ಶ್ರಮದ ಬದುಕಿನಲ್ಲಿ ಗೆದ್ದ ಸ್ವಾವಲಂಬನೆ

June 19, 2019
8:30 AM

ಕಳೆದ ದಶಂಬರದಲ್ಲಿ ಅಡ್ಯನಡ್ಕದ (ದ.ಕ.) ಅಮೈ ಮಹಾಲಿಂಗ ನಾಯ್ಕರಿಗೆ ‘ಪ್ರೆಸ್ ಕ್ಲಬ್’ ಪ್ರಶಸ್ತಿ. ವರ್ಷಾರಂಭಕ್ಕೆ ಪ್ರಶಸ್ತಿ ಪ್ರದಾನ ಜರುಗಿತ್ತು. ಇದು ಬೆವರಿನ ಶ್ರಮ ಮತ್ತು ಸ್ವಾವಲಂಬಿ ಬದುಕಿಗೆ ಸಂದ ಮಾನ.

Advertisement
Advertisement
Advertisement

ನಾಯ್ಕರು ಚಿಕ್ಕವರಿದ್ದಾಗ ತಂದೆ ವಿಧಿವಶರಾದರು. ಕುಟುಂಬದ ಜವಾಬ್ದಾರಿ ಹೆಗಲೇರಿತು. ಬದುಕಿನ ಕಷ್ಟವನ್ನು ನೋಡುತ್ತಿದ್ದ ಅಮೈ ಮಹಾಬಲ ಭಟ್ಟರಿಂದ ದರ್ಖಾಸ್ತು ಮೂಲಕ ಎರಡೆಕ್ರೆ ಗುಡ್ಡ ಪ್ರಾಪ್ತಿ. ಇಳಿಜಾರು ಭೂಮಿ. ಮೊದಲಿಗೆ ಗುಡ್ಡದ ತುದಿಯಲ್ಲಿ ಚಿಕ್ಕ ಸೂರು ಮಾಡಿದರು. ಅಡಿಕೆ, ತೆಂಗು ಸಸಿಗಳನ್ನು ನೆಟ್ಟರು. ನಾಲ್ಕು ಫರ್ಲಾಂಗು ದೂರದಿಂದ ನೀರನ್ನು ಹೊತ್ತು ತಂದು ಗಿಡಗಳಿಗೆ ಉಣಿಸಿದರು.

Advertisement

ಹೊಟ್ಟೆ ತಂಪು ಮಾಡಲು ಅರ್ಧ ದಿವಸ ಕೂಲಿ, ಉಳಿದರ್ಧ ದಿವಸ ಗುಡ್ಡವನ್ನು ಸಮತಟ್ಟು ಮಾಡುವ ಕೆಲಸ. ಅಗೆದ ಮಣ್ಣು ಮಳೆಗಾಲದಲ್ಲಿ ಕೊಚ್ಚಿ ಹೋಗದಂತೆ ಕಲ್ಲಿನ ‘ಕಟ್ಟಪುಣಿ’ಯ (ತಡೆಗಟ್ಟ) ರಚನೆ. ಕೂಲಿಗಾಗಿ ಕೆಳಭಾಗಕ್ಕೆ ದಿನಕ್ಕೊಮ್ಮೆ ಇಳಿಯಬೇಕಾಗಿತ್ತು. ಕೆಲಸ ಮುಗಿಸಿ ಮರಳುವಾಗ ತಪ್ಪಲಲ್ಲಿದ್ದ ಕಲ್ಲುಗಳನ್ನು ಹೊತ್ತು ಗುಡ್ಡವೇರುತ್ತಿದ್ದರು. ದಿನಕ್ಕೆರಡರಂತೆ ಕಲ್ಲುಗಳು ಮೇಲೇರುತ್ತಿದ್ದುವು. ಐವತ್ತೋ ಅರುವತ್ತೋ ಕಲ್ಲುಗಳಾದಾಗ ಕಟ್ಟಪುಣಿ ರಚನೆ ಮಾಡುತ್ತಾ ಬಂದರು. ಏಳು ತಟ್ಟುಗಳಲ್ಲಿ ಕಟ್ಟಿದ ಕಟ್ಟಪುಣಿಯ ಉದ್ದ ಸುಮಾರು ಇನ್ನೂರೈವತ್ತು ಮೀಟರ್! ಶ್ರಮ ನಗದಾದರೆ ಒಂದೂವರೆ ಲಕ್ಷ ರೂಪಾಯಿ! ಅಲ್ಲ, ಅದಕ್ಕೂ ಮಿಕ್ಕಿ.
ನನ್ನ ಭೂಮಿಯಲ್ಲೇ ನೀರು ಪಡೆಯಬೇಕೆಂಬ ಛಲ. ಆಗ ಯೋಚನೆ ಬಂತು, ‘ಸುರಂಗದ’ ಕೊರೆತ’. ಇಲ್ಲೂ ಅರ್ಧ ದಿವಸ ಕೂಲಿ, ಉಳಿದರ್ಧ ಸುರಂಗದ ಕೆಲಸ. ಹಸಿವು ಲೆಕ್ಕಿಸದೆ ದಿನಕ್ಕೆ ಆರು ಗಂಟೆಗೂ ಮಿಕ್ಕಿದ ಶ್ರಮ. ಸುರಂಗವು ನಾಯ್ಕರ ಬದುಕಿನೊಂದಿಗೆ ಚೆಲ್ಲಾಟವಾಡಿತು! ಮೂರೂ ಕೈಕೊಟ್ಟುವು. ಯಾವ ಧೈರ್ಯವೋ ಏನೋ, ನಾಲ್ಕರದ್ದಕ್ಕೆ ಸಜ್ಜಾದರು.

