ಮಡಿಕೇರಿ : ಮಳೆ, ಗಾಳಿ, ಚಳಿ, ಮಂಜು ವಾತಾವರಣ ಕಾವೇರಿ ತವರು ಕೊಡಗಿನ ಆಸ್ತಿ. ಪ್ರತಿವರ್ಷ ಜೂನ್ ಆರಂಭವಾಯಿತೆಂದರೆ ಮಳೆಗಾಲದ ಸೊಬಗು ಜಿಲ್ಲೆಯ ಸೊಬಗನ್ನು ಶ್ರೀಮಂತಗೊಳಿಸುತ್ತದೆ. ಆದರೆ ಪ್ರಸ್ತುತ ವರ್ಷ ಮಳೆಯ ಆಗಮನವೇ ಆಗದ ಕಾರಣ ಪ್ರಕೃತಿಯ ಮಡಿಲಿನ ಜಲಪಾತಗಳು ಸೊರಗಿವೆ.
ಮಳೆಯ ಪ್ರಮಾಣ ಗಣನೀಯವಾಗಿ ಕುಸಿತವಾಗಿದ್ದು, ಜಲಪಾತಗಳು ಜೀವಜಲವಿಲ್ಲದೆ ಕಳೆಗುಂದಿವೆ. ಜಿಲ್ಲೆಯ ಪ್ರಮುಖ ಹೆಸರುವಾಸಿ ಜಲಪಾತಗಳಾದ ಅಬ್ಬಿಫಾಲ್ಸ್, ಮಲ್ಲಳ್ಳಿ, ಇರ್ಪು, ಚೇಲಾವರ ಮಳೆಯಿಲ್ಲದೆ ಮಂಕಾಗಿದೆ. ಮಳೆಗಾಲವಾದರೂ ಮಾನ್ಸೂನ್ ಟೂರಿಸಂ ಪರಿಕಲ್ಪನೆಯಡಿ ಕೊಡಗಿನ ಕಡೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಆದರೆ ಮಳೆಗಾಲದಲ್ಲೂ ಸುಡುವ ಬಿಸಿಲು, ಬತ್ತಿಹೋದ ಜಲಮೂಲಗಳನ್ನು ಕಂಡು ನಿರಾಶೆಯಿಂದ ಮರಳುತ್ತಿರುವ ದೃಶ್ಯ ಸಾಮಾನ್ಯವಾಗಿದೆ.
ಕಳೆದ ಬಾರಿ ಈ ಜಲಪಾತಗಳೆಲ್ಲ ಬೋರ್ಗರೆಯುತ್ತಾ ಧುಮ್ಮಿಕ್ಕುವ ಮೂಲಕ ತಮ್ಮ ಸೊಬಗನ್ನು ಪ್ರವಾಸಿಗರಿಗೆ ಉಣ ಬಡಿಸಿದ್ದವು. ಆದರೆ ಈ ಬಾರಿಯ ಸ್ಥಿತಿ ಮಾತ್ರ ಭಿನ್ನವಾಗಿದೆ. ಮಡಿಕೇರಿಯ ಅಬ್ಬಿ ಜಲಪಾತವನ್ನು ನೋಡಲೆಂದು ಸರಕಾರಿ ರಜಾ ದಿನವಾದ ಶನಿವಾರ ಮತ್ತು ಭಾನುವಾರ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ್ದರು. ಆದರೆ ಜಲಪಾತದ ಸೊಬಗು ಮಾತ್ರ ಕಣ್ಮರೆಯಾಗಿತ್ತು. ಕಳೆದ ಮಳೆಗಾಲದಲ್ಲಿ ಅಬ್ಬಿ ಜಲಪಾತದ ಬಳಿಯೇ ಸಂಭವಿಸಿದ ಭೂ ಕುಸಿತದಿಂದ ಅಲ್ಲಿದ್ದ ತೂಗು ಸೇತುವೆಗೆ ಭಾಗಶ: ಹಾನಿಯಾಗಿದ್ದು, ಇಂದಿಗೂ ದುರಸ್ತಿ ಕಾರ್ಯಕ್ಕೆ ಪ್ರವಾಸೋದ್ಯಮ ಇಲಾಖೆ ಮುಂದಾಗಿಲ್ಲ.
