವಳಿ ಕರ್ನಾಟಕ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ದಶಕಗಳ ಹಿಂದೆ 3,000 ಕ್ಕೂ ಹೆಚ್ಚು ಮದಕಗಳಿದ್ದುವು. ಮದಕ ಭತ್ತದ ಕೃಷಿಯ ಕಷ್ಟಕಾಲಕ್ಕೆ ನೀರಿಗಾಗಿ ರಚಿಸಿದ್ದರೂ ಅದು ಅದ್ಭುತವಾಗಿ ನೀರಿಂಗಿಸುವ ಇಂಗುಕೊಳ. ಬೇಸಿಗೆ ಬರುವ ಮುನ್ನವೇ ಅದು ತನ್ನ ಕೆಲಸ ಮುಗಿಸುತ್ತದೆ. ಅದರಲ್ಲಿ ಒರತೆ ಇರಲೇಬೇಕೆಂದಿಲ್ಲ. ಮದಕ ತನ್ನ ತಪ್ಪಲಿನ ಪ್ರದೇಶದ ಜಲಮಟ್ಟ ಏರಿಸಿಕೊಟ್ಟು ನೂರಾರು, ಸಾವಿರಾಉ ಇಂಗುಗುಂಡಿಗಳ ಕೆಲಸ ಮಾಡುತ್ತದೆ. ಮೊದಲಿಗೆ ಜಿಲ್ಲೆಯ ಮದಕಗಳ ಒಂದು ಪಟ್ಟಿ (ಇನ್ವೆಂಟರಿ) ತಯಾರಿಸಿ ಅವನ್ನು ಸಾರ್ವಜನಿಕ ಉದ್ದೇಶಕ್ಕೆ ಕಾಯ್ದಿರಿಸಬೇಕು. ಸಾಧ್ಯವಾದದ್ದನ್ನು ಗಟ್ಟಿಮುಟ್ಟಾದ ಒಡ್ಡು ಕಟ್ಟಿ ಪುನರುಜ್ಜೀವನ ಮಾದಬೇಕು. ಮದಕದ ಮಹತ್ವದ ಬಗ್ಗೆ ಊರ ಜನರಿಗೆ, ಶಾಲಾ ವಿದ್ಯಾರ್ಥಿಗಳಿಗೆ ತಿಳಿಸಿಕೊಡುವ ಮಾಹಿತಿ ಸತ್ರ ಆರಂಭಿಸಬೇಕು. ಈಗ ಹೆಚ್ಚು ಪ್ರಚಾರದಲ್ಲಿರುವ ರಾಜಸ್ಥಾನದ ಜೊಹಾಡ್ ಮತ್ತು ಮದಕ ಒಂದೇ ರೀತಿಯ ರಚನೆಗಳು.

4. ‘ಕಟ್ಟ ಕಟ್ಟೋಣ ಬನ್ನಿ’ ಚಳುವಳಿ :