 

Advertisement

ಐವತ್ತಡಿ ಕೊರೆತ ಸಾಗುತ್ತಿದ್ದಂತೆ ಬೆವರ ಶ್ರಮಕ್ಕೆ ಭಾಗೀರಥಿ ಒಲಿದಳು. ಸುರಂಗದ ಮೇಲ್ಬದಿಯಲ್ಲಿ ನೀರಿನ ಒರತೆ ಕಂಡಿತು. ಅಲ್ಲೂ ಸುರಂಗವನ್ನು ಕೊರೆದರು. ಯಥೇಷ್ಟ ನೀರು. ಸನಿಹವೇ ರಚಿಸಿದ ಮಣ್ಣಿನ ಟ್ಯಾಂಕಿಯಲ್ಲಿ ಸಂಗ್ರಹ ಇಷ್ಟೆಲ್ಲಾ ರಚನೆಯಾಗುವಾಗ ಕೆಲವು ವರ್ಷಗಳೇ ಸಂದುಹೋದುವು.
ಮನೆಯ ಹಿಂಬದಿಯಲ್ಲೂ ಸುರಂಗ ಕೊರೆದರು. ಆ ನೀರನ್ನು ಫೆರೋಸಿಮೆಂಟ್ ಟ್ಯಾಂಕಿಯಲ್ಲಿ ಸಂಗ್ರಹಿಸಿದರು. ಎರಡು ತಟ್ಟುಗಳಲ್ಲಿ ಎಬ್ಬಿಸಿದ ತೋಟಕ್ಕೆ ಗ್ರಾವಿಟಿಯಲ್ಲಿ ತುಂತುರು ನೀರಾವರಿ ವ್ಯವಸ್ಥೆ. ಐದು ತಟ್ಟುಗಳ ನಾಲ್ಕರಲ್ಲಿ ಅಡಿಕೆ, ಇನ್ನೊಂದರಲ್ಲಿ ತೆಂಗು ತೋಟ. ಸುಮಾರು ಮುನ್ನೂರು ಅಡಿಕೆ ಮರಗಳು. ಹಟ್ಟಿ ಗೊಬ್ಬರ, ಕಾಂಪೋಸ್ಟ್ ಹೊರತು ಮತ್ಯಾವ ಗೊಬ್ಬರವೂ ನಾಯ್ಕರಿಗೆ ಗೊತ್ತಿಲ್ಲ!

