ಸುಬ್ರಹ್ಮಣ್ಯ : ರಸ್ತೆ ಕಾಂಕ್ರೀಟಿಕರಣ ಕಾಮಗಾರಿಗಾಗಿ ವಾಹನ ಸಂಚಾರ ನಿಷೇಧಿಸಲಾಗಿದ್ದ ಮಲೆಯಾಳ-ಐನಕಿದು ಮಾರ್ಗದಲ್ಲಿ ದ್ವಿಚಕ್ರ ವಾಹನಗಳ ಓಡಾಟಕ್ಕೆ ಜು.11 ರಿಂದ ಅವಕಾಶ ನೀಡಲಾಗಿದೆ. ಸುಳ್ಯ ತಹಶೀಲ್ದಾರ್ ಅವರ ಸೂಚನೆಯಂತೆ ಈ ಕ್ರಮವಹಿಸಲಾಗಿದೆ.
ಸುಬ್ರಹ್ಮಣ್ಯ ಭಾಗದಿಂದ ಐನಕಿದು ಸೇರಿದಂತೆ ಹಲವು ಭಾಗಗಳಿಗೆ ಸಂಪರ್ಕಿಸುವ ಮಲೆಯಾಳ-ಐನಕಿದು ರಸ್ತೆಯಲ್ಲಿ ಎರಡು ಕಡೆ ಕಾಂಕ್ರೀಟ್ ಕಾಮಗಾರಿ ನಡೆಸಲೆಂದು ಕಳೆದ ಕೆಲ ದಿನಗಳಿಂದ ವಾಹನಗಳ ಓಡಾಟವನ್ನು ನಿಷೇದಿಸಲಾಗಿತ್ತು. ಇದೇ ರಸ್ತೆಯ ಪಕ್ಕ ಬದಲಿ ಮಾರ್ಗ ನಿರ್ಮಿಸಿ ಕನಿಷ್ಠ ದ್ವಿಚಕ್ರ ವಾಹನ ಓಡಾಟಕ್ಕೂ ಅವಕಾಶ ಮಾಡಿಕೊಡದೆ ಸಂಪೂರ್ಣ ಬಂದ್ ಮಾಡಲಾಗಿತ್ತು. ಇದರಿಂದ ಸಾರಿಗೆ ಬಸ್ ಸಹಿತ ಲಘು ಘನ ವಾಹನಗಳ ಹಾಗೂ ದ್ವಿಚಕ್ರ ವಾಹನ ಸವಾರರಿಗೆ ಈ ಮಾರ್ಗವಾಗಿ ತೆರಳಲು ಸಾಧ್ಯವಾಗದೆ ತೊಂದರೆಗೆ ಒಳಗಾಗಿದ್ದರು. ಐನಕಿದು, ಕೆದಿಲ ಸೇರಿದಂತೆ ಹರಿಹರ, ಬಾಳುಗೋಡು, ಕಲ್ಮಕಾರು, ಕೊಲ್ಲಮೊಗ್ರು ಭಾಗದವರಿಗೆ ಸುಬ್ರಹ್ಮಣ್ಯ ಭಾಗದಿಂದ ತೆರಳಲು ಅಡಚಣೆಯಾಗಿತ್ತು. ಶಾಲಾ ವಿದ್ಯಾರ್ಥಿಗಳು ಕೂಡ ಸುತ್ತು ಬಳಸಿ ಸುಬ್ರಹ್ಮಣ್ಯಕ್ಕೆ ಆಗಮಿಸುತ್ತಿದ್ದರು.
ಸಾರ್ವಜನಿಕರಿಗೆ ಹಾಗೂ ಶಾಲಾ ಮಕ್ಕಳಿಗೆ ತೊಂದರೆ ಆಗುವುದಲ್ಲದೆ ತುರ್ತು ಅಗತ್ಯಕ್ಕೆ ದ್ವಿಚಕ್ರ ವಾಹನ ಸವಾರರರಿಗೂ ಇಲ್ಲಿ ತೆರಳಲು ಪರ್ಯಾಯ ವ್ಯವಸ್ಥೆ ಮಾಡದೇ ಇರುವ ಕುರಿತು ಸ್ಥಳೀಯರು ಅಸಮಧಾನಗೊಂಡಿದ್ದರು. ಈ ವಿಚಾರ ಸುಳ್ಯ ತಹಶೀಲ್ದಾರ್ ಅವರ ಗಮನಕ್ಕೆ ಬಂದಿತ್ತು. ಸುಳ್ಯ ತಹಶೀಲ್ದಾರ್ ಕುಂಞ ಅಹಮ್ಮದ್ ಅವರು ಕೂಡಲೇ ಸ್ಪಂದಿಸಿ ಸಂಬಂದಿಸಿದ ಇಲಾಖೆಯ ಇಂಜಿನೀಯರ್ ಅವರಿಗೆ ಸಂಚಾರ ವ್ಯತ್ಯಾಯ ಸರಿಪಡಿಸುವಂತೆ ಸೂಚಿಸಿದ್ದರು. ಅದರಂತೆ ಈ ಮಾರ್ಗದಲ್ಲಿ ದ್ವಿಚಕ್ರ ವಾಹನ ಓಡಾಟಕ್ಕೆ ಮುಕ್ತವಾಗಿದ್ದು, ಮುಂದಿನ ಕೆಲ ದಿನಗಳಲ್ಲಿ ಬಸ್ ಸಹಿತ ಘನ ವಾಹನಗಳ ಓಡಾಟಕ್ಕೂ ಸಿದ್ಧವಾಗಲಿದೆ.