ಮಳೆಗಾಲ ಕಳೆದ ಮೇಲೂ ಸಾಮೂಹಿಕವಾಗಿ ಮಾಡಿ ಗುಣ ಪಡೇಯಬಹುಡದ ಏಕ ಜಲಸಂರಕ್ಷಣಾ ಮಾರ್ಗ ಕಟ್ಟ ( ಟೆಂಪರರಿ ಚೆಕ್ ಡ್ಯಾಮ್ – ಸಿಮೆಂಟಿನದು ಅಲ್ಲ) ನಿರ್ಮಾಣ. ಹಿಂಗಾರು ಮಳೆ ನಿಂತ ನಂತರ ಹೊಳೆ, ತೋಡುಗಳ ಅಡ್ಡಲಾಗಿ, ಮಿತ ವೆಚ್ಚದಲ್ಲಿ ಇವುಗಳ ರಚನೆ ಮಾಡಿದರೆ ಆಯಾಯಾ ಕಟ್ಟ ಎಷ್ಟು ದೂರ ನೀರು ತಡೆಯುತ್ತದೆ, ಎಷ್ಟು ಎತ್ತರಕ್ಕೆ ನೀರು ಹಿಡಿದು ನಿಲ್ಲಿಸುತ್ತದೆ, ಸುತ್ತಲಿರುವ ಮಣ್ಣಿನ ವರ್ಗ ಹೇಗಿದೆ ಎಂಬುದನ್ನು ಅನುಸರಿಸಿ ಐವತ್ತು ಮೀಟರಿನಿಂದ ಐದು ಕಿಲೋಮೀಟರ್ ದೂರದ ವರೆಗೆ ಅದರ ಪರೋಕ್ಷ ಲಾಭ ಸಿಗುತ್ತದೆ. ಸುತ್ತಲಿನ ಜಲಮೂಲಗಳಲ್ಲಿ ನೀರು ಹೆಚ್ಚು ಕಾಲ ಉಳಿಯುತ್ತದೆ. ಸಕಾಲದಲ್ಲಿ ಕಟ್ಟಗಳ ಸರಣಿ ಕಟ್ಟುವುದರಿಂದ ( ಮರಳುಚೀಲದಿಂದ ಹಿಡಿದು ಬರೇ ಹೊಯಿಗೆಗೆ ಪ್ಲಾಸ್ಟಿಕ್ ಶೀಟು ಹೊದೆಸುವುದರ ಮೂಲಕ, ಕಲ್ಲು ಮತ್ತು ಫೈಬರ್ ಶೀಟ್ ಬಳಸಿ – ಬೇರೆಬೇರೆ ಪರಿಸ್ಥಿತಿಗಳಲ್ಲಿ ಬೇರೆಬೇರೆ ಸ್ಥಳೀಯ ವಸ್ತು ಬಳಸಿ ಕಟ್ಟ ಕಟ್ಟಲು ಬರುತ್ತದೆ) ಹೊಳೆ ಎರಡರಿಂದ ನಾಲ್ಕು ವಾರ ಕಾಲ ಹೆಚ್ಚು ಹರಿಯಬಲ್ಲುದು. ಕಟ್ಟಕ್ಕೆ ತಗಲುವ ಒಟ್ಟು ವೆಚ್ಚ ಮತ್ತು ಅದು ತಡೆದು ಕೊಡುವ ನೀರನ್ನು ಲೆಕ್ಕ ಹಾಕಿದರೆ ಇದು ಕನಿಷ್ಠ ವೆಚ್ಚದ ಜಲಸಂರಕ್ಷಣಾ ಕ್ರಮ. ತರಬೇತಿ ಕೊಟ್ಟು ನಮ್ಮ ಎನ್ಸಿಡಸಿ, ಎನ್ನೆಸ್ಸೆಸ್ ಮತ್ತಿತರ ವಿದ್ಯಾರ್ಥಿಗಳು ಮತ್ತು ಯುವಕ ಮಂಡಲ ಸದಸ್ಯರನ್ನು ಈ ಕೆಲಸಕ್ಕೆ ದೊಡ್ಡ ರೀತಿಯಲ್ಲಿ ಪ್ರೇರೇಪಿಸಬಹುದು. ಬರ ಬರುತ್ತದೆ ಎನ್ನುವುದು ಖಚಿತವಾಗುವ ಹೊತ್ತಿಗೂ ಇದನ್ನು ಸಮರೋಪಾದಿಯಲ್ಲಿ ಮಾಡಲು ಆಗುವುದು ದೊಡ್ಡ ಅನುಕೂಲ.