Advertisement

ಕೈತೊಳೆದ ನೀರು, ಸ್ನಾನದ ನೀರನ್ನು ಕೆಳಗಿನ ತೋಟದ ಸ್ವಲ್ಪ ಎತ್ತರದಲ್ಲಿರುವ ಟ್ಯಾಂಕಿಯಲ್ಲಿ ಸಂಗ್ರಹ. ವಾರಕ್ಕೊಮ್ಮೆ ಇದು ಭರ್ತಿಯಾದಾಗ ಅಡಿಕೆ ಮರಗಳಿಗೆ ಉಣಿಕೆ. ಫಸಲು ನೀಡುವ ಅಡಿಕೆ ಮರಗಳು, ತೆಂಗಿನ ಮರಗಳ ಉತ್ಪತ್ತಿ, ಕಾಳುಮೆಣಸು, ಗೇರು.. ಹೀಗೆ ವೈವಿಧ್ಯ ಬೆಳೆಗಳು. ಮನೆ ಬಳಕೆಗೆ ತರಕಾರಿ ಬೆಳೆಯುತ್ತಾರೆ. “ನನ್ನ ಜೀವನಕ್ಕೆ ತೊಂದರೆಯಿಲ್ಲ. ಯಾರಿಂದಲೂ ಸಾಲ ಮಾಡಿಲ್ಲ. ನಾನು ಮತ್ತು ನನ್ನ ಹೆಂಡತಿ ಅವಿರತ ದುಡಿದಿದ್ದೇವೆ. ಅದರ ಪ್ರತಿಫಲ ಈಗ ಉಣ್ಣುತ್ತಿದ್ದೇವೆ.” ಎಂಬ ಸಂತೋಷ ನಾಯ್ಕರದು.

2001ರಲ್ಲಿ ಸ್ವಂತ ಮನೆ ಕಟ್ಟಿದರು. ಸನಿಹವೇ ಪಶು ಸಂಸಾರ. ಮನೆ ವರೆಗೆ ರಸ್ತೆ, ದೂರವಾಣಿ, ಟಿವಿ.. ಹೀಗೆ ಬದುಕಿಗೆ ಬೇಕಾದ ಎಲ್ಲವನ್ನೂ ನಾಯ್ಕರಿಗೆ ‘ದುಡಿಮೆ’ ಸಂಪಾದಿಸಿಕೊಟ್ಟಿದೆ. ಮಡದಿ ಲಲಿತಾ. ಗಂಡನ ಶ್ರಮಕ್ಕೆ ಗೌರವ ನೀಡಿದ ಗೃಹಿಣಿ. ಬೋಳು ಗುಡ್ಡದ ಮೇಲೆ ನೀರಿನ ಸಂಪನ್ಮೂಲವನ್ನು ನೋಡಲು ಬರುವ ರೈತರಿಗೆ ನಾಯ್ಕರು ಹೇಳುವುದು ಒಂದೇ ಮಾತು – ‘ಮಳೆ ನೀರನ್ನು ಇಂಗಿಸಿ’. ಇದು ಅವರಿಗೆ ಅನುಭವ ಹೇಳಿ ಕೊಟ್ಟ ಮಾತು.
‘ಆದಾಯದಷ್ಟೇ ಖರ್ಚು’ ಇವರ ಶ್ರಮ ಬದುಕಿನ ಯಶಸ್ವೀ ಸೂತ್ರ. ‘ಕನಿಷ್ಠ ಐದು ರೂಪಾಯಿಯಾದರೂ ದಿನದ ಕೊನೆಗೆ ಉಳಿಯಬೇಕು. ಇದಕ್ಕೆ ತಕ್ಕಂತೆ ನಿತ್ಯದ ಆದಾಯ-ಖರ್ಚಿನ ಯೋಜನೆ ರೂಪಿಸುತ್ತಾರೆ’. ಪರರ ಹಂಗು ಬೇಡ. ತನ್ನ ಕಾಲ ಮೇಲೆ ನಿಲ್ಲ್ಲಬೇಕೆಂಬ ಪಾಲಿಸಿ. ಧಾರವಾಡದ ಕೃಷಿ ಮಾಧ್ಯಮ ಕೇಂದ್ರವು ನಾಯ್ಕರ ಕೃಷಿ ಬದುಕಿನತ್ತ ಚಿಕ್ಕ ಪುಸ್ತಿಕೆಯನ್ನು ಪ್ರಕಟಿಸಿತ್ತು.