ಇನ್ನು ಪುಷ್ಪಗಿರಿ ತಪ್ಪಲಿನಲ್ಲಿರುವ ಮಲ್ಲಳ್ಳಿ ಜಲಪಾತದಲ್ಲೂ ಹೇಳಿಕೊಳ್ಳುವಷ್ಟು ನೀರಿಲ್ಲ. ಇಲ್ಲಿಗೂ ಸಹಸ್ರ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಿದ್ದು, ಮಲ್ಲಳ್ಳಿ ಜಲಪಾತದ ಸಹಜ ಮುದವೇ ಮಾಯವಾಗಿದೆ. ಪ್ರವಾಸಿಗರನ್ನು ತನ್ನ ಒಡಲಿನವರೆಗೂ ಬರಮಾಡಿಕೊಳ್ಳುವ ಜಿಲ್ಲೆಯ ಏಕೈಕ ಮಲ್ಲಳ್ಳಿ ಜಲಪಾತದಲ್ಲಿ ನೀರಿನ ಹನಿಗಳು ಬಹುದೂರದವರೆಗೆ ತನ್ನ ಸಿಂಚನ ಮೂಡಿಸುತ್ತದೆÉ. ಈ ನೀರಿನ ಹನಿಗಳಲ್ಲಿ ಮಿಂದೇಳುವುದೇ ಪ್ರವಾಸಿಗರಿಗೆ ಸ್ವರ್ಗಾನುಭವ. ಬೋರ್ಗರೆಯುತ್ತಾ ಧುಮ್ಮಿಕ್ಕುವ ಈ ಜಲಕನ್ಯೆಯ ಸೌಂದರ್ಯವನ್ನು ಕಣ್ತುಂಬಿಕೊಳ್ಳುವುದೇ ಒಂದು ರೋಮಾಂಚನ. ಆದರೆ ಪುಷ್ಪಗಿರಿ ವ್ಯಾಪ್ತಿಯಲ್ಲೂ ಉತ್ತಮ ಮಳೆಯಾಗದಿರುವುದರಿಂದ ಮಲ್ಲಳ್ಳಿ ಸಹಜವಾಗಿಯೇ ಸೊರಗಿದೆ.
ನಾಪೋಕ್ಲು ಸಮೀಪದ ಚೇಲಾವರ ಮತ್ತು ದಕ್ಷಿಣ ಕೊಡಗಿನ ಇರ್ಪು ಜಲಪಾತಗಳ ಸ್ಥಿತಿಯೇನು ಭಿನ್ನವಾಗಿಲ್ಲ. ಜಿಲ್ಲೆಯಲ್ಲಿ ಮಳೆ ಕೊರತೆಯಾಗಿರುವುದಕ್ಕೆ ಈ ಜಲಪಾತಗಳು ಕೂಡ ಮೂಕ ಸಾಕ್ಷಿ ಹೇಳುತ್ತಿವೆ. ನೈಸರ್ಗಿಕವಾಗಿ ಹಚ್ಚ ಹಸಿರಿನ ಪರಿಸರದ ನಡುವೆ ಕಲ್ಲು ಬಂಡೆಗಳನ್ನು ಸವರುತ್ತಾ ಧುಮ್ಮಿಕ್ಕುವ ಈ ಜಲಪಾತಗಳಿಗೆ ಮಳೆ ಮತ್ತು ಜಲ ನೀರೇ ಆಧಾರ. ಮಳೆಯ ಕೊರತೆ ಮತ್ತು ಅಂತರ್ಜಲ ಏರಿಕೆಯಾಗದಿರುವುದರಿಂದ ಜಲಪಾತಗಳು ಜೀವಕಳೆ ಕಳೆದುಕೊಂಡಿವೆ.
ಕಟ್ಟುನಿಟ್ಟಿನ ಕ್ರಮ:
ಜಿಲ್ಲೆಯ ಜಲಪಾತಗಳು ಎಷ್ಟು ಮೋಹಕವಾಗಿದೆಯೋ ಅಷ್ಟೇ ಕರಾಳತೆಯನ್ನೂ ಹೊಂದಿವೆ. ಮೋಜು ಮಸ್ತಿಯಲ್ಲಿ ತೊಡಗಿ, ಮೈಮರೆತು ನೀರಿನಲ್ಲಿ ಇಳಿದರೆ ಸುಳಿಸಾವು ಖಚಿತ ಎನ್ನುವ ಮಾತಿದೆ. ಅಬ್ಬಿ ಜಲಪಾತದಲ್ಲಿ ನೀರಿಗಿಳಿಯದಂತೆ ಈ ಹಿಂದೆಯೇ ನಿರ್ಬಂಧ ವಿಧಿಸಿ ಅಪಾಯವನ್ನು ತಪ್ಪಿಸಲಾಗಿದೆ. ಹೀಗಾಗಿ ಇಲ್ಲಿ ಸಾವಿನ ಪ್ರಕರಣ ಕಡಿಮೆಯಾಗಿದೆ. ಸೋಮವಾರಪೇಟೆಯ ಮಲ್ಲಳ್ಳಿ ಜಲಪಾತದಲ್ಲಿ ಇತ್ತೀಚೆಗಷ್ಟೇ ಫೆನ್ಸ್ ಅಳವಡಿಸಿ ಜಲಪಾತದ ಒಡಲಿನವರೆಗೆ ತೆರಳುವುದಕ್ಕೆ ನಿಷೇಧ ಹೇರಲಾಗಿದೆ. ಇದನ್ನು ಮೀರಿ ಜಲಪಾತದ ಬುಡಕ್ಕೆ ತೆರಳಿದರೆ ಅಂತಹ ವ್ಯಕ್ತಿಗಳ ವಿರುದ್ದ ಸೋಮವಾರಪೇಟೆ ಪೊಲೀಸರು ಎಫ್.ಐ.ಆರ್ ದಾಖಲಿಸಲು ನಿರ್ಧರಿಸಿದ್ದಾರೆ.
ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ಈ ಕ್ರಮ ಅನಿವಾರ್ಯವೂ ಆಗಿದೆ. ಜಲಪಾತಗಳ ಪ್ರವೇಶ ದ್ವಾರದಲ್ಲೇ ನೀರಿಗೆ ಇಳಿಯುದನ್ನು ನಿಷೇಧಿಸಲಾಗಿದೆ. ಜಲಪಾತಕ್ಕಿಳಿದು ಮೃತಪಟ್ಟವರ ಸಂಖ್ಯೆಯನ್ನು ಕೂಡ ಇಲ್ಲಿ ವರ್ಷವಾರು ಉಲ್ಲೇಖಿಸಲಾಗಿದೆ. ಈ ರೀತಿಯ ಎಚ್ಚರಿಕೆಯ ಫಲಕ ಅಳವಡಿಸಿದ್ದರೂ, ಬಂಡ ಧೈರ್ಯ ಮಾಡಿ ಮೋಜು, ಮಸ್ತಿಗಾಗಿ ನೀರಿಗಿಳಿಯುವ ಪ್ರವಾಸಿಗರ ಅಮೂಲ್ಯ ಜೀವಗಳು ಜಲಪಾಲಾಗಿವೆ. ಈ ಪೈಕಿ ಯುವ ಸಮೂಹವೇ ಅತಿ ಹೆಚ್ಚು ಎನ್ನುವುದು ಗಮನಾರ್ಹ. ಆದರೆ ಪ್ರಸ್ತುತ ವರ್ಷ ಮಳೆ ಕೊರತೆಯಿಂದಾಗಿ ಜಲಪಾತಗಳು ಸೊರಗಿರುವುದರಿಂದ ಪ್ರವಾಸಿಗರ ಆಸಕ್ತಿಯು ಕಡಿಮೆಯಾಗಿದೆ. ಉತ್ತಮ ಮಳೆಯ ನಿರೀಕ್ಷೆಯಲ್ಲಿ ಕೊಡಗಿನ ಜನ ಮಾತ್ರವಲ್ಲ ಪ್ರವಾಸಿಗರು ಕೂಡ
ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…
ಕ್ಯೂಆರ್ ಕೋಡ್ ಬಳಸಿಕೊಂಡು ಗೇರು ತಳಿಗಳ ಮಾಹಿತಿ ಪಡೆಯಲು ಪುತ್ತೂರಿನ ಗೇರು ಸಂಶೋಧನಾ…
ಅಡಿಕೆಗೆ ಹಳದಿ ಎಲೆರೋಗದಿಂದ ಅಡಿಕೆ ಮರಗಳು ನಾಶವಾಗುತ್ತಿವೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ…
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…