5. ದೃಢೀಕೃತ ಪ್ಲಂಬರುಗಳ ತರಬೇತಿ :

ಚಾವಣಿ ನೀರನ್ನು ತೆರೆದ ಬಾವಿಗಿಳಿಸುವ ಕೆಲಸ ಈ ಬಗ್ಗೆ ತರಬೇತಿ ಪಡೆದ ಪ್ಲಂಬರುಗಳು ಮಾಡಲು ಸಾಧ್ಯ. ಚೆನ್ನೈ ಮತ್ತು ಬೆಂಗಳೂರು ಈ ರೀತಿಯ ದೃಢೀಕೃತ ಪ್ಲಂಬರುಗಳನ್ನು ಸಜ್ಜುಗೊಳಿಸಿ ಕೆಲಸ ಮುಂದುವರಿಸುತ್ತವೆ. ಉಡುಪಿ, ಮಂಗಳೂರು ಮತ್ತು ಜಿಲ್ಲೆಯ ಇತರ ಪೇಟೆ ಪಟ್ಟಣಗಳಿಂದ ನಗರಪಾಲಿಕೆ ಪ್ಲಂಬರುಗಳನ್ನು ಆಹ್ವಾನಿಸಿ ತರಬೇತಿ ಕೊಟ್ಟು ತಂಡ ಸಜ್ಜುಗೊಳಿಸಿದರೆ ಚಾವಣಿ ನೀರಿನ ಮರುಪೂರಣ ಚುರುಕಾಗಿ ನಡೆದೀತು.

6. ಸಾಮೂಹಿಕ ಜಾಗೃತಿ ಕಾರ್ಯಕ್ರಮ – ‘ತರಬೇತುದಾರರ ತರಬೇತಿ’ :

ಜಿಲ್ಲೆಯಲ್ಲಿ ಯಾವುದೇ ಸಬ್ಸಿಡಿಗೆ ಕಾಯದೆ ಮಳೆಕೊಯ್ಲು ಮಾಡಲು ತಯಾರಿರುವ ದೊಡ್ಡ ಜನಸಮೂಹ ಇರುವುದು ನಿಜಕ್ಕೂ ಹೆಮ್ಮೆಯ ವಿಚಾರ. ಇದರಲ್ಲಿ ಹಲವರಿಗೆ ಸರಿಯಾದ ಮಾರ್ಗದರ್ಶನ ಇಲ್ಲ. ಇಂಥವರಿಗೆ ಮಾರ್ಗದರ್ಶನ ಕೊಡಲಿಕ್ಕಾಗಿಯೇ ಮಳೆಕೊಯ್ಲಿನ ತರಬೇತಿದಾರರನ್ನು ತಯಾರು ಮಾಡಬೇಕಿದೆ. ತೆರೆದ ಬಾವಿ ಮರುಪೂರಣಕ್ಕಿಂತ ಸಂಕೀರ್ಣ ಮತ್ತು ನೈಪುಣ್ಯ ಬೇಡುವ ಕೊಳವೆಬಾವಿ ಮರುಪೂರಣದಲ್ಲೂ ಇವರಿಗೆ ತರಬೇತಿ ಕೊಡಬಹುದು. ತರಬೇತಿ ಸ್ವಲ್ಪ ದೀರ್ಘಾವಧಿಯದ್ದಾಗಿ ಪ್ರಾತ್ಯಕ್ಷಿಕೆ, ಕ್ಷೇತ್ರ ಭೇಟಿ ಅಲ್ಲದೆ ‘ಮಾಡಿ’ ಗಳ ಜತೆ ‘ಬೇಡಿ’ಗಳನ್ನೂ ಸವಿವರವಾಗಿ ತಿಳಿಸಿಕೊಡುವಂತಿರಬೇಕು.

7. ನಗರ ನೆರೆ ನಿಯಂತ್ರಣ ಮತ್ತು ಜಲಮಟ್ಟ ಏರಿಕೆಗೆ ಇಂಗುಬಾವಿ ನಿರ್ಮಾಣ :

ಓಡುವ ಮಳೆನೀರನ್ನು ಇಂಗಿಸಲುಇಕ್ಕಾಗಿಯೇ ಮಾಡುವ ಇಂಗುಬಾವಿ ( ರೀಚಾರ್ಜ್ ವೆಲ್) ಗಳು ಜಿಲ್ಲೆಗೆ ಒಳ್ಳೆಯ ಕೊಡುಗೆ ಕೊಡಬಲ್ಲವು. ಕನಿಷ್ಠ ಮೂರು ಅಡಿ ವ್ಯಾಸದಿಂದ (ಶಿಫಾರಸು ಮಾಡುವ ಆಳ, ಹೆಚ್ಚಿನ ಪ್ರಯೋಜನಕ್ಕೆ – 20 ಅಡಿ) ಆಯಾ ಜಾಗದ ಅಗತ್ಯ ಹೊಂದಿ, ಸ್ಥಳಸಂಕೋಚ ಇರುವಲ್ಲಿ ಮಳೆನೀರ ಚರಂಡಿಯಲ್ಲೂ ಇವನ್ನು ನಿರ್ಮಿಸಬಹುದು. ಮಳೆ ಬಂದಾಗ ಎರಡಿಂಚಿನಿಂದ ಹೆಚ್ಚು ನೀರು ಹರಿದೋಡುವ ಚರ್ಚ್, ದೇಗುಲ, ಕಾಲೇಜು, ಕಲ್ಯಾಣ ಮಂಟಪ, ಕಮರ್ಶಿಯಲ್ ಕಾಂಪ್ಲೆಕ್ಸುಗಳಲ್ಲಿ ಇವನ್ನು ಮಾಡಬಹುದು. ಕಡಿಮೆ ಸಮಯದಲ್ಲ್ಲಿ ಹೆಚ್ಚು ಮಳೆನೀರನ್ನು ಭೂಮಿಗೆ ಸೇರಿಸುವುದರಲ್ಲಿ ಇಂಗುಬಾವಿಯಷ್ಟು ಸಮರ್ಥ ರಚನೆ ಬೇರೆ ಇಲ್ಲ. ಆದರೆ ಜಾಗದ ಆಯ್ಕೆ, ಸದಾ ಮುಚ್ಚಳ ಹಾಕಿ ಇಟ್ಟಿರುವುದು, ತುಂಬಲು ಒಳ್ಳೆ ಪ್ರಮಾಣದ ನೀರಿದೆಯೇ ಎಂದು ಖಚಿತ ಪಡಿಸಿಕೊಳ್ಳುವುದು ಅತ್ಯವಶ್ಯ. ನಗರದ ಕೃತಕ ನೆರೆ ಕುಗ್ಗಿಸಿ ಜತೆಜತೆಗೇ ಜಲಮಟ್ಟ ಏರಿಸಲು ಇದು ತುಂಬ ಸಹಾಯಕ.

8. ಪ್ರತಿ ಶಾಲೆಯಲ್ಲಿ ನೆಲಜಲ ಸಂರಕ್ಷಣೆಯ ಚಟುವಟಿಕೆ – ಶಾಲಾವನ :

ಪ್ರಕೃತಿಯಲ್ಲಿ ಜಲಲಭ್ಯತೆ ವೃದ್ಧಿಸಿ ಜನಜೀವನ ಸುಗಮವಾಗಿಸಬೇಕಾದರೆ ನೀರು ಮಾತ್ರವಲ್ಲ, ಮಣ್ಣು ಮತ್ತು ಅರಣ್ಯದ ( ಜಲ್, ಜಮೀನ್ ಮತ್ತು ಜಂಗಲ್) ಸಂರಕ್ಷಣೆ ಒಟ್ಟಾಗಿ ಮಾಡಬೇಕಿದೆ. ಈ ಬಗ್ಗೆ ಪ್ರಾಥಮಿಕ ಪಾಠವನ್ನು ಎಳವೆಯಿಂದಲೇ ಶಾಲಾ ಪಾಠದಲ್ಲೂ, ಪಾಠೇತರ ಚಟುವಟಿಕೆಗಳಲ್ಲೂ ಸೇರಿಸಬೇಕು. ಪ್ರತಿ ಶಾಲೆಯಲ್ಲಿ ಒಂದು ಪುಟ್ಟ ಶಾಲಾವನ, ಫಲವೃಕ್ಷ ವನ ಮತ್ತು ನೀರಿಂಗಿಸುವ ಚಟುವಟಿಕೆಯನ್ನು ಕಡ್ಡಾಯವಾಗಿ ಮಾಡುವಂತೆ ನಿಯಮ ರೂಪಿಸಬೇಕು. (ಕೇರಳದ ತ್ರಿಶೂರಿನ ಕೊಡುಂಗಲ್ಲೂರು ಪಂಚಾಯತ್ ಎರಡು ಗಿಡ ನೆಡದೆ ಹೊಸ ಮನೆಗೆ ಲೈಸೆನ್ಸ್ ಕೊಡಲಾಗದು ಎನ್ನುವ ನಿಯಮ ತಂದಿದೆ.)

ದೀರ್ಘಾವಧಿಯ ಕಾರ್ಯಕ್ರಮಗಳು

9. ಜಿಲ್ಲೆಯಲ್ಲೊಂದು ‘ಮಳೆ ಕೇಂದ್ರ’ದ ( ರೈನ್ ಸೆಂಟರ್) ಸ್ಥಾಪನೆ : ಈ ಕೇಂದ್ರ ಸರಕಾರಿ ಮತ್ತು ಖಾಸಗಿ ರಂಗದ ಜಂಟಿ ಆಡಳಿತದಡಿ ಇರಬೇಕು. ಜಿಲ್ಲೆಯಲ್ಲಿ ಮಾಡಬಹುದಾದ ನೀರಿಂಗಿಸುವ, ನೆಲ ಜಲಸಂರಕ್ಷಣೆಯ ಎಲ್ಲ ಮಾದರಿಗಳು ( ಪ್ರತಿಕೃತಿಗಳು), ಮಾಡುವ ವಿಧಾನ, ಯಶೋಗಾಥೆ ಸಾಧಿಸಿದವರ ವಿವರ, ಸಂಪರ್ಕ ವಿಳಾಸ ಇತ್ಯಾದಿಗಳ ಬಗ್ಗೆ ಬಹುಮಾಧ್ಯಮ ದಾಖಲಾತಿ, ಬಂದ ಆಸಕ್ತರಿಗೆ ಏಕದಿನದ ತರಬೇತಿ ಕೊಡುವಂತಹ ವ್ಯವಸ್ಥೆ ಒಳಗೊಂಡಿರಬೇಕು. ಒಟ್ಟಿನಲ್ಲಿ ಮಳೆಕೊಯ್ಲು, ನೆಲಜಲ ಸಂರಕ್ಷಣೆಯ ಬಗ್ಗೆ ಏಕ ಕೇಂದ್ರ ಮಾಹಿತಿ ವ್ಯವಸ್ಥೆ ಇಲ್ಲಿರಬೇಕು.

10. ನಗರ-ಪೇಟೆಗಳಲ್ಲಿ ಶುಚೀಕರಣ, ಮಳೆ ಚರಂಡಿಯಲ್ಲೇ ನೀರಿಂಗಿಸುವ ವ್ಯವಸ್ಥೆ : ಮಳೆನೀರು ಹೊರಹೋಗಲು ಕಾಂಕ್ರೀಟಿನ ಮಳೆಚರಂಡಿ ( ಸ್ಟಾರ್ಮ್ವಾವಟರ್ ಡ್ರೈನ್) ಮಾಡುತ್ತೇವಲ್ಲಾ, ಹಾಗೆ ಮಾಡುವಾಗ ನಿಗದಿತ ದೂರದಲ್ಲಿ ಮಳೆನೀರು ಅಲ್ಲಲ್ಲೇ ಇಂಗುವಂತೆ ಕಸಕಡ್ಡಿ ದೂರದಲ್ಲಿ ತಡೆದು ಕಾರ್ಯಕ್ಷಮವಾಗುವ ರೀತಿಯ ಇಂಗುಗುಂಡಿಗಳ ನಿರ್ಮಾಣವನ್ನು ನಿಯಮದ ರೂಪದಲ್ಲಿ ಜ್ಯಾರಿಗೆ ತರಬೇಕು. ಇದರಿಂದ ಆಯಾಯಾ ಪ್ರದೇಶದ ಹೆಚ್ಚುವರಿ ಮಳೆನೀರನ್ನು ದೂರಕ್ಕೆ ಕಳಿಸುವ ಜತೆಜತೆಯಲ್ಲೇ ಗಣನೀಯ ಪ್ರಮಾಣದ ನೀರು ಇಂಗುವಂತೆ ಆಗಬಹುದು. ಯಾವುದೇ ಕಾರಣಕ್ಕೆ ಕೊಳಚೆ, ಮಲಿನ ನೀರು ಇದಕ್ಕೆ ಸೇರದಂತೆ ಜಾಗೃತಿ ತರಬೇಕು.

shreepadre@gmail.com

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ | 14-09-2026 | ಸೆ.18ರ ಬಳಿಕ ಮಳೆ ಚಿತ್ರಣ ಬದಲಾಗಬಹುದೇ?

ಕರ್ನಾಟಕದಲ್ಲಿ ಸದ್ಯ ಬಿಸಿಲು ಮುಂದುವರಿದಿದ್ದರೂ ಸೆ.18ರಿಂದ ಮಳೆಯ ವ್ಯಾಪ್ತಿ ಹೆಚ್ಚಾಗುವ ಸೂಚನೆಗಳಿವೆ. ಸೆ.19ರಿಂದ…

5 hours ago

ನನ್ನ ಚಿತ್ರ-ನನ್ನ ಖುಷಿ | ಬಣ್ಣಗಳ ಮೂಲಕ ಅರಳಿದ ಗಣೇಶ

ಬಣ್ಣಗಳ ಮೂಲಕ ಅರಳಿದ ಗಣೇಶ - ಕುಕ್ಕೆ ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದ 8…

6 hours ago

ನನ್ನ ಚಿತ್ರ-ನನ್ನ ಖುಷಿ | ಬಣ್ಣಗಳ ಲೋಕದಲ್ಲಿ ಪುಟ್ಟ ಮನಸ್ಸಿನ ಖುಷಿ

ನನ್ನ ಚಿತ್ರ – ನನ್ನ ಖುಷಿ | ಗಣೇಶನನ್ನು ಬಣ್ಣಗಳಲ್ಲಿ ಅರಳಿಸಿದ ಪುಟಾಣಿ…

6 hours ago

ವಿಘ್ನಗಳ ಆಚೆ ಕಾಣುವ ಗಣೇಶತತ್ತ್ವ

ಗಣೇಶ ಚತುರ್ಥಿಯನ್ನು ಕೇವಲ ಧಾರ್ಮಿಕ ಆಚರಣೆಯಾಗಿ ನೋಡುವುದಕ್ಕಿಂತ, ಗಣೇಶನ ರೂಪಲಕ್ಷಣಗಳಲ್ಲಿರುವ ಜೀವನದ ಸಂದೇಶಗಳನ್ನು…

9 hours ago

ಶಿರಾಡಿ ಘಾಟ್‌ನಲ್ಲಿ ಸೋಮವಾರ ಟ್ರಾಫಿಕ್‌ ಸಂಕಷ್ಟದ ಸಾಧ್ಯತೆ – ಮುಂಜಾಗ್ರತಾ ಕ್ರಮ ಅಗತ್ಯ

ಮೂರು ದಿನಗಳ ರಜೆ ಮುಗಿಯುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ ಮಧ್ಯಾಹ್ನದ ಬಳಿಕ ಶಿರಾಡಿ ಘಾಟ್‌ನಲ್ಲಿ…

20 hours ago