Advertisement

ನಾಯ್ಕರ ಕೃಷಿಯಲ್ಲಿ ಕಣ್ಣಿಗೆ ಕಾಣುವಂತಾದ್ದು ಏನಿಲ್ಲವಿರಬಹುದು. ಆದರೆ ‘ಬದುಕೇ ಛಲ’ವಾಗಿ, ಬೋಳು ಗುಡ್ಡದಲ್ಲಿ ಹಸಿರೆಬ್ಬಿಸಿದ, ನೀರುಕ್ಕಿಸಿದ, ಇದ್ದ ಉತ್ಪತ್ತಿಯಲ್ಲಿ ನಗುನಗುತ್ತಾ ಬದುಕುವ ನಾಯ್ಕರ ಕುಟುಂಬದ ‘ಸ್ವಾವಲಂಬಿ ಜೀವನ’ದಲ್ಲಿ ಮಹತ್ತಿದೆ. ಈ ಮಹತ್ತಿಗೆ ಕರ್ನಾಟಕ ಸರಕಾರದ ಕೃಷಿ ಪಂಡಿತ ಪ್ರಶಸ್ತಿಯೂ ಅಲಂಕರಿಸಿದೆ. ಈಗ ಪ್ರೆಸ್‍ಕ್ಲಬ್ ಪ್ರಶಸ್ತಿ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement
ನಾ.ಕಾರಂತ ಪೆರಾಜೆ

ಪತ್ರಕರ್ತ , ಕಲಾವಿದ , ಅಂಕಣಕಾರ

ಲೇಖಕರ ಪರಿಚಯ​

ನಾ.ಕಾರಂತ ಪೆರಾಜೆ

ಪತ್ರಕರ್ತ , ಕಲಾವಿದ , ಅಂಕಣಕಾರ

ಇದನ್ನೂ ಓದಿ

World Water Day | ನೀರು ಉಳಿಸುವ ಬನ್ನಿ… | ಶಾಂತಿ ಹಾಗೂ ಸಮೃದ್ಧಿಗಾಗಿ ನೀರು |
March 22, 2024
11:23 AM
by: ದ ರೂರಲ್ ಮಿರರ್.ಕಾಂ
World Forestry Day | ಭೂಮಿಯ ಮೇಲೆ ಜೀವ ಉಳಿಸುವ ಕಾಡನ್ನು ಉಳಿಸೋಣ… |
March 21, 2024
10:59 AM
by: ಮಹೇಶ್ ಪುಚ್ಚಪ್ಪಾಡಿ
ಅಡಿಕೆ ಮತ್ತು ಆಮದು-ರಫ್ತು | ಭಾರತಕ್ಕೆ ಅಡಿಕೆ ಆಮದು ಇಲ್ಲ ಎನ್ನುವ ಸಚಿವರು..! | ಶ್ರೀಲಂಕಾದಲ್ಲಿ ಅಡಿಕೆಯನ್ನು ರಫ್ತು ಬೆಳೆಯಾಗಿಸಲು ಸಿದ್ಧತೆ ನಡೆಯುತ್ತಿದೆ…! |
March 20, 2024
12:15 PM
by: ಮಹೇಶ್ ಪುಚ್ಚಪ್ಪಾಡಿ
ಹೆಚ್ಚಳಗೊಂಡ ರಬ್ಬರ್‌ ಬಳಕೆ | ನಿಧಾನಗತಿಯಲ್ಲಿ ಏರಿಕೆಯಾಗುತ್ತಿರುವ ರಬ್ಬರ್‌ ಮಾರುಕಟ್ಟೆ | 10 ವರ್ಷಗಳ ಬಳಿಕ ಏರಿಕೆ ಕಂಡ ರಬ್ಬರ್‌ ಧಾರಣೆ |
March 14, 2024
11:15